11 ವರ್ಷಗಳ ಹಿಂದೆ 'ಯೂಟರ್ನ್' ಆಡಿಷನ್‌ಗೆ ಹೋಗಿದ್ದ ದಿಲೀಪ್ ರಾಜ್; ಸಿನಿಮಾ ಒಳ್ಳೆಯ ವ್ಯಕ್ತಿ ಕೈಯಲ್ಲಿತ್ತು ಎಂದ ಪವನ್
ಕನ್ನಡ ಚಿತ್ರರಂಗ ಮತ್ತೊಬ್ಬ ಪ್ರತಿಭಾನ್ವಿತ ನಟನನ್ನು ಕಳೆದುಕೊಂಡಿದೆ. ಎರಡೂವರೆ ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ದಿಲೀಪ್ ರಾಜ್ ಬೇರೆ ಬೇರೆ ಪಾತ್ರಗಳಲ್ಲಿ ನಟಿಸಿದ್ದಾರೆ. ಪೋಷಕ ಪಾತ್ರದಲ್ಲಿ, ಖಳನಾಯಕನಾಗಿ, ಹೀರೋ ಆಗಿ ಕಂಡಿದ್ದು ಇದೆ. ಇತ್ತೀಚೆಗೆ ಕಿರುತೆರೆ ಕಡೆಗೆ ಮುಖ ಮಾಡಿದ್ದ ದಿಲೀಪ್ ರಾಜ್‌ಗೆ ನಟನಾಗಿ, ನಿರ್ಮಾಪಕನಾಗಿ ಯಶಸ್ಸು ಸಿಕ್ಕಿತ್ತು. ಇವರು ನಿರ್ಮಿಸಿದ ಧಾರಾವಾಹಿಗಳು ಯಶಸ್ಸು ಕಂಡಿದ್ದವು.
ದಿಲೀಪ್ ರಾಜ್ ಕೇವಲ ನಟ, ನಿರ್ದೇಶಕ, ನಿರ್ಮಾಪಕ ಅಷ್ಟೇ ಆಗಿರಲಿಲ್ಲ. ಡಬ್ಬಿಂಗ್ ಆರ್ಟಿಸ್ಟ್ ಆಗಿಯೂ ಬೇಡಿಕೆಯಲ್ಲಿ ಇದ್ದರು. ಕನ್ನಡದ ಹಲವು ನಟರಿಗೆ ದಿಲೀಪ್ ರಾಜ್ ಧ್ವನಿಯನ್ನು ನೀಡಿದ್ದರು. ಸಿನಿಮಾ ಹಾಗೂ ಕಿರುತೆರೆಯಲ್ಲಿ ದಿಲೀಪ್ ರಾಜ್ ಮಾಡದೇ ಇರೋ ಕೆಲಸನೇ ಇಲ್ಲ ಅನ್ನೋದನ್ನು ಅವರನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ.

ದಿಲೀಪ್ ರಾಜ್ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರುವುದಕ್ಕೆ ಬಯಸಿದ್ದರು. ಆದರೆ, ಅವರಿಗೆ ಕನ್ನಡದಲ್ಲಿ ಒಳ್ಳೆಯ ಅವಕಾಶಗಳು ಸಿಗಲೇ ಇಲ್ಲ. ಚಿತ್ರರಂಗದಲ್ಲಿ ಹೀರೋ ಮರೆಯುವ ಎಲ್ಲಾ ಪ್ರತಿಭೆಯೂ ಇತ್ತು. ಇದು ಕನ್ನಡ ಚಿತ್ರರಂಗದ ನಿರ್ದೇಶಕರುಗಳಿಗೂ ಗೊತ್ತಿತ್ತು. ಆದರೂ ಅವರಿಗೆ ಅವಕಾಶ ಮಾತ್ರ ಸಿಗಲಿಲ್ಲ ಅನ್ನೋದು ವಿಪರ್ಯಾಸ. ನಟ-ನಿರ್ದೇಶಕ ಪವನ್ ಕುಮಾರ್ ತನ್ನ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ 'ಯೂಟರ್ನ್' ವೇಳೆ ನಡೆದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ಪವನ್ ಕುಮಾರ್ 'ಯೂಟರ್ನ್' ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದರು. ಈ ವೇಳೆ ಸಿನಿಮಾದ ಪ್ರಮುಖ ಪಾತ್ರಕ್ಕೆ ನಟರನ್ನು ಹುಡುಕಾಡುತ್ತಿದ್ದರು. ಆಗ ಅವರ ಕಣ್ಣಿಗೆ ಬಿದ್ದಿದ್ದು ದಿಲೀಪ್ ರಾಜ್. ಅದಾಗೇ ಚಿತ್ರರಂಗದಲ್ಲಿ ತನ್ನ ಪ್ರತಿಭೆಯಿಂದ ಗುರುತಿಸಿಕೊಂಡಿದ್ದ ದಿಲೀಪ್ ರಾಜ್ ಕೂಡ ಆಡಿಷನ್‌ಗೆ ಬಂದಿದ್ದರು. ಆ ವೇಳೆ ತೆಗೆದುಕೊಂಡಿದ್ದ ದಿಲೀಪ್ ರಾಜ್ ಅವರ ಫೋಟೊವನ್ನು ಪವನ್ ಶೇರ್ ಮಾಡಿಕೊಂಡಿದ್ದಾರೆ. ಆಡಿಷನ್ ನೀಡಿದ ಬಳಿಕ ಪವನ್‌ಗೆ ಏನು ಅನಿಸಿತ್ತು? ಅನ್ನೋದನ್ನು ಹಂಚಿಕೊಂಡಿದ್ದಾರೆ.
"11 ವರ್ಷಗಳ ಹಿಂದೆ ನಾನು ಈ ಫೋಟೊವನ್ನು ಸೆರೆ ಹಿಡಿದಿದ್ದೆ. ಅವರು ನನ್ನ ಆಫೀಸ್‌ನಲ್ಲಿ ಯೂಟರ್ನ್ ಸಿನಿಮಾ ಆಡಿಷನ್‌ಗಾಗಿ ಬಂದಿದ್ದರು. ಅವರು ಅದಿತ್ಯ ಪಾತ್ರವನ್ನು ಮಾಡುವುದಕ್ಕೆ ಒಪ್ಪಿಕೊಂಡಾಗ ನಾನು ನಿಜಕ್ಕೂ ನಿರಾಳನಾಗಿದ್ದೆ. ಯಾಕಂದ್ರೆ ಆ ವೇಳೆ ಈ ಸಿನಿಮಾ ಉತ್ತಮ ವ್ಯಕ್ತಿಯ ಕೈಯಲ್ಲಿದೆ ಅನ್ನೋದು ನನಗೆ ಗೊತ್ತಾಗಿತ್ತು." ಎಂದು ನಿರ್ದೇಶಕ ಪವನ್ ಕುಮಾರ್ ಬರೆದುಕೊಂಡಿದ್ದಾರೆ.

ಇಷ್ಟೇ ಅಲ್ಲದೆ, "ಅವರು ಒಬ್ಬ ಅತ್ಯುತ್ತಮ ಕಲಾವಿದ. ಒಂದೊಳ್ಳೆ ಪರಿಶುದ್ಧ ಆತ್ಮ. ಅವರು ಇಷ್ಟು ಬೇಗ ನಮ್ಮನ್ನೆಲ್ಲ ಬಿಟ್ಟು ಅಗಲಿದ್ದಾರೆಂದು ತಿಳಿದು ನನಗೆ ಶಾಕ್ ಆಗಿದೆ. ನನಗೆ ಈಗಾಗಲೂ ಇದನ್ನು ನಂಬುವುದಕ್ಕೆ ಆಗುತ್ತಿಲ್ಲ." ಎಂದು ದಿಲೀಪ್ ರಾಜ್ ಅವರ ಅಗಲಿಕೆಗೆ ಭಾವುಕರಾಗಿದ್ದಾರೆ. ಅಂದ್ಹಾಗೆ ಯೂಟರ್ನ್‌ನಲ್ಲಿ ದಿಲೀಪ್ ರಾಜ್ ಪಾತ್ರ ಪ್ರೇಕ್ಷಕರ ಗಮನ ಸೆಳೆದಿತ್ತು. ಇಡೀ ಕಥೆಗೆ ದಿಲೀಪ್ ಪಾತ್ರವೇ ದೊಡ್ಡ ಟ್ವಿಸ್ಟ್ ಕೊಟ್ಟಿತ್ತು.
ದಿಲೀಪ್ ರಾಜ್ ನಟಿಸಿದ ಪಾತ್ರಗಳು ಪ್ರೇಕ್ಷಕರಿಗೆ ಇಷ್ಟ ಆಗಿತ್ತು. ಅವರ ಪ್ರತಿಭೆಯನ್ನು ಚಿತ್ರರಂಗ ಕೂಡ ಹೊಗಳಿ ಕೊಂಡಾಡಿತ್ತು. ಹೀಗಿದ್ದರೂ, ಅವರ ಪ್ರತಿಭೆಗೆ ಸಿನಿಮಾಗಳಲ್ಲಿ ಸಿಗಬೇಕಾಗಿದ್ದ ಅವಕಾಶಗಳು ಸಿಗಲಿಲ್ಲ. ಇದೊಂದು ಕೊರಗು ಅವರಿಗೆ ಇದ್ದಿರಬಹುದು. ದಿಲೀಪ್ ರಾಜ್ ಹಂತ ಹಂತವಾಗಿ ಒಂದೊಂದೇ ಹೆಜ್ಜೆಯನ್ನು ಏರಿ ಮೇಲೆ ಬಂದಿದ್ದರು. ಇತ್ತೀಚೆಗೆ ನಿರ್ಮಾಪಕರಾಗಿ ಅವರಿಗೆ ಯಶಸ್ಸು ಸಿಕ್ಕಿತ್ತು. ಹೊಸ ಹೊಸ ಧಾರಾವಾಹಿಗಳನ್ನು ನಿರ್ಮಾಣ ಮಾಡುತ್ತಿದ್ದರು. ಅಷ್ಟರಲ್ಲೇ ಬಾರದ ಲೋಕಕ್ಕೆ ದಿಲೀಪ್ ರಾಜ್ ಪಯಣ ಬೆಳೆಸಿದ್ದಾರೆ.


Click it and Unblock the Notifications
