ಅಭಿ-ಅವಿವಾ ವಿವಾಹಕ್ಕೆ ಪ್ರಧಾನಿ ಮೋದಿ ಗೈರು: ನವ ಜೋಡಿಗೆ ಪತ್ರದ ಮೂಲಕ ಶುಭಾಶಯ!
ಅಭಿಷೇಕ್ ಅಂಬರೀಶ್-ಅವಿವಾ ಬಿದ್ದಪ್ಪ ವಿವಾಹ ಅದ್ಧೂರಿಯಾಗಿ ನಡೆದಿದೆ. ಸುಮಾರು ಒಂದು ವಾರಗಳಿಂದ ಈ ಸಂಭ್ರಮ ನಡೆಯುತ್ತಲೇ ಇದೆ. ಮದುವೆ, ಆರತಕ್ಷತೆ, ಬೀಗರ ಊಟ ಕಾರ್ಯಕ್ರಮ ಹೀಗೆ ಪ್ರತಿದಿನ ಸುದ್ದಿಯಲ್ಲಿದೆ.
ಎರಡು ದಿನಗಳ ಹಿಂದಷ್ಟೇ ಅಭಿ-ಅವಿವಾ ಅವರ ಸಂಗೀತ್ ಕಾರ್ಯಕ್ರಮ ಕೂಡ ಜರುಗಿತ್ತು. ಇದರಲ್ಲಿ ಜೋಡೆತ್ತು (ಯಶ್, ದರ್ಶನ್) ಭಾಗವಹಿಸಿ ಆ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದ್ದರು. ಈಗ ಬೀಗರ ಊಟಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ.

ಈ ನಡುವೆ ಹೊಸ ಜೀವನಕ್ಕೆ ಕಾಲಿಟ್ಟಿರೋ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಜೋಡಿಗೆ ಶುಭ ಕೋರಿ, ಸುಮಲತಾ ಅಂಬರೀಶ್‌ಗೆ ಪ್ರಧಾನಿ ನರೇಂದ್ರ ಮೋದಿ ಪತ್ರ ಬರೆದಿದ್ದಾರೆ. ಮಗನ ಮದುವೆ ಮಾಡಿದ ಖುಷಿಯಲ್ಲಿರೋ ಸುಮಲತಾಗೆ ಧನ್ಯವಾದಗಳನ್ನು ಹೇಳಿದ್ದಾರೆ. ಮೋದಿ ಬರೆದ ಪತ್ರದಲ್ಲಿ ಏನಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಅಭಿ-ಅವಿವಾ ವಿವಾಹಕ್ಕೆ ಮೋದಿ ಗೈರು
ಪ್ರಧಾನಿ ನರೇಂದ್ರ ಮೋದಿಗೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹಾಗೂ ಪುತ್ರ ಅಭಿಷೇಕ್ ಇಬ್ಬರೂ ಮದುವೆ ಆಮಂತ್ರಣ ನೀಡಿದ್ದರು. ದೆಹಲಿ ಸಂಸತ್ ಭವನಕ್ಕೆ ತೆರಳಿ ಆಮಂತ್ರಣ ಪತ್ರಿಕೆ ನೀಡಿಗೆ ಆಹ್ವಾನ ನೀಡಿದ್ದರು. ಆ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅಲ್ಲದೆ ಮದುವೆ ಬರುವುದಾಗಿ ಪ್ರಧಾನಿ ಹೇಳಿದ್ದರು ಎನ್ನಲಾಗಿದೆ.
ಆದರೆ, ಸುಮಲತಾ ಅಂಬರೀಶ್ ಪುತ್ರನ ಮದುವೆಗೆ ಬರಲು ಪ್ರಧಾನಿ ನರೇಂದ್ರ ಮೋದಿಗೆ ಸಾಧ್ಯವಾಗಿರಲಿಲ್ಲ. ಈ ಕಾರಣಕ್ಕೆ ಪಿಎಂ ಮೋದಿ ಈಗ ಪತ್ರವೊಂದನ್ನು ಬರೆದಿದ್ದಾರೆ. ಸುಮಲತಾ ಅಂಬರೀಶ್‌ಗೆ, ಅಭಿ-ಅವಿವಾಗೆ ಶುಭಾಶಗಳನ್ನು ತಿಳಿಸಿದ್ದಾರೆ.

ಮೋದಿ ಬರೆದ ಪತ್ರದಲ್ಲಿ ಏನೇನಿದೆ?
"ಸುಮಲತಾ ಅಂಬರೀಶ್ ಅವರೇ, ಅಭಿಷೇಕ್ ಹಾಗೂ ಅವಿವಾ ವಿವಾಹ ಆಗಿದ್ದು ನನ್ನ ಗಮನಕ್ಕೆ ಬಂದಿದೆ. ಈ ಸಮಾರಂಭಕ್ಕೆ ನನ್ನನ್ನು ಆಹ್ವಾನಿಸಿದ್ದಕ್ಕೆ ಧನ್ಯವಾದಗಳು. ಅವರು ತಮ್ಮ ಬದುಕಿನ ಹೊಸ ಹಂತವನ್ನು ಆರಂಭಿಸುತ್ತಿದ್ದಾರೆ. ಈ ಹೊಸ ಜರ್ನಿಯಲ್ಲಿ ಹಂಚಿಕೊಳ್ಳಬಹುದಾದ ಅದ್ಭುತ ಅನುಭವಗಳು ಹಾಗೂ ಸಮೃದ್ಧಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ. ಅವರ ಜೀವನದಲ್ಲಿ ಸಂತೋಷ ಹಾಗೂ ಖುಷಿ ತುಂಬಿರಲಿ" ಎಂದು ಮೋದಿ ಬರೆದಿದ್ದಾರೆ.
"ಈ ಎಲ್ಲಾ ಆಶೀರ್ವಾದಗಳೊಂದಿಗೆ, ನವಜೋಡಿ ವಿವಾಹದ ಹಾರ್ದಿಕ ಶುಭಾಶಯಗಳು. ಕುಟುಂಬಕ್ಕೆ, ಸ್ನೇಹಿತರಿಗೆ, ಪ್ರೀತಿ ಪಾತ್ರರಿಗೆ ಈ ವಿಶೇಷ ಸಂದರ್ಭದಲ್ಲಿ ಶುಭಾಶಗಳನ್ನು ಹೇಳುತ್ತೇನೆ." ಎಂದು ಪ್ರಧಾನಿ ನರೇಂದ್ರ ಮೋದಿ ಪತ್ರದಲ್ಲಿ ಬರೆದುಕೊಂಡಿದ್ದಾರೆ.
ಸಮಲತಾ, ಅಭಿಗೆ ಮೋದಿ ಟಾಸ್ಕ್
ಪ್ರಧಾನಿ ನರೇಂದ್ರ ಮೋದಿಗೆ ಮದುವೆ ಆಮಂತ್ರಣ ಪತ್ರಿಕೆ ನೀಡಲು ಹೋದಾಗ, ನರೇಂದ್ರ ಮೋದಿ ಹೊಸ ಟಾಸ್ಕ್ ಕೊಟ್ಟಿರೋ ಬಗ್ಗೆ ಸುದ್ದಿಯಾಗಿತ್ತು. ಸುಮಲತಾ ಹಾಗೂ ಅಂಬರೀಶ್ ಇಬ್ಬರಿಗೂ ಮೈಸೂರು ಭಾಗದಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಆಕ್ಟಿವ್ ಆಗುವುದಕ್ಕೆ ಕರೆ ನೀಡಿದ್ದಾರೆ ಎನ್ನಲಾಗಿತ್ತು.
ಇತ್ತೀಚೆಗೆ ವಿಧಾನ ಸಭಾ ಚುನಾವಣೆಗೂ ಮುನ್ನ ಸ್ವತಂತ್ರ ಅಭ್ಯರ್ಥಿಯಾಗಿರುವ ಸುಮಲತಾ ಬಿಜೆಪಿಗೆ ಬೆಂಬಲ ಸೂಚಿಸಿದ್ದರು. ಮುಂದಿನ ದಿನಗಳಲ್ಲಿ ಅಭಿಷೇಕ್ ಅಂಬರೀಶ್ ಕೂಡ ರಾಜಕೀಯ ಪ್ರವೇಶ ಮಾಡಿದರೆ, ಅಚ್ಚರಿ ಪಡಬೇಕಿಲ್ಲ.


Click it and Unblock the Notifications











