'ಯುವರತ್ನ'ದ ಸಿಡಿಪಿ ಬಿಡುಗಡೆ: ಹೇಗಿದೆ ಪವರ್ ಸ್ಟಾರ್ ಹೊಸ ಲುಕ್?
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜನ್ಮದಿನ ಮುನ್ನವೇ ಅಭಿಮಾನಿಗಳಲ್ಲಿ ಸಂಭ್ರಮ ಜೋರಾಗಿದೆ. ಈಗಾಗಲೇ ಪುನೀತ್ ಅಭಿಮಾನಿಗಳು ತಮ್ಮ ನೆಚ್ಚಿನ ಹೀರೋಗೆ ಅಭಿನಂದನೆಗಳ ಮಹಾಪೂರ ಹರಿಸಿದ್ದಾರೆ. ಪುನೀತ್ ಸಿನಿಮಾಗಳ ಬಗೆ ಬಗೆಯ ಪೋಸ್ಟರ್‌ಗಳನ್ನು ತಯಾರಿಸಿ ಖುಷಿ ಹಂಚಿಕೊಳ್ಳುತ್ತಿದ್ದಾರೆ.
ಪುನೀತ್ ಅಭಿಮಾನಿಗಳಿಗೆ ಜನ್ಮದಿನದ ಉಡುಗೊರೆ ನೀಡಲು ಕೂಡ ಚಿತ್ರರಂಗ ತಯಾರಿ ನಡೆಸಿದೆ. ಈಗಾಗಲೇ 'ಯುವರತ್ನ' ಚಿತ್ರತಂಡ ಸೋಮವಾರ ಸಂಜೆ ಚಿತ್ರದ ಡೈಲಾಗ್ ಟೀಸರ್ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಹುಟ್ಟುಹಬ್ಬದ ದಿನವಾದ ಮಂಗಳವಾರ 'ಜೇಮ್ಸ್' ಚಿತ್ರತಂಡ ಕೂಡ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳ ಸಂತಸವನ್ನು ಇಮ್ಮಡಿಗೊಳಿಸಲು ಸಿದ್ಧತೆ ನಡೆಸಿದೆ. ಅದಕ್ಕೂ ಮೊದಲೇ 'ಯುವರತ್ನ' ಚಿತ್ರತಂಡ ಮತ್ತೊಂದು ಗಿಫ್ಟ್ ನೀಡಿದೆ.

ಇಂದಿನಿಂದಲೇ ಅಭಿಮಾನಿಗಳಿಗೆ ಹಬ್ಬ
ಪುನೀತ್ ಜನ್ಮದಿನವೆಂದರೆ ಅದು ಅವರ ಅಭಿಮಾನಿಗಳ ಪಾಲಿಗೆ ರಾಜರತ್ನೋತ್ಸವ. ಪ್ರತಿ ದಿನವೂ 'ರಾಜರತ್ನೋತ್ಸವ'ಕ್ಕೆ ದಿನಗಣನೆ ಮಾಡುವ ಪೋಸ್ಟರ್‌ಗಳನ್ನು ಹಾಕಿಕೊಳ್ಳುತ್ತಿದ್ದ ಅಭಿಮಾನಿಗಳು, ಹುಟ್ಟುಹಬ್ಬದ ಸಲುವಾಗಿ ನಮಗೆ ಗಿಫ್ಟ್ ನೀಡುವಂತೆ 'ಯುವರತ್ನ' ಮತ್ತು 'ಜೇಮ್ಸ್' ಚಿತ್ರತಂಡಗಳನ್ನು ಒತ್ತಾಯಿಸಿದ್ದರು. ಪುನೀತ್‌ಗೆ ಶುಭ ಹಾರೈಸುವಲ್ಲಿ ತಮ್ಮ ಸೃಜನಶೀಲತೆಯನ್ನು ಪ್ರದರ್ಶಿಸುತ್ತಿದ್ದಾರೆ.
ಯುವರತ್ನದ ಸಿಡಿಪಿ
'ಯುವರತ್ನ'ದ ಎರಡನೆಯ ಟೀಸರ್ ಬಿಡುಗಡೆ ಮಾಡುವುದಾಗಿ ತಿಳಿಸಿದ್ದ ಚಿತ್ರತಂಡ, ಅದಕ್ಕೂ ಮೊದಲೇ 'ಯುವರತ್ನ'ದ ಸೊಗಸಾದ 'ಸಿಡಿಪಿ' (ಕಾಮನ್ ಡಿಸ್‌ಪ್ಲೇ ಪಿಕ್ಚರ್) ಬಿಡುಗಡೆ ಮಾಡಿದೆ. ಪುನೀತ್ ಅಭಿಮಾನಿಗಳು, ಅವರ ಫ್ಯಾನ್ ಫಾಲೋಯಿಂಗ್ ಪೇಜ್‌ಗಳು ಈ ಸಿಡಿಪಿಯನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಾಕಿಕೊಳ್ಳುತ್ತಿದ್ದಾರೆ.

ಅಪ್ಪು ಗೆಟಪ್ ಲುಕ್
ಪುನೀತ್ ರಾಜ್‌ಕುಮಾರ್ 18 ವರ್ಷಗಳ ಹಿಂದೆ ಮೊದಲು ನಾಯಕರಾಗಿ ನಟಿಸಿದ್ದ 'ಅಪ್ಪು' ಚಿತ್ರದ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಚಿತ್ರತಂಡ ಮಾಹಿತಿ ನೀಡಿತ್ತು. ಆ ಸಿನಿಮಾವನ್ನು ನೆನಪಿಸುವ ಲುಕ್ ಈ ಸಿಡಿಪಿಯಲ್ಲಿದೆ. ಕರ್ನಾಟಕದ ಧ್ವಜದ ಎರಡು ಬಣ್ಣಗಳು, ಅದರ ಹಿನ್ನೆಲೆಯಲ್ಲಿ ಪುನೀತ್ ಅವರ ವಿವಿಧ ಸಿನಿಮಾಗಳ ಕಟೌಟ್ ಹಾಗೂ ಪೋಸ್ಟರ್ ಚಿತ್ರಗಳನ್ನು ಬಳಸಲಾಗಿದೆ.

ಬಾಕ್ಸ್ ಆಫೀಸ್ ಬಾದ್‌ಷಾ
'ಹ್ಯಾಪಿ ಬರ್ಥಡೇ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್' ಎಂದು ಶುಭ ಹಾರೈಸಿದ್ದು, ಪುನೀತ್ ಅವರನ್ನು ಬಾಕ್ಸ್ ಆಫೀಸ್ ಬಾದ್‌ಷಾ ಎಂಬ ಬಿರುದು ನೀಡಿ ಶ್ಲಾಘಿಸಲಾಗಿದೆ. ನಿರ್ದೇಶಕ ಸಂತೋಷ್ ಆನಂದರಾಮ್ ಈ ಹೊಸ ಪ್ರೊಫೈಲ್ ಪಿಕ್ಚರ್ ರಿಲೀಸ್ ಮಾಡಿದ ಕೆಲವೇ ನಿಮಿಷಗಳಲ್ಲಿ ಅದು ನೂರಾರು ಷೇರ್ ಆಗಿದ್ದು,ಅನೇಕರು ತಮ್ಮ ಡಿಪಿಯನ್ನಾಗಿ ಬದಲಿಸಿಕೊಂಡಿದ್ದಾರೆ.

ಡೈಲಾಗ್ ಟೀಸರ್ ಹಬ್ಬ
ಹೊಂಬಾಳೆ ಫಿಲಂಸ್ ನಿರ್ಮಾಣದ ಯುವರತ್ನ ಚಿತ್ರದ ಡೈಲಾಗ್ ಪೋಸ್ಟರ್ ಸೋಮವಾರ ಸಂಜೆ 6.03ಕ್ಕೆ ಬಿಡುಗಡೆಯಾಗಲಿದೆ. ಇದು ಪವರ್ ಪ್ಯಾಕ್ಡ್ ಡೈಲಾಗ್ ಟೀಸರ್ ಎಂದು ಚಿತ್ರತಂಡ ಹೇಳಿದ್ದು, ಇದು ಎಲ್ಲ ಪವರ್ ಸ್ಟಾರ್ ಫ್ಯಾನ್ಸ್‌ಗೆ ಅರ್ಪಣೆ ಮಾಡುತ್ತಿರುವುದಾಗಿ ತಿಳಿಸಿದೆ. #HBDPowerstar ಎಂಬ ಹ್ಯಾಷ್ ಟ್ಯಾಗ್ ಟ್ರೆಂಡಿಂಗ್‌ನಲ್ಲಿದೆ.


Click it and Unblock the Notifications











