"ಈ ಫೋಟೋ ನೋಡಿ ನಮ್ಮ ಮನೆ ಬೀರನೇ ನನ್ನನ್ನು ಒಂಥರಾ ನೋಡಿದ್ದ"; ವಿನಯ್ ರಾಜ್‌ಕುಮಾರ್
ಕೆಲವು ದಿನಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ವಿನಯ್ ರಾಜ್‌ಕುಮಾರ್ ಮದುವೆ ಫೋಟೋವೊಂದು ಹರಿದಾಡುತ್ತಿತ್ತು. 'ಒಂದು ಸರಳ ಪ್ರೇಮಕಥೆ'ಯ ನಟಿ ಸ್ವಾತಿಷ್ಠಾ ಕೃಷ್ಣನ್ ಜೊತೆ ವಿನಯ್ ರಾಜ್‌ಕುಮಾರ್ ಮದುವೆ ಆಗಿದೆ ಅಂತ ಗುಲ್ಲೆದ್ದಿತ್ತು. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ ಕೂಡ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.
ಅರೇ, ಸದ್ದಿಲ್ಲದೆ ವಿನಯ್ ರಾಜ್‌ಕುಮಾರ್ ಹೀಗೆ ಮದುವೆ ಆಗುವ ಅಗತ್ಯವೇನಿತ್ತು? ಅಂತ ಅವರ ಅಭಿಮಾನಿಗಳೇ ತಲೆ ಕೆಡಿಸಿಕೊಂಡಿದ್ದರು. ದಿಢೀರನೇ ವಿನಯ್ ಹಾಗೂ ಸ್ವಾತಿಷ್ಠಾ ಫೋಟೋ ನೋಡಿದ ಕೂಡ ದೊಡ್ಮನೆ ಫ್ಯಾನ್ಸ್ ಗೊಂದಲಕ್ಕೆ ಒಳಗಾಗಿದ್ದರು. ಅದೇ ವೇಳೆ ಯುವ ರಾಜ್‌ಕುಮಾರ್ ವಿಚ್ಛೇದನದ ಸುದ್ದಿ ಕೂಡ ಸಿಕ್ಕಾಪಟ್ಟೆ ಸದ್ದು ಮಾಡುತ್ತಿತ್ತು.

ಸ್ವಾತಿಷ್ಠಾ ಕೃಷ್ಣನ್ ಜೊತೆ ಮದುವೆ ಆಗಿದ್ದಾರೆನ್ನಲಾದ ಫೋಟೋ ಬಗ್ಗೆ ವಿನಯ್ ರಾಜ್‌ಕುಮಾರ್ ಫಿಲ್ಮಿಬೀಟ್ ಕನ್ನಡಗೆ ಪ್ರತಿಕ್ರಿಯೆ ನೀಡಿದ್ದಾರೆ. 'ಪೆಪೆ' ಸಿನಿಮಾದ ಸಂದರ್ಶನದಲ್ಲಿ ವಿನಯ್ ಆ ಮದುವೆ ಫೋಟೋ ಹಿಂದಿನ ರಹಸ್ಯವೇನು? ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಮದುವೆ ಫೋಟೋ ಹೊರಬಿದ್ದ ಕೂಡಲೇ ಸ್ನೇಹಿತರು ಹಾಗೂ ಮನೆಯವರ ಪ್ರತಿಕ್ರಿಯೆ ಹೇಗಿತ್ತು ಅನ್ನೋದನ್ನು ಹೇಳಿಕೊಂಡಿದ್ದಾರೆ.
"ನಗೋದಾ, ಆಳೋದಾ ಗೊತ್ತಾಗಲಿಲ್ಲ"
ಫಿಲ್ಮಿಬೀಟ್ ಕನ್ನಡ ಸಂದರ್ಶನದಲ್ಲಿ ವಿನಯ್ ರಾಜ್‌ಕುಮಾರ್ ವೈರಲ್ ಆಗಿದ್ದ ಮದುವೆ ಫೋಟೊ ಬಗ್ಗೆ ರಿವೀಲ್ ಮಾಡಿದ್ದಾರೆ. ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ನೋಡಿದಾಗ ಏನು ಅನಿಸಿತ್ತು ಅನ್ನೋದನ್ನು ಹೇಳಿದ್ದಾರೆ. "ಈ ಫೋಟೊ ನೋಡಿ ನಗುವುದಾ ಶಾಕ್ ಆಗೋದಾ ಗೊತ್ತಾಗಿರಲಿಲ್ಲ. ಏನು ಮಾಡುವುದು? ಸಿನಿಮಾ ಆಕ್ಟರ್ ಅಂದ ಕೂಡಲೇ ಇದೆಲ್ಲ ಮಾಡಬೇಕಾಗುತ್ತೆ. ನಾನು ಊರಲ್ಲಿ ಇದ್ದೆ. ಈ ಫೋಟೋವನ್ನು ಫೇಸ್ ಬುಕ್ ಸೇರಿ ಎಲ್ಲಾ ಕಡೆ ನೋಡುತ್ತಿದ್ದೆ. ಗೊತ್ತಿರುವ ಸ್ನೇಹಿತರಿಗೆಲ್ಲ ಈ ಫೋಟೋ ಬಗ್ಗೆ ಗೊತ್ತಿತ್ತು. ಎಲ್ಲರೂ ತಮಾಷೆ ಮಾಡಿಕೊಂಡು ಇದ್ದರು" ಎಂದು ಆ ಘಳಿಗೆಯನ್ನು ನೆನಪಿಸಿಕೊಂಡಿದ್ದಾರೆ.

"ಎಗ್ಸೈಟ್ ಆಗಿ ನ್ಯೂಸ್ ಮಾಡಿಬಿಟ್ರು"
ಅಂದ್ಹಾಗೆ, ಇದು 'ಒಂದು ಸರಳ ಪ್ರೇಮಕಥೆ' ಸಿನಿಮಾದ ಫೋಟೋ. ಅದನ್ನು ಸ್ವಾತಿಷ್ಠಾ ಕೃಷ್ಣನ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದರು. ಅದು ಕಣ್ಮುಚ್ಚಿ ಕಣ್ಣು ಬಿಡುವುದರೊಳಗೆ ವೈರಲ್ ಆಗಿತ್ತು. "ಸ್ವಾತಿಷ್ಠ ಹಾಕಿದಾಗ ಅಲ್ಲಿ ಬರೆದಿದ್ಲು. ಬಿಹೈಂಡ್ ದಿ ಸೀನ್ಸ್ ಅಂತ. ಆದರೆ, ಯಾರೂ ಅದನ್ನು ನೋಡಲಿಲ್ಲ. ಎಲ್ಲರೂ ಎಗ್ಸೈಟ್ ಆಗಿ ನ್ಯೂಸ್‌ನಲ್ಲಿ ಹಾಕಬೇಕು ಅಂತ ಹಾಕ್ಬಿಟ್ರು." ಎಂದು ವಿನಯ್ ಕುಮಾರ್ ಫಿಲ್ಮಿಬೀಟ್ ಜೊತೆ ಹಂಚಿಕೊಂಡಿದ್ದಾರೆ.
"ನಮ್ಮನೆ ಬೀರನೇ ಒಂಥರಾ ನೋಡಿದ್ದ"
ವಿನಯ್ ಹಾಗೂ ಸ್ವಾತಿಷ್ಠಾ ಫೋಟೋ ರಿವೀಲ್ ಆದ್ಮೇಲೆ ಎಫೆಕ್ಟ್ ಹೇಗಿತ್ತು? ಅನ್ನೋದನ್ನು ರಿವೀಲ್ ಮಾಡಿದ್ದಾರೆ. "ಈ ಫೋಟೊ ಹಾಕಿದ್ಮೇಲೆ ಬೆಸ್ಟ್ ಏನಾಯ್ತು ಅಂದ್ರೆ, ನಾನು ಎರಡು ದಿನ ಮೈಸೂರಿಗೆ ಹೋಗಿದ್ದೆ. ವಾಪಾಸ್ ಮನೆಗೆ ಬಂದೆ. ನಮ್ಮ ಮನೆಯಲ್ಲಿ ಒಬ್ಬ ಭೀರ ಅಂತ ಕೆಲಸ ಮಾಡುತ್ತಾನೆ. ಅವರು ನನ್ನನ್ನು ಒಂಥರಾ ನೋಡುತ್ತಿದ್ದ. ನಾನು ಇವನು ಯಾಕೆ ಹೀಗೆ ನೋಡುತ್ತಿದ್ದಾನೆ. ಅಣ್ಣ ನೀವು ಎರಡು ದಿನ ಇರಲಿಲ್ಲ ಅಲ್ವಾ ಅಣ್ಣ. ನೀವು ಮದುವೆ ಆಗಿದ್ದೀರ ಅಂದುಕೊಂಡು ಅಂತ ಹೇಳಿದ. ನಾನು ಮದುವೆ ಆಗಿದ್ದು ನಿಜ ಅಂತ ಅಂದುಕೊಂಡಿದ್ದ." ಎಂದಿದ್ದಾರೆ.
"ಮದುವೆ ಆಗಿದೆ ಅಂತಾನಾದ್ರೂ ಅಂದುಕೊಳ್ಳಿ"
"ಆಗ ನಾನು ಅಂದ್ಕೊಂಡೆ. ನನಗೆ ಗೊತ್ತಿರುವವನೇ ಹೀಗೆ ಅಂದುಕೊಂಡ ಅಂದರೆ, ಗೊತ್ತಿಲ್ಲದೆ ಇರುವವರು ನಿಜ ಅಂದ್ಕೊಂಡಿರುತ್ತಾರೆ. ನೀವು ಏನು ಬೇಕಾದರೂ ಅಂದುಕೊಳ್ಳಿ. ನನಗೆ ನಿಜವಾಗಲೂ ಬೇಜಾರು ಇಲ್ಲ. ಮದುವೆ ಆಗಿದೆ ಅಂತಾನಾದ್ರೂ ಅಂದುಕೊಳ್ಳಿ. ಇಲ್ಲಾ ಅಂತನಾದ್ರೂ ಅಂದುಕೊಳ್ಳಿ." ಎಂದು ವಿನಯ್ ರಾಜ್‌ಕುಮಾರ್ ಹೇಳಿದ್ದಾರೆ.


Click it and Unblock the Notifications











