ಅಯ್ಯ 10, ಕಲಾಸಿಪಾಳ್ಯ 7, ಮಂಡ್ಯ 13, ಹುಚ್ಚ 3 ಸಿನಿಮಾದಿಂದ ಕದ್ದಿದ್ದು; ಏನಂತಾರೆ ಓಂ ಪ್ರಕಾಶ್ ರಾವ್
ಕನ್ನಡ ಚಿತ್ರರಂಗ ವಿಭಿನ್ನ ಶೈಲಿಯಲ್ಲಿ ಸಿನಿಮಾ ಮಾಡುವ ನಿರ್ದೇಶಕರನ್ನು ನೋಡಿದೆ. ಕೆಲವು ಸ್ವಮೇಕ್ ಬಿಟ್ಟರೆ ಬೇರೆ ಭಾಷೆಯ ಸಿನಿಮಾಗಳನ್ನು ತಮ್ಮ ಜೀವಮಾನದಲ್ಲಿಯೇ ನೋಡಿಲ್ಲ. ಇನ್ನು ಕೆಲವರು ಸ್ವಮೇಕ್ ಕೂಡ ಮಾಡಿದ್ದಾರೆ. ರೀಮೇಕ್ ಸಿನಿಮಾಗಳನ್ನೂ ಮಾಡಿದ್ದಾರೆ. ಎರಡೂ ಸಿನಿಮಾಗಳನ್ನು ಮಾಡಿ ಗೆದ್ದಿದ್ದಾರೆ. ಹೀಗೆ ಒಂದೊಂದು ಕಾಲಘಟ್ಟದಲ್ಲಿ ಒಂದೊಂದು ಶೈಲಿಯಲ್ಲಿ ಸಿನಿಮಾ ಮಾಡಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಇವರೆಲ್ಲರಿಗೂ ಹೋಲಿಸಿದರೆ, ಓಂ ಪ್ರಕಾಶ್ ರಾವ್ ಕೊಂಚ ಡಿಫ್ರೆಂಟ್.
ಬರೀ ರಿಮೇಕ್ ಸಿನಿಮಾಗಳನ್ನೇ ಮಾಡುವ ನಿರ್ದೇಶಕರಿಗಿಂತಲೂ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದು, ಓಂ ಪ್ರಕಾಶ್ ರಾವ್. ಇವರು ಸಿನಿಮಾಗಳನ್ನು ರೀಮೇಕ್ ಮಾಡಲಿಲ್ಲ. ಬದಲಾಗಿ ರಿಮಿಕ್ಸ್ ಮಾಡಿದ್ದರು. ಅಂತಹ ಹಲವು ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಕನ್ನಡ ಚಿತ್ರರಂಗದಲ್ಲಿ ಬ್ಲಾಕ್‌ಬಸ್ಟರ್ ಲಿಸ್ಟ್ ಸೇರಿವೆ. ಇತ್ತೀಚೆಗೆ ಸದರ್ಶನವೊಂದರಲ್ಲಿ ಓಂ ಪ್ರಕಾಶ್ ರಾವ್ ಅವರೇ ಈ ವಿಷಯವನ್ನು ಹೇಳಿಕೊಂಡಿದ್ದಾರೆ.

ಓಂ ಪ್ರಕಾಶ್ ರಾವ್ ಈ ಹಿಂದೆನೂ ಹಲವು ಸಿನಿಮಾಗಳಿಂದ ಕದ್ದು ತಾನು ಪಿಕ್ಚರ್ ಮಾಡಿದ್ದಾಗಿ ಹೇಳುತ್ತಲೇ ಬಂದಿದ್ದಾರೆ. ಈಗ 'ಕೀರ್ತಿ ಇಎನ್‌ಟಿ ಕ್ಲಿನಿಕ್' ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಅವರು ನಿರ್ದೇಶಿಸಿದ ಸೂಪರ್ ಹಿಟ್ ಸಿನಿಮಾಗಳು ಎಷ್ಟು ಸಿನಿಮಾಗಳಿಂದ ಕದ್ದು ಮಾಡಿದ್ದು ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಅಲ್ಲದೆ, ಹುಚ್ಚ ಸಿನಿಮಾವನ್ನು ಮೂರು ಸಿನಿಮಾಗಳಿಂದ ಕದ್ದ ಕಥೆ ಎಂದು ಹೇಳಿದ್ದಾರೆ. ಈ ಸಂದರ್ಶನದ ಒಂದು ಝಲಕ್ ಇಲ್ಲಿದೆ.
ಎಷ್ಟು ಸಿನಿಮಾಗಳಿಂದ ಕದ್ದಿದ್ದು
ಓಂ ಪ್ರಕಾಶ್ ರಾವ್ ಈ ಹಿಂದೆನೇ ಹಲವು ಸಿನಿಮಾಗಳಿಂದ ಕದ್ದು ಪಿಕ್ಚರ್ ಮಾಡುವುದಾಗಿ ಒಪ್ಪಿಕೊಂಡಿದ್ದರು. ಈ ಬಾರಿ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ. ಅವರು ನಿರ್ದೇಶಿಸಿದ ಸೂಪರ್ ಹಿಟ್ ಪಿಕ್ಚರ್‌ಗಳನ್ನು ಎಷ್ಟು ಸಿನಿಮಾಗಳಿಂದ ಕದ್ದು ಮಾಡಿದ್ದು ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಅವರು ಹೇಳಿದ ದೊಡ್ಡ ಪಟ್ಟಿ ಇಲ್ಲಿದೆ.
ಅಯ್ಯ - 10 ಸಿನಿಮಾಗಳು
ಕಲಾಸಿಪಾಳ್ಯ - 7 ಸಿನಿಮಾಗಳು
ಮಂಡ್ಯ- 13 ಸಿನಿಮಾಗಳು
ಯೋಧ- 03 ಸಿನಿಮಾಗಳು
ಪ್ರಿನ್ಸ್- 04 ಸಿನಿಮಾಗಳು
ಪಾರ್ಥ- 6 ಸಿನಿಮಾಗಳು
ಹುಬ್ಬಳ್ಳಿ- 8 ಸಿನಿಮಾಗಳು
ಹುಚ್ಚ- 03 ಸಿನಿಮಾಗಳು
'ಹುಚ್ಚ'ಗೂ ಕದ್ದಿದ್ಯಾಕೆ?
'ಹುಚ್ಚ' ತಮಿಳಿನ 'ಸೇತು' ಸಿನಿಮಾದ ರಿಮೇಕ್ ಅನ್ನೋದು ಗೊತ್ತಿರೋದೆ. ಆದರೆ, ಓಂ ಪ್ರಕಾಶ್ ರಾವ್ ಈ ಸಿನಿಮಾಗೂ ಇನ್ನೂ ಮೂರು ಸಿನಿಮಾಗಳನ್ನು ಸೇರಿದ್ದಾರಂತೆ. ಅದನ್ನು ಅವರೇ ಒಪ್ಪಿಕೊಂಡಿದ್ದಾರೆ. "ಹುಚ್ಚ ಪಿಕ್ಚರ್ ಅದು ರೀಮೇಕ್. ಅದು ಸೇತು ಅನ್ನೋ ಒಂದೇ ಪಿಕ್ಚರ್. ಆ ಸಿನಿಮಾ ನೋಡಿದಾಗ ನನಗೆ ಅನಿಸಿದ್ದು, ಇದರಲ್ಲಿ ಕನ್ನಡತನ ಅನ್ನೋದು ಕಮ್ಮಿ ಆಗುತ್ತೆ. ಈ ಸಿನಿಮಾದಲ್ಲಿ ತಮಿಳು ನೆಟಿವಿಟಿ ಇದೆ. ನಮ್ಮಲ್ಲಿ ಕಮರ್ಷಿಯಲ್ ಇದ್ದರೆ ಮಾತ್ರ ಬಿ ಹಾಗೂ ಸಿ ಸೆಂಟರ್‌ನಲ್ಲಿ ನೋಡೋದು. ಹಿಂದೆ ಸ್ಪರ್ಶ ಸಿನಿಮಾ ಬಂತು ಸುದೀಪ್ ಅವರದ್ದು, ಅದರಲ್ಲಿ ಅವರಿಗೆ ಮೀಸೆ ಇಲ್ಲ ಅನ್ನೋದೇ ಒಂದು ಮೈನಸ್ ಆಗಿತ್ತು. ಅದನ್ನು ಡೈರೆಕ್ಟರ್ ಕೂಡ ಹೇಳಿದ್ದರು. ದೇಸಾಯಿ ಸರ್ ಅವರೇ ನನಗೆ ಹೇಳಿದ್ದು, ಸುದೀಪ್ ಅವರೊಂದಿಗೆ ಸಿನಿಮಾ ಮಾಡೋಣ ಅಂತ. ಹುಚ್ಚ ಮಾಡುವಾಗ ರಗಡ್ ಫೇಸ್ ಬೇಕಿತ್ತು. ಬಿ, ಸಿ ಸೆಂಟರ್‌ನಲ್ಲಿ ನಮ್ಮ ಜನರು ತುಂಬಾನೇ ಇಷ್ಟ ಪಡುತ್ತಾರೆ ಅಂತ ಮಾಡಿದ್ವಿ." ಎನ್ನುತ್ತಾರೆ ಓಂ ಪ್ರಕಾಶ್ ರಾವ್.

'ಹುಚ್ಚ'ಗೆ ನಾಗಾರ್ಜುನ ಸಿನಿಮಾ ಕಥೆ ಮಿಕ್ಸ್
'ಹುಚ್ಚ' ಸಿನಿಮಾವನ್ನು ಹಾಗೇ ರಿಮೇಕ್ ಮಾಡಿದರೆ, ಕನ್ನಡದಲ್ಲಿ ಗೆಲ್ಲೋದಿಲ್ಲ ಅನ್ನೋದು ಗೊತ್ತಿತ್ತು. ಅದಕ್ಕೆ ನಾಗಾರ್ಜುನ ನಟಿಸಿದ 'ಶಿವ' ಸಿನಿಮಾದ ತುಣುಕನ್ನು ಮಿಕ್ಸ್ ಮಾಡಿದ್ದರು. "ಸುದೀಪ್ ಅವರು ನೋಡುವುದಕ್ಕೆ ನಾಗಾರ್ಜುನಾ ಅವರ ಹಾಗೇ ಇದ್ದರು. ಅವರ ಸಿನಿಮಾವನ್ನು ಯಾಕೆ ಕದಿಯ ಬಾರದು ಅಂತ ಮನಸ್ಸಿನಲ್ಲಿ ಬಂತು. ಯಾವ ಸಿನಿಮಾ ರೀಮೇಕ್ ಆಗಿಲ್ಲ ನೋಡುತ್ತಿರುವಾಗ ಶಿವ ಅನ್ನೋ ಸಿನಿಮಾ ಆಗಿಲ್ಲ ಅನ್ನೋದು ಗೊತ್ತಾಯ್ತು. ಚೆನ್ನಾಗಿದೆಯಲ್ಲ, ನಮ್ಮದೂ ಕಾಲೇಜ್ ಸಬ್ಜೆಕ್ಟ್. ಚೆನ್ನಾಗಿದೆ ಅಂತ ಆ ಸಿನಿಮಾವನ್ನು ಮಿಕ್ಸ್ ಮಾಡಿದ್ವಿ. ಜೊತೆಗೆ ಇನ್ನೊಂದೆರಡು ಸಿನಿಮಾ ಮಿಕ್ಸ್ ಮಾಡಿದ್ವಿ. ಎಲ್ಲರೂ ತುಂಬಾನೇ ಚೆನ್ನಾಗಿ ಕೆಲಸ ಮಾಡಿದರು. ಸಿನಿಮಾ ಸೂಪರ್ ಡೂಪರ್ ಹಿಟ್ ಆಯ್ತು." ಎಂದು ಓಂ ಪ್ರಕಾಶ್ ರಾವ್ ಹೇಳಿದ್ದಾರೆ.
ಸ್ವಮೇಕ್ ಸಿನಿಮಾಗಳೆಲ್ಲವೂ ಹಿಟ್
ಹಾಗಂತ ಓಂ ಪ್ರಕಾಶ್ ರಾವ್ ಕೇವಲ ರೀಮೇಕ್, ರಿಮಿಕ್ಸ್ ಸಿನಿಮಾಗಳನ್ನಷ್ಟೇ ಮಾಡಿಲ್ಲ. ಅವರು 10 ರಿಂದ 11 ಸ್ವಮೇಕ್ ಸಿನಿಮಾಗಳನ್ನು ಮಾಡಿದ್ದಾರೆ. ಅವೆಲ್ಲವು ಸೂಪರ್ ಹಿಟ್ ಆಗಿವೆ. "10 ರಿಂದ 11 ಸ್ವಮೇಕ್ ಇದೆ. ಅದರಲ್ಲಿ ಒಂದಿಷ್ಟು ರೀಮೇಕ್ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ರಿಮಿಕ್ಸ್ ಇದೆ. ರಿಮಿಕ್ಸ್ ಅಂದರೆ, 10 ರಿಂದ 15 ಪಿಕ್ಚರ್ ಅನ್ನು ಮಿಕ್ಸ್ ಮಾಡಿ ಮಾಡೋದು ಒಂದು. ಆ ರೀತಿ ತುಂಬಾನೇ ಸಿನಿಮಾ ಮಾಡಿದ್ದೇನೆ." ಎಂದು ಓಂ ಪ್ರಕಾಶ್ ರಾವ್ ಅವರೇ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದಾರೆ.


Click it and Unblock the Notifications