'ಮಾಫಿಯಾ' ಲೋಕದಲ್ಲಿ ಡೈನಾಮಿಕ್ ಪ್ರಿನ್ಸ್: ಬರ್ತ್‌ಡೇಗೆ ಹೊಸ ಪೋಸ್ಟರ್ ರಿಲೀಸ್
ಸ್ಯಾಂಡಲ್‌ವುಡ್ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಕೆಲವು ವರ್ಷಗಳ ಬಳಿಕ ಮತ್ತೆ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ತಮ್ಮ ಅಭಿಮಾನಿಗಳನ್ನು ತಮ್ಮ ಮನೆಗೆ ಆಹ್ವಾನ ನೀಡಿದ್ದರು.
ಅದಂತೆ ಇಂದು (ಜುಲೈ 4) ಪ್ರಜ್ವಲ್ ದೇವರಾಜ್ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಬಹಳ ದಿನಗಳ ಬಳಿಕ ತಮ್ಮ ನೆಚ್ಚಿನ ನಟನನ್ನು ನೋಡಿ, ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ.

ಇದೇ ಸಂದರ್ಭದಲ್ಲಿ ಪ್ರಜ್ವಲ್ ದೇವರಾಜ್ ನಟಿಸುತ್ತಿರುವ ಸಿನಿಮಾಗಳ ಹೊಚ್ಚ ಹೊಸ ಪೋಸ್ಟರ್‌ಗಳು ಹೊರಬಿದ್ದಿದೆ. ಹುಟ್ಟುಹಬ್ಬದ ಉಡುಗೊರೆಯಾಗಿ ಪ್ರಜ್ವಲ್ ದೇವರಾಜ್ ನಟಿಸುತ್ತಿರುವ 'ಮಾಫಿಯಾ' ಸಿನಿಮಾ ತಂಡ ಹೊಚ್ಚ ಹೊಸ ಪೋಸ್ಟರ್ ಅನ್ನು ರಿಲೀಸ್ ಮಾಡಿದೆ.
'ಮಾಫಿಯಾ' ಸಿನಿಮಾವನ್ನು ಕುಮಾರ್ ಬಿ ಎಂಬುವವರ ನಿರ್ಮಿಸುತ್ತಿದ್ದು, ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಲೋಹಿತ್ ಹೆಚ್ ನಿರ್ದೇಶನ ಮಾಡಿದ್ದಾರೆ. ಪ್ರಜ್ವಲ್ ಬರ್ತ್‌ಡೇಗೆಂದು ಹೊಸ ಮಾಸ್ ಪೋಸ್ಟರ್ ಅನ್ನು ರಿಲೀಸ್ ಮಾಡಿದ್ದಾರೆ.
ಅಂದ್ಹಾಗೆ 'ಮಾಫಿಯಾ' ಸಿನಿಮಾದ ಶೂಟಿಂಗ್ ಮುಕ್ತಾಯಗೊಂಡಿದೆ. ಸದ್ಯ ಇಡೀ ಚಿತ್ರತಂಡ ಪೋಸ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಈ ಸಿನಿಮಾವನ್ನು ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.
'ಮಾಫಿಯಾ' ಪ್ರಜ್ವಲ್ ದೇವರಾಜ್ ವೃತ್ತಿ ಬದುಕಿನಲ್ಲಿ ನಿರ್ಮಾಣ ಆಗುತ್ತಿರುವ ದುಬಾರಿ ಸಿನಿಮಾಗಳಲ್ಲೊಂದು. ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿರುವುದರಿಂದ ದುಬಾರಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಆಕ್ಷನ್ ಪ್ರಿಯರಿಗೆ ಈ ಸಿನಿಮಾ ಸಖತ್ ಕಿಕ್ ಕೊಡಲಿದೆ ಅನ್ನೋ ನಂಬಿಕೆ ಚಿತ್ರತಂಡದ್ದು.
'ಮಾಫಿಯಾ' ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಪ್ರಜ್ವಲ್ ನಟನೆಯ ಮೂವತ್ತೈದನೇ ಸಿನಿಮಾವೂ ಹೌದು.
ಇದರಲ್ಲಿ ಮೂರು ಹಾಡುಗಳಿವೆ. ಅನೂಪ್ ಸೀಳಿನ್ ಸಂಗೀತ ನೀಡಿದ್ದು, ಎಸ್ ಪಾಂಡಿಕುಮಾರ್ ಕ್ಯಾಮರಾ ವರ್ಕ್ ಇದೆ. ಪ್ರಜ್ವಲ್ ದೇವರಾಜ್ ಜೊತೆ ಅದಿತಿ ಪ್ರಭುದೇವ, ದೇವರಾಜ್ , ಸಾಧುಕೋಕಿಲ, ಶೈನ್ ಶೆಟ್ಟಿ, ವಿಜಯ್ ಚೆಂಡೂರ್, ವಾಸುಕಿ ವೈಭವ್ ಮುಂತಾದವರು ನಟಿಸಿದ್ದಾರೆ.


Click it and Unblock the Notifications











