ಮದುವೆ, ಸೆಲೆಬ್ರೆಟಿ ಕ್ರಶ್ ಬಗ್ಗೆ ಶಿವಣ್ಣನ ಪುತ್ರಿ ನಿವೇದಿತಾ ಏನಂತಾರೆ? ಸಿನಿಮಾ ನಿರ್ಮಾಣಕ್ಕಿಳಿದಾಗ ಅಪ್ಪು ಹೇಳಿದಿದ್ದೇನು?
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಪುತ್ರಿ ಸಿನಿಮಾ ನಿರ್ಮಾಣಕ್ಕೆ ಇಳಿದಿರುವುದು ಗೊತ್ತೇ ಇದೆ. ಶಿವಣ್ಣನ ಪತ್ನಿ ಗೀತಾ ಶಿವರಾಜ್‌ಕುಮಾರ್ ಗೀತಾ ಆರ್ಟ್ಸ್ ಬ್ಯಾನರ್ ಮೂಲಕ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದರೆ. ಇತ್ತ ಪುತ್ರಿ ನಿವೇದಿತಾ ಶಿವರಾಜ್‌ಕುಮಾರ್ ಅವರದ್ದೇ ಶ್ರೀ ಮುತ್ತು ಪ್ರೊಡಕ್ಷನ್ಸ್ ಮೂಲಕ ಸಿನಿಮಾ ನಿರ್ಮಾಣ ಮಾಡುವುದಕ್ಕೆ ಕೈ ಹಾಕಿದ್ದಾರೆ.
ನಿವೇದಿತಾ ಶಿವರಾಜ್‌ಕುಮಾರ್‌ಗೆ ಚಿತ್ರರಂಗ ಹೊಸದೇನು ಅಲ್ಲ. ಈ ಹಿಂದೆ ವೆಬ್ ಸೀರಿಸ್ ಹಾಗೂ ಟಿವಿ ಶೋಗಳನ್ನು ನಿರ್ಮಾಣ ಮಾಡಿರುವ ಅನುಭವ ಇವರಿಗೆ ಇದೆ. ಇದೇ ಮೊದಲ ಬಾರಿಗೆ ಸಿನಿಮಾ ನಿರ್ಮಾಣ ಮಾಡಿ, ಅದನ್ನು ಥಿಯೇಟರ್‌ನಲ್ಲಿ ರಿಲೀಸ್ ಮಾಡುವುದಕ್ಕೆ ನಿರ್ಧರಿಸಿದ್ದಾರೆ. ಆ ಸಿನಿಮಾವೇ 'ಫೈರ್ ಫ್ಲೈ'. ಈ ಸಿನಿಮಾ ಇದೇ ತಿಂಗಳ 24ರಂದು ಅಣ್ಣಾವ್ರ ಹುಟ್ಟುಹಬ್ಬಕ್ಕೆ ರಿಲೀಸ್ ಆಗುತ್ತಿದೆ.

ಹೀಗಾಗಿ ಈಗಾಗಲೇ ನಿವೇದಿತಾ ಶಿವರಾಜ್‌ಕುಮಾರ್ ಭರ್ಜರಿಯಾಗಿ ಪ್ರಚಾರವನ್ನು ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಫಿಲ್ಮಿಬೀಟ್ ಕನ್ನಡಕ್ಕೆ ನಿವೇದಿತಾ ಸಂದರ್ಶನ ನೀಡಿದ್ದು, ಇದರಲ್ಲಿ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಮದುವೆ ಬಗ್ಗೆ ಅವರ ಅಭಿಪ್ರಾಯ, ಸೆಲೆಬ್ರೆಟಿ ಕ್ರಶ್ ಯಾರು?, ನಿರ್ಮಾಣಕ್ಕೆ ಇಳಿದಾಗ ಪುನೀತ್ ರಾಜ್‌ಕುಮಾರ್ ನೀಡಿದ್ದ ಸಲಹೆ ಏನು? ಅನ್ನೋದನ್ನು ಹೇಳಿಕೊಂಡಿದ್ದಾರೆ. ಅದರ ಝಲಕ್ ಇಲ್ಲಿದೆ.
ನಿವೇದಿತಾ ಶಿವರಾಜ್‌ಕುಮಾರ್‌ಗೆ ಕನ್ನಡ ಚಿತ್ರರಂಗ ಹೊಸದೇನು ಅಲ್ಲ. ಚಿಕ್ಕಂದಿನಿಂದಲೂ ಸ್ಯಾಂಡಲ್‌ವುಡ್‌ನ ತಾರೆಯರನ್ನು ನೋಡಿಕೊಂಡು ಬೆಳೆದಿದ್ದಾರೆ. ಅವರೆಲ್ಲರೊಂದಿಗೂ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡಿದ್ದಾರೆ. ತಂದೆಯೊಂದಿಗೆ ಹೋಗಿ ಕನ್ನಡದ ಕಲಾವಿದರನ್ನು ಭೇಟಿ ಮಾಡಿದ್ದಾರೆ. ಇವರಿಗೂ ಸೆಲೆಬ್ರೆಟಿ ಕ್ರಶ್ ಇದ್ದಾರೆ. ಈ ಸಂದರ್ಶನದಲ್ಲಿ ಆ ಹೆಸರುಗಳನ್ನು ಅವರು ರಿವೀಲ್ ಮಾಡಿದ್ದಾರೆ.

"ಸೆಲೆಬ್ರೆಟಿ ಕ್ರಶ್ ಅಂತ ತುಂಬಾನೇ ಇತ್ತು. ಕನ್ನಡದಲ್ಲಿ ಹೇಳಬೇಕು ಅಂದರೆ, ಯಶ್ ತುಂಬಾನೇ ಇಷ್ಟ. ಬಾಲಿವುಡ್‌ನಲ್ಲಿ ಹೃತಿಕ್ ರೋಷನ್ ನನ್ನ ಫೇವರಿಟ್ ನಟ. ಇಂದಿಗೂ ಕೂಡ ಅವರೇ ನನ್ನ ಫೇವರಿಟ್. ನನಗೆ ಸಲ್ಮಾನ್ ಖಾನ್ ಒಂದು ಕಾಲದಲ್ಲಿ ಇಷ್ಟ ಇತ್ತು." ಎಂದು ತಮ್ಮ ಸೆಲೆಬ್ರೆಟಿ ಕ್ರಶ್ ಬಗ್ಗೆ ನಿವೇದಿತಾ ಶಿವರಾಜ್‌ಕುಮಾರ್ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.
ಇದೇ ಸಂದರ್ಶನದಲ್ಲಿ ಭಾರತೀಯ ಚಿತ್ರರಂಗದ ದಿಗ್ಗಜರನ್ನು ಭೇಟಿ ಮಾಡಿದ ವಿಷಯವನ್ನೂ ರಿವೀಲ್ ಮಾಡಿದ್ದಾರೆ. "ಕನ್ನಡದಲ್ಲಿ ಎಲ್ಲಾ ತಾರೆಯರನ್ನೂ ಮೀಟ್ ಮಾಡಿದ್ದೇನೆ. ನಾನು ರಜನಿಕಾಂತ್ ಅವರನ್ನು ಭೇಟಿ ಮಾಡಿದ್ದೇನೆ. ಕಮಲ್ ಹಾಸನ್ ಅವರನ್ನು ಭೇಟಿ ಮಾಡಿದ್ದೇನೆ. ನಮ್ಮ ಮನೆಗೆ ಕಮಲ್ ಹಾಸನ್ ಅವರು ಬಂದಿದ್ದಾರೆ. ತುಂಬಾ ಜನರು ನಮ್ಮ ಮನೆಗೆ ಬಂದಿದ್ದಾರೆ." ಎನ್ನುತ್ತಾರೆ ಶಿವಣ್ಣನ ಪುತ್ರಿ ನಿವೇದಿತಾ.

ಕನ್ನಡದ ಚಿತ್ರರಂಗ ಸ್ಟಾರ್ ನಟರು ಇರಲಿ, ಇಲ್ಲ ಪರಭಾಷೆಯ ನಟರು ಇರಲಿ. ತಮ್ಮ ಹೊಸ ಪ್ರಾಜೆಕ್ಟ್ ರಿಲೀಸ್ ಆಗುತ್ತಿದೆ ಅಂದರೆ, ಅವರ ಮನೆಗೆ ಬಂದು ಭೇಟಿ ಕೊಟ್ಟು ಆಶೀರ್ವಾದವನ್ನು ಪಡೆಯುತ್ತಾರೆ. ಬಹಳ ವರ್ಷಗಳಿಂದ ಇದು ನಡೆದುಕೊಂಡು ಬಂದಿದೆ. ಆ ಬಗ್ಗೆನೂ ನಿವೇದಿತಾ ಮಾತಾಡಿದ್ದಾರೆ. "ಹೌದು, ಬೇರೆ ಇಂಡಸ್ಟ್ರಿಯವರು ಬಂದು ತಂದೆಯವರ ಆಶೀರ್ವಾದ ಪಡೆದು ಹೋಗುತ್ತಾರೆ. ತಂದೆಗೆ ಅವರದ್ದೇ ಆದ ಅನುಭವವಿದೆ. ಓಪನ್ ಆಗಿ ಇರುತ್ತಾರೆ. ಒಪ್ಪಿಕೊಳ್ಳುವ ವ್ಯಕ್ತಿ. ಹಾಗಾಗಿ ಸೆಲೆಬ್ರೆಟಿಗಳು ನಮ್ಮ ಮನೆ ಬರುತ್ತಾರೆ. ಇದನ್ನು ನೋಡಿದಾಗ ಖುಷಿಯಾಗುತ್ತೆ." ಎನ್ನುತ್ತಾರೆ.
ಶಿವಣ್ಣನ ಹಿರಿಯ ಮಗಳ ಮದುವೆ ಆಗಿದೆ. ಈಗ ದ್ವಿತೀಯ ಪುತ್ರಿ ನಿವೇದಿತಾ ಅವರ ಮದುವೆ ಅಷ್ಟೇ ಉಳಿದುಕೊಂಡಿದೆ. ಸದ್ಯಕ್ಕೆ ಸಿನಿಮಾ ನಿರ್ಮಾಣದಲ್ಲಿ ಆಸಕ್ತಿ ತೋರುತ್ತಿರುವ ನಿವೇದಿತಾ ಮದುವೆ ಬಗ್ಗೆ ಏನು ಅಭಿಪ್ರಾಯ ಹೊಂದಿದ್ದಾರೆ. ಅರೇಂಜ್ಡ್ ಮ್ಯಾರೇಜ್ ಆಗುತ್ತಾರಾ? ಲವ್ ಮ್ಯಾರೇಜ್ ಆಗುತ್ತಾರಾ? ಎನ್ನುವ ಪ್ರಶ್ನೆಯಂತೂ ಅವರ ಅಭಿಮಾನಿಗಳನ್ನು ಕಾಡದೆ ಇರುವುದಿಲ್ಲ. ಅದಕ್ಕೂ ಫಿಲ್ಮಿಬೀಟ್ ಕನ್ನಡದ ಸಂದರ್ಶನದಲ್ಲಿ ಉತ್ತರ ಕೊಟ್ಟಿದ್ದಾರೆ.
"ಎಲ್ಲಾ ಹುಡುಗಿಯರಿಗೂ ಇರುವ ಹಾಗೇ ನನಗೂ ಆಸೆಗಳಿವೆ. ತೀರಾ ಹೇಳುವಂತಹದ್ದೇನು ಇಲ್ಲ. ಒಳ್ಳೆಯ ಹೃದಯ ಇರುವವರು ಆಗಿರಬೇಕು ಅಷ್ಟೇ. ನನ್ನ ಕೆಲಸಗಳಿಗೆ ಸಪೋರ್ಟ್ ಮಾಡಬೇಕು. ಸದ್ಯಕ್ಕಿನ್ನು ಮದುವೆ ಬಗ್ಗೆ ಏನೂ ಗೊತ್ತಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಇನ್ನೂ ಆ ಬಗ್ಗೆ ಯೋಚನೆ ಮಾಡಿಲ್ಲ." ಎಂದು ನಿವೇದಿತಾ ಹೇಳಿದ್ದಾರೆ.
ನಿವೇದಿತಾ ನಿರ್ಮಾಣಕ್ಕೆ ಇಳಿದಾಗ, ಪುನೀತ್ ರಾಜ್‌ಕುಮಾರ್ ಒಂದು ಸಲಹೆಯನ್ನು ನೀಡಿದ್ದರು. ಅವರೇ ಹೇಳಿಕೊಂಡಂತೆ ಹೆಚ್ಚೇನೂ ಚರ್ಚೆ ಮಾಡದೇ ಹೋದರೂ, ಸಿನಿಮಾ ನಿರ್ಮಾಣ ಮಾಡುವಾಗ ಯಾವ್ಯಾವ ವಿಚಾರದ ಬಗ್ಗೆ ಗಮನವಿಡಬೇಕು ಎನ್ನುವ ಸಲಹೆಯನ್ನು ನೀಡಿದ್ದರು. ಬ್ಯುಸಿನೆಸ್ ಕಡೆಗೆ ಹೆಚ್ಚು ಗಮನ ಹರಿಸಬೇಕು ಎಂದು ಹೇಳಿದ್ದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ.
"ಚಿಕ್ಕಪ್ಪನ ಆಲೋಚನೆಯೇ ಬೇರೆ ಇರುತ್ತಿತ್ತು. ತುಂಬಾನೇ ಕ್ರಿಯೇಟಿವ್ ಆಗಿ ಇರುತ್ತಿದ್ದರು. ಅವರು ಬ್ಯುಸಿನೆಸ್‌ನಲ್ಲೂ ತುಂಬಾನೇ ಪರಿಣಿತಿ ಇತ್ತು. ನಾನು ಅವರ ಜೊತೆ ಅಷ್ಟಾಗಿ ಏನೂ ಚರ್ಚೆ ಮಾಡಿರಲಿಲ್ಲ. ನಾನು ವೆಬ್ ಸೀರಿಸ್ ಎಲ್ಲಾ ಮಾಡಿದ್ದಾಗ ಬ್ಯುಸಿನೆಸ್ ಮೇಲೆ ಜಾಸ್ತಿ ಗಮನ ಹರಿಸು ಎಂದು ಹೇಳಿದ್ದರು. ಕೆಲವೊಮ್ಮೆ ಕ್ರಿಯೆಟಿವ್ ಐಡಿಗಳ ಹಿಂದೆ ಹೋಗುತ್ತೇವೆ. ಆದರೆ, ಬ್ಯುಸಿನೆಸ್ ಕಡೆಗೂ ಯೋಚನೆ ಮಾಡಬೇಕು ಎಂದು ಹೇಳಿದ್ದರು. ಅವರು ಫೈರ್ ಫ್ಲೈ ನೋಡಿದ್ದರೆ ಖಂಡಿತ ಖುಷಿ ಪಡುತ್ತಿದ್ದರು." ಎನ್ನುತ್ತಾರೆ.
ಚಿಕ್ಕಪ್ಪ ಪುನೀತ್ ರಾಜ್‌ಕುಮಾರ್ ಅವರೊಂದಿಗೆ ಕಳೆದ ನೆನಪುಗಳನ್ನು ಈ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಅಪ್ಪು ಊಟದ ಮೇಲೆ ಇದ್ದ ಆಸಕ್ತಿಯ ಬಗ್ಗೆ ಮಾತಾಡಿದ್ದಾರೆ. ಅವರೊಂದಿಗೆ ಕಳೆದ ನೆನಪುಗಳನ್ನು ಹಂಚಿಕೊಂಡಿದ್ದಾರೆ.
"ಅವರು ತುಂಬಾನೇ ಆಹಾರ ಪ್ರಿಯರು. ಹೊಸ ರೀತಿ ಪುಡ್ ಅನ್ನು ಟ್ರೈ ಮಾಡಬೇಕು ಅಂತ ಇರೋರು. ಅವರು ಫಸ್ಟ್ ಟೈಮ್ ಕಾಫಿ ಡೇಗೆ ಕರೆದುಕೊಂಡು ಹೋಗಿದ್ದರು ಚಿಕ್ಕಪ್ಪನೇ. ಸದಾಶಿವನಗರದಲ್ಲಿ ನಾವು ತುಂಬಾನೇ ಸಮಯವನ್ನು ಕಳೆಯುತ್ತಿದ್ವಿ. ಐಸ್ ಕ್ರೀಂ ಅಂಗಡಿಯಾಗಿರಬಹುದು, ಪಾರ್ಕ್ ಆಗಿರಬಹುದು, ನಾವು ಅವರೊಂದಿಗೆ ಸಿಕ್ಕಾಪಟ್ಟೆ ಸಮಯವನ್ನು ಕಳೆದಿದ್ದೇವೆ." ಎನ್ನುತ್ತಾರೆ ನಿವೇದಿತಾ ಶಿವರಾಜ್‌ಕುಮಾರ್.
ನಿವೇದಿತಾ ಶಿವರಾಜ್‌ಕುಮಾರ್ ಕನ್ನಡ ಚಿತ್ರರಂಗದಲ್ಲಿ ಈಗೀಗ ನಿರ್ಮಾಪಕಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಅಪ್ಪ ಶಿವರಾಜ್‌ಕುಮಾರ್ ಹಾಗೂ ಅಮ್ಮ ಗೀತಾ ಶಿವರಾಜ್‌ಕುಮಾರ್ ಕೂಡ ಮಗಳ ನೆರವಿಗೆ ನಿಂತಿದ್ದಾರೆ. ಕನ್ನಡ ಚಿತ್ರರಂಗಕ್ಕೆ ವಿಭಿನ್ನ ಸಿನಿಮಾಗಳನ್ನು ಕೊಡಬೇಕು ಅನ್ನೋದು ಅವರ ಆಸೆ. ಹೊಸ ಹೊಸ ಪ್ರತಿಭೆಗಳನ್ನು ಕನ್ನಡ ಚಿತ್ರರಂಗಕ್ಕೆ ಕರೆದುಕೊಂಡು ಬರಬೇಕು. ಅವರೊಂದಿಗೆ ವಿಭಿನ್ನ ಸಿನಿಮಾಗಳನ್ನು ಮಾಡಬೇಕು ಎನ್ನುವ ಆಸೆಯನ್ನು ಇಟ್ಟುಕೊಂಡಿದ್ದಾರೆ. ಅದೇ ಹಾದಿಯಲ್ಲಿ ನಡೆಯುತ್ತಿದೆ.
ಈಗ ನಿರ್ಮಾಣ ಮಾಡಿರುವ 'ಫೈರ್ ಫ್ಲೈ' ಎನ್ನುವ ಸಿನಿಮಾದಲ್ಲೂ ಹೊಸಬರಿಗೆ ಅವಕಾಶವನ್ನು ನೀಡಲಾಗಿದೆ. ಈ ಸಿನಿಮಾ ಏಪ್ರಿಲ್ 24ರಂದು ಅಣ್ಣಾವ್ರ ಹುಟ್ಟುಹಬ್ಬದಂದು ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಹೀಗಾಗಿ ಒಂದು ತಿಂಗಳ ಮುನ್ನವೇ ಪ್ರಚಾರವನ್ನು ಆರಂಭಿಸಿದ್ದಾರೆ. ಇದೂವರೆಗೂ ಕ್ಯಾಮರಾ ಮುಂದೆ ಬರುವುದಕ್ಕೆ ಹಿಂದೇಟು ಹಾಕುತ್ತಿದ್ದ ಶಿವಣ್ಣ ಪುತ್ರಿ ಈಗ ತಮ್ಮ ಸಿನಿಮಾಗಳ ಬಗ್ಗೆ ಮಾತಾಡುವುದಕ್ಕೆ ಶುರು ಮಾಡಿದ್ದಾರೆ. ಚಿತ್ರರಂಗದಲ್ಲಿ ಒಂದೊಂದೆ ಹೆಜ್ಜೆಯನ್ನು ಇಡುತ್ತಿದ್ದಾರೆ. ವೆಬ್ ಸೀರಿಸ್‌ನಿಂದ ಆರಂಭ ಆಗಿದ್ದ ಇವರ ಜರ್ನಿ ಈಗ ಸಿನಿಮಾವರೆಗೂ ಬಂದು ನಿಂತಿದೆ. ಈ ಸಿನಿಮಾಗೆ ಗೆದ್ದರೆ, ಮತ್ತೊಂದಿಷ್ಟು ಒಳ್ಳೆಯ ಸಿನಿಮಾಗಳು ಇವರ ನಿರ್ಮಾಣದಲ್ಲಿ ಬರುವ ಸಾಧ್ಯತೆಯಿದೆ.


Click it and Unblock the Notifications











