ರಿಷಬ್ ಶೆಟ್ಟಿಗೆ ಮುದ್ದು ಮಗನ ಮುದ್ದಾದ ಬರ್ಥಡೇ ವಿಶ್ ಹೇಗಿದೆ ನೋಡಿ...
ಕನ್ನಡದ ಹೆಸರಾಂತ ನಿರ್ದೇಶಕ, ನಟ ರಿಷಬ್ ಶೆಟ್ಟಿ ಮಂಗಳವಾರವಷ್ಟೇ 37ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಚಿತ್ರರಂಗದ ಅನೇಕ ನಟ, ನಟಿಯರು, ನಿರ್ದೇಶಕರು ಮತ್ತು ತಂತ್ರಜ್ಞರು 'ಡಿಟೆಕ್ಟಿವ್ ದಿವಾಕರ'ನಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ.
Recommended Video
ರಿಷಬ್ ಶೆಟ್ಟಿ ಜನ್ಮದಿನದ ಅಂಗವಾಗಿ ವಿಶೇಷ ಕಾಮನ್ ಡಿಪಿ ತಯಾರಿಸುವ ಮೂಲಕ ನಿರ್ದೇಶಕ ಕೃಷ್ಣ ಸರ್ಪ್ರೈಸ್ ನೀಡಿದ್ದರು. ಅಭಿಮಾನಿಗಳು ಕೂಡ ವಿವಿಧ ರೀತಿಯಲ್ಲಿ ತಮ್ಮ ಸೃಜನಶೀಲತೆ ಪ್ರದರ್ಶಿಸುವ ಮೂಲಕ ರಿಷಬ್ ಅವರಿಗೆ ಶುಭ ಹಾರೈಸಿದ್ದರು. ಆದರೆ ಈ ಎಲ್ಲ ಶುಭಾಶಯಗಳ ನಡುವೆ ವಿಶೇಷವಾಗಿರುವುದು ರಿಷಬ್ ಶೆಟ್ಟಿ ಮಗ ರಣ್ವಿತ್ ಶೆಟ್ಟಿಯ ಶುಭ ಹಾರೈಕೆ. ಇತ್ತೀಷೆಗಷ್ಟೇ ಒಂದು ವರ್ಷ ತುಂಬಿದ ಪುಟಾಣಿ, ಅಪ್ಪನಿಗೆ ಅದು ಹೇಗೆ ಶುಭಾಶಯ ಕೋರಿದೆ ಎಂಬ ಕುತೂಹಲವೇ? ಮುಂದೆ ಓದಿ...

ಮಗನ ಭಾವಕ್ಕೆ ಅಮ್ಮನ ಪದ
ರಿಷಬ್ ಶೆಟ್ಟಿ ಮಗ ರಣ್ವಿತ್ ಶೆಟ್ಟಿಯ ಶುಭ ಹಾರೈಕೆ ಅದರ ತೊದಲು ಮಾತಿನಲ್ಲಿದೆ. ಇನ್ನೂ ಸರಿಯಾಗಿ ಹೆಜ್ಜೆ ಇಡಲು ಬಾರದೆ ತಪ್ಪಿ ಬೀಳುವಂತೆ ಇದೆ. ಆದರೂ ಹಾರೈಕೆಯಲ್ಲಿನ ಭಾವಗಳು ತಪ್ಪಿಲ್ಲ. ಅಂದಹಾಗೆ, ರಣ್ವಿತ್‌ನ ಭಾವಗಳನ್ನು ಗ್ರಹಿಸಿ ಶುಭ ಹಾರೈಕೆಗೆ ಪದ ಪೋಣಿಸಿರುವುದು ಈ ಪುಟಾಣಿಯ ಅಮ್ಮ ಪ್ರಗತಿ ಶೆಟ್ಟಿ.

ನಡೆಸಲು ನೀನಿಹೆಯಲ್ಲ...
ಮುದ್ದು ಕಂದನ ಪರವಾಗಿ ರಿಷಬ್ ಅವರಿಗೆ ಪ್ರಗತಿ ಶೆಟ್ಟಿ ಬರೆದಿರುವ ಜನ್ಮದಿನದ ಶುಭ ಹಾರೈಕೆಯ ಬರಹ ಗಮನ ಸೆಳೆಯುತ್ತದೆ. 'ಇನ್ನೂ ಮಾತಿನಲ್ಲಿ ತೊದಲಿದೆ. ಆದರೆ ಭಾವನೆಯಲ್ಲಲ್ಲ... ಇನ್ನೂ ಹೆಜ್ಜೆಗಳು ತಪ್ಪುತ್ತಿವೆ... ನಡೆಸಲು ನೀನಿಹೆಯಲ್ಲ...' ಎಂದು ಮಗನ ಒಳಧ್ವನಿಗೆ ಪದಭಾವ ನೀಡಿದ್ದಾರೆ ಪ್ರಗತಿ.

ನಿಮ್ಮ ನಗುವಲ್ಲಿ ಮನೆ ಕಟ್ಟಿರುವೆ
'ನಿನ್ನ ಭುಜದ ಮೇಲೊಂದು ನೆಮ್ಮದಿಯ ನಿದ್ದೆ.. ನಿನ್ನ ಕಥೆಯ ಕೇಳುತ್ತಿದ್ದೆ. ನೀನಿರುವಲ್ಲಿ ನನಗೊಂದು ಪ್ರಪಂಚ, ನಿನ್ನ ನಗುವಿನಲ್ಲಿ ಒಂದು ಮನೆಯ ಕಟ್ಟಿರುವೆ... ಪಪ್ಪ ಹ್ಯಾಪಿ ಬರ್ಥಡೇ' ಎಂದು ಚೆಂದದ ಸಾಲುಗಳಲ್ಲಿ ಜನ್ಮದಿದ ಶುಭಾಶಯ ಕೋರಿದ್ದಾರೆ.

ನಿಮ್ಮಂತಾಗಲು ಬಯಸಿದ್ದೇನೆ
'ನೀನು ನನ್ನ ಹೀರೋ, ನನ್ನ ರೋಲ್ ಮಾಡೆಲ್, ನಾನು ಯಾವಾಗಲೂ ನೋಡಲು ಬಯಸುವ ಮತ್ತು ನಾನು ಮುಂದೆ ಆಗಲು ಬಯಸುವ ವ್ಯಕ್ತಿ ನೀವು' ಎಂಬ ಮಗನ ಪರವಾಗಿ ಪ್ರಗತಿ ಶೆಟ್ಟಿ ಇನ್‌ಸ್ಟಾಗ್ರಾಂನಲ್ಲಿ ಬರೆದಿದ್ದಾರೆ.

ಬೆಳಕು ಮತ್ತು ಹೊಳಪು
ಪ್ರಗತಿ ಶೆಟ್ಟಿ ತಮ್ಮ ಭಾವನೆಗಳನ್ನೂ ಮತ್ತೊಂದು ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. 'ನನ್ನ ಬದುಕನ್ನು ಅನೇಕ ರೀತಿಗಳಲ್ಲಿ ಬದಲಿಸಿದ್ದಕ್ಕೆ ಧನ್ಯವಾದಗಳು. ನೀವು ನನಗೆ ಎಲ್ಲವೂ. ನನ್ನ ಅಮೂಲ್ಯ ರತ್ನ. ನನ್ನ ಜೀವನದಲ್ಲಿ ಸಂತೋಷ ಹಾಗೂ ಪ್ರೀತಿಯ ಬೆಳಕು ಮತ್ತು ಹೊಳಪು ನೀಡಿದ್ದಕ್ಕೆ ಧನ್ಯವಾದಗಳು. ಆ ಚಂದ್ರನಷ್ಟು ಪ್ರೀತಿಸುತ್ತೇನೆ' ಎಂದು ವರ್ಣಿಸಿದ್ದಾರೆ.


Click it and Unblock the Notifications











