'ಪೆನ್‌ಡ್ರೈವ್' ಸಿನಿಮಾ ಬಿಗ್‌ಬಾಸ್ 'ಬೆಂಕಿ' ತನಿಷಾ ಕುಪ್ಪಂಡ; ಏನಿದು ಕಥೆ?
ರಾಜ್ಯದಲ್ಲಿ ಎರಡು ಪ್ರಕರಣಗಳು ಸದ್ದು ಮಾಡಿವೆ. ಒಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಂಧನ. ಇನ್ನೊಂದು ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಕೇಸ್. ಈ ಎರಡೂ ಪ್ರಕರಣಗಳು ಜೋರಾಗಿ ಸದ್ದು ಮಾಡುತ್ತಿದ್ದರೆ, ಇತ್ತ ಫಿಲ್ಮ್ ಚೇಂಬರ್‌ನಲ್ಲಿ ಟೈಟಲ್ ವಿಚಾರಕ್ಕೆ ಸಿಕ್ಕಾಪಟ್ಟೆ ಟೆನ್ಷನ್ ಶುರುವಾಗಿದೆ. ಈ ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಟೈಟಲ್ ರಿಜಿಸ್ಟರ್ ಮಾಡಿಸುವುದಕ್ಕೆ ಫಿಲ್ಮ್ ಮೇಕರ್ಸ್ ತುದಿಗಾಲಲ್ಲಿ ನಿಂತಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಈ ಪ್ರಕರಣಕ್ಕೆ ಸಂಬಂಧಿಸಿದ ಟೈಟಲ್ ನೊಂದಣಿಗೆ ಅವಕಾಶ ಕೊಡುತ್ತಿಲ್ಲವಾದರೂ, ಗ್ಯಾಪ್‌ನಲ್ಲಿ 'ಪೆನ್‌ಡ್ರೈವ್' ಅನ್ನೋ ಶೀರ್ಷಿಕೆ ಇಟ್ಟು ಸಿನಿಮಾ ಮಾಡುವುದಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಬಿಗ್‌ಬಾಸ್ ಕನ್ನಡ ಸೀಸನ್ 10 ಸ್ಪರ್ಧಿ ತನಿಷಾ ಕುಪ್ಪಂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಹಾಗಂತ ಈ 'ಪೆನ್‌ಡ್ರೈವ್' ಸಿನಿಮಾಗೂ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಚಿತ್ರತಂಡ ಹೇಳಿಕೊಂಡಿದೆ. ಹಾಗಿದ್ಮೇಲೆ ಈ ಸಿನಿಮಾಗೆ 'ಪೆನ್‌ಡ್ರೈವ್' ಅಂತಲೇ ಟೈಟಲ್ ಇಟ್ಟಿರುವುದ್ಯಾಕೆ? ಈ ಸಿನಿಮಾದ ಕಥೆಯೇನು? ಅನ್ನುವುದನ್ನು ತಿಳಿಯುದಕ್ಕೆ ಮುಂದೆ ಓದಿ.
'ಪೆನ್‌ಡ್ರೈವ್' ಕನ್ನಡ ಸಿನಿಮಾವನ್ನು ಸೆಬಾಸ್ಟಿನ್ ಡೇವಿಡ್ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಟ್ರೆಂಡಿಂಗ್‌ನಲ್ಲಿರುವ ವಿಷಯಗಳನ್ನು, ವ್ಯಕ್ತಿಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿ ಇವರಿಗೆ ಅನುಭವಿದೆ. ಈ ಕಾರಣಕ್ಕೆ 'ಪೆನ್‌ಡ್ರೈವ್' ಟೈಟಲ್ ಇಟ್ಟು ಸಿನಿಮಾ ಮಾಡುವುದಕ್ಕೆ ಹೊರಟಾಗ ಸಿನಿಪ್ರಿಯರಲ್ಲಿ ಗುಮಾನಿ ಮೂಡಿತ್ತು. ಆದರೆ, ಸ್ವತ: ಅವರೇ ಮಾಧ್ಯಮಗಳಿಗೆ ತಮ್ಮ ಸಿನಿಮಾ ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧ ಪಟ್ಟಿಲ್ಲ ಎಂದು ಹೇಳಿಕೊಂಡಿದ್ದಾರೆ.
'ಪೆನ್‌ಡ್ರೈವ್' ಸಿನಿಮಾ ನಾಳೆ ( ಜುಲೈ 4) ಸೆಟ್ಟೇರುತ್ತಿದೆ. ಬಿಗ್‌ಬಾಸ್ ಕನ್ನಡ ಸೀಸನ್ 10ರಲ್ಲಿ ಸ್ಪರ್ಧಿಯಾಗಿದ್ದ ತನಿಷಾ ಕುಪ್ಪಂಡ ನಾಯಕಿಯಾಗಿ ನಟಿಸುತ್ತಿದ್ದಾರೆ. ಅದಕ್ಕಾಗಿಯೇ ಕೆಲವು ದಿನಗಳಿಂದ ತನಿಷಾ ಜಿಮ್‌ನಲ್ಲಿ ಸಿಕ್ಕಾಪಟ್ಟೆ ಕಸರತ್ತು ನಡೆಸುತ್ತಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿತ್ತು. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಅಂತ ನಿರ್ದೇಶಕರು ರಿವೀಲ್ ಮಾಡಿದ್ದಾರೆ.

ಸೆಬಾಸ್ಟಿನ್ ಡೇವಿಡ್ 'ಪೆನ್‌ಡ್ರೈವ್' ಸಿನಿಮಾದ ಕಥೆ ಬಗ್ಗೆ ಸುಳಿವನ್ನು ಬಿಟ್ಟುಕೊಟ್ಟಿಲ್ಲ. ಆದರೆ, ಈ ಕಥೆಯನ್ನು ಸಿನಿಮಾ ಮಾಡಬೇಕು ಅಂತ ಮೊದಲೇ ಅಂದುಕೊಂಡಿದ್ದರಂತೆ. ಆದರೆ, 'ಪೆನ್‌ಡ್ರೈವ್' ಅಂತ ಟೈಟಲ್ ರಿಜಿಸ್ಟರ್ ಮಾಡಿರಲಿಲ್ಲ ಎಂದೂ ಹೇಳಿಕೊಂಡಿದ್ದಾರೆ. ಹಾಗಿದ್ದರೆ, ಫಿಲ್ಮ್ ಚೇಂಬರ್ ಈ ಟೈಟಲ್ ರಿಜಿಸ್ಟರ್ ಮಾಡುವುದಕ್ಕೆ ಅವಕಾಶ ಕೊಟ್ಟಿದೆಯಾ? ಅನ್ನೋ ಪ್ರಶ್ನೆ ಎದುರಾಗಿರುವುದಂತೂ ಸುಳ್ಳಲ್ಲ. ಇನ್ನೊಂದು ಕಡೆ ವರ್ತೂರ್ ಸಂತೋಷ್ ಈ ಸಿನಿಮಾ ಲಾಂಚ್ ವೇಳೆ ಮುಖ್ಯ ಅತಿಥಿಯಾಗಿ ಆಗಮಿಸುತ್ತಿದ್ದಾರೆ.
ಇನ್ನು ಕೆಲವು ತಿಂಗಳಿಂದ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣ ದೇಶಾದ್ಯಂತ ಸದ್ದು ಮಾಡಿತ್ತು. ಪ್ರಜ್ವಲ್ ರೇವಣ್ಣ ಅವರದ್ದೇ ಎನ್ನಲಾದ ಖಾಸಗಿ ವಿಡಿಯೋಗಳಿರುವ ಪೆನ್‌ಡ್ರೈವ್ ಹಂಚಿಕೆ ವಿಚಾರ ಸಿಕ್ಕಾಪಟ್ಟೆ ಸುದ್ದಿ ಮಾಡಿತ್ತು. ಪ್ರಜ್ವಲ್ ರೇವಣ್ಣ ವಿದೇಶ ಪ್ರವಾಸ, ಬಂಧನ, ಪರಪ್ಪನ ಅಗ್ರಹಾರ ಜೈಲು ಇವೆಲ್ಲವೂ ಚರ್ಚೆಯಲ್ಲಿರುವಾಗಲೇ 'ಪೆನ್‌ಡ್ರೈವ್' ಅನ್ನುವ ಟೈಟಲ್ ಇಟ್ಟು ಸಿನಿಮಾ ಮಾಡಲಾಗುತ್ತಿದೆ. ಇದ್ಯಾವ ರೀತಿಯ ಸಿನಿಮಾ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಬಹುದು.


Click it and Unblock the Notifications











