ಅಣ್ಣಾವ್ರೇ ವಿಲನ್ ಪಾತ್ರ ಮಾಡವ್ರೆ, ಇನ್ನು ನಾನ್ಯಾವ ಲೆಕ್ಕ

ಕಲಾವಿದನೊಬ್ಬನಿಗೆ ಎಲ್ಲಾ ರೀತಿಯ ಪಾತ್ರದಲ್ಲಿ ನಟಿಸಬೇಕೆನ್ನುವ ಹಂಬಲವಿರುವುದು ಸಹಜ. ಈಗ ಚಿತ್ರದ ನಿರ್ದೇಶಕ ರಾಜಮೌಳಿ ನನ್ನ ಪಾತ್ರದ ಒನ್ ಲೈನ್ ಕಥೆ ನನಗೆ ವಿವರಿಸಿದಾಗ ನಾನು ಕಣ್ಮುಚ್ಚಿ ಪಾತ್ರ ಮಾಡಲು ಒಪ್ಪಿಕೊಂಡೆ. ಆ ಪಾತ್ರಕ್ಕೆ ನ್ಯಾಯ ಸಲ್ಲಿಸುತ್ತೇನೆ ಎನ್ನುವ ಆತ್ಮವಿಶ್ವಾಸ ನನ್ನಲ್ಲಿತ್ತು ಎಂದು ಸುದೀಪ್ ಭಾನುವಾರ (ಜು 8) ವಿವಿಧ ಖಾಸಾಗಿ ವಾಹಿನಿಗಳಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಈಗ ಚಿತ್ರ ದೇಶಾದ್ಯಂತ ಗಗನದೆತ್ತರಕ್ಕೆ ಯಶಸ್ಸಿನಲ್ಲಿ ಹಾರಾಡುತ್ತಿರುವ ಈ ಸಂದರ್ಭದಲ್ಲಿ ನನಗೆ ಅವಕಾಶ ನೀಡಿದ ರಾಜಮೌಳಿ ಅವರಿಗೆ ನಾನು ಥ್ಯಾಂಕ್ಸ್ ಹೇಳಲು ಇಷ್ಟ ಪಡುತ್ತೇನೆ. ಅಭಿಮಾನಿಗಳು ಚಿತ್ರವನ್ನು ಮತ್ತು ನನ್ನ ಪಾತ್ರವನ್ನು ಸ್ವೀಕರಿಸಿದ್ದಾರೆ ಇದುವೇ ನನ್ನ ಪಾಲಿಗೆ ದೊಡ್ಡ ಅವಾರ್ಡ್ ಎಂದು ಸುದೀಪ್ ತನ್ನ ಭಾವನೆಯನ್ನು ವ್ಯಕ್ತ ಪಡಿಸಿದ್ದಾರೆ.
ಕಲಾವಿದನಾಗಿ ನನಗೆ ನೆಲೆ ಕೊಟ್ಟಿರುವುದು ಕನ್ನಡ ಚಿತ್ರರಂಗ ಆ ಸತ್ಯವನ್ನು ನಾನು ಯಾವತ್ತೂ ಮರೆತಿಲ್ಲ, ಮರೆಯುವುದೂ ಇಲ್ಲ. ನನ್ನ ಚಿತ್ರಕ್ಕೆ ಚಿತ್ರರಸಿಕರು ಬರುವಾಗ ನನ್ನ ನಟನೆ ನೋಡಲು ಬರುತ್ತಾರೆ. ಅವರ ನಿರೀಕ್ಷೆಗೆ ತಕ್ಕಂತೆ ಪಾತ್ರದಲ್ಲಿ ನನ್ನನ್ನು ತೊಡಗಿಸಿಕೊಳ್ಳುವುದು ನನ್ನ ಮೊದಲ ಆದ್ಯತೆ.
ಈ ಹಿಂದೆ ರಣ್ ಚಿತ್ರದಲ್ಲಿ ಅಮಿತಾಬ್ ಸರ್ ಜೊತೆ ನಟಿಸಿದ್ದೆ. ನಾನು ಮಹಾನ್ ನಟರೊಬ್ಬರ ಮುಂದೆ ನಟಿಸುತ್ತಿದ್ದೇನೆ ಎನ್ನುವುದನ್ನು ಮರೆತು ನನಗೆ ಕೊಟ್ಟ ರೋಲ್ ಗೆ ನ್ಯಾಯ ಒದಗಿಸುವ ಬಗ್ಗೆಯಷ್ಟೇ ನಾನು ಯೋಚಿಸಿರುತ್ತೇನೆ ಎಂದು ಸುದೀಪ್ ತನ್ನ ಮನದಾಳದ ಮಾತನ್ನು ವ್ಯಕ್ತ ಪಡಿಸಿದ್ದಾರೆ.
ಈಗ ಚಿತ್ರ ಬಿಡುಗಡೆಯ ನಂತರ ನನಗೆ ಪಕ್ಕದ ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗದಿಂದ ಬಹಳಷ್ಟು ಫೋನ್ ಗಳು ಬರುತ್ತಿವೆ. ಸದ್ಯಕ್ಕೆ ಯಾವುದನ್ನೂ ನಾನು ಇನ್ನೂ ನಿರ್ಧರಿಸಿಲ್ಲ.
ಈ ಮೊದಲೇ ಹೇಳಿದಂತೆ ನನ್ನ ಮೊದಲ ಆದ್ಯತೆ ಕನ್ನಡ ಚಿತ್ರಗಳಿಗೆ. ಶಶಾಂಕ್ ನಿರ್ದೇಶನದ 'ಬಚ್ಚನ್' ಚಿತ್ರದ ಚಿತ್ರೀಕರಣದಲ್ಲಿ ನಾನೀಗ ಬ್ಯೂಸಿ ಆಗಿದ್ದೇನೆ. ಇದೂ ಕೂಡಾ ವಿಶಿಷ್ಟ ಪಾತ್ರ. ಇನ್ನು ಕೆಲ ಪ್ರಾಜೆಕ್ಟ್ ಗಳಿವೆ, ನಾನು ತುಂಬಾ ಆಲೋಚನೆ ಮಾಡುವ ಮನುಷ್ಯನಲ್ಲ. ದೇವರ ದಯೆಯಿಂದ ಏನೇನು ಆಗಬೇಕು ಅದು ಆಗುತ್ತೆ ಎಂದಿದ್ದಾರೆ ಕಿಚ್ಚ ಸುದೀಪ್.
ಆಂಧ್ರಪ್ರದೇಶದಲ್ಲಿ ಕಿಚ್ಚ ಸುದೀಪ್ ಅಭಿಮಾನಿಗಳ ಸಂಘ : ಈಗ ಚಿತ್ರದ ಯಶಸ್ಸು ಮತ್ತು ಸುದೀಪ್ ನಟನೆ ಯಾವ ಮಟ್ಟಿಗೆ ಪಕ್ಕದ ಆಂಧ್ರದಲ್ಲಿ ಕ್ರೇಜ್ ಹುಟ್ಟಿಕೊಂಡಿದೆ ಅಂದರೆ ಅವರ ಅಭಿಮಾನಿಗಳ ಸಂಘ ಶುರುವಾಗಲಿದೆ.
ಈ ವಿಷಯವನ್ನು ಈಗ ಚಿತ್ರದ ನಿರ್ದೇಶಕ ರಾಜಮೌಳಿ ಅವರೇ ಸ್ಪಷ್ಟಪಡಿಸಿದ್ದಾರೆ. ಸುದೀಪ್ ಜೊತೆ ಸಂದರ್ಶನದ ವೇಳೆ ದೂರವಾಣಿಯಲ್ಲಿ ಕನ್ನಡ ಮತ್ತು ಇಂಗ್ಲಿಶ್ ನಲ್ಲಿ ಮಾತನಾಡಿದ ನಿರ್ದೇಶಕ, ಈ ಚಿತ್ರದಲ್ಲಿ ಸುದೀಪ್ ಅವರಿಗೆ ಕೊಟ್ಟ ಪಾತ್ರದಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡ ಪರಿಯಿದು. ಆಂಧ್ರಪ್ರದೇಶದಲ್ಲಿ ಸುದೀಪ್ ಅಭಿಮಾನಿಗಳ ಸಂಘ ಆರಂಭವಾಗಲಿದೆ ಎನ್ನುವುದಕ್ಕೆ ನನಗೆ ಹೆಮ್ಮೆಯಾಗುತ್ತಿದೆ ಎಂದು ರಾಜಮೌಳಿ ಸುದೀಪ್ ಅವರನ್ನು ಹೊಗಳಿದ್ದಾರೆ.
ರಣ್ ಚಿತ್ರದಲ್ಲಿನ ಸುದೀಪ್ ನಟನೆ ನಾನು ನೋಡಿದ್ದೆ I was really impressed. Because, ಅಮಿತಾಬ್ ಸರ್ ಜೊತೆ ಅವರು ಆಕ್ಟ್ ಮಾಡುತ್ತಿರುವುದು. ಈಗ ಚಿತ್ರ ನಿರ್ಮಿಸುವ ಬಗ್ಗೆ ನಾನು ಆಲೋಚನೆ ಮಾಡಿದಾಗಲೇ ಸುದೀಪ್ ಈ ಪಾತ್ರಕ್ಕೆ ಸೂಕ್ತ ಆಯ್ಕೆ ಎನ್ನುವ ನಿರ್ಧಾರಕ್ಕೆ ಬಂದೆ. Sudeep, Hats off to you for your outstanding performance. God bless you, all the best ಎಂದು ಎಸ್ ಎಸ್ ರಾಜಮೌಳಿ ಹೇಳಿದ್ದಾರೆ.


Click it and Unblock the Notifications











