'ಲೂಸಿಯಾ' ಸಿನಿಮಾಗೆ 12 ವರ್ಷ: ಈ ಸಿನಿಮಾದ ಅಪರೂಪದ ಮೇಕಿಂಗ್ ಫೋಟೊಗಳನ್ನು ನೋಡಿದ್ದೀರಾ?
'ಕನಸು' ಅನ್ನೋದು ಒಬ್ಬೊಬ್ಬರ ದೃಷ್ಠಿಯಲ್ಲಿ ಒಂದೊಂದು ಅರ್ಥ. ಒಂದೊಂದು ಸಂದರ್ಭದಲ್ಲಿ ಒಂದೊಂದು ಅರ್ಥವನ್ನು ಹೊರ ಹಾಕುತ್ತೆ. ಸಣ್ಣ ಕನಸು, ದೊಡ್ಡ ಕನಸು.. ಹಗಲು ಕನಸು, ರಾತ್ರಿ ಕನಸು.. ಶ್ರೀಮಂತರ ಕನಸು, ಬಡವನ ಕನಸು.. ಇದರೊಂದಿಗೆ ಮಾಯೆ, ಭ್ರಮೆ ಇನ್ನೋ ಏನೇನೋ ಸೇರಿಕೊಳ್ಳುತ್ತಾ ಹೋಗುತ್ತೆ.
"ನೀ ಮಾಯೆಯೊಳಗೊ.. ಮಾಯೆ ನಿನ್ನೊಳಗೊ" ಎನ್ನುತ್ತಾ ಇದೇ ಕನಸನ್ನು ಇಟ್ಟುಕೊಂಡು ಪವನ್ ಕುಮಾರ್ ಸೃಷ್ಟಿಸಿದ ಸಿನಿಮಾ ಕನ್ನಡದ ಚಿತ್ರರಂಗದಲ್ಲಿಸ ಟ್ರೆಂಡ್ ಅನ್ನು ಸೃಷ್ಟಿಸಿತ್ತು. ನೋಡುಗನಿಗೆ ಕನಸು-ವಾಸ್ತವದ ಗೊಂದಲ 'ಲೂಸಿಯಾ' ಆಯ್ತು. ಜನರು ಇಷ್ಟ ಪಟ್ಟು ಸಿನಿಮಾ ನೋಡಿದರು. ಕಾನ್ಸೆಪ್ಟ್ ಅನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಮತ್ತೊಮ್ಮೆ ಸಿನಿಮಾ ನೋಡಿದರು. ಕೊನೆಯಲ್ಲಿ ಖುಷಿ ಪಟ್ಟು ಗೆಲ್ಲಿಸಿದರು.

'ಲೂಸಿಯಾ' ಕನ್ನಡ ಚಿತ್ರರಂಗದ ತೀರಾ ಅಪರೂಪದ ಸಿನಿಮಾ. ಇದರಲ್ಲಿ ಎರಡು ಮಾತಿಲ್ಲ. ಇಂತಹದ್ದೊಂದು ಸಿನಿಮಾ ಕನ್ನಡ ಪ್ರೇಕ್ಷಕರು ಒಪ್ಪಿಕೊಳ್ಳಬಹುದೆಂದು ಪವನ್ ಯೋಚನೆ ಮಾಡಿದ್ದಾದರೂ ಹೇಗೆ? ಕನ್ನಡಿಗರ ಮನಸ್ಥಿತಿಯನ್ನು ಹತ್ತಿರದಿಂದ ಅರ್ಥ ಮಾಡಿಕೊಂಡ ಪ್ರತಿಯೊಬ್ಬ ಫಿಲ್ಮ್ ಮೇಕರ್‌ಗೆ ಅಂದು ಕಾಡಿದ ಪ್ರಶ್ನೆಯಿದು. ಬೇರೆ ಭಾಷೆಯ ಸಿನಿಮಾ ಮಂದಿಯ ತಲೆ ತಿರುಗಿಸಿದ ಸಿನಿಮಾಗೆ 12 ವರ್ಷ. ಇಷ್ಟ ಪಟ್ಟು, ಕಷ್ಟ ಪಟ್ಟು ನಿರ್ಮಿಸಿದ ಈ ಸಿನಿಮಾದ ಅಪರೂಪದ ಕ್ಷಣಗಳನ್ನು ನೋಡುತ್ತಾ? ಸಿನಿಮಾ ಇಂಟ್ರೆಸ್ಟಿಂಗ್ ವಿಷಯಗಳನ್ನು ತಿಳಿಯೋಣ..
2013ರಲ್ಲಿ ರಿಲೀಸ್ ಆಗಿದ್ದ 'ಲೂಸಿಯಾ' ಕನ್ನಡದ ಮೊದಲ ಕ್ರೌಡ್ ಫಂಡೆಡ್ (ಜನರಿಂದ ಹಣ ಸಂಗ್ರಹ) ಸಿನಿಮಾ. ನಿರ್ದೇಶಕ ಪವನ್ ಕುಮಾರ್ ಹೀಗೂ ಸಿನಿಮಾ ಮಾಡಬಹುದು ಎಂದು ತೋರಿಸಿಕೊಟ್ಟು, ತನ್ನ ಕನಸನ್ನು ನನಸು ಮಾಡಿಕೊಂಡಿದ್ದರು. ಇಲ್ಲಿಂದ ಈ ಸಿನಿಮಾ ನಿರ್ಮಾಣ ಆಗಿದ್ದು, ಬಿಡುಗಡೆಯಾಗಿದ್ದೇ ಒಂದು ಇತಿಹಾಸ.

ಪವನ್ ಕುಮಾರ್ 'ಲೂಸಿಯಾ' ರೆಗ್ಯೂಲರ್ ಸಿನಿಮಾ ಅಲ್ಲ. ಏಳೆಂಟು ಪಾತ್ರಗಳನ್ನೇ ಇಟ್ಟುಕೊಂಡು ಚಿಕ್ಕ ಬಜೆಟ್‌ನಲ್ಲಿ ನಿರ್ಮಿಸಿದ ಪ್ರಯೋಗಾತ್ಮಕ ಸಿನಿಮಾವಿದು. ಕಥೆ, ಚಿತ್ರಕಥೆಯಲ್ಲಷ್ಟೇ ಅಲ್ಲ. ಎಡಿಟಿಂಗ್ ಈ ಸಿನಿಮಾದ ಹೈಲೈಟ್. ಇಂತಹದ್ದೊಂದು ವಿಶಿಷ್ಠ ಸಿನಿಮಾದ ದೃಶ್ಯಗಳನ್ನು ಸ್ವಲ್ಪವೇ ಎಡವಟ್ಟು ಮಾಡಿದರೂ, ಅಷ್ಟೇ ಏನೇನೋ ಆಗಿಬಿಡುತ್ತಿತ್ತು. ಈ ಸಿನಿಮಾವನ್ನು ಮೂವರು ಎಡಿಟ್ ಮಾಡಿದ್ದಾರೆ. ಸನತ್, ಸುರೇಶ್ ಹಾಗೂ ಸ್ವತ: ಪವನ್ ಕುಮಾರ್ ಎಡಿಟಿಂಗ್ ಟೇಬಲ್ ಮೇಲೆ ಕೂತಿದ್ದಾರೆ.
'ಲೂಸಿಯಾ' ಸಿನಿಮಾದಲ್ಲಿ ಎರಡು ಪ್ರಮುಖ ಪಾತ್ರಗಳಿವೆ. ಒಬ್ಬ ವ್ಯಕ್ತಿಯ ಎರಡು ಪಾತ್ರಗಳಲ್ಲಿ ವಿಭಿನ್ನ ಸನ್ನಿವೇಶಗಳಲ್ಲಿ ಕಾಣಿಸಿಕೊಳ್ಳುತ್ತಾನೆ. ಅಂದರೆ, ಒಂದು ಪಾತ್ರದ ಕನಸಿನಲ್ಲಿ ಸಾಗಿದರೆ, ಇನ್ನೊಂದು ರಿಯಲ್ ಲೈಫ್‌ನಲ್ಲಿ ಸಾಗುತ್ತೆ. ನೀನಾಸಂ ಸತೀಶ್ ಎರಡೂ ಪಾತ್ರಗಳಲ್ಲೂ ಅದ್ಭುತ ಅಭಿನಯದ ನೀಡಿದ್ದರು. ಈ ಸಿನಿಮಾ ಅವರ ವೃತ್ತಿ ಬದುಕಿನ ದಿಕ್ಕನೇ ಬದಲಿಸಿತ್ತು ಅನ್ನೋದರಲ್ಲಿ ಅನುಮಾನವಿಲ್ಲ.

ಕನ್ನಡ ಚಿತ್ರರಂಗದ ಮಟ್ಟಿಗೆ ಸೈಕಾಲಿಕಲ್ ಥ್ರಿಲ್ಲರ್ ಸಿನಿಮಾಗಳು ಬರೋದು ಅಪರೂಪ. ಹಾಗಂತ ಅಪರೂಪವೇನೂ ಅಲ್ಲ. ಉಪೇಂದ್ರ ತಮ್ಮದೇ ಸ್ಟೈಲ್‌ನಲ್ಲಿ ಇಂತಹ ಸಿನಿಮಾಗಳನ್ನು ಮಾಡುತ್ತಾರೆ. ಅದಕ್ಕೆ 'A', 'ಉಪೇಂದ್ರ' 'ಉಪ್ಪಿ 2', 'ಯುಐ' ಅಂತಹ ಸಿನಿಮಾಗಳನ್ನು ಉದಾಹಾರಣೆಯಾಗಿ ನೀಡಬಹುದು. ಆದರೆ, ಪವನ್ ನಿರ್ದೇಶನದ 'ಲೂಸಿಯಾ' ಬೇರೆಯದೇ ಹಾದಿ ಎನ್ನಬಹುದು.
'ಲೂಸಿಯಾ' ಅಂದರೇನು? ಈ ಪ್ರಶ್ನೆ ಹುಟ್ಟಿಕೊಂಡಿತ್ತು. ಫಿಲಾಸಫಿ, ಸೈಕಾಲಜಿ ಮಿಕ್ಸ್ ಆಗಿರುವ ಈ ಸಿನಿಮಾದಲ್ಲಿ ಒಬ್ಬೊಬ್ಬರು ಒಂದೊಂದು ಅರ್ಥವನ್ನು ಕೊಟ್ಟಿದ್ದರು. ಕೆಲವರು 'ಲೂಸಿಯಾ' ಅಂದರೆ 'ಬೆಳಕು' ಅಂದರು. ಇನ್ನು ಕೆಲವರು 'ಲೂಸಿಯಾ' ಅಂದರೆ 'ಕನಸು' ಅಂದರು. ಅವರವರ ದೃಷ್ಟಿಯಲ್ಲಿ ಈ ಎರಡೂ ಸತ್ಯ.

ಹಾಲಿವುಡ್ ಸಿನಿಮಾಗಳಿಂದ ಪ್ರೇರಣೆ ಪಡೆದು ಪವನ್ ಕುಮಾರ್ ಹೆಣೆದ ದೇಸಿ ಸಿನಿಮಾ ಎನ್ನಬಹುದು. ಅದಕ್ಕೆ ಉತ್ತಮ ಉದಾಹರಣೆ ಟೈಟಾನಿಕ್ ಹೀರೋ ಲಿಯನಾರ್ಡೋ ಡಿಕ್ಯಾಪ್ರಿಯೋ ನಟಿಸಿದ 'ಇನ್ಸೆಪ್ಷನ್' ಸಿನಿಮಾ. ಹಾಗೇ ಕೆಲವರು 'ಫೈಟ್ ಕ್ಲಬ್' ಸಿನಿಮಾವನ್ನು ಉದಾಹರಣೆಯಾಗಿ ಕೊಡುತ್ತಾರೆ.
'ಲೂಸಿಯಾ' ಪ್ರಯೋಗಾತ್ಮಕ ಸಿನಿಮಾ ಆದರೂ ಕಮರ್ಷಿಯಲ್ ಎಲಿಮೆಂಟ್‌ಗಳಿಗೇನು ಕಮ್ಮಿಯಿರಲಿಲ್ಲ. ಪೂರ್ಣಚಂದ್ರ ತೇಜಸ್ವಿ ಕಂಪೋಸ್ ಮಾಡಿದ ಹಾಡುಗಳು ಸಿಕ್ಕಾಪಟ್ಟೆ ಸದ್ದು ಮಾಡಿದ್ದವು. ಅದರಲ್ಲೂ "ತಿನ್ಬೇಡಕಮ್ಮಿ..", "ಜಮ್ಮ ಜಮ್ಮ" ಹಾಗೂ "ಹೇಳು ಶಿವ ಯಾಕಿಂಗಾದೆ.." ಹಾಡುಗಳು ಸಿನಿಪ್ರಿಯರನ್ನು ರಂಜಿಸಿದ್ದವು. ಗಂಭೀರವಾಗಿ ಸಾಗುತ್ತಿದ್ದ ಕಥೆಯೊಳಗೆ ಹಾಡುಗಳ ಮೂಲಕ ರಿಲೀಫ್ ಕೊಡುವ ಪ್ರಯತ್ನಗಳಾಗಿದ್ದವು.

ಕೊನೆಯಲ್ಲಿ ವಿಕ್ಕಿಪೀಡಿಯಾ ಪ್ರಕಾರ 'ಲೂಸಿಯಾ' ಕೇವಲ 50 ಲಕ್ಷ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣಗೊಂಡಿತ್ತು. ಬಳಿಕ ಈ ಸಿನಿಮಾ ಗಳಿಸಿದ್ದು ಬರೋಬ್ಬರಿ 10 ಕೋಟಿ ರೂಪಾಯಿ. ಸಿನಿಮಾ ಸ್ಯಾಟಲೈಟ್ ರೈಟ್ಸ್ ಅನ್ನು ಉದಯ ಟಿವಿ ₹95 ಲಕ್ಷಕ್ಕೆ ಖರೀದಿ ಮಾಡಿದೆ ಎಂದೂ ಹೇಳಿದೆ. ಹೀಗಾಗಿ ಬಾಕ್ಸಾಫೀಸ್‌ನಲ್ಲೂ, ವ್ಯಾಪಾರದಲ್ಲೂ ಗೆದ್ದ ಸಿನಿಮಾವಿದು.


Click it and Unblock the Notifications











