ತೆಲುಗು ವರ್ಷನ್‌ನಲ್ಲಿಯೂ ಬರಲಿದೆ 'ಪೊಗರು' ಚಿತ್ರದ 'ಖರಾಬು' ಹಾಡು
ಧ್ರುವ ಸರ್ಜಾ ನಾಯಕರಾಗಿರುವ 'ಪೊಗರು' ಚಿತ್ರದ 'ಖರಾಬು' ಹಾಡು ಸಾಕಷ್ಟು ಸದ್ದು ಮಾಡುತ್ತಿದೆ. ಬಿಡುಗಡೆಯಾಗಿ ಎರಡು ತಿಂಗಳಲ್ಲಿ ಯೂಟ್ಯೂಬ್‌ನಲ್ಲಿ 31 ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಂಡು ದಾಖಲೆ ಮಾಡಿದೆ. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಸೇರಿದಂತೆ ವಿವಿಧ ಭಾಷೆಯ ಸಿನಿಮಾ ಅಭಿಮಾನಿಗಳೂ ಈ ಹಾಡನ್ನು ಮೆಚ್ಚಿಕೊಂಡಿರುವುದು ವಿಶೇಷ.
ಹಾಡು ಹಿಟ್ ಆದ ಬಗೆಯನ್ನು ಕಂಡು ಪುಳಕಿತಗೊಂಡಿರುವ ಚಿತ್ರತಂಡ, ಹಾಡಿನ ಮೇಕಿಂಗ್ ವಿಡಿಯೋ ಕೂಡ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಈ ನಡುವೆ ಚಿತ್ರತಂಡದಿಂದ ಮತ್ತೊಂದು ಸುದ್ದಿ ಬಂದಿದೆ. ಈ ಹಾಡಿಗೆ ಇರುವ ಬೇಡಿಕೆ ಕಂಡು ತೆಲುಗಿನಲ್ಲಿಯೂ ಹಾಡನ್ನು ಸಿದ್ಧಪಡಿಸಿ ಬಿಡುಗಡೆ ಮಾಡಲು ಮುಂದಾಗಿದೆ. ಮುಂದೆ ಓದಿ...

ತೆಲುಗಿನ ಪ್ರೇಕ್ಷಕರತ್ತ ಗಮನ
ತೆಲುಗಿನ ಅನೇಕರು ಈ ಹಾಡು ಇಷ್ಟಪಟ್ಟು ಕಾಮೆಂಟ್ ಹಾಕುತ್ತಿದ್ದಾರೆ. ಹಾಗಾಗಿ ಈ ಹಾಡನ್ನು ತೆಲುಗಿನಲ್ಲಿಯೂ ಮಾಡಿದರೆ ಮತ್ತಷ್ಟು ಅಭಿಮಾನಿಗಳನ್ನು ಸೆಳೆದುಕೊಳ್ಳಬಹುದು. ಇದರಿಂದ ಚಿತ್ರದ ಪ್ರಮೋಷನ್‌ಗೂ ನೆರವಾಗುತ್ತದೆ ಎನ್ನುವುದು ಚಿತ್ರತಂಡದ ಲೆಕ್ಕಾಚಾರ. ಹೀಗಾಗಿ 'ಖರಾಬು' ಚಿತ್ರದ ತೆಲುಗು ಆವೃತ್ತಿಯೂ ಸಿದ್ಧವಾಗುತ್ತಿದೆ.

ರಶ್ಮಿಕಾ ಮಂದಣ್ಣ ಅಭಿಮಾನಿಗಳು
ಧ್ರುವ ಸರ್ಜಾ ಮತ್ತು ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿರುವ ಈ ಹಾಡು, ತೆಲುಗಿನಲ್ಲಿಯೂ ಹಿಟ್ ಆಗುವ ನಿರೀಕ್ಷೆ ಮೂಡಿಸಿದೆ. ರಶ್ಮಿಕಾ ಮಂದಣ್ಣ ಈಗಾಗಲೇ ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡುವ ಮೂಲಕ ದೊಡ್ಡ ಅಭಿಮಾನಿ ವರ್ಗ ಸಂಪಾದಿಸಿದ್ದಾರೆ. ಹೀಗಾಗಿ ತೆಲುಗಿನ ಪ್ರೇಕ್ಷಕರನ್ನು ಚಿತ್ರದತ್ತ ಆಕರ್ಷಿಸಲು ಇದು ಸಹಾಯ ಮಾಡಲಿದೆ.

ಭಾಸ್ಕರಭಟ್ಲಾ ಸಾಹಿತ್ಯ
ಚಂದನ್ ಶೆಟ್ಟಿ ಈ ಹಾಡಿಗೆ ಸಂಗೀತ ನೀಡಿರುವುದಲ್ಲದೆ ತಾವೇ ಬರೆದು ಹಾಡಿದ್ದಾರೆ. ಕನ್ನಡದಲ್ಲಿ ಸೂಪರ್ ಹಿಟ್ ಆಗಿರುವ ಈ ಹಾಡನ್ನು ತೆಲುಗಿನಲ್ಲಿ 125ಕ್ಕೂ ಹೆಚ್ಚು ಚಿತ್ರಗಳಿಗೆ ಹಾಡು ಬರೆದಿರುವ ಸಾಹಿತಿ ಭಾಸ್ಕರಭಟ್ಲಾ ರವಿಕುಮಾರ್ ರಚಿಸುತ್ತಿದ್ದಾರೆ.

ಅನುರಾಗ್ ಸಿಂಗ್ ಧ್ವನಿ
ತೆಲುಗು ಆವೃತ್ತಿಯ ಗೀತೆಯನ್ನು ಇತ್ತೀಚೆಗೆ ಅಲ್ಲು ಅರ್ಜುನ್ ನಟನೆಯ ಅಲಾ ವೈಕುಂಠಮುರಮುಲೋ' ಚಿತ್ರದಲ್ಲಿ 'ರಾಮುಲೋ ರಾಮುಲೋ' ಹಿಟ್ ಹಾಡು ಹಾಡಿದ್ದ ಅನುರಾಗ್ ಸಿಂಗ್ ಹಾಡಲಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ಈ ಹಾಡು ಬಿಡುಗಡೆಯಾಗುವ ನಿರೀಕ್ಷೆಯಿದೆ.


Click it and Unblock the Notifications










