ಗಣೇಶ್ ವೃತ್ತಿ ಬದುಕಿನ ಅತೀ ದೊಡ್ಡ ಸಿನಿಮಾ ಸೆಟ್ಟಿನಲ್ಲಿ 20 ವರ್ಷಗಳ ಸಿನಿ ಪಯಣ ಸಂಭ್ರಮ
ಸಿನಿಮಾದಲ್ಲಿ ಹೀರೋ ಆಗ್ಬೇಕು ಅಂತ ಕನಸು ಕಟ್ಟಿಕೊಂಡು ಬರುವ ಅದೆಷ್ಟೋ ಮಂದಿ ಇದ್ದಾರೆ. ಅವರೆಲ್ಲರೂ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳುತ್ತಾರೆ ಎನ್ನುವುದಕ್ಕೆ ಆಗುವುದಿಲ್ಲ. ಇವರಲ್ಲಿ ಕೆಲವರಷ್ಟೇ ಸ್ಟಾರ್‌ಗಳಾಗಿ ಮೆರೆಯುತ್ತಾರೆ. ಅಂತಹವರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಒಬ್ಬರು. ನಿರೂಪಕನಾಗಿ, ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಾ ಸ್ಟಾರ್ ಪಟ್ಟಕ್ಕೆ ಏರಿದವರು. ಈಗ ಅವರು ಕನ್ನಡ ಚಿತ್ರರಂಗದಲ್ಲಿ ಗೋಲ್ಡನ್ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ.
ಸ್ಯಾಂಡಲ್‌ವುಡ್‌ನ ಈ 'ಗೋಲ್ಡನ್ ಸ್ಟಾರ್' ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಬರೋಬ್ಬರಿ 20 ವರ್ಷಗಳಾಗಿವೆ. ಇದು ಕಡಿಮೆ ಸಾಧನೆ ಏನಲ್ಲ. ಚಿತ್ರರಂಗದಲ್ಲಿ ಎರಡು ದಶಕಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೋದು ಅವರ ಪ್ರತಿಭೆಗೆ ಹಿಡಿದ ಕನ್ನಡಿ. ಸದ್ಯ ಗೋಲ್ಡನ್ ಸ್ಟಾರ್ 20 ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿದ್ದಾರೆ. ಕಳೆದ ಎರಡು ದಶಕಗಳಿಂದ ಸಿನಿಪ್ರಿಯರನ್ನು ರಂಜಿಸುತ್ತಾ ಬಂದಿದ್ದಾರೆ. ಇದು ಅವರ ವೃತ್ತಿ ಬದುಕಿನಲ್ಲೇ ವಿಶೇಷವಾದ ಮೈಲಿಗಲ್ಲು.

ಕಳೆದ ಕೆಲವು ದಿನಗಳಿಂದ ಗೋಲ್ಡನ್ ಸ್ಟಾರ್ ಗಣೇಶ್ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಈಗ ಅವರ ಬಹುನಿರೀಕ್ಷಿತ ಸಿನಿಮಾ 'ಪಿನಾಕ' ಶೂಟಿಂಗ್ ಸೆಟ್ಟಿನಲ್ಲಿಯೂ 20 ವರ್ಷಗಳ ಸಂಭ್ರಮವನ್ನು ಆಚರಣೆ ಮಾಡಲಾಗಿದೆ. ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿ ಈ ಬಹುಕೋಟಿ ವೆಚ್ಚದ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಈ ಸಿನಿಮಾದ ಸೆಟ್ಟಿನಲ್ಲಿ ಅದ್ಧೂರಿಯಾಗಿ ಸಂಭ್ರಮಾಚರಣೆ ಮಾಡಲಾಗಿದೆ.
'ಪಿನಾಕ' ಗೋಲ್ಡನ್ ಸ್ಟಾರ್ ಗಣೇಶ್ ವೃತ್ತಿ ಬದುಕಿನಲ್ಲೇ ನಿರ್ಮಾಣ ಆಗುತ್ತಿರುವ ಅತಿ ದೊಡ್ಡ ಸಿನಿಮಾವಿದು. ಇದೂವರೆಗೂ ಗಣೇಶ್ ಇಂತಹದ್ದೊಂದು ಪಾತ್ರದಲ್ಲಿ ಕಾಣಿಸಿಕೊಂಡಿಲ್ಲ. ಹೀಗಾಗಿ ಅವರ ಅಭಿಮಾನಿಗಳು ಈ ಸಿನಿಮಾ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. 'ಪಿನಾಕ' ತಂಡ ತಮ್ಮ ನೆಚ್ಚಿನ ನಟನ ವೃತ್ತಿ ಜೀವನದ ಮೈಲಿಗಲ್ಲನ್ನು ಆಚರಿಸಿ ಸಂಭ್ರಮಿಸಿದ್ದಾರೆ. ಶೂಟಿಂಗ್ ಸ್ಪಾಟ್‌ನಲ್ಲಿ ಕೇಕ್ ಕತ್ತರಿಸಿ ಗೋಲ್ಡನ್ ಸ್ಟಾರ್‌ಗೆ ಅಭಿನಂದನೆಗಳನ್ನು ಸಲ್ಲಿಸಲಾಯ್ತು.
ಗಣೇಶ್ ಕರಿಯರ್‌ನಲ್ಲೇ ದೊಡ್ಡ ಸಿನಿಮಾ
ಇದೇ ವೇಳೆ 'ಪಿನಾಕ' ಸಿನಿಮಾದ ನಿರ್ಮಾಪಕರಾದ ಟಿಜಿ ವಿಶ್ವಪ್ರಸಾದ್ ಮತ್ತು ಕೃತಿ ಪ್ರಸಾದ್ ಕೂಡ ಗಣೇಶ್ ಅವರ ಗೋಲ್ಡನ್ ಸಾಧನೆಯನ್ನು ಅಭಿನಂದಿಸಿದ್ದಾರೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಈ ಸಿನಿಮಾವನ್ನು ದುಬಾರಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದೆ. ಈಗಾಗಲೇ ಸಿನಿಮಾದ ಶೇ.80 ಭಾಗದ ಶೂಟಿಂಗ್ ಮುಕ್ತಾಯವಾಗಿದೆ. ಬೇರೆ ಬೇರೆ ಭಾಷೆಯಿಂದ ಜನಪ್ರಿಯ ಕಲಾವಿದರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ಗಣೇಶ್ ಅವರ ಕೆರಿಯರ್‌ನಲ್ಲೇ ಅತಿ ದೊಡ್ಡ ಸಿನಿಮಾ ಆಗಿದೆ. ತಾಂತ್ರಿಕವಾಗಿ ಮತ್ತು ಮೇಕಿಂಗ್ ವಿಚಾರದಲ್ಲಿ ರಾಜಿಯಾಗದೆ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ.
ಗೋಲ್ಡನ್ ಸ್ಟಾರ್ ಗಣೇಶ್‌ಗೆ 'ಪಿನಾಕ' ಕೂಡ ವಿಶಿಷ್ಠ ಸಿನಿಮಾ. ಲವರ್ ಬಾಯ್ ಆಗಿ, ಆಕ್ಷನ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಗಣೇಶ್ ಈ ಸಿನಿಮಾ ಮೂಲಕ ತನ್ನ ಅಭಿಮಾನಿಗಳಿಗೆ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಗಣೇಶ್ ಚಿತ್ರರಂಗದಲ್ಲಿ 20 ವರ್ಷಗಳನ್ನು ಪೂರೈಸಿದ್ದು, ಆ ಸಂಭ್ರಮದಲ್ಲಿ ತೇಲಾಡುತ್ತಿದ್ದಾರೆ.
'ಪಿನಾಕ' ತಂಡದಿಂದಸನ್ಮಾನ ಸ್ವೀಕರಿಸಿ ಮಾತನಾಡಿದ ಗೋಲ್ಡನ್ ಸ್ಟಾರ್ ಗಣೇಶ್ ಭಾವುಕರಾಗಿ ಮಾತಾಡಿದ್ದಾರೆ."ನಾನು ಚಿತ್ರರಂಗಕ್ಕೆ ಬಂದು 20 ವರ್ಷಗಳಾದವು. ಅಂದು ನನ್ನನ್ನು ಹೇಗೆ ಸ್ವೀಕರಿಸಿದ್ದಿರೋ, ಅದೇ ಪ್ರೀತಿ ಮತ್ತು ವಿಶ್ವಾಸವನ್ನು ಇಂದಿಗೂ ಚಿತ್ರರಂಗದವರು ಹಾಗೂ ನನ್ನ ಅಭಿಮಾನಿಗಳು ತೋರಿಸುತ್ತಿದ್ದಾರೆ. ಕಾಲ ಉರುಳಿದರೂ ನನ್ನ ಅಭಿಮಾನಿ ಬಳಗ ಇನ್ನೂ ದೊಡ್ಡದಾಗುತ್ತಿರುವುದು ನನ್ನ ಪುಣ್ಯ. ಎಲ್ಲರಿಗೂ ನನ್ನ ಹೃತ್ಪೂರ್ವಕ ನಮಸ್ಕಾರಗಳು. ಹಾಗೆಯೇ, ನನ್ನನ್ನು ಇಷ್ಟು ಗೌರವದಿಂದ ನಡೆಸಿಕೊಳ್ಳುತ್ತಿರುವ ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆಗೂ ನಾನು ಧನ್ಯವಾದ ಅರ್ಪಿಸುತ್ತೇನೆ." ಎಂದು ಗಣೇಶ್ ಹೇಳಿದ್ದಾರೆ.


Click it and Unblock the Notifications