ಹಿರಿಯ ನಟಿ ಲೀಲಾವತಿ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ
ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ನಿಧನಕ್ಕೆ ಬೇರೆ ಬೇರೆ ಕ್ಷೇತ್ರದ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಕನ್ನಡ ಚಿತ್ರರಂಗದ ಗಣ್ಯರು, ರಾಜಕೀಯ ಕ್ಷೇತ್ರದ ಮುಖಂಡರು ಕಂಬಿನಿ ಮಿಡಿಯುತ್ತಿದ್ದಾರೆ. ಇವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಹಿರಿಯ ನಟಿಯ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.
ತಮ್ಮ ಟ್ವೀಟ್ (X) ಖಾತೆಯ ಮೂಲಕ ಲೀಲಾವತಿಯವರ ನಿಧನಕ್ಕೆ ಕಂಬನಿ ಮಿಡಿದಿದ್ದು, ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿದ್ದಾರೆ. ಹಿರಿಯ ನಟಿಯ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಕನ್ನಡ ಚಿತ್ರರಂಗದ ಹೆಸರಾಂತ ನಟಿ ಲೀಲಾವತಿ ಅವರ ನಿಧನದ ಸುದ್ದಿ ಕೇಳಿ ದುಃಖವಾಯಿತು ಎಂದು ಮೋದಿ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

"ಕನ್ನಡ ಚಿತ್ರರಂಗದ ಹೆಸರಾಂತ ನಟಿ ಲೀಲಾವತಿ ಅವರ ನಿಧನದ ಸುದ್ದಿ ಕೇಳಿ ದುಃಖವಾಯಿತು. ಸಿನಿಮಾದ ನೈಜ ಪ್ರತೀಕವಾದ ಅವರು ಹಲವಾರು ಚಲನಚಿತ್ರಗಳಲ್ಲಿ ತಮ್ಮ ಬಹುಮುಖ ನಟನೆಯೊಂದಿಗೆ ಬೆಳ್ಳಿ ಪರದೆಯನ್ನು ಅಲಂಕರಿಸಿದವರು. ಅವರ ವೈವಿಧ್ಯಮಯ ಪಾತ್ರಗಳು ಮತ್ತು ಅದ್ಭುತ ಪ್ರತಿಭೆಯನ್ನು ಸದಾ ಸ್ಮರಿಸಲಾಗುತ್ತದೆ ಮತ್ತು ಪ್ರಶಂಸಿಸಲಾಗುತ್ತದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ." ಎಂದು ಹೇಳಿದ್ದಾರೆ.
ಲೀಲಾವತಿ ಕಳೆದ ಕೆಲವು ದಿನಗಳಿಂದ ವಯೋ ಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಕೆಲವು ದಿನಗಳಿಂದ ಆಹಾರ ಸೇವಿಸುವುದನ್ನೇ ಬಿಟ್ಟಿದ್ದರು. ಕೆಲವು ದಿನಗಳಿಂದ ಮತ್ತೆ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದರೂ, ದಿಢೀರನೇ ಲೋ ಬಿಪಿಯಾಗಿ ಹೃದಯ ಸ್ತಂಬನ ಆಗಿದೆ ಎಂದು ಹೇಳಲಾಗಿದೆ.
ಸದ್ಯ ಹಿರಿಯ ನಟಿ ಲೀಲಾವತಿಯವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಡಲಾಗಿದೆ. ಡಿಸೆಂಬರ್ 9ರ ಮಧ್ಯಾಹ್ನದವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಇರಲಿದೆ. ಆ ಬಳಿಕ ನೆಲಮಂಗಲದ ಸೋಲದೇವನ ಹಳ್ಳಿಯಲ್ಲಿರುವ ತೋಟದಲ್ಲಿ ಸಂಸ್ಕಾರ ನಡೆಯಲಿದೆ.
ಈಗಾಗಲೇ ಚಿತ್ರರಂಗದ ಗಣ್ಯರು, ರಾಜಕೀಯ ಕ್ಷೇತ್ರದ ಮುಖಂಡರು ನಟಿ ಲೀಲಾವತಿಯವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಅಂತೆಯೇ ಪ್ರಧಾನಿ ನರೇಂದ್ರ ಮೋದಿ ಕೂಡ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
ಇನ್ನು ಶಿವರಾಜ್‌ಕುಮಾರ್ ಸೇರಿದಂತೆ ಚಿತ್ರರಂಗದ ಗಣ್ಯರು ಲೀಲಾವತಿಯವರ ಅಂತಿಮ ದರ್ಶನ ಪಡೆದು ಬಂದಿದ್ದಾರೆ. ಸುಮಾರು 600ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಲೀಲಾವತಿ ಪ್ರಾಣಿ ಪ್ರಿಯರೂ ಆಗಿದ್ದರು. ಅದೇ ಕಾರಣಕ್ಕೆ ಪಶು ಆಸ್ಪತ್ರೆಯನ್ನು ಕಟ್ಟಿಸಿದ್ದರು. ತೋಟಗಾರಿಕೆಯಲ್ಲಿ ಹೆಚ್ಚು ಒಲವನ್ನು ಬೆಳೆಸಿಕೊಂಡಿದ್ದರು. ಸುಮಾರು ಐದು ದಶಕಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ ಬಳಿಕ ನೆಲಮಂಗಲದಲ್ಲಿ ತೋಟ ಖರೀದಿಸಿ, ಅಲ್ಲೇ ನೆಲೆಸಿದ್ದರು. ಕನ್ನಡದ ಈ ಹಿರಿಯ ನಟಿ ಲೀಲಾವತಿ ಇನ್ನು ನೆನೆಪು ಮಾತ್ರ.


Click it and Unblock the Notifications











