ಮತ್ತೆ ಒರಟನಾದ ಪ್ರಶಾಂತ್; ಲೂಸ್ ಮಾದ ಯೋಗಿಯ 50ನೇ ಸಿನಿಮಾದ ಖಡಕ್ ಲುಕ್ ಹೇಗಿದೆ ನೋಡಿ!
ಒರಟ ಪ್ರಶಾಂತ್.. ಈ ಹೆಸರು ಕೇಳಿದ ಕೂಡಲೇ ಒಂದು "ಯಾರೋ.. ಕಣ್ಣಲ್ಲಿ ಕಣ್ಣನಿಟ್ಟು.." ಅನ್ನುವ ಹಾಡನ್ನು ಗುನುಗುವುದಕ್ಕೆ ಶುರು ಮಾಡಿಬಿಡುತ್ತೇವೆ. ಒರಟ ಸಿನಿಮಾದ ಈ ಹಾಡು ದಶಕದ ಹಿಂದೆ ಆ ಮಟ್ಟಿಗೆ ಸದ್ದು ಮಾಡಿತ್ತು. ಮೊದಲ ಪ್ರಯತ್ನದಲ್ಲೇ ಪ್ರಶಾಂತ್‌ಗೆ ಹೆಸರು ತಂದು ಕೊಟ್ಟ ಸಿನಿಮಾವಿದು. ಅದಕ್ಕೆ ತನ್ನ ಹೆಸರಿನ ಹಿಂದೆ 'ಒರಟ' ಸೇರಿಸಿಕೊಂಡಿದ್ದಾರೆ.
'ಒರಟ' ಬಳಿಕ ಒಂದಿಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ, ಆ ಸಿನಿಮಾಗಳು ಯಾಕೋ ಕೈ ಹಿಡಿದಿರಲಿಲ್ಲ. ಹೀಗಾಗಿ ಒಂದಿಷ್ಟು ದಿನ ಚಿತ್ರರಂಗದಲ್ಲಿ ಕಾಣಿಸಿಕೊಳ್ಳಲಿಲ್ಲ. ಜನರು ಒರಟ ಪ್ರಶಾಂತ್ ಅನ್ನೋ ಹೀರೊ ಇದ್ದರು ಅನ್ನೋದನ್ನು ಮರೆತು ಹೋಗುವಷ್ಟು ಕಣ್ಮರೆಯಾಗಿದ್ದರು. ಕಳೆದ ಎರಡು ವರ್ಷಗಳಿಂದ ಮತ್ತೆ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದ್ರೀಗ ಲೂಸ್ ಮಾದ ನಟಿಸುತ್ತಿರುವ ಸಿನಿಮಾ ಖಡಕ್ ಮಾಸ್ ಲುಕ್ ಮೂಲಕ ಮತ್ತೆ ಸದ್ದು ಮಾಡೋಕೆ ಸಜ್ಜಾಗಿದ್ದಾರೆ.

ಲೂಸ್ ಮಾದ ಯೋಗಿಯ 50ನೇ ಸಿನಿಮಾ 'ರೋಸಿ'. ಈ ಸಿನಿಮಾ ಸೆಟ್ಟೇರಿದ ದಿನದಿಂದಲೂ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಸ್ಯಾಂಡಲ್‌ವುಡ್‌ನ ಒಬ್ಬೊಬ್ಬರೇ ಸ್ಟಾರ್ ನಟ ಈ ಸಿನಿಮಾವನ್ನು ಸೇರಿಕೊಳ್ಳುತ್ತಿದ್ದಾರೆ. ಈಗಾಗಲೇ ಶ್ರೀನಗರ ಕಿಟ್ಟಿ, 'ಲಿಯೋ' ಸಿನಿಮಾದ ಸ್ಯಾಂಡಿ ಕುಮಾರ್ ಚಿತ್ರತಂಡ ಸೇರಿಕೊಂಡಿದ್ದಾರೆ. ಈಗ ಒರಟ ಪ್ರಶಾಂತ್ ಕೂಡ ಎಂಟ್ರಿ ಕೊಟ್ಟಿದ್ದು ಸಿಕ್ಕಾಪಟ್ಟೆ ಮಾಸ್ ಆಗಿದೆ.
ಅಂದ್ಹಾಗೆ, ಒರಟ ಪ್ರಶಾಂತ್ ಕಳೆದೆರಡು ವರ್ಷಗಳಿಂದ ಮಾಸ್ ಆಗಿ ಕಮ್‌ಬ್ಯಾಕ್ ಮಾಡುವುದಕ್ಕೆ ಪ್ರಯತ್ನ ಮಾಡುತ್ತಲೇ ಇದ್ದರು. ಆದರೆ, ಅವರಿಗೆ ಅಂತ ಅವಕಾಶ ಸಿಕ್ಕಿರಲಿಲ್ಲ. ಆದರೆ, ಲೂಸ್ ಮಾಸ ಯೋಗಿ 50ನೇ ಸಿನಿಮಾದಲ್ಲಿ ಮಾಸ್ ಕ್ಯಾರೆಕ್ಟರ್ ಸಿಕ್ಕಿದೆ. 'ರೋಸಿ' ಟೀಮ್ ರಿಲೀಸ್ ಮಾಡಿರೋ ಫಸ್ಟ್ ಲುಕ್‌ನಲ್ಲಿ ಒರಟ ಪ್ರಶಾಂತ್ ಲುಕ್ ಸಿನಿಪ್ರಿಯರನ್ನು ಸೆಳೆಯುತ್ತಿದೆ. ಈ ಸಿನಿಮಾದಲ್ಲಿ ಒರಟ ಪ್ರಶಾಂತ್ ಮತ್ತೆ ಒರಟಾಗಿಯೇ ಕಾಣಿಸಿಕೊಂಡಿದ್ದಾರೆ.
ಈಗಾಗಲೇ ರಿಲೀಸ್ ಆಗಿರೋ ಒರಟ ಪ್ರಶಾಂತ್ ನಟಿಸುತ್ತಿರುವ 'ರೋಸಿ' ಫಸ್ಟ್ ಲುಕ್‌ನಲ್ಲಿ ಬ್ಲ್ಯಾಕ್ ಕಾಸ್ಟ್ಯೂಮ್, ಸಾಲ್ಟ್ ಅಂಡ್ ಪೆಪ್ಪರ್ ಹೇರ್ ಸ್ಟೈಲ್, ಬ್ಲ್ಯಾಕ್ ಸನ್‌ಗ್ಲಾಸ್, ಬಾಯಲ್ಲೊಂದು ಬೀಡಿ ಇಟ್ಕೊಂಡು ಲುಕ್ ಕೊಟ್ಟಿದ್ದಾರೆ. 'ರೋಸಿ' ಸಿನಿಮಾದಲ್ಲಿ ಇವರ ಪಾತ್ರದ ಹೆಸರು ಸ್ವಾಮಿ ಅಣ್ಣ. ಈಗಾಗಲೇ 'ರೋಸಿ' ಸಿನಿಮಾದ ನಿರ್ದೇಶಕ ಶೂನ್ಯ ಇದೊಂದು ಸ್ಟೈಲಿಶ್ ಗ್ಯಾಂಗ್‌ಸ್ಟರ್ ಡ್ರಾಮ ಎಂದು ಹೇಳಿಕೊಂಡಿದ್ದಾರೆ. ಹೀಗಾಗಿ ಒರಟ ಪ್ರಶಾಂತ್ ರೋಲ್ ಕೂಡ ಅಷ್ಟೇ ಸ್ಟೈಲಿಶ್ ಆಗಿದೆ.

'ರೋಸಿ' ಸಿನಿಮಾದಲ್ಲಿ ಸ್ವಾಮಿ ಅಣ್ಣ ಲುಕ್ ನೋಡಿ ಒರಟ ಪ್ರಶಾಂತ್ ಹರ್ಷ ವ್ಯಕ್ತಪಡಿಸಿದ್ದಾರೆ. "ನನಗೆ ಬಹಳ ಅವಕಾಶಗಳು ಬಂದವು. ಆದರೆ, ನಾನು ಒಪ್ಪಿರಲಿಲ್ಲ. ಶೂನ್ಯ ಅವರು ಹೇಳಿದ ಕಥೆ ಹಾಗೂ ನನ್ನ ಪಾತ್ರ ಇಷ್ಟವಾಯಿತು. ಹಾಗಾಗಿ ಈ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಯೋಗಿ ಅವರ ಜೊತೆಗೆ ನಟಿಸ್ಬೇಕು ಅಂತ ಆಸೆಯಿತ್ತು. ಅದು ಈ ಸಿನಿಮಾದ ಮೂಲಕ ಈಡೇರುತ್ತಿದೆ." ಎಂದು ಒರಟ ಪ್ರಶಾಂತ್ ಫಸ್ಟ್ ಲುಕ್ ರಿಲೀಸ್ ಬಳಿಕ ಸಿನಿಮಾ ಬಗ್ಗೆ ಮಾಡಿದ್ದಾರೆ.
ಇನ್ನು ನಿರ್ದೇಶಕ ಶೂನ್ಯ ಕೂಡ ಒರಟ ಪ್ರಶಾಂತ್ ಲುಕ್ ಬಗ್ಗೆ ಥ್ರಿಲ್ ಆಗಿದ್ದಾರೆ. "ರೋಸಿ ಸಿನಿಮಾ ಸ್ಟೈಲಿಷ್ ಗ್ಯಾಂಗ್‌ಸ್ಟರ್ ಡ್ರಾಮ. ಒರಟ ಪ್ರಶಾಂತ್ ಬಹಳ ದಿನಗಳ ನಂತರ ನಮ್ಮ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅವರ ಪಾತ್ರದ ಹೆಸರು 'ಸ್ವಾಮಿ ಅಣ್ಣ'. ಈ ಸಿನಿಮಾದಲ್ಲಿ ಇನ್ನೂ ಎರಡು ಪ್ರಮುಖ ಪಾತ್ರಗಳಿವೆ. ಅವುಗಳ ಬಗ್ಗೆ ಸದ್ಯದಲ್ಲೇ ಮಾಹಿತಿ ನೀಡುತ್ತೇನೆ" ಎಂದು ಸಿನಿಮಾ ಬಗ್ಗೆ ಇನ್ನಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.
'ರೋಸಿ' ಸ್ಟೈಲಿಷ್ ಗ್ಯಾಂಗ್‌ಸ್ಟರ್ ಸಿನಿಮಾ ಆಗಿರೋದ್ರಿಂದ ಸ್ಟೈಲಿಷ್ ಮ್ಯೂಸಿಕ್ ಡೈರೆಕ್ಟರ್ ಗುರುಕಿರಣ್ ಟ್ಯೂನ್ ಹಾಕುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 25 ವರ್ಷಗಳಾಗಿದ್ದು, ಈಗ "ಕರಿಮಣಿ ಮಾಲೀಕ" ಹಾಡು ಫೇಮಸ್ ಆಗಿದ್ದರ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.


Click it and Unblock the Notifications











