Nikhil Kumarswamy: ಚುನಾವಣೆ ಬ್ರೇಕ್ ಬಳಿಕ ಸಿನಿಮಾಗೆ ಮರಳಿದ ನಿಖಿಲ್.. ಇನ್ನೆರಡು ದಿನದಲ್ಲಿ ಪ್ರಾಜೆಕ್ಟ್ ಶುರು!
ರಾಜ್ಯದ ಮಾಜಿ ಮುಖ್ಯ ಮಂತ್ರಿ ಎಚ್‌ಡಿ ಕುಮಾರಸ್ವಾಮಿ ಪುತ್ರಿ ನಿಖಿಲ್ ಸಿನಿಮಾರಂಗದಲ್ಲೂ ಗುರುತಿಸಿಕೊಂಡಿದ್ದಾರೆ. ಕೆಲವು ದಿನಗಳಿಂದ ನಿಖಿಲ್ ಕುಮಾರಸ್ವಾಮಿ ರಾಜಕೀಯದಲ್ಲೇ ಹೆಚ್ಚಾಗಿ ಗುರುತಿಸಿಕೊಂಡಿದ್ದರು. ಜೆಡಿಎಸ್ ಪಕ್ಷ ಸಂಘಟನೆಯಲ್ಲಿ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಂಡಿದ್ದರು.
ಈಗಾಗಲೇ ಕೆಲವು ಸಿನಿಮಾದಲ್ಲೂ ಗುರುತಿಸಿಕೊಂಡಿದ್ದು, ವಿಧಾನಸಭಾ ಚುನಾವಣೆ ಹಿನ್ನಲೆ ದೂರ ಉಳಿದಿದ್ದರು. ಬಣ್ಣವನ್ನೆಲ್ಲ ಕಳಚಿಟ್ಟು ರಾಜಕೀಯದ ಕಡೆಗೆ ಹೆಚ್ಚು ಗಮನ ಹರಿಸಿದ್ದರು. ಅಲ್ಲದೆ ಚುನಾವಣೆಗೂ ಸ್ಪರ್ಧಿಸಿದ್ದರಿಂದ ತನ್ನ ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದರು.

ಈ ಬಾರಿ ಕೂಡ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗಿಲ್ಲ. ಹೀಗಾಗಿ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡ ಬಳಿಕ ಕೊಂಚ ಬ್ರೇಕ್ ತೆಗೆದುಕೊಂಡಿದ್ದರು. ಸಿನಿಮಾ ಹಾಗೂ ರಾಜಕೀಯ ಎರಡೂ ಕ್ಷೇತ್ರದಿಂದ ದೂರವೇ ಉಳಿದಿದ್ದರು. ಈಗ ಮತ್ತೆ ಕಮ್‌ಬ್ಯಾಕ್ ಮಾಡುತ್ತಿದ್ದು, ಈ ಹಿಂದೆನೇ ಒಪ್ಪಿಕೊಂಡು ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಈ ಹಿಂದೆನೇ ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಲೈಕಾ ಪ್ರೊಡಕ್ಷನ್ಸ್ ಸಂಸ್ಥೆಯಲ್ಲಿ ಸಿನಿಮಾ ಮಾಡುತ್ತಾರೆ ಅಂತ ಸುದ್ದಿ ಹಬ್ಬಿತ್ತು. ಮಧ್ಯೆ ಚುನಾವಣೆ ಬಂದಿದ್ದರಿಂದ ಈ ಪ್ರಾಜೆಕ್ಟ್ ಕೊಂಚ ಮಟ್ಟಿಗೆ ತಡವಾಗಿತ್ತು. ಈಗ ಇದೇ ಸಂಸ್ಥೆಯೊಂದಿಗೆ ನಿಖಿಲ್ ಕುಮಾರಸ್ವಾಮಿ ಸಿನಿಮಾ ಸೆಟ್ಟೇರುತ್ತಿದೆ.
ಲೈಕಾ ಸಂಸ್ಥೆ ದುಬಾರಿ ಬಜೆಟ್ ಸಿನಿಮಾಗಳನ್ನೇ ನಿರ್ಮಾಣ ಮಾಡುತ್ತಿದೆ. ಸೂಪರ್‌ಸ್ಟಾರ್ ರಜನಿಕಾಂತ್ ನಟಿಸಿ, ಶಂಕರ್ ನಿರ್ದೇಶಿಸಿದ್ದ '2.0' ಸಿನಿಮಾವನ್ನು ನಿರ್ಮಾಣ ಮಾಡಿದೆ. ಅಲ್ಲದೆ ಇತ್ತೀಚೆಗೆಷ್ಟೇ ಮಣಿರತ್ನಂ ನಿರ್ದೇಶಿಸಿದ 'ಪೊನ್ನಿಯಿನ್ ಸೆಲ್ವನ್'ಎರಡೂ ಸೀರಿಸ್ ನಿರ್ಮಾಣ ಮಾಡಿ ಗೆದ್ದಿದ್ದರು. ಸದ್ಯ ಮತ್ತೊಂದು ದುಬಾರಿ ಬಜೆಟ್ ಸಿನಿಮಾ 'ಇಂಡಿಯನ್ 2', 'ಲಾಲ್ ಸಲಾಂ' ನಿರ್ಮಾಣದ ಹಂತದಲ್ಲಿದೆ. ಶಂಕರ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಈ ಮಧ್ಯೆ ನಿಖಿಲ್ ಕುಮಾರಸ್ವಾಮಿ ಸಿನಿಮಾ ಕೂಡ ಇದೇ ತಿಂಗಳು ಆರಂಭ ಆಗುತ್ತಿದೆ. ಹೌದು, ಇದೇ ಆಗಸ್ಟ್ 23ರಂದು ಈ ಸಿನಿಮಾ ಅದ್ಧೂರಿಯಾಗಿ ಸೆಟ್ಟೇರಲಿದೆ. ಸದ್ಯ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಇನ್ನೇರಡು ದಿನಗಳಲ್ಲಿ ನಿಖಿಲ್ ಹೊಸ ಸಿನಿಮಾ ಬಗ್ಗೆ ಮಾಹಿತಿ ಸಿಗುವ ಸಾಧ್ಯತೆಯಿದೆ.
ನಿಖಿಲ್ ಕುಮಾರಸ್ವಾಮಿ ಈಗಾಗಲೇ 'ಜಾಗ್ವಾರ್', 'ಸೀತಾರಾಮ ಕಲ್ಯಾಣ', 'ಕುರುಕ್ಷೇತ್ರ', 'ರೈಡರ್' ಸೇರಿ 4 ಸಿನಿಮಾಗಳು ಬಿಡುಗಡೆಯಾಗಿವೆ. ಲೈಕಾ ಜೊತೆ ನಿಖಿಲ್ ಕುಮಾರಸ್ವಾಮಿಯದ್ದು 5ನೇ ಸಿನಿಮಾ. ಮೂಲಕಗಳ ಪ್ರಕಾರ, ಈ ಸಿನಿಮಾ ಕೂಡ ಬಿಗ್ ಬಜೆಟ್‌ನಲ್ಲಿಯೇ ನಿರ್ಮಾಣಗೊಳ್ಳಲಿದೆ.
ತಮಿಳಿನ ಪ್ರತಿಷ್ಠಿತ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ನಿಖಿಲ್ ಕುಮಾರಸ್ವಾಮಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದೆ. ಈ ಮೂಲಕ ಕನ್ನಡದಲ್ಲಿ ಹೆಚ್ಚು ಸಿನಿಮಾಗಳನ್ನು ಮುಂದಿನ ದಿನಗಳಲ್ಲಿ ನಿರ್ಮಾಣ ಮಾಡುವ ಎಲ್ಲಾ ಸಾಧ್ಯತೆಗಳೂ ಇವೆ.


Click it and Unblock the Notifications











