ಪವನ್ ಒಡೆಯರ್ ನಿರ್ಮಾಣದ ಸಿನಿಮಾ 'ಡೊಳ್ಳು' ಜುಲೈನಲ್ಲಿ ರಿಲೀಸ್
ಪವನ್ ಒಡೆಯರ್ ಇದೂವರೆಗೂ ನಿರ್ದೇಶಕರಾಗಿ ಕನ್ನಡಿಗರಿಗೆ ಪರಿಚಯವಿದೆ. ಈಗ ಪವನ್ ಒಡೆಯರ್ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ಪಕ್ಕಾ ಕಮರ್ಷಿಯಲ್ ಸಿನಿಮಾಗಳನ್ನು ನಿರ್ದೇಶಿಸುವ ಪವನ್ ಒಡೆಯರ್ ಪಕ್ಕಾ ಪ್ರಯೋಗಾತ್ಮಾಕ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ಜಾನಪದ ಪರಂಪರೆಯನ್ನು ಸಾರುವ ಡೊಳ್ಳು ಕಥೆಯನ್ನು ಆಧರಿಸಿದೆ. ಗ್ರಾಮೀಣ ಭಾಗದಲ್ಲಿ ಹಾಸುಹೊಕ್ಕಾಗಿರುವ ಜನಪದ ಕಲೆ ಡೊಳ್ಳಿನ ಮಹತ್ವ ಸಾರುವ ಕತೆಯನ್ನು ಈ ಸಿನಿಮಾ ಹೊಂದಿದೆ. ಈ ಸಿನಿಮಾದ ಮೊದಲ ಝಲಕ್ ಹೊರಬಿದ್ದಿದೆ.
'ಡೊಳ್ಳು' ಸಿನಿಮಾದ ಟೀಸರ್‌ನಲ್ಲಿ ಜನಪದ ಕಲೆಯ ಮಹತ್ವವನ್ನು ಸಾರಲಾಗಿದೆ. ಜನಪದ ಕಲೆ ಹಾಗೂ ಗ್ರಾಮೀಣ ಭಾಗದ ಜನರು ಆಚಾರ ವಿಚಾರಗಳಿಗೆ ಅದರದ್ದೇ ಆದ ಇತಿಹಾಸವಿದೆ. ಸಾಂಸ್ಕೃತಿಕ ಪರಂಪರೆ ಬಿಂಬಿಸುವ ಜನಪದ ಕಲೆಗಳು ಗ್ರಾಮೀಣ ಭಾರತದ ಜೀವಾಳ. ಹಳ್ಳಿಯಲ್ಲಿ ತೆರೆದುಕೊಳ್ಳುವ ಈ ಟೀಸರ್‌ನಲ್ಲಿ ಡೊಳ್ಳಿನ ಮಹತ್ವವನ್ನು ಹೇಳಲಾಗಿದೆ. ಕೈಲಾಸದಲ್ಲಿ ಕುಳಿತಿರುವ ಶಿವಪ್ಪನನ್ನು ಒಲಿಸಿಕೊಳ್ಳುವ ಭಕ್ತಿ ಮಾರ್ಗ ಕೂಡ ಡೊಳ್ಳು ಗ್ರಾಮೀಣ ಜನರು ನಂಬಿದ್ದಾರೆ.
'ಡೊಳ್ಳು ಕುಣಿತಕ್ಕೆ ಸಂಬಂಧಿಸಿದ ಈ ಸಿನಿಮಾ ಈಗಾಗಲೇ ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಇಷ್ಟೇ ಅಲ್ಲದೆ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿಯೂ ಪ್ರದರ್ಶನಗೊಂಡಿದೆ.

'ಗೋವಿಂದಾಯ ನಮಃ', 'ಗೂಗ್ಲಿ', 'ರಣವಿಕ್ರಮ', 'ಜೆಸ್ಸಿ', 'ನಟರಾಜ ಸರ್ವೀಸ್' ಮತ್ತು 'ನಟಸಾ ರ್ವಭೌಮ' ದಂತಹ ಸಿನಿಮಾಗಳನ್ನು ಪವನ್ ಒಡೆಯರ್ ನಿರ್ದೇಶಿಸಿದ್ದಾರೆ. ಈಗ ತಮ್ಮದೇ ಒಡೆಯರ್ ಮೂವಿಸ್' ನಿರ್ಮಾಣ ಸಂಸ್ಥೆಯಡಿ ಡೊಳ್ಳು ಚಿತ್ರ ನಿರ್ಮಾಣ ಮಾಡಿದ್ದಾರೆ.

ಮಹಾನ್ ಹುತಾತ್ಮ ಕಿರುಚಿತ್ರದ ನಿರ್ದೇಶಕ ರಾಷ್ಟ್ರ ಪ್ರಶಸ್ತಿ ವಿಜೇತ ಸಾಗರ್ ಪುರಾಣಿಕ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. 'ಡೊಳ್ಳು' ಸಿನಿಮಾದಲ್ಲಿ ಕಿರುತೆರೆ ನಟ ಕಾರ್ತಿಕ್ ಮಹೇಶ್ ನಾಯಕನಾಗಿ, ನಿಧಿ ಹೆಗ್ಡೆ ನಾಯಕಿ ಪಾತ್ರ ನಿರ್ವಹಿಸಲಿದ್ದಾರೆ. ಹಾಗೇ ಬಾಬು ಹಿರಣ್ಣಯ್ಯ, ಚಂದ್ರ ಮಯೂರ್ ಮತ್ತು ಶರಣ್ ಸುರೇಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶ್ರೀನಿಧಿ ಡಿಎಸ್ ಚಿತ್ರಕಥೆ ಬರೆದಿದ್ದು, ಅನಂತ್ ಕಾಮತ್ ಸಂಗೀತ ಸಂಯೋಜಿಸಿದ್ದಾರೆ. ಈ 'ಡೊಳ್ಳು' ಸಿನಿಮಾ ಇದೇ ಜುಲೈನಲ್ಲಿ ಥಿಯೇಟರ್ ಗ್ರ್ಯಾಂಡ್ ಎಂಟ್ರಿ ಕೊಡಲಿದೆ.


Click it and Unblock the Notifications











