"ಚೇತನ್‌ಗೆ ಎಂಜಿಆರ್,ಜಯಲಿಲಿತಾ,ಕರುಣಾನಿಧಿ ಎಸ್‌ಪಿಬಿಗೆ ಕೊಟ್ಟಿರುವ ಸ್ವತ್ತಿನ ಬಗ್ಗೆ ಕೇಳುವ ತಾಕತ್ತಿದ್ದೆಯೇ?" ಎನ್‌ಆರ್ ರಮೇಶ್
ಕಳೆದ ಕೆಲವು ದಿನಗಳಿಂದ ನಟ ಹಾಗೂ ಹೋರಾಟಗಾರ ಚೇತನ್ ಅಹಿಂಸಾ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಡಾ.ರಾಜ್‌ಕುಮಾರ್ ಅವರ ಸಮಾಧಿಗೆ ಸರ್ಕಾರದ ಆಸ್ತಿ ಕೊಟ್ಟಿದ್ದಕ್ಕೆ ಚೇತನ್ ಅಹಿಂಸಾ ಕ್ಯಾತೆ ತೆಗೆದಿದ್ದರು. ಇದು ಅಣ್ಣಾವ್ರ ಅಭಿಮಾನಿಗಳನ್ನು ಹಾಗೂ ಕನ್ನಡಿಗರನ್ನು ಕೆರಳಿಸಿದೆ. ಕನ್ನಡ ಪರ ಹೋರಾಟಗಾರರ ಆಕ್ರೋಶಕ್ಕೆ ಚೇತನ್ ಸಿಲುಕಿದ್ದಾರೆ. ಅವರ ಮನೆ ಮುಂದೆ ಈಗಾಗಲೇ ಪ್ರತಿಭಟನೆಗಳು ನಡೆದಿವೆ.
ಅಣ್ಣಾವ್ರ ಸಾವನ್ನು ಅಂದಿನ ಸರ್ಕಾರ ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿವೆ. ಸಾರ್ವಜನಿಕ ಆಸ್ತಿಯನ್ನು ರಾಜ್‌ಕುಮಾರ್ ಸಮಾಧಿಗೆ ನೀಡಲಾಗಿತ್ತು ಎಂದು ಆ ದಿನಗಳು ಚೇತನ್ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದು ಪೋಸ್ಟ್ ಮಾಡಿದ್ದರು. ಅದು ಈಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಚೇತನ್ ಈ ಹೇಳಿಕೆಯನ್ನು ಅಖಿಲ ಕರ್ನಾಟಕ ರಾಜ್‌ಕುಮಾರ್ ಅಭಿಮಾನಿಗಳ ಸಂಘಗಳ ಒಕ್ಕೂಟದ ಗೌರವಾಧ್ಯಕ್ಷ ಎನ್ ಆರ್ ರಮೇಶ್ ಖಂಡಿಸಿದ್ದಾರೆ.

ಚೇತನ್ ಅಹಿಂಸಾ ಬಗ್ಗೆ ಸುದ್ದಿಮನೆ ಅಫಿಶಿಯಲ್ ಯೂಟ್ಯೂಬ್ ಚಾನೆಲ್‌ನಲ್ಲಿ ಎನ್ ಆರ್ ರಮೇಶ್ ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೇ ಚೇತನ್‌ಗೆ ಕೆಲವು ಸವಾಲುಗಳನ್ನು ಎಸೆದಿದ್ದು, ಚೇತನ್ ಅಹಿಂಸಾ ಅಲ್ಲ.. ಚೇತನ್ ಹಿಂಸಾ ಎಂದು ಕರೆದಿದ್ದಾರೆ. ಚೇತನ್ ಅವರ ವಿವಾದಾತ್ಮಕ ಹೇಳಿಕೆಗಳಿಂದ ಕರ್ನಾಟಕದ ಕಾನೂನು ಸುವ್ಯವಸ್ಥೆಗೆ ಭಂಗ ಬರುವಂತಹ ಘಟನೆಗಳು ನಡೆಯುತ್ತಿದೆ ಎಂದು ಕಿಡಿ ಕಾರಿದ್ದಾರೆ. ಅದರದ್ದೊಂದು ಝಲಕ್ ಇಲ್ಲಿದೆ.
ಈತ ಹಿಂಸಾ ಚೇತನ್
"ಚೇತನ್ ಅಹಿಂಸಾ ಅನ್ನೋ ವ್ಯಕ್ತಿ. ಈಗಾಗಲೇ ಕನ್ನಡ ಚಲನ ಚಿತ್ರರಂಗದಿಂದ ಮರೆಯಾಗಿ ಹೋಗಿರುವಂತಹ, ಯಾವುದೋ ಎನ್‌ಜಿಓವನ್ನು ಸ್ಥಾಪನೆ ಮಾಡಿಕೊಂಡು ಬುಡಕಟ್ಟು ಜನಾಂಗಕ್ಕೆ ಸಹಾಯ ಮಾಡುತ್ತೇನೆ ಎಂದು ಹೇಳಿಕೊಂಡು ಬರುತ್ತಿದ್ದಾರೆ. ಚೇತನ್ ನಟಿಸಿರುವ ಬೆರಳೆಣಿಕೆಯಷ್ಟು ಸಿನಿಮಾಗಳ ಪೈಕಿ ಒಂದೇ ಒಂದು ಸಿನಿಮಾವನ್ನು ಆತ ಅಲ್ಲ. ಆ ಸಿನಿಮಾದ ನಿರ್ದೇಶಕರು ಹಾಗೂ ನಿರ್ಮಾಪಕರು ಕೊಟ್ಟಿದ್ದಾರೆ. ಚೇತನ್ ಅಹಿಂಸಾ ಅಂತ ಹೆಸರು ಇಟ್ಟುಕೊಂಡಿರುವ ಒಬ್ಬ ವ್ಯಕ್ತಿಯನ್ನ ನಾನು ಹಿಂಸಾ ಚೇತನ್ ಅಂತಾನೇ ಕರೆಯುತ್ತೇನೆ. ಯಾಕಂದ್ರೆ, ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುವ ಈ ಚೇತನ್ ಅವರಿಂದ ಕರ್ನಾಟಕದ ಕಾನೂನು ಸುವ್ಯವಸ್ಥೆಗೆ ಭಂಗ ಬರುವಂತಹ ಘಟನೆಗಳು ನಡೆಯುತ್ತಿದೆ." ಎಂದು ಎನ್‌ಆರ್ ರಮೇಶ್ ಹೇಳಿದ್ದಾರೆ.
ಡಾ.ರಾಜ್‌ಕುಮಾರ್ ಸೇವೆ ಏನು ಗೊತ್ತು?
"ಈ ಪುಣ್ಯಾತ್ಮ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ಮಾತ್ರ ಅಭಿನಯಿಸಿದ್ರೂ ಕೂಡ, ಬದುಕಿನ ಬಹಳಷ್ಟು ಭಾಗ ದೂರದ ವಿದೇಶದಲ್ಲಿ ಕಳೆದಿರುವಂತಹ ವ್ಯಕ್ತಿ. ಕನ್ನಡ ನಾಡು, ನುಡಿ, ಭಾಷೆಗೆ ಡಾ.ರಾಜ್‌ಕುಮಾರ್ ಅವರ ಸೇವೆ ಏನು ಅನ್ನೋದನ್ನು ಕವಡೆ ಕಾಸಿನಷ್ಟು ಅರ್ಥ ಮಾಡಿಕೊಳ್ಳದೆ ಅಧ್ಯಯನ ಮಾಡದೇ ಮಾತಾಡಲಾಗಿದೆ. ಆತ ಹೇಳಿದರೆ, ಸಮಾಧಿಗೆ ಎರಡೂವರೆ ಎಕರೆ ಸ್ವತ್ತು ಸರ್ಕಾರ ಕೊಟ್ಟಿದ್ದು ಯಾತಕ್ಕೆ?" ಎಂದು ಪ್ರಶ್ನೆ ಮಾಡಿರೋ ಬಗ್ಗೆ ಗರಂ ಆಗಿದ್ದಾರೆ.

ಎನ್‌ಟಿಆರ್, ಎಂಜಿಆರ್ ಬಗ್ಗೆ ಮಾತಾಡೋ ತಾಕತ್ತು ಇದೆಯಾ?
"ಅವರ ಎರಡನೇ ಮಾತನ್ನು ನಾನು ಒಪ್ಪುತ್ತೇನೆ. ಆದರೆ, ಆತನಿಗೆ ತಾಕತ್ತು ಇದ್ದರೆ, ಹೈದರಾಬಾದ್ ಮಹಾನಗರದಲ್ಲಿ ಎನ್‌ಟಿ ರಾಮ ರಾಮ್‌ಗೆ ಹಾಗೇ ಚೆನ್ನೈನಲ್ಲಿ ಎಂ ಜಿ ರಾಮಚಂದ್ರನ್ ಅವರಿಗೆ, ಜಯಲಲಿತಾ ಅವರಿಗೆ, ಕರುಣಾನಿಧಿ ಅವರಿಗೆ ಹಾಗೇ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಕೊಟ್ಟಿರುವಂತಹ ಸ್ವತ್ತುಗಳ ಬಗ್ಗೆ ಮಾತಾಡುವುದಕ್ಕೆ ತಾಕತ್ತು ಇದೆಯಾ? ಹಾಗೇ ಮಾಜಿ ಪ್ರಧಾನಿ ನೆಹರು ಅವರ ಸಮಾಧಿಗೆ 50 ಎಕರೆ 6 ಗುಂಟೆ ಸ್ವತ್ತನ್ನ, ಶ್ರೀಮತಿ ಇಂದಿರಾ ಗಾಂಧಿಗೆ 45 ಎಕರೆ ಸ್ವತ್ತನ್ನ, ರಾಜೀವ್ ಗಾಂಧಿ ಸಮಾಧಿಗೆ 15 ಎಕರೆ ಸ್ವತ್ತನ್ನ ಹಾಗೇ ನೆಹರು ವಸ್ತು ಸಂಗ್ರಹಾಲಕ್ಕೆ 30 ಎಕರೆ ಸ್ವತ್ತನ್ನ ಈ ರಾಷ್ಟ್ರದ ರಾಜಧಾನಿ ದೆಹಲಿ ಮಹಾನಗರದಲ್ಲಿ ಪ್ರತಿ ಒಂದು ಚದರ ಅಡಿ ಒಂದೂವರೆ ಲಕ್ಷ ಬೆಲೆ ಬಾಳುವಂತಹ ಜಾಗವನ್ನು ಕೊಟ್ಟಿರುವುದಕ್ಕೆ ಧ್ವನಿ ಎತ್ತುವುದಕ್ಕೆ ಸಾಧ್ಯವಿದೆಯಾ?" ಎಂದು ಎನ್‌ಆರ್ ರಮೇಶ್ ಪ್ರಶ್ನೆ ಮಾಡಿದ್ದಾರೆ.
ಅಣ್ಣಾವ್ರ ಧೂಳಿಗೆ ಸಮ
"2300 ಕರ್ನಾಟಕದ ಇತಿಹಾಸದಲ್ಲಿ ಬಸವಣ್ಣನವರನ್ನು ಹೊರತು ಪಡಿಸಿದರೆ, ಅಣ್ಣಾ ಅಂತ ಇಡೀ ಕರ್ನಾಟಕ ರಾಜ್ಯದ ಜನತೆಯಿಂದ ಕರೆಸಿಕೊಂಡಿದ್ದು ಒಬ್ಬರೇ ಒಬ್ಬರು ಡಾ.ರಾಜ್‌ಕುಮಾರ್. ಅವರನ್ನು ಯುಗಪುರುಷ ಅಂತ ಕರೆಯುತ್ತೇವೆ. ಅವರ ಕಾಲಿನ ಧೂಳಿಗೂ ಸಮ ಇಲ್ಲದೆ ಇರುವ ನೀನು ಅವರ ವಿರುದ್ಧ ಆಡಿರುವ ಮಾತುಗಳನ್ನು ನೋಡಿದಾಗ ನೀನು ಮಾನಸಿಕ ಅಸ್ವಸ್ಥ ಅನ್ನೋದು ಸ್ಪಷ್ಟವಾಗುತ್ತೆ. ಜಯನಗರದಲ್ಲಿ ಏಳು ಅಕ್ಷರದ ಒಂದು ಆಸ್ಪತ್ರೆಯಿದೆ. ಅಲ್ಲಿ ದಾಖಲಾಗಿ ನೀನು ಚಿಕಿತ್ಸೆ ತೆಗೆದುಕೊಳ್ಳುವುದು ಒಳ್ಳೆಯದು" ಎಂದು ಎನ್ ಆರ್ ರಮೇಶ್ ಕಿಡಿ ಕಾರಿದ್ದಾರೆ.


Click it and Unblock the Notifications