Rakshit Shetty: "ಒಂದು ಹಂತದಲ್ಲಿ ರಿಷಬ್ ಶೆಟ್ಟಿಗೆ ತಮಿಳಿಗೆ ಹೋಗಬೇಕು ಅಂತಿತ್ತು.. ನಾನೇ ಬೇಡ ಅಂದಿದ್ದೆ" ರಕ್ಷಿತ್ ಶೆಟ್ಟಿ
ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಇಬ್ಬರೂ ಕನ್ನಡ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರಿದ್ದಾರೆ. ಇಬ್ಬರಿಗೂ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಕ್ಸಸ್ ಸಿಕ್ಕಿದೆ. ರಕ್ಷಿತ್ ಶೆಟ್ಟಿ '777 ಚಾರ್ಲಿ' ಮೂಲಕ ಪ್ಯಾನ್ ಇಂಡಿಯಾದಲ್ಲಿ ಯಶಸ್ಸು ಕಂಡಿದ್ದರೆ, ಇತ್ತ ರಿಷಬ್ ಶೆಟ್ಟಿ 'ಕಾಂತಾರ'ದಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ.
ಈಗ ಕನ್ನಡ ಸಿನಿಮಾಗಳನ್ನು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ನೋಡುವುದಕ್ಕೆ ಇಷ್ಟ ಪಡುತ್ತಿದ್ದಾರೆ. ಅದೇ 10 ವರ್ಷಗಳ ಹಿಂದೆ ಕನ್ನಡ ಚಿತ್ರರಂಗ ಹೀಗೆ ಇರಲಿಲ್ಲ ಅಂತ ರಕ್ಷಿತ್ ಶೆಟ್ಟಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಬರೀ ಕಮರ್ಷಿಯಲ್ ಸಿನಿಮಾಗಳನ್ನಷ್ಟೇ ಮೇಕಿಂಗ್ ಮಾಡುತ್ತಿತ್ತು ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.

ರಕ್ಷಿತ್ ಶೆಟ್ಟಿಯ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಓಟಿಟಿಯಲ್ಲೂ ಸದ್ದು ಮಾಡುತ್ತಿದೆ. ಹೀಗಾಗಿ ರಕ್ಷಿತ್, ರುಕ್ಮಿಣಿ ವಸಂತ್ ಹಾಗೂ ಹೇಮಂತ್ ಎಂ ರಾವ್ ಯೂಟ್ಯೂಬ್ ಚಾನೆಲ್ ಫಿಲ್ಮ್ ಕಂಪಾನಿಯನ್ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ವೇಳೆ ರಿಷಬ್ ಶೆಟ್ಟಿ ತಮಿಳು ಚಿತ್ರರಂಗಕ್ಕೆ ಹೋಗಲು ನಿರ್ಧರಿಸಿದ್ದರು ಎಂದು ಹೇಳಿದ್ದರು. ಅಷ್ಟಕ್ಕೂ ಯಾಕೆ ಈ ನಿರ್ಧಾರಕ್ಕೆ ಬಂದಿದ್ದರು? ಅನ್ನೋದನ್ನು ತಿಳಿಯಲು ಮುಂದೆ ಓದಿ..
10 ವರ್ಷಗಳ ಹಿಂದೆ ಸ್ಯಾಂಡಲ್‌ವುಡ್ ಹೀಗಿರಲಿಲ್ಲ
ಕನ್ನಡ ಚಿತ್ರರಂಗ ಏಕಾಏಕಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡುತ್ತಿರೋದಲ್ಲ. 10 ವರ್ಷಗಳಿಂದ ಹಂತ ಹಂತವಾಗಿ ಬಿಲ್ಡ್ ಆಗುತ್ತಲೇ ಬಂದಿದೆ ಎಂದು ಹೇಳಾಗುತ್ತಿದೆ. 'ಲೂಸಿಯಾ', 'ಉಳಿದವರು ಕಂಡಂತೆ', 'ರಂಗಿತರಂಗ', 'ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾಗಳು ಒಂದೊಂದು ವರ್ಷ ತೆರೆಕಂಡಿದ್ದವು. ಆ ಎಲ್ಲಾ ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ಹೊಸ ಬದಲಾವಣೆಯನ್ನು ಎಂದಿವೆ ಎಂದಿದ್ದಾರೆ. ಈ ವೇಳೆ ರಿಷಬ್ ಶೆಟ್ಟಿ ತಮಿಳು ಚಿತ್ರರಂಗಕ್ಕೆ ಹೋಗಲು ನಿರ್ಧರಿಸಿದ್ದ ವಿಷಯವನ್ನು ಪ್ರಸ್ತಾಪಿಸಿದ್ದರು.

"10 ವರ್ಷದಿಂದ ಕನ್ನಡ ಚಿತ್ರರಂಗ ಬಿಲ್ಡ್ ಆಗುತ್ತಿತ್ತು"
"ಕನ್ನಡ ಚಿತ್ರರಂಗ ಈಗ ಏನಿದೆ ಅದು ಕಳೆದ 10 ವರ್ಷಗಳಿಂದ ಬಿಲ್ಡ್ ಆಗುತ್ತಿತ್ತು. ಪ್ರಪಂಚ ಈಗ ನೋಡುತ್ತಿದೆ. ನಾನು ಬೆಂಗಳೂರಿಗೆ ಬಂದಾಗ, ನಾನು ಕನ್ನಡ ಚಿತ್ರರಂಗದ ಭಾಗವಾಗಲು ಬಯಸಿದ್ದೆ. ನನ್ನ ಜೊತೆಗಿದ್ದ ಕೆಲವು ಫಿಲ್ಮ್ ಮೇಕರ್ಸ್ ತಮಿಳಿಗೆ ಹೋದರು. ಮುಂಬೈಗೆ ಬಂದರು. ಅವರ ಶೈಲಿಯ ಸಿನಿಮಾಗಳು ಕನ್ನಡದಲ್ಲಿ ನಿರ್ಮಾಣ ಆಗುತ್ತಿರಲಿಲ್ಲ. ನಾವು ಕೇವಲ ಕಮರ್ಷಿಯಲ್ ಸಿನಿಮಾಗಳನ್ನು ಮಾತ್ರ ಮಾಡುತ್ತಿದ್ದೆವು." ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.
"ರಿಷಬ್ ಶೆಟ್ಟಿ ತಮಿಳಿಗೆ ಹೋಗಲು ನಿರ್ಧರಿಸಿದ್ದರು"
ಒಂದು ಕಾಲದಲ್ಲಿ ಕನ್ನಡ ಚಿತ್ರರಂಗ ಕೇವಲ ಕಮರ್ಷಿಯಲ್ ಸಿನಿಮಾಗಳನ್ನು ಮಾತ್ರ ನಿರ್ಮಾಣ ಮಾಡುತ್ತಿತ್ತು. ಆಗ ಕೆಲವು ನಿರ್ದೇಶಕರಿಗೆ ಅವರ ಶೈಲಿಯ ಸಿನಿಮಾ ನಿರ್ಮಾಣ ಮಾಡುವುದಕ್ಕೆ ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ರಿಷಬ್ ಶೆಟ್ಟಿ ಕೂಡ ತಮಿಳಿಗೆ ಶಿಫ್ಟ್ ಆಗಲು ನಿರ್ಧರಿಸಿದ್ದರು ಎಂದಿದ್ದಾರೆ. "ನನಗೆ ನೆನಪಿದೆ. ಒಂದು ಹಂತದಲ್ಲಿ ರಿಷಬ್‌ಗೆ ಕೂಡ ತಮಿಳಿಗೆ ಹೋಗಬೇಕು ಅಂತಿತ್ತು. ಆದರೆ, ನಾನು ಬೇಡ ನೀನು ಇಲ್ಲೇ ಕೆಲಸ ಮಾಡಬೇಕು ಅಂತ ಹೇಳಿದ್ದೆ." ಎಂದು ರಕ್ಷಿತ್ ಶೆಟ್ಟಿ ಆ ದಿನವನ್ನು ನೆನಪಿಸಿಕೊಂಡಿದ್ದಾರೆ.
ಕರ್ನಾಟಕದ ಬೇರೆ ಭಾಗದ ಕಥೆ ಮಿಸ್ಸಿಂಗ್
"ಬೆಂಗಳೂರಿನಲ್ಲಿರುವ ಫಿಲ್ಮ್ ಮೇಕರ್ಸ್ ನಾವು ಬೇರೆ ಭಾಷೆಯ ಸಿನಿಮಾಗಳಿಂದಲೂ ಪ್ರೇರಣೆ ಹೊಂದಿದ್ದರು. ಮಲಯಾಳಂನಲ್ಲಿ ಸಿನಿಮಾ ಮಾಡಿದರೆ, ಅವರು ಅಲ್ಲಿನ ಎಲ್ಲಾ ಅಂಶಗಳನ್ನು ಟಚ್ ಮಾಡುತ್ತಿದ್ದರು. ಹಾಗೇ ತಮಿಳಿನರು ಕೂಡ. ಆದರೆ, ಕನ್ನಡದಲ್ಲಿ ಆಗ ವೇಳೆ ಮಂಡ್ಯ, ಮೈಸೂರು, ಬೆಂಗಳೂರು ಭಾಗದ ಸಿನಿಮಾಗಳು ಮಾತ್ರ ಆಗುತ್ತಿತ್ತು." ಎಂದು ರಕ್ಷಿತ್ ಶೆಟ್ಟಿ ಸಂದರ್ಶನದಲ್ಲಿ ಹೇಳಿದ್ದಾರೆ.


Click it and Unblock the Notifications











