'ದಿಯಾ' ಕಂಡು ಬೆರಗಾದ ಪಕ್ಕದ ರಾಜ್ಯಗಳ ಸಿನಿಮಾ ಅಭಿಮಾನಿಗಳು ಹೇಳಿದ್ದೇನು?
'ದಿಯಾ' ಎಂಬ ಕನ್ನಡ ಸಿನಿಮಾ ಕಳೆದ ಎರಡು ತಿಂಗಳಿಂದ ಸದ್ದು ಮಾಡುತ್ತಿದೆ. ಚಿತ್ರಮಂದಿರದಲ್ಲಿ ಇದ್ದಾಗ ಒಳ್ಳೆಯ ಮಾತುಗಳು ಕೇಳಿಬಂದಿದ್ದರೂ, ಸಿನಿಮಾ ನೋಡಲು ಪ್ರೇಕ್ಷಕರು ಉತ್ಸಾಹ ತೋರಿಸಲಿಲ್ಲ. ಅಷ್ಟರಲ್ಲಿ ಚಿತ್ರಮಂದಿರದಲ್ಲಿ ಉಳಿದುಕೊಳ್ಳುವ ಶಕ್ತಿಯನ್ನು ಅದು ಕಳೆದುಕೊಂಡಿತು.
ಚಿತ್ರಮಂದಿರದಿಂದ ಮಾಯವಾದಷ್ಟೇ ಬೇಗನೆ 'ದಿಯಾ' ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಪ್ರೇಕ್ಷಕರ ಮುಂದೆ ಬಂದಿತು. 'ಅಮೆಜಾನ್ ಪ್ರೈಮ್'ನಲ್ಲಿ ಸಿನಿಮಾ ಪ್ರಸಾರವಾದ ಕೆಲವೇ ಗಂಟೆಯಲ್ಲಿ ಅದನ್ನು ಪೈರಸಿ ಮಾಡಿ ಯೂಟ್ಯೂಬ್, ಫೇಸ್‌ಬುಕ್ ಮತ್ತು ಟೆಲಿಗ್ರಾಂ ಆಪ್‌ಗಳಲ್ಲಿ ಸೋರಿಕೆ ಮಾಡಲಾಯಿತು. ಹೀಗಾಗಿ ಸಿನಿಮಾ ಪ್ರತಿಯೊಬ್ಬರ ಮೊಬೈಲ್‌ಗಳಿಗೂ ರವಾನೆಯಾಯಿತು.
ಸಿನಿಮಾ ನೋಡಿದ ಬಳಿಕವೇ ಜನರಿಗೆ ತಮ್ಮ ತಪ್ಪಿನ ಅರಿವಾಗಿದ್ದು. ಈ ಸಿನಿಮಾವನ್ನು ನಾವು ಚಿತ್ರಮಂದಿರದಲ್ಲಿಯೇ ನೋಡಬೇಕಿತ್ತು ಎಂದುಕೊಂಡರು. ಈಗ ಸಿನಿಮಾ ರಾಜ್ಯವಲ್ಲದೆ ಇತರೆ ರಾಜ್ಯಗಳಿಗೂ ಹೋಗಿದೆ. 'ದಿಯಾ' ಬಗ್ಗೆ ಮೆಚ್ಚುಗೆಯ ಮಾತು ಕೇಳಿದ ಪರಭಾಷಿಕರೂ ಅಮೆಜಾನ್ ಪ್ರೈಮ್‌ನಲ್ಲಿ ಸಿನಿಮಾ ವೀಕ್ಷಿಸಿ ಫಿದಾ ಆಗಿದ್ದಾರೆ. 'ದಿಯಾ'ವನ್ನು ಇಷ್ಟಪಟ್ಟ ಬೇರೆ ಭಾಷಿಕರು ಹೇಳಿದ್ದೇನು? ಮುಂದೆ ಓದಿ...
ಕ್ಲಾಸಿಕ್ ಸಿನಿಮಾ
'ದಿಯಾ' ಸಿನಿಮಾ ಈ ದಶಕದ ಭಾರತದ ಅತ್ಯುತ್ತಮ ಸಿನಿಮಾ ಎನಿಸುತ್ತಿದೆ. ಕ್ಲಾಸಿಕ್ ಆಗಿದೆ. ಕೆಜಿಎಫ್ ಮತ್ತು ದಿಯಾ ದಂತಹ ಸಿನಿಮಾ ಮಾಡುತ್ತಿರುವುದಕ್ಕೆ ಕನ್ನಡ ಸಿನಿಮಾ ರಂಗದ ಮೇಲಿನ ನನ್ನ ಗೌರವ ಹೆಚ್ಚಾಗಿದೆ ಎಂದು ಅಕ್ಕಿನೇನಿ ಶಿವಾರ್ಜುನ ಎಂಬುವವರು ಹೇಳಿದ್ದಾರೆ.
ಮಾತಾಡದೆ ಇರಲಾಗುತ್ತಿಲ್ಲ
ನಾನು ಮೊದಲ ಬಾರಿಗೆ ಒಂದು ಕನ್ನಡ ಸಿನಿಮಾ ನೋಡಿದೆ. ಮತ್ತು ಅದು ಅತ್ಯದ್ಭುತವಾಗಿತ್ತು. ದಿಯಾ ಬಗ್ಗೆ ನಾನು ಏಕೆ ಮಾತಾಡುತ್ತಲೇ ಇದ್ದೇನೆ ಮತ್ತು ಟ್ವೀಟ್ ಮಾಡುತ್ತಲೇ ಇದ್ದೇನೆ ಎಂಬುದು ನನಗೇ ಗೊತ್ತಾಗುತ್ತಿಲ್ಲ. '96' ಚಿತ್ರಕ್ಕಿಂತಲೂ ಹತ್ತು ಪಟ್ಟು ಈ ಸಿನಿಮಾ ಚೆನ್ನಾಗಿದೆ ಎಂದು ಮನಿದೀಪ್ ಎಂಬುವವರು ಟ್ವೀಟ್ ಮಾಡಿದ್ದಾರೆ.
ಹೃದಯ ಹಿಂಡುವ ಸಿನಿಮಾ
ದಿಯಾ: ಹೃದಯ ಹಿಂಡುವ ಚಿತ್ರ. ಮೊದಲಾರ್ಧದಲ್ಲಿ ಒಂದು ಜೋಡಿಯೆಡೆಗೆ ನಿಮ್ಮನ್ನು ಕರೆದೊಯ್ಯುತ್ತದೆ. ಎರಡನೆಯ ಭಾಗದಲ್ಲಿ ಸಾಕಷ್ಟು ಆಘಾತಕಾರಿ ತಿರುವುಗಳಿಂದ ತುಂಬಿದೆ. ಅಂತ್ಯದಲ್ಲಿ ನಿಮ್ಮನ್ನು ಮೂಕರನ್ನಾಗಿಸುತ್ತದೆ. ಆದರೆ ದೃಶ್ಯಗಳನ್ನು ಕಟ್ಟಿಕೊಟ್ಟಿರುವುದು ಮತ್ತು ಘಟನೆಗಳನ್ನು ಸಾಗಿಸಿರುವುದು ಅದ್ಭುತ. ಇವು ನಮ್ಮನ್ನು ಬೇಸರ, ಖುಷಿಗೊಳಿಸುತ್ತದೆ ಎಂದು ತಮಿಳಿನ ಅರವಿಂದ್ ಎಂಬುವವರು ಹೇಳಿದ್ದಾರೆ.
ನನ್ನ ಮನಸಲ್ಲಿ ತುಂಬಿಕೊಂಡಿದೆ
ಈ ಕನ್ನಡ ಸಿನಿಮಾ ಹೆಲೋ ಆಪ್‌ನಲ್ಲಿ ನನ್ನ ಗಮನ ಸೆಳೆಯಿತು. ಜೀವನ ಅಚ್ಚರಿ ಮತ್ತು ಪವಾಡಗಳಿಂದ ತುಂಬಿಕೊಂಡಿದೆ. ಅಪಾರ ಭಾವನೆಗಳು ಮತ್ತು ಗಟ್ಟಿಯಾದ ಸಂಭಾಷಣೆಗಳಿಂದ ಇಷ್ಟವಾಗುವ ಒಳ್ಳೆಯ ಸಿನಿಮಾ. ಆದರೆ ಅದರ ಕ್ಲೈಮ್ಯಾಕ್ಸ್ ಬಹಳ ಕಾಡುತ್ತದೆ ಎಂದು ತಮಿಳಿಗ ಸಂಜಯ್ ಕುಮಾರ್ ಎಂಬುವವರು ಹೇಳಿದ್ದಾರೆ.
ಖಂಡಿತವಾಗಿಯೂ ಈ ಸಿನಿಮಾ ನೋಡಬೇಕು
ದಿಯಾ ಸಿನಿಮಾ ನೋಡಿದೆ. ದಿಯಾಳ ಜಾಗದಲ್ಲಿ ಯಾವ ಹುಡುಗಿಯೂ ಇರಬಾರದು ಎಂದು ನಾನು ಬಯಸುತ್ತೇನೆ. ಅದು ಬಹಳ ಕಠಿಣ ಸ್ಥಿತಿ. ದಿಯಾಳ ವಿಚಾರದಲ್ಲಿ ಕರ್ಮಾ ಪವಾಡ ಮತ್ತು ಮ್ಯಾಜಿಕ್‌ಗಳನ್ನು ಮಾಡುತ್ತದೆ. ಅದರ ಕ್ಲೈಮ್ಯಾಕ್ಸ್ ನಮ್ಮನ್ನು ಅಲ್ಲಿಯೇ ಹಿಡಿದಿಟ್ಟುಕೊಳ್ಳುತ್ತದೆ. ಹಾಗೆಯೇ ಬಿಜಿಎಂ ಬಗ್ಗೆ ಹೇಳಲೇಬೇಕು. ಇದನ್ನು ಖಂಡಿತವಾಗಿಯೂ ನೋಡಿ ಎಂದು ಶಿಫಾರಸು ಮಾಡುತ್ತೇನೆ ಎಂದು ಜ್ಯೋ ಎಂಬುವವರು ತಿಳಿಸಿದ್ದಾರೆ.
ಆ ನಿರ್ದೇಶಕರನ್ನು....
ದಿಯಾ ಬಹಳ ಚೆನ್ನಾಗಿದೆ. ಕ್ಲೈಮ್ಯಾಕ್ಸ್ ಕಾರಣಕ್ಕಾಗಿ ಆ ನಿರ್ದೇಶಕರನ್ನು ನಾನು ಕೊಂದು ಹಾಕಲು ಬಯಸುತ್ತೇನೆ. ಯಾಕೆ ಹೀಗೆ? ಎಂದು ಕಣ್ಣೀರಿಟ್ಟಿರುವ ವಸಿರೆಡ್ಡಿ ಎಂಬುವವರು, ದಿಯಾ ಪಾತ್ರದ ಖುಷಿ ನಿಜಕ್ಕೂ ಅತ್ಯದ್ಭುತ ಎಂದಿದ್ದಾರೆ.
ಆಳವಾದ ಪ್ರಭಾವ ಬೀರಿದೆ
ಎರಡು ವಿಭಿನ್ನ ವ್ಯಕ್ತಿತ್ವಗಳು ಜೀವನದ ಹರಿವಿನೊಟ್ಟಿಗೆ ಬಹಳ ಸುಂದರವಾಗಿ ಪ್ರೀತಿಯಲ್ಲಿ ಬೀಳುತ್ತದೆ ಎಂದರೆ ಅದು 'ದಿಯಾ'. ಈ ಸಿನಿಮಾ ನನ್ನಲ್ಲಿ ಮೂಡಿಸಿರುವ ಪರಿಣಾಮ ಬಹಳ ಆಳವಾಗಿದೆ. ಎಂತಹ ಹೃದಯ ಕರಗುವ ಮತ್ತು ಹೃದಯ ತಣಿಸುವ ಸಿನಿಮಾ ಎಂದು ಪ್ರೇಮ್ ಕೆಆರ್ ಎಂಬುವವರು ಹೇಳಿದ್ದಾರೆ.
ಎಲ್ಲರಲ್ಲೂ ಅದೇ ಭಾವನೆ
ನನ್ನ ಸಲಹೆ ಮತ್ತು ವಾಟ್ಸಾಪ್ ಸ್ಟೇಟಸ್ ನೋಡಿದ ಬಳಿಕ ನನ್ನ ಕಾಲೇಜ್ ಮತ್ತು ಕಚೇರಿ ವಲಯದ ಸುಮಾರು 20 ಮಂದಿ 'ದಿಯಾ' ಸಿನಿಮಾ ನೋಡಿದರು. ಕ್ಲೈಮ್ಯಾಕ್ಸ್‌ಗೆ ಅದೇ ಪ್ರತಿಕ್ರಿಯೆ ಅದೇ ರೀತಿಯ ಭಾವನೆ. ಅದು ನನ್ನ ಸುತ್ತಮುತ್ತಲೂ ಗಿರಕಿ ಹೊಡೆಯುತ್ತಿದೆ. ನಿಮಗೆ ಹೇಗೆನಿಸಿತು ಎಂದು ವಿಘ್ನೇಶ್ ಎಂಬುವವರು ಹೇಳಿದ್ದಾರೆ.


Click it and Unblock the Notifications











