"ನಾನು ಸಿನಿಮಾವನ್ನು ಸಂಪೂರ್ಣ ಬಂದ್ ಮಾಡಿದ್ದೀನಿ"- ನಟ ನಿಖಿಲ್ ಕುಮಾರಸ್ವಾಮಿ
2024 ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ರಾಜಕೀಯ ಪಕ್ಷಗಳಲ್ಲಿ ಸಿಕ್ಕಾಪಟ್ಟೆ ಬದಲಾವಣೆಗಳಾಗುತ್ತಿವೆ. ರಾಜಕೀಯ ಪಕ್ಷಗಳು ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಜೆಡಿಎಸ್ ಪಕ್ಷದ ಯುವ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕೂಡ ಈ ಫಲಿತಾಂಶದ ಬಳಿಕ ಖಡಕ್ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ರಾಜ್ಯದಲ್ಲಿ ಈ ಬಾರಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿಯಾಗಿ ಸ್ಪರ್ಧೆ ಮಾಡಿದ್ದವು. ಇದರಿಂದ ಎರಡು ರಾಜಕೀಯ ಪಕ್ಷಗಳಿಗೂ ಕರ್ನಾಟಕದಲ್ಲಿ ನಿರೀಕ್ಷೆ ಮಾಡಿದಷ್ಟು ಫಲಿತಾಂಶ ಬಂದಿದೆ. ಎಚ್‌ಡಿ ಕುಮಾರಸ್ವಾಮಿ ಮಂಡ್ಯ ಲೋಕ ಸಭೆ ಕ್ಷೇತ್ರದಿಂದ ಗೆದ್ದು ಕೇಂದ್ರದ ಕಡೆ ಮುಖ ಮಾಡಿದ್ದಾರೆ. ಹೀಗಾಗಿ ನಿಖಿಲ್ ಸಿನಿಮಾದಿಂದ ಸಂಪೂರ್ಣವಾಗಿ ದೂರ ಉಳಿಯುವ ನಿರ್ಧಾರಕ್ಕೆ ಬಂದಿದ್ದಾರೆ.

ಎಚ್‌ಡಿ ಕುಮಾರಸ್ವಾಮಿ ಗೆಲುವಿನ ಬಳಿಕ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಕಟ್ಟುವ ಜವಾಬ್ದಾರಿ ನಿಖಿಲ್ ಮೇಲೆ ಬಿದ್ದಿದೆ. ಈ ಸಂಬಂಧ ಇತ್ತೀಚೆಗೆ ಪ್ರತಿಕಾಗೋಷ್ಠಿಯನ್ನು ನಡೆಸಿ, ತಮ್ಮ ಮುಂದಿನ ನಡೆಯ ಬಗ್ಗೆ ಮಾತಾಡಿದ್ದಾರೆ. ಈ ವೇಳೆ "ಸಿನಿಮಾವನ್ನು ಸಂಪೂರ್ಣ ಬಂದ್ ಮಾಡಿದ್ದೇನೆ" ಎಂದು ಹೇಳಿದ್ದಾರೆ. ನಿಖಿಲ್ ಇನ್ಮುಂದೆ ಸಿನಿಮಾ ಮಾಡೋದೇ ಇಲ್ಲವೇ? ಮುಂದಿನ ನಡೆಯೇನು? ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದೇನು ಅನ್ನೋದನ್ನು ತಿಳಿಯಲು ಮುಂದೆ ಓದಿ..
ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ, ಎಚ್ ಡಿ ಕುಮಾರಸ್ವಾಮಿ ಗೆಲುವು ಜೆಡಿಎಸ್ ಪಕ್ಷಕ್ಕೆ ಸ್ವಲ್ಪ ಸಿಹಿ, ಸ್ವಲ್ಪ ಕಹಿ ಎನ್ನುವಂತಹ ಸ್ಥಿತಿಯಿದೆ. ಹೀಗಾಗಿ ಮತ್ತೆ ಜೆಡಿಎಸ್ ಪಕ್ಷವನ್ನು ಕಟ್ಟುವ ಜವಾಬ್ದಾರಿಯನ್ನು ಪಕ್ಷದ ವರಿಷ್ಠರು ನಿಖಿಲ್ ಕುಮಾರಸ್ವಾಮಿಗೆ ಕೊಟ್ಟಿದ್ದು, ಆ ಕೆಲಸವನ್ನು ಮಾಡುತ್ತೇನೆಂದು ಹೇಳಿದ್ದಾರೆ.
"ನೋಡಣ್ಣ ನನ್ನ ಆಸಕ್ತಿ ಇವತ್ತು ಯುವ ರಾಜ್ಯಾಧ್ಯಕ್ಷನಾಗಿ ಇಡೀ ರಾಜ್ಯದಲ್ಲಿ ಪ್ರವಾಸ ಮಾಡಿ ಯುವ ಕಾರ್ಯಕರ್ತರಿಗೆ ಹೊಸ ಚೇತನವನ್ನು ತುಂಬಿಸಬೇಕು ಅನ್ನುವಂತಹದ್ದು ನನ್ನ ಅಭಿಲಾಷೆ. ಹಾಗೇ ಜೆಡಿಎಸ್ ಕಾರ್ಯಕರ್ತನಾಗಿ ಕೆಲಸವನ್ನು ಮುಂದುವರೆಸುತ್ತೇನೆ." ಎಂದು ತಮ್ಮ ಮುಂದಿನ ನಡೆಯ ಬಗ್ಗೆ ನಿಖಿಲ್ ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ.

ಇದೇ ವೇಳೆ ಸಿನಿಮಾದಿಂದ ಸಂಪೂರ್ಣ ದೂರ ಉಳಿದಿದ್ದು, ರಾಜಕೀಯದ ಕಡೆಗೆ ಗಮನ ಹರಿಸುತ್ತೇನೆ ಎಂದು ಹೇಳಿದ್ದಾರೆ. "ಇಲ್ಲ ನಾನು ಸಿನಿಮಾವನ್ನು ಸಂಪೂರ್ಣ ಬಂದ್ ಮಾಡಿದ್ದೀನಿ. ರಾಜಕಾರಣದಲ್ಲಿ ನನ್ನದೇ ಆದಂತಹ ಜವಾಬ್ದಾರಿಯಿದೆ. ಯುವಕನಾಗಿ ಇವತ್ತು ಪಕ್ಷವನ್ನು ಕಟ್ಟಲು ಈಗಾಗಲೇ ಪಕ್ಷದ ವರಿಷ್ಠರು ಇರಬಹುದು, ಸಾಕಷ್ಟು ಹಿರಿಯರ ಸಲಹೆ ತಗೊಂಡು ಇಡೀ ರಾಜ್ಯದಲ್ಲಿ ಪಕ್ಷವನ್ನು ಕಟ್ಟುವ ಜವಾಬ್ದಾರಿಯನ್ನು ಹೊರಿಸಿದ್ದಾರೆ. ಪಕ್ಷವನ್ನು ಕಟ್ಟುತ್ತೇನೆ." ಎಂದಿದ್ದಾರೆ.
ಹಾಗಿದ್ದರೆ, ಲೈಕಾ ಸಂಸ್ಥೆ ನಿರ್ಮಾಣ ಮಾಡುತ್ತಿರುವ ನಿಖಿಲ್ ಕುಮಾರಸ್ವಾಮಿ ಸಿನಿಮಾದ ಕಥೆಯೇನು? ಅನ್ನೋ ಪ್ರಶ್ನೆ ಎದುರಾಗಿದೆ. ಈಗಾಗಲೇ ಲೈಕಾ ಪ್ರೊಡಕ್ಷನ್ ಸಿನಿಮಾದ ಚಿತ್ರೀಕರಣವನ್ನು ಆರಂಭಿಸಿತ್ತು. ನಿಖಿಲ್ ಕುಮಾರಸ್ವಾಮಿ ಜೊತೆ ದುನಿಯಾ ವಿಜಯ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದರು. ಈ ಸಿನಿಮಾ ಮುಗಿದ ಬಳಿಕ ಚಿತ್ರರಂಗಕ್ಕೆ ಗುಡ್‌ಬೈ ಹೇಳುತ್ತಾರಾ? ಇಲ್ಲ ಈ ಸಿನಿಮಾದಿಂದಲೇ ಹೊರಬರುತ್ತಾರಾ? ಅನ್ನೋ ಪ್ರಶ್ನೆಯಂತೂ ಎದ್ದಿದೆ.


Click it and Unblock the Notifications











