ಮತ್ತೆ ನಿರೂಪ್ ಜೊತೆಯಾದ 'ಪೋಸ್ಟ್‌ಮ್ಯಾನ್ ಕಾಳಿಂಗ' ಸಾಯಿಕುಮಾರ್; 'ರಂಗಿತರಂಗ' ಅಲ್ಲ ಹೊಸ ಸಿನಿಮಾ
ರಾಜಮೌಳಿ ನಿರ್ದೇಶಿಸಿದ 'ಬಾಹುಬಲಿ' ಅಂತಹ ಸಿನಿಮಾದ ಎದುರು ಹೊಸಬರ ಸಿನಿಮಾವೊಂದು ರಿಲೀಸ್ ಆಗಿತ್ತು. ಆಗ ಎಲ್ಲರೂ ಇಂತಹ ಬಿಗ್ ಬಜೆಟ್ ಸಿನಿಮಾ ಜೊತೆ ರಿಲೀಸ್ ಬೇಕಿತ್ತಾ? ಅಂತ ಪ್ರಶ್ನೆ ಮಾಡಿದ್ದೇ ಹೆಚ್ಚು. ಆದರೆ, ಅಂದುಕೊಂಡಿದ್ದೇ ಒಂದು. ಆಗಿದ್ದೇ ಇನ್ನೊಂದು. 'ಬಾಹುಬಲಿ' ಅಂತಹ ದೈತ್ಯ ಸಿನಿಮಾ ನಡುವೆ 'ರಂಗಿತರಂಗ' ಅನ್ನೋ ಹೊಸಬರ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುವುದಕ್ಕೆ ಶುರು ಮಾಡಿತ್ತು.
ಈ ಸಿನಿಮಾದಲ್ಲಿದ್ದವರಲ್ಲಿ ಸೀನಿಯರ್ ಅಂದರೆ ಸಾಯಿ ಕುಮಾರ್. 'ರಂಗಿತರಂಗ' ನಿರೂಪ್ ಭಂಡಾರಿ ಹಾಗೂ ಸಾಯಿ ಕುಮಾರ್ ಜೋಡಿ ಮೋಡಿ ಮಾಡಿತ್ತು. ಈ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ 9 ವರ್ಷಗಳನ್ನು ಪೂರೈಸುತ್ತಿದೆ. ನಿರೂಪ್ ಹಾಗೂ ಸಾಯಿ ಕುಮಾರ್ ಇಬ್ಬರೂ ಕಾಂಬಿನೇಷನ್ ಸಿನಿಮಾದ ಹೈಲೈಟ್ ಆಗಿತ್ತು. ಅದರಲ್ಲೂ ಕ್ಲೈಮ್ಯಾಕ್ಸ್ ಸೀನ್‌ನಲ್ಲಿ ಸಾಯಿ ಕುಮಾರ್ ಪಾತ್ರವನ್ನು ನೋಡಿ ಬೆಚ್ಚಿಬಿದ್ದಿದ್ದರು. ಪೋಸ್ಟ್ ಮ್ಯಾನ್ ಕಾಳಿಂಗನಾಗಿ ಸಾಯಿಕುಮಾರ್ ಅಬ್ಬರಿಸಿದ್ದರು.

ಈಗ 'ರಂಗಿತರಂಗ' ಸಿನಿಮಾದಲ್ಲಿ ಮಿಂಚಿದ್ದ ಈ ಜೋಡಿ ಮತ್ತೆ ಒಟ್ಟಿಗೆ ತೆರೆಮೇಲೆ ಕಾಣಿಸಿಕೊಳ್ಳುತ್ತಿದೆ. ಸಾಯಿ ಕುಮಾರ್ ಹಾಗೂ ನಿರೂಪ್ ಭಂಡಾರಿ ಹೊಚ್ಚ ಹೊಸ ಸಿನಿಮಾ ಒಪ್ಪಿಕೊಂಡಿದ್ದು, ತಂದೆ-ಮಗನಾಗಿ ಕಾಣಿಸಿಕೊಳ್ಳಲಿದ್ದಾರೆ. 'ರಂಗಿತರಂಗ' ಸಿನಿಮಾ ಬಿಡುಗಡೆಯಾಗಿ ಹೆಚ್ಚು ಕಡಿಮೆ 10 ವರ್ಷಗಳಾಗುತ್ತಾ ಬರುತ್ತಿದೆ. ಇಂತಹ ಸಮಯದಲ್ಲಿ ಮತ್ತೆ ನಿರೂಪ್ ಭಂಡಾರಿ ಹಾಗೂ ಸಾಯಿ ಜೋಡಿಯನ್ನು ನೋಡುವುದಕ್ಕೆ ಸಿನಿಪ್ರಿಯರು ಎದುರು ನೋಡುತ್ತಿದ್ದಾರೆ.
ಸದ್ಯಕ್ಕೆ ಹೊಚ್ಚ ಹೊಸ ಸಿನಿಮಾದ ಟೈಟಲ್ ರಿವೀಲ್ ಆಗಿಲ್ಲ. ಆದರೆ, ಈ ಸಿನಿಮಾವನ್ನು ಇದೇ ಮೊದಲ ಬಾರಿಗೆ ಡೈರೆಕ್ಷನ್ ಕ್ಯಾಪ್ ತೊಟ್ಟಿರುವ ಯುವ ಪ್ರತಿಭೆ ಸಚಿನ್ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗ್ಲೇ ಸಾಯಿಕುಮಾರ್ ಚಿತ್ರತಂಡ ಸೇರಿಕೊಂಡಿದ್ದಾರೆ. ಬಹಳ ವರ್ಷಗಳ ನಂತ್ರ ಈ ಕಾಂಬೋ ಮತ್ತೆ ತೆರೆಮೇಲೆ ಕಾಣಿಸಿಕೊಳ್ಳುತ್ತಿರೋದಕ್ಕೆ ಕುತೂಹಲ ಹೆಚ್ಚಿದೆ. ಈ ಸಿನಿಮಾದ ಶೀರ್ಷಿಕೆ ಮತ್ತು ಫಸ್ಟ್ ಲುಕ್ ಇದೇ ಫೆಬ್ರವರಿ 6ರಂದು ಅನಾವರಣಗೊಳ್ಳುತ್ತಿದೆ.
ಅಂದ್ಹಾಗೆ, ನಿರೂಪ್ ಭಂಡಾರಿ ಹಾಗೂ ಸಾಯಿ ಕುಮಾರ್ ಕಾಂಬಿನೇಷನ್ ಸಿನಿಮಾ ಕಥೆ ಕೂಡ ಇಂಟ್ರೆಸ್ಟಿಂಗ್ ಆಗಿದೆ. ಇದು ಸತ್ಯ ಮತ್ತು ಸುಳ್ಳಿನ ನಡುವೆ ಇರುವ ಸಾಮಾಜಿಕ ಬದ್ಧತೆ ಸುತ್ತ ಸಾಗುವ ಕಾಮಿಡಿ ಮತ್ತು ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ಎಂದು ಚಿತ್ರತಂಡ ಹೇಳಿಕೊಂಡಿದೆ.
ಇನ್ನೂ ಹೆಸರಿಡದ ಈ ಸಿನಿಮಾವನ್ನು ಅಂಕೆತ್ ಸಿನಿಮಾಸ್ ಬ್ಯಾನರ್‌ನಲ್ಲಿ ಅಂಕಿತ್ ಸೋನಿಗಾರ ನಿರ್ಮಿಸಿಸುತ್ತಿದ್ದಾರೆ. ಪ್ರಶಾಂತ್ ಮುಲಗೆ ಸಹ ನಿರ್ಮಾಪಕರಾಗಿದ್ದಾರೆ. ಹಾಗೇ ಸಚಿನ್ ಬಸ್ರೂರ್ ಸಂಗೀತ ನೀಡುತ್ತಿದ್ದಾರೆ. ಸಂದೀಪ್ ವಲ್ಲೂರಿ ಛಾಯಾಗ್ರಹಣವಿದ್ದರೆ, ಉಜ್ವಲ್ ಚಂದ್ರ ಸಂಕಲನ, ಉಲ್ಲಾಸ್ ಹೈದೂರು ಕಲಾ ನಿರ್ದೇಶನವಿದೆ. ಇನ್ನೊಂದು ಇಂಟ್ರೆಸ್ಟಿಂಗ್ ವಿಷಯ ಅಂದರೆ, ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ.
ಫಸ್ಟ್ ಲುಕ್ ರಿಲೀಸ್ ಬಳಿಕ ಸಿನಿಮಾದ ಬಗ್ಗೆ ಮತ್ತಷ್ಟು ಮಾಹಿತಿ ಸಿಗುವ ಸಾಧ್ಯತೆಯಿದೆ. ನಿರೂಪ್, ಸಾಯಿ ಕುಮಾರ್ ಲುಕ್ ಕೂಡ ರಿವೀಲ್ ಆಗಲಿದೆ. ಹಾಗೇ ಸಿನಿಮಾ ಶೂಟಿಂಗ್ ಎಲ್ಲಿವರೆಗೆ ಬಂದಿದೆ? ಯಾವ ರಿಲೀಸ್ ಆಗುತ್ತೆ? ಅನ್ನೋ ಪ್ರಶ್ನೆಗಳಿಗೆ ಉತ್ತರ ಸಿಗಬಹುದು.


Click it and Unblock the Notifications











