ಖದರ್ ಇಲ್ಲದ ಕಡೆ ನಮ್ ಹುಡುಗರೇ ಓಡಾಡೊಲ್ಲ, ಇನ್ನು ನಾನು ಇರ್ತೀನಾ?: 'ಪವರ್'ಫುಲ್ ಡೈಲಾಗ್
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜನ್ಮದಿನದ ಪ್ರಯುಕ್ತ ಒಂದು ದಿನ ಮೊದಲೇ ಹುಟ್ಟುಹಬ್ಬದ ಸಂಭ್ರಮಕ್ಕೆ ಭರ್ಜರಿ ಪಟಾಕಿ ಸದ್ದನ್ನು ಮೊಳಗಿಸಿದೆ 'ಯುವರತ್ನ' ಚಿತ್ರ. ಅಭಿಮಾನಿಗಳಿಗೆ ನೀಡಿದ್ದ ಭರವಸೆಯಂತೆಯೇ 'ಪವರ್ ಫುಲ್ ಡೈಲಾಗ್'ಗಳನ್ನು ಒಳಗೊಂಡಿರುವ ಸಂಭಾಷಣೆಯ ಟೀಸರ್‌ಅನ್ನು ಬಿಡುಗಡೆಗೊಳಿಸಿದೆ.
ಕೊಟ್ಟ ಮಾತಿನಂತೆ 'ಯುವರತ್ನ' ಚಿತ್ರ ಬಳಗ ಸಂಜೆ 6.03ಕ್ಕೆ ಈ ಪವರ್ ಪ್ಯಾಕ್ಡ್ ಡೈಲಾಗ್ ಟೀಸರ್‌ಅನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದೆ. ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ 10 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಸಾವಿರಾರು ಲೈಕ್‌ಗಳೂ ಸಿಕ್ಕಿವೆ. ಇದರಿಂದ ಅಭಿಮಾನಿಗಳ ಬಯಕೆ ಸಂಪನ್ನವಾದಂತಾಗಿದೆ. ಶೀರ್ಷಿಕೆಯೇ ಹೇಳುವಂತೆ ಡೈಲಾಗ್‌ಗಳಲ್ಲಿ ಸಾಕಷ್ಟು ಪವರ್ ಮತ್ತು ಖದರ್ ಅನ್ನು ತುಂಬಿಸಿರುವುದು ಮನರಂಜನೆಯ ಮಳೆಯನ್ನೇ ಸುರಿಸಿದಂತಾಗಿದೆ. 'ಯುವರತ್ನ'ದ ಡೈಲಾಗ್‌ಗಳು ಹೇಗಿವೆ? ಮುಂದೆ ಓದಿ...

1.39 ನಿಮಿಷದ ಟೀಸರ್
'ಗಂಡಸ್ತನ ಛರ್ಬಿ ಮೀಟರ್ ಮಾರ್ಕೆಟ್ ಇವೆಲ್ಲ ಇರುವವನು ಬೇಕು? ಸಿಗ್ತಾನಾ' ಎಂದು 'ಡಾಲಿ' ಧನಂಜಯ್ ಕೇಳುವುದರೊಂದಿಗೆ ಡೈಲಾಗ್ ಟೀಸರ್ ತೆರೆದುಕೊಳ್ಳುತ್ತದೆ. ಈ 1.39 ನಿಮಿಷದ ಟೀಸರ್‌ನಲ್ಲಿ ಪುನೀತ್ ರಾಜ್‌ಕುಮಾರ್, ಡಾಲಿ ಧನಂಜಯ್ ಮತ್ತು ನಾಯಕಿ ಸಯ್ಯೇಶಾ ಸೈಗಲ್ ಕಾಣಿಸಿಕೊಂಡಿದ್ದಾರೆ.

ಸೀಟ್‌ಗಾಗಿ ಹೊಡೆದಾಡೋನು ಡಾನ್...
'ಕಾಲೇಜಲ್ಲಿ ಹೊಡೆದಾಡಿ ಡಾನ್ ಆಗ್ಬೇಕು ಅಂದ್ಕೊಂಡಿದ್ದೀಯಾ?' 'ಸೀಟ್‌ಗಾಗಿ ಹೊಡೆದಾಡೋನು ಡಾನ್, ಅದರ ಮೇಲೆ ಕುಳಿತುಕೊಳ್ಳೋನು...' (ಕಿಂಗ್ ಇಸ್ಪೀಟ್ ಎಲೆ ಪ್ರದರ್ಶನವಾಗುತ್ತದೆ) ಡೈಲಾಗ್ ಕಿಕ್ ಕೊಡುತ್ತವೆ.

ನನ್ನನ್ನು ಅಣ್ಣ ಅಂದ್ಕೋಬೇಡಿ
'ನೀವು ನೋಡೋಕೆ ಅಣ್ಣಾವ್ರ ಥರಾನೇ ಇದ್ದೀರಾ', 'ಥ್ಯಾಂಕ್ಯೂ, ಆದರೆ ನನ್ನನ್ನು ಅಣ್ಣ ಅಂದ್ಕೋಬೇಡಿ', 'ಖದರ್ ಇಲ್ಲದ ಕಡೆ ನಮ್ ಹುಡುಗರೇ ಓಡಾಡೊಲ್ಲ, ಇನ್ನು ನಾನು ಇರ್ತೀನಾ' ಎಂದು ಸಂಭಾಷಣೆಗಳು ಕಚಗುಳಿ ಇರಿಸುತ್ತವೆ.

ನಾವ್ ನಂಬಿಕೆ ಕಳೆದುಕೊಂಡಿಲ್ಲ...
'ಆರ್‌ಸಿಬಿ ಮ್ಯಾಚ್ ಗೆಲ್ಬೋದು, ಕಪ್ ಗೆಲ್ಲೋಕೆ ಆಗೊಲ್ಲ', 'ನಾವ್ ನಂಬಿಕೆ ಕಳೆದುಕೊಂಡಿಲ್ಲ, ಕಳೆದುಕೊಳ್ಳೋದೂ ಇಲ್ಲ'. 'ಬ್ಯಾಟ್ ಬಾಲ್ ಇದೆಯೆಂದು ಫೀಲ್ಡಿಗೆ ಇಳಿದೋನಲ್ಲ ನಾನು, ಹೊಡಿತೀವಿ ಅಂತ ಕಾನ್ಫಿಡೆನ್ಸ್ ಇರೋದ್ರಿಂದಲೇ ಫೀಲ್ಡಿಗೆ ಇಳಿತಿರೋದು' ಡೈಲಾಗ್‌ಗಳು ಆರ್‌ಸಿಬಿ ಅಭಿಮಾನಿಗಳಿಗೆ ಖುಷಿ ಕೊಡುವಂತಿವೆ.

ಅಭಿಮಾನಿಗಳಿಗೆ ಹಬ್ಬದೂಟ
ಪುನೀತ್ ತಮ್ಮ ಹಳೆಯ 'ಅಪ್ಪು' ಲುಕ್‌ಅನ್ನು ನೆನಪಿಸಿದ್ದಾರೆ. ಅಲ್ಲದೆ 'ಮೌರ್ಯ' ಚಿತ್ರದ ಬಾಕ್ಸಿಂಗ್ ದೃಶ್ಯವನ್ನೂ ನೆನಪಿಗೆ ತಂದಿದ್ದಾರೆ. ಇದು ಡೈಲಾಗ್ ಟೀಸರ್ ಎಂದಿದ್ದರೂ ಕಣ್ಣಿಗೆ ಹಬ್ಬ ಉಂಟುಮಾಡುವ ದೃಶ್ಯಗಳು, ಹಿನ್ನೆಲೆ ಸಂಗೀತವೂ ಇದೆ. ಒಟ್ಟಿನಲ್ಲಿ ಅಪ್ಪು ಅಭಿಮಾನಿಗಳಿಗೆ 'ಯುವರತ್ನ'ದ ಟೀಸರ್ ರಸದೌತಣ ನೀಡಿದೆ.


Click it and Unblock the Notifications











