"ಪವಿತ್ರಾ ಗೌಡ ದರ್ಶನ್ ಪತ್ನಿ ಅಲ್ಲ, ವಿಜಯಲಕ್ಷ್ಮಿ ಒಬ್ಬರೇ ಪತ್ನಿ, ಒಬ್ಬನೇ ಮಗ ವಿನೀಶ್"
ಪವಿತ್ರಾ ಗೌಡ ಹಾಕಿ ಒಂದು ಪೋಸ್ಟ್ ರೇಣುಕಾಸ್ವಾಮಿ ಕೊಲೆ ಪ್ರಕರಣದವರೆಗೂ ತಂದು ನಿಲ್ಲಿಸಿದೆ. ಕೆಲವು ತಿಂಗಳ ಹಿಂದಷ್ಟೇ ಪವಿತ್ರಾ ಗೌಡ ತಮ್ಮಿಬ್ಬರದ್ದು ಹತ್ತು ವರ್ಷದ ಸಂಬಂಧ ಎಂದು ದರ್ಶನ್ ಜೊತೆಗಿದ್ದ ಫೋಟೊಗಳನ್ನೆಲ್ಲ ಒಟ್ಟಿಗೆ ಸೇರಿಸಿ, ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ಆಗಲೇ ದರ್ಶನ್ ಹಾಗೂ ಪವಿತ್ರಾ ಗೌಡ ಸಂಬಂಧದ ಬಗ್ಗೆ ಕಿತ್ತಾಟ ಶುರುವಾಗಿತ್ತು.
ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಪವಿತ್ರಾ ಗೌಡ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಕಿತ್ತಾಡಿಕೊಂಡಿದ್ದರು. ಆ ಸಂದರ್ಭದಲ್ಲೂ ದರ್ಶನ್ ಹಾಗೂ ಪವಿತ್ರಾ ಗೌಡ ಸಂಬಂಧದ ಬಗ್ಗೆ ಚರ್ಚೆಯಾಗಿತ್ತು. ಅಷ್ಟೊಂದು ದೊಡ್ಡ ಮಟ್ಟಕ್ಕೆ ಸುದ್ದಿಯಾಗಿದ್ದರೂ, ಪವಿತ್ರಾ ಗೌಡಗೂ ತನಗೂ ಏನು ಸಂಬಂಧ ಅನ್ನೋದನ್ನು ದರ್ಶನ್ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ.

ಈಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಬಂಧನವಾಗಿರುವುದು ಕೂಡ ಪವಿತ್ರಾ ಗೌಡ ಸಲುವಾಗಿಯೇ. ಈ ಸಂಬಂಧ ದರ್ಶನ್ ಪರ ವಕೀಲರಾದ ಅನಿಲ್ ಬಾಬು ಮಾಧ್ಯಮಗಳಿಗೆ ಬೇರೆನೇ ಹೇಳಿಕೆ ಕೊಟ್ಟಿದ್ದಾರೆ. ಪವಿತ್ರಾ ಗೌಡ ಕೇವಲ ದರ್ಶನ್ ಸಹ ನಟಿಯಷ್ಟೇ, ಪತ್ನಿ ಅಲ್ಲ ಅಂತ ಹೇಳಿಕೆ ಕೊಟ್ಟಿದ್ದಾರೆ. ಇವರ ಸಂಬಂಧದ ಬಗ್ಗೆ ದರ್ಶನ್ ಪರ ವಕೀಲರು ಹೇಳಿದ್ದೇನು? ಕೇಸ್ ಬಗ್ಗೆ ಏನಂತಾರೆ? ಜಾಮೀನು ಸಿಗುತ್ತಾ ಇಲ್ವಾ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಆರೋಪಿ ಆಗಿದ್ದರಿಂದ ಪತ್ನಿ ವಿಜಯಲಕ್ಷ್ಮಿ ಶಾಕ್‌ನಲ್ಲಿ ಇದ್ದಾರಂತೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನು ಎರಡು ಮೂರು ದಿನಗಳಲ್ಲಿ ಮಾಧ್ಯಮಗಳೊಂದಿಗೆ ಮಾತಾಡುತ್ತಾರೆ ಎಂದಿದ್ದಾರೆ. "ವಿಜಯಲಕ್ಷ್ಮಿ ಅವರಿಗೆ ಏನೂ ಗೊತ್ತಿಲ್ಲ. ಪರ್ಸನಲ್ ಆಗಿ ಭೇಟಿ ಮಾಡಿಲ್ಲ. ಮೀಡಿಯಾದಲ್ಲಿ ಏನು ಬರುತ್ತಿದೆಯೋ ಅಷ್ಟೇ ಗೊತ್ತಿದೆ. ಅವರು ಇನ್ನೂ ಶಾಕ್‌ನಲ್ಲಿ ಇದ್ದಾರೆ. ಇನ್ನೂ ಒಂದೆರಡು ದಿನಗಳಲ್ಲಿ ಅವರು ಹೊರಗೆ ಬರುತ್ತಾರೆ. ಇನ್ನೂ ಎರಡು ದಿನ ಅಂತೂ ಬೇಕು. ಸರಿಯಾದ ಸಮಯಕ್ಕೆ ಹೊರ ಬಂದು, ಸರಿಯಾದ ಉತ್ತರ ಕೊಡುತ್ತಾರೆ." ಎಂದು ದರ್ಶನ್ ವಕೀಲರು ಹೇಳಿದ್ದಾರೆ.

ಇದೇ ವೇಳೆ ಪವಿತ್ರಾ ಗೌಡ ಕೇವಲ ಸಹನಟಿಯಷ್ಟೇ ದರ್ಶನ್ ಪತ್ನಿ ಅಲ್ಲ ಎಂದು ವಕೀಲರಾದ ಅನಿಲ್ ಬಾಬು ಹೇಳಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಂಚಲ ಸೃಷ್ಟಿಸಿದೆ. "ಪವಿತ್ರಾ ಗೌಡ ಅವರು ಕೇವಲ ಸಹ ನಟಿ ಅಷ್ಟೇ. ಹಾಗೇ ಪವಿತ್ರಾ ಗೌಡ ಅವರು ದರ್ಶನ್ ಅವರ ಸ್ನೇಹಿತೆ ಅಷ್ಟೇ. ಅದು ಬಿಟ್ಟು ಅವರಿಗೆ ಯಾವುದೇ ರೀತಿಯ ಸಂಬಂಧವಿಲ್ಲ. ಹೆಂಡತಿ ಅಂತ ಹೇಳುತ್ತಿರುವುದೆಲ್ಲ ಸುಳ್ಳು. ವಿಜಯಲಕ್ಷ್ಮಿ ಮಾತ್ರ ದರ್ಶನ್ ಅವರ ಪತ್ನಿ. ಅವರಿಗೆ ಒಬ್ಬ ಮಗನಿದ್ದಾನೆ. ಅವನು ಹೆಸರು ವಿನೀಶ್." ಎಂದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಇನ್ನು ದರ್ಶನ್ ಸ್ಟೇಟಸ್ ಬಗ್ಗೆನೂ ಮಾಹಿತಿ ಹಂಚಿಕೊಂಡಿದ್ದಾರೆ. "ಪೊಲೀಸರು ತುಂಬಾನೇ ಸ್ಟ್ರಿಕ್ಟ್ ಆಗಿ ತನಿಖೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಹೋಗಿ ಡಿಸ್ಟರ್ಬ್ ಕೂಡ ಮಾಡುವುದಕ್ಕೆ ಆಗುವುದಿಲ್ಲ. ಹಾಗಾಗಿ ದರ್ಶನ್ ಅವರನ್ನು ನೋಡಿದರೆ, ಹಾಯ್, ಬಾಯ್ ಅಂತ ಹೇಳಬಹುದಷ್ಟೇ. ಅದನ್ನು ಬಿಟ್ಟು ಬೇರೆ ಏನೂ ಮಾತಾಡುವುದಕ್ಕೆ ಆಗುವುದಿಲ್ಲ. ಅವರ ಕಡೆಯಿಂದ ನಾವು ಏನೂ ವಿಚಾರಣೆ ಮಾಡುವುದಕ್ಕೆ ಆಗುವುದಿಲ್ಲ." ಎಂದಿದ್ದಾರೆ.
ದರ್ಶನ್ ಮುಂದಿರುವ ಆಯ್ಕೆಗಳ ಬಗ್ಗೆ ಅನಿಲ್ ಬಾಬು ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. "ಇದು ನ್ಯಾಯಾಂಗ ಬಂಧನಕ್ಕೆ ಹೋದಂತಹ ಸಂದರ್ಭದಲ್ಲಿ ನಾವು ಜಾಮೀನು ಕೋರಿ ಸೆಷನ್ ಕೋರ್ಟ್‌ನಲ್ಲಿ ಅರ್ಜಿಯನ್ನು ಸಲ್ಲಿಸುತ್ತೇವೆ. ಸದ್ಯ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಕೇಸ್ ಇದೆ. ಪೊಲೀಸ್ ಕಸ್ಟಡಿಗೆ ಕೊಡುತ್ತಾರೆ. ಇಲ್ಲ ನ್ಯಾಯಾಂಗ ಬಂಧನಕ್ಕೆ ಕೊಡುತ್ತಾರೆ. ಪೊಲೀಸರು ಏನು ದಾಖಲೆಗಳನ್ನು, ಸಾಕ್ಷಿಗಳನ್ನು ಕೊಡುತ್ತಾರೆಯೋ ಅದನ್ನು ನೋಡುತ್ತಾರೆ. ಮೀಡಿಯಾದಲ್ಲಿ ಬರುತ್ತಿರುವ ಸುದ್ದಿಗಳನ್ನು ನೋಡಿ ತೀರ್ಪು ಕೊಡುವುದಿಲ್ಲ." ಎಂದು ಅನಿಲ್ ಬಾಬು ಹೇಳಿದ್ದಾರೆ.


Click it and Unblock the Notifications











