ಮೈಸೂರಿನಲ್ಲಿ ಪ್ರಶಾಂತ್ ಸಂಬರ್ಗಿ ವಿರುದ್ಧ ಪ್ರಕಾಶ್ ರಾಜ್ ದೂರು; ಫೇಕ್ ಫೋಟೊ ವಿರುದ್ಧ ಕಿಡಿ
Prakash Raj-Mysore: ಯುಪಿ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳ ನಡೆಯುತ್ತಿದೆ. ವಿಶ್ವದ ಮೂಲೆ ಮೂಲೆಯಿಂದ ಪುಣ್ಯಸ್ನಾನ ಮಾಡುವುದಕ್ಕೆ ಜನರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಸಾಮಾನ್ಯ ಜನರು, ವಿದೇಶಿಗರು, ಚಿತ್ರರಂಗದದ ತಾರೆಯರು ಇಲ್ಲಿಗೆ ಬಂದ ಪುಣ್ಯಸ್ನಾನವನ್ನು ಮಾಡಿದ್ದಾರೆ. ಇವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಈ ಮಧ್ಯೆ ಬಹುಭಾಷಾ ನಟ ಪ್ರಕಾಶ್ ರಾಜ್ ಪುಣ್ಯ ಸ್ನಾನ ಮಾಡುತ್ತಿದ್ದ ಫೇಕ್ ಫೋಟೋ ಕೂಡ ವೈರಲ್ ಆಗಿತ್ತು.
ಪ್ರಕಾಶ್ ರಾಜ್ ಕುಂಭ ಮೇಳದಲ್ಲಿ ಸ್ನಾನ ಮಾಡುತ್ತಿರುವ ಫೋಟೋ ಫೇಕ್. ಅದನ್ನು AI ತಂತ್ರಜ್ಞಾನವನ್ನು ಬಳಸಿ ಸೃಷ್ಟಿಸಲಾಗಿದೆ ಎಂದು ಪ್ರಕಾಶ್ ರಾಜ್ ಕಿಡಿ ಕಾರಿದ್ದರು. ಈ ಫೋಟೊವನ್ನು ಪ್ರಶಾಂತ್ ಸಂಬರಗಿ ವೈರಲ್ ಮಾಡಿದ್ದಾಗಿ ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕಾಶ್ ರಾಜ್ ದೂರನ್ನು ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮದ ಜೊತೆ ಮಾತಾಡುವಾಗ ಪ್ರಶಾಂತ್ ಸಂಬರಗಿ ವಿರುದ್ಧ ಕಿಡಿಕಾರಿದ್ದಾರೆ.

ಸುಳ್ಳು ಸುದ್ದಿಗಳನ್ನು, ಫೋಟೊಗಳನ್ನು ನಿಜವೆಂದು ನಂಬಿಸುವ ಪ್ರಯತ್ನ ನಡೆಯುತ್ತಿದೆ. ಅದರ ವಿರುದ್ಧ ಪ್ರಶ್ನೆ ಮಾಡಬೇಕು ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ. ಎಐ ತಂತ್ರಜ್ಞಾನ ಬಳಸಿ ಫೇಕ್ ಫೋಟೊಗಳನ್ನು ಸೃಷ್ಟಿಸಿ ಅವರ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಬಹುಭಾಷಾ ನಟ ಕಿಡಿಕಾರಿದ್ದಾರೆ. ಮೈಸೂರಿನಲ್ಲಿ ನೀಡಿರುವ ದೂರಿನಲ್ಲಿ ಎಐ ತಂತ್ರಜ್ಞಾನ ಬಳಸಿ ತಮ್ಮ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕೆಂದು ಪ್ರಕಾಶ್ ರಾಜ್ ತಮ್ಮ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ವೇಳೆ ಮಾಹಾಕುಂಭ ಮೇಳದ ಬಗ್ಗೆನೂ ಪ್ರತಿಕ್ರಿಯೆ ನೀಡುದ್ದಾರೆ. ತನಗೆ ದೇವರ ಮೇಲೆ ನಂಬಿಕೆ ಇಲ್ಲ. ಹಾಗಂತ ನಂಬಿಕೆ ಇದ್ದವರಿಗೆ ಪ್ರಶ್ನೆ ಮಾಡುವುದಿಲ್ಲ. ಆದರೆ, ಇದನ್ನು ರಾಜಕಾರಣಕ್ಕೆ ಬಳಸಿಕೊಳ್ಳುವುದು ತಪ್ಪು ಎಂದಿದ್ದಾರೆ. ಈಗ ಪ್ರಶಾಂತ್ ಸಂಬರಗಿ ವಿರುದ್ಧ ಪ್ರಕಾಶ್ ರಾಜ್ ದೂರ ದಾಖಲಿಸಿರುವುದಕ್ಕೆ ಇದೂ ಒಂದು ಕಾರಣ.
"ಪ್ರಶಾಂತ್ ಸಂಬರ್ಗಿ ಅಂತ ತುಂಬಾ ಪ್ರಖ್ಯಾತರೋ.. ಕುಖ್ಯಾತರೋ ಗೊತ್ತಿಲ್ಲ. ಈ ದೇಶದಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸುವುದೇ ಅಭ್ಯಾಸವಾಗಿ ಬಿಟ್ಟಿದೆ. ಇದನ್ನು ಪ್ರಶ್ನೆ ಮಾಡುವವರು ಇಲ್ಲ. ಕಾಯ್ದೆ ಇದೆಯೋ ಇಲ್ಲವೋ ಅನ್ನೋದು ಸಾಮಾನ್ಯ ಜನರಿಗೆ ಗೊತ್ತಿಲ್ಲ. ಕುಂಭಮೇಳ ಅಂತ ಪುಣ್ಯ ಸ್ನಾನ ಈ ದೇಶದಲ್ಲಿ ನಡೆಯುತ್ತಿದೆ. ಎಲ್ಲಾ ಹಿಂದೂಗಳಿಗೆ ಹಾಗೂ ಅದನ್ನು ನಂಬುವವರಿಗೆ ಪುಣ್ಯವಾದ ಸ್ನಾನ. ಅಂತಹದ್ದೊಂದು ಪುಣ್ಯ ಸ್ನಾನದ ಹಬ್ಬ ನಡೆಯಬೇಕಾದರೆ, ಅದರಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಮೊದಲಿನಿಂದಲೂ ಪ್ರಕಾಶ್ ರಾಜ್ ಹಿಂದೂ ವಿರೋಧಿ ಅಂತ ಸುಳ್ಳು ಸುದ್ದಿ ಹಬ್ಬಿಸಿಕೊಂಡು ಬಂದವರು ಅಲ್ಲಿ ಮಿಂದೆದ್ದರು ಅಂತ ಒಂದು AI ಫೋಟೋ ಹಾಕಿ ದ್ವೇಷವನ್ನು ಹರಡುವ ಪ್ರಯತ್ನ ಮಾಡಿದ್ದಾರೆ. ಇದನ್ನು ಯಾರಾದರೂ ಪ್ರಶ್ನೆ ಮಾಡಬೇಕಲ್ವಾ? " ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.
ಹಾಗೇ ಪ್ರಶಾಂತ್ ಸಂಬರಗಿ ವಿರುದ್ಧ ಇನ್ನೂ ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. "ಫೇಕ್ ಸುದ್ದಿಯನ್ನು ಹಬ್ಬಿಸಿ, ಜನರ ನಂಬಿಕೆಯನ್ನು ಉಪಯೋಗಿಸಿಕೊಂಡು ರಾಜಕಾರಣ ಮಾಡುತ್ತಾ ಅವರ ಬೇಳೆ ಬೇಯಿಸಿಕೊಳ್ಳುವವರಿಗೆ ಕಾನೂನು ಇದೆ. ಅದನ್ನು ಪ್ರಶ್ನಿಸುವ ಒಬ್ಬ ಪ್ರಜೆ ಇದ್ದಾನೆ. ಇನ್ನು ನೀವು ತಪ್ಪಿಸಿಕೊಳ್ಳುವುದಕ್ಕೆ ಆಗುವುದಿಲ್ಲ ಅನ್ನೋದು ಪ್ರೂವ್ ಆಗಬೇಕು. ಅದಕ್ಕಾಗಿ ತುಂಬಾ ಸ್ಟ್ರಾಂಗ್ ಕೇಸ್ ಹಾಕಿದ್ದಾರೆ. ಇದನ್ನು ಕಮಿಷನರ್ ಕೂಡ ಒಪ್ಪಿಕೊಂಡಿದ್ದಾರೆ. ಈ ವ್ಯಕ್ತಿಯ ಹಿಂದೆ ಬಹಳಷ್ಟು ಕೇಸ್ ನಡೆಯುತ್ತಿದೆ. ಒಬ್ಬ ನಟಿ ಮಣಿಯನ್ನು ಅವಹೇಳನ ಮಾಡಿದ್ದಕ್ಕೆ ಒಂದು ಕೇಸ್ ನಡೆಯುತ್ತಿದೆ. ಜನರಿಗೆ ಗೊತ್ತಾಗಬೇಕಿದೆ. ತಪ್ಪು ಪ್ರಚಾರ ಮಾಡೋದು. ಅವನು ಅನುಮತಿ ಇಲ್ಲದೆ ಫೋಟೊಗಳನ್ನು ಮಾರ್ಫ್ ಮಾಡೋದು ಇದು ಅಕ್ಷಮ್ಯ ಅಪರಾಧ. ಇದು ಇನೊಬ್ಬರಿಗೆ ಪಾಠ ಆಗಬೇಕು" ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.


Click it and Unblock the Notifications











