'ಕರಾವಳಿ'ಯಲ್ಲಿ "ಮುದ್ದು ಗುಮ್ಮ.."ನದ್ದೇ ಸದ್ದು; ಪ್ರಜ್ವಲ್ ದೇವರಾಜ್-ಸಂಪದಾ ಸಾಂಗ್ ಟ್ರೆಂಡಿಂಗ್
'ಕಾಂತಾರ' ಸಿನಿಮಾ ಬಳಿಕ ಕರಾವಳಿ ಭಾಗದ ಕಥೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ಭಾಗದ ಕಥೆಗಳು ಸಿನಿಮಾಗಳಾಗಿ ರೂಪುಗೊಳ್ಳುತ್ತಿವೆ. ಎಲ್ಲಕ್ಕಿಂತ ಹೆಚ್ಚಾಗಿ ಅಂತಹ ಸಿನಿಮಾಗಳನ್ನು ಪ್ರೇಕ್ಷಕರು ಖುಷಿಯಿಂದ ವೀಕ್ಷಿಸುತ್ತಿರೋದು ಮತ್ತೊಂದು ಸಂಗತಿ. 'ಕಾಂತಾರ', 'ಸು ಫ್ರಮ್ ಸೋ', 'ಕಾಂತಾರ ಚಾಪ್ಟರ್ 1' ಬಳಿಕ ಮತ್ತೊಂದು ಸಿನಿಮಾ ಈ ಭಾಗದ ಕತೆಯನ್ನು ಹೇಳುವುದಕ್ಕೇ ಹೊರಟಿದೆ. ಅದುವೇ 'ಕರಾವಳಿ'.
ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್, ರಾಜ್ ಬಿ ಶೆಟ್ಟಿ ಹಾಗೂ ಸಂಪದಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಕರಾವಳಿ ಸದ್ದು ಮಾಡುವುದಕ್ಕೆ ಶುರು ಮಾಡಿದೆ. ಗುರುದತ್ ಗಾಣಿಗ ಸಿನಿಮಾ ಮುಗಿಸಿ ಬಿಡುಗಡೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇದರ ಹಿಂದೇನೆ 'ಕರಾವಳಿ' ಸಿನಿಮಾದ "ಮುದ್ದು ಗುಮ್ಮ...ಮುದ್ದು ಗುಮ್ಮ ನೀನೇನಾ.." ಅನ್ನೋ ಹಾಡು ರಿಲೀಸ್ ಆಗಿದ್ದು, ಟ್ರೆಂಡಿಂಗ್‌ನಲ್ಲಿದೆ.

ಸದ್ಯಕ್ಕೀಗ ಸ್ಯಾಂಡಲ್‌ವುಡ್‌ನಲ್ಲಿ 'ಕರಾವಳಿ' ಸಿನಿಮಾದ ಹಾಡು ನೋಡುಗರ ಹಾಗೂ ಕೇಳುಗರ ಕಿವಿಗಳನ್ನು ಇಂಪಾಗಿಸುತ್ತಿದೆ. ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ ಶೆಟ್ಟಿ ನಟನೆಯ 'ಕರಾವಳಿ' ಸಿನಿಮಾದಿಂದ ರಿಲೀಸ್ ಆಗಿರುವ "ಮುದ್ದು ಗುಮ್ಮ.." ಹಾಡು ಈಗಾಗಲೇ ಗಾನಪ್ರಿಯ ಹೃದಯ ಗೆದ್ದಿದೆ. ತೆಲುಗಿನ ಜನಪ್ರಿಯ ಗಾಯಕ ಸಿದ್ ಶ್ರೀರಾಮ್ ಈ ಹಾಡನ್ನು ಹಾಡಿರೋದು ಮತ್ತೊಂದು ವಿಶೇಷ. ಹೀಗಾಗಿ 'ಕರಾವಳಿ'ಯ ಈ ಮೆಲೋಡಿ ಹಾಡು ಮತ್ತೊಂದು ಬ್ಲಾಕ್ ಬಸ್ಟರ್ ಲಿಸ್ಟ್ ಸೇರುವ ಎಲ್ಲಾ ಲಕ್ಷಣಗಳು ಇವೆ.
'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾದ ನಿರ್ದೇಶಕ ಗುರುದತ್ ಗಾಣಿಗ 'ಕರಾವಳಿ'ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಸ್ಯಾಂಡಲ್‌ವುಡ್‌ನಲ್ಲಿ ಸಿಕ್ಕಾಪಟ್ಟೆ ನಿರೀಕ್ಷೆಗಳನ್ನು ಹುಟ್ಟಾಕಿರುವ ಕನ್ನಡದ ಸಿನಿಮಾ ಆಗಿದ್ದು, ಹೊಸ ಹಾಡು ಅದಕ್ಕೆ ಸಾಥ್ ಕೊಟ್ಟಿದೆ. ಗುರುದತ್ ಗಾಣಿಗ ಈಗಾಗಲೇ 'ಕರಾವಳಿ' ಸಿನಿಮಾದ ಟೀಸರ್ ಹಾಗೂ ಪೋಸ್ಟರ್‌ಗಳನ್ನು ರಿಲೀಸ್ ಮಾಡಿದ್ದಾರೆ. ಅವುಗಳು ಸಿಕ್ಕಾಪಟ್ಟೆ ನಿರೀಕ್ಷೆಗಳನ್ನು ಹುಟ್ಟಾಕಿವೆ.
ಇಲ್ಲಿವರೆಗೂ ಟೀಸರ್, ಪೋಸ್ಟರ್ ನೋಡಿದ್ದ ಸಿನಿಪ್ರಿಯರನ್ನು ಸಿನಿಮಾದ ಮೊದಲ ಹಾಡು ರೊಮ್ಯಾಂಟಿಕ್ ಮೂಡಿಗೆ ಕರೆದುಕೊಂಡು ಹೋಗಿದೆ. ಈಗ ರಿಲೀಸ್ ಆಗಿರುವ ಈ ರೊಮ್ಯಾಂಟಿಂಕ್ ಹಾಡಿನಲ್ಲಿ ಪ್ರಜ್ವಲ್ ದೇವರಾಜ್ ಮತ್ತು ಸಂಪದಾ ನಟಿಸಿದ್ದು ಸಿಕ್ಕಾಪಟ್ಟೆ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾಗೆ ಸಚಿನ್ ಬಸ್ರೂರು ಸಂಗೀತ ನೀಡಿದ್ದು, "ಮುದ್ದು ಗುಮ್ಮ.." ಸಾಂಗ್‌ಗೆ ಪ್ರಮೋದ್ ಮರವಂತೆ ಸಾಹಿತ್ಯ ರಚಿಸಿದ್ದಾರೆ.

ಪುಟ್ಟ ಟೀಸರ್ ಮೂಲಕವೇ ಭಾರಿ ಕುತೂಹಲ ಮತ್ತು ನಿರೀಕ್ಷೆ ಮೂಡಿಸಿರುವ ಕರಾವಳಿ ಇದೀಗ ಮೆಲೋಡಿ ರೊಮ್ಯಾಂಟಿಕ್ ಹಾಡನ್ನ ರಿಲೀಸ್ ಮಾಡಿ ಕಾತರವನ್ನು ಮತ್ತಷ್ಟು ಹೆಚ್ಚಿಸಿದೆ. ಸಿನಿಮಾ ಯಾವಾಗ ಎಂದು ನೋಡುವುದಕ್ಕೆ ಸಿನಿಮಾ ಅಭಿಮಾನಿಗಳು ಕಾಯುತ್ತಿದ್ದಾರೆ. ಇನ್ನೇನು ಸದ್ಯದಲ್ಲೇ ಈ ಸಿನಿಮಾ ಚಿತ್ರಮಂದಿರಕ್ಕೆ ಎಂಟ್ರಿ ಕೊಡಲಿದೆ. 'ಕರಾವಳಿ' ಹೆಸರೇ ಹೇಳುವ ಹಾಗೆ ಅಲ್ಲಿನ ಸಂಸ್ಕೃತಿ, ಸೊಗಡಿನ ಬಗ್ಗೆ ಇರುವ ಸಿನಿಮಾ ಇದಾಗಿದೆ.
'ಕರಾವಳಿ' ಸಿನಿಮಾದ ಪ್ರಮುಖ ಪಾತ್ರದಲ್ಲಿ ಪ್ರಜ್ವಲ್ ಜೊತೆ ರಾಜ್ ಬಿ ಶೆಟ್ಟಿ ಇರೋದು ಚಿತ್ರತಂಡಕ್ಕೆ ಬಲಕೊಟ್ಟಿದೆ. ಮಾವೀರ ಎನ್ನುವ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ನಟಿಸಿದ್ದಾರೆ. ಇನ್ನೂ ಉಳಿದಂತೆ ಸಿನಿಮಾದ ಪವರ್ ಫುಲ್ ಪಾತ್ರದಲ್ಲಿ ನಟ ಮಿತ್ರ, ರಮೇಶ್ ಇಂದಿರ, ಶ್ರೀಧರ್ ಜೊತೆಗೆ ನಾಯಕಿಯಾಗಿ ಸಂಪದಾ ಕಾಣಿಸಿಕೊಂಡಿದ್ದಾರೆ.
'ಕರಾವಳಿ'ಯನ್ನು ಗುರುದತ್ ಗಾಣಿಗ ನಿರ್ದೇಶನ ಅಷ್ಟೇ ಮಾಡುತ್ತಿಲ್ಲ. ಬದಲಾಗಿ ವಿಕೆ ಫಿಲ್ಮಂ ಅಸೋಸಿಯೇಷನ್‌ನಲ್ಲಿ ತಮ್ಮದೇ ಗಾಣಿಗ ಫಿಲ್ಮ್ಸ್‌ನಲ್ಲಿ ಬ್ಯಾನರ್‌ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. 'ಕರಾವಳಿ' ಮನುಷ್ಯ ಹಾಗೂ ಪ್ರಾಣಿ ಮಧ್ಯೆ ನಡೆಯುವ ಸಂಘರ್ಷದ ಕಥೆ. ಪಕ್ಕಾ ಹಳ್ಳಿ ಬ್ಯಾಕ್ ಡ್ರಾಪ್‌ನಲ್ಲಿ ಸಿನಿಮಾ ಮೂಡಿ ಬಂದಿದೆ. ಅಭಿಮನ್ಯೂ ಸದಾನಂದನ್ ಕ್ಯಾಮರಾ ಮೊದಲನೇ ಹಾಡಿನಲ್ಲಿ ಎದ್ದು ಕಾಣುತ್ತಿದೆ.


Click it and Unblock the Notifications











