ಅನಂತ್‌ನಾಗ್‌ಗೆ ಪದ್ಮಭೂಷಣ ಪ್ರಶಸ್ತಿ: ಈಡೇರಿತು ಪುನೀತ್ ರಾಜ್‌ಕುಮಾರ್ ಕಂಡ ಕನಸು
ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಕಲಾ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನು ಕೊಡುತ್ತ ಬಂದಿದ್ದಾರೆ. ಕನ್ನಡ ಸಿನಿಮಾಗಳಲ್ಲಿ ಪ್ರಮುಖವಾಗಿ ನಟಿಸಿದ್ದರೂ ಪರಭಾಷೆಯ ಸಿನಿಮಾಗಳಲ್ಲೂ ಇವರ ಕಲಾ ಸೇವೆಯಿದೆ. ಸುಮಾರು ಐದು ದಶಕಗಳಿಂದ ಅನಂತ್‌ನಾಗ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇವರ ಈ ಸುದೀರ್ಘ ಪಯಣಕ್ಕೆ ಕೊನೆಗೂ ಪದ್ಮ ಭೂಷಣದಂತಹ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ.
ಅನಂತ್‌ನಾಗ್ ಅವರಿಗೆ ಪದ್ಮ ಪ್ರಶಸ್ತಿಯನ್ನು ನೀಡಬೇಕು ಎಂದು ಕಳೆದ ಕೆಲವು ವರ್ಷಗಳಿಂದ ಅಭಿಯಾನವನ್ನು ಆರಂಭಿಸಲಾಗಿತ್ತು. ಕನ್ನಡದ ನಟರಾದ ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಅವರಿಂದ ಇಂತಹದ್ದೊಂದು ಅಭಿಯಾನ ಶುರುವಾಗಿತ್ತು. ಈ ಅಭಿಯಾನಕ್ಕೆ ಕನ್ನಡ ಚಿತ್ರರಂಗದ ಬಹುತೇಕ ಮಂದಿ ಗಣ್ಯರು ಕೂಡ ಪದ್ಮ ಪ್ರಶಸ್ತಿ ಸಿಗಲೇ ಬೇಕು ಎಂದು ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದರು. ಅದರಲ್ಲಿ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಕೂಡ ಒಬ್ಬರು.

ಭಾರತದಲ್ಲಿ ನೀಡಲಾಗುವ ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಭೂಷಣ ಪ್ರಶಸ್ತಿಯನ್ನು ಕೊನೆಗೂ ಅನಂತ್ ನಾಗ್ ಅವರಿಗೆ ಲಭಿಸಿದೆ. ಈ ಸಂದರ್ಭದಲ್ಲಿ 2021ರಲ್ಲಿ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಬೆಂಬಲ ಸೂಚಿಸಿದ್ದ ಟ್ವೀಟ್ ಈಗ ವೈರಲ್ ಆಗುತ್ತಿದೆ. ಅಪ್ಪು ಅಭಿಮಾನಿಗಳ ಹಳೆಯ ಟ್ವೀಟ್ ಅನ್ನು ಮತ್ತೆ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಹಿರಿಯ ನಟ ಅನಂತ್ ನಾಗ್ ಅವರಿಗೆ ಶುಭ ಕೋರುತ್ತಿದ್ದಾರೆ.
ಅನಂತ್‌ನಾಗ್ ಅವರಿಗೆ ಪದ್ಮ ಪ್ರಶಸ್ತಿ ಬರಬೇಕು ಎಂದು ಕನ್ನಡ ಚಿತ್ರರಂಗದ ಗಣ್ಯರು ಅಭಿಯಾನ ಆರಂಭಿಸಿದ್ದರು. ಆದರೂ, ಅವರಿಗೆ ಕಳೆದ ಮೂರು ನಾಲ್ಕು ವರ್ಷಗಳಿಂದ ಈ ಪ್ರತಿಷ್ಠಿತ ಪ್ರಶಸ್ತಿ ಮಿಸ್ ಆಗುತ್ತಲೇ ಇತ್ತು. ಅನಂತ್ ನಾಗ್ ಕೂಡ ಕನ್ನಡ ಚಿತ್ರರಂಗಕ್ಕೆ ಅಭಿಯಾನವನ್ನು ಮಾಡದೇ ಇರುವಂತೆ ಮನವಿಯನ್ನು ಮಾಡಿಕೊಂಡಿದ್ದರು. ಆ ಬಳಿಕ ಅಭಿಯಾನವನ್ನು ಕೈ ಬಿಟ್ಟಿದ್ದರು. ಆದರೂ, ಚಿತ್ರರಂಗದ ಕೆಲ ನಿರ್ದೇಶಕರು ಹಾಗೂ ನಟರು ಪ್ರಶಸ್ತಿ ಸಿಗಬೇಕೆಂದು ಟ್ವೀಟ್ ಮಾಡುತ್ತಲೇ ಇದ್ದರು.
ಕನ್ನಡ ಚಿತ್ರರಂಗದ ದಿಗ್ಗಜ ಅನಂತ್‌ನಾಗ್ ಅವರಿಗೆ ಕೊನೆಗೂ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಈ ವೇಳೆ ಅಂದು ಪುನೀತ್ ರಾಜ್‌ಕುಮಾರ್ ಮಾಡಿದ ಟ್ವೀಟ್‌ನಲ್ಲಿ ಏನಿತ್ತು ಅನ್ನೋದನ್ನು ನೋಡುವುದಾದರೆ, "ನನ್ನ ನೆಚ್ಚಿನ ನಟರಲ್ಲಿ ಒಬ್ಬರಾದ ಶ್ರೀಯುತ ಅನಂತ್‌ನಾಗ್ ಸರ್ ಅವರಿಗೆ ಪದ್ಮ ಪ್ರಶಸ್ತಿ ನೀಡಬೇಕೆಂಬುದು ನಮ್ಮೆಲ್ಲರ ಆಸೆ. ನಾನು ಅವರ ದೊಡ್ಡ ಅಭಿಮಾನಿ. ಸಿನಿಮಾ ರಂಗಕ್ಕೆ ಅನಂತ್‌ನಾಗ್ ಅವರ ಕೊಡುಗೆ ಅಪಾರ. " ಎಂದು ಪುನೀತ್ ರಾಜ್‌ಕುಮಾರ್ ಅಭಿಯಾನದಲ್ಲಿ ಭಾಗಿಯಾಗಿದ್ದರು.
ಪುನೀತ್ ರಾಜ್‌ಕುಮಾರ್ ಅನಂತ್‌ನಾಗ್ ಅವರ ದೊಡ್ಡ ಅಭಿಮಾನಿಯಾಗಿದ್ದರು. ಪುನೀತ್ ರಾಜ್‌ಕುಮಾರ್ ಹಾಗೂ ಅನಂತ್ ಇಬ್ಬರೂ 'ಪರಮಾತ್ಮ' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಯೋಗರಾಜ್ ಭಟ್ ನಿರ್ದೇಶಿಸಿದ 'ಪರಮಾತ್ಮ' ಸಿನಿಮಾದಲ್ಲಿ ತಂದೆ-ಮಗನಾಗಿ ಇಬ್ಬರೂ ನಟಿಸಿದ್ದರು. ಅಷ್ಟೇ ಅಲ್ಲದೆ ಪುನೀತ್ ರಾಜ್‌ಕುಮಾರ್ ನಿರ್ಮಸಿದ್ದ 'ಕವಲುದಾರಿ' ಸಿನಿಮಾದಲ್ಲಿಯೂ ಅನಂತ್‌ನಾಗ್ ನಟಿಸಿದ್ದರು. ಆ ಸಿನಿಮಾವನ್ನು ಹೇಮಂತ್ ರಾವ್ ನಿರ್ದೇಶನ ಮಾಡಿದ್ದರು.
ಅನಂತ್ ನಾಗ್ ಸುಮಾರು ಐದು ದಶಕದಿಂದ ಭಾರತೀಯ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಸುಮಾರು 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಅನಂತ್ ನಾಗ್‌ಗೆ ಅಸಂಖ್ಯಾತ ಅಭಿಮಾನಿಗಳು ಇದ್ದಾರೆ. ಅನಂತ್ ನಾಗ್ ಅವರು ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಮರಾಠಿ ಸೇರಿದಂತೆ ಹಲವು ಭಾಷೆಯ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.


Click it and Unblock the Notifications











