"ಪ್ರಕಾಶ್ ರಾಜ್ ಅದೊಂದು ಹಂದಿ ಇದ್ದಂಗೆ": ಕಿಡಿಕಾರಿದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್
ಕಾವೇರಿ ವಿವಾದ ಕರ್ನಾಟಕದಲ್ಲಿ ಬುಗಿಲೆದ್ದಿದೆ. ರೈತರ ಆಕ್ರೋಶ ಮುಗಿಲು ಮುಟ್ಟಿದೆ. ಬೀದಿಗೆ ಇಳಿದು ಹೋರಾಟ ಮಾಡಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವಾಗ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುತ್ತಿರುವ ವಿಚಾರಕ್ಕೆ ದೊಡ್ಡ ಹೋರಾಟವೇ ನಡೆಯುತ್ತಿದೆ.
ಇನ್ನೊಂದು ಕಡೆ ವಿವಿಧ ಸಂಘಟನೆಗಳು ನಾಳೆ (ಸೆಪ್ಟೆಂಬರ್ 25) ಬೆಂಗಳೂರು ಬಂದ್ ಕರೆನೀಡಿದ್ದರೆ, ಇನ್ನು ಕೆಲವು ಸಂಘಟನೆಗಳು ಸೆಪ್ಟೆಂಬರ್ 29ಕ್ಕೆ ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ಕಾವೇರಿ ಹೋರಾಟ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ. ಇಂತಹ ಸಂದರ್ಭದಲ್ಲಿ ವಿಜಯಪುರದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಕನ್ನಡದ ನಟರಿಗೆ ಟಾಂಗ್ ಕೊಟ್ಟಿದ್ದಾರೆ.

ಹಾಗೇ ಬಹುಭಾಷಾ ನಟ ಪ್ರಕಾಶ್ ರಾಜ್ ವಿರುದ್ಧವೂ ಗುಡುಗಿದ್ದಾರೆ. ಪ್ರಕಾಶ್ ರಾಜ್ ಹಾಗೂ ಕನ್ನಡದ ನಟರ ವಿರುದ್ಧ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧದ ಹೇಳಿಕೆ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಷ್ಟಕ್ಕೂ ಬಿಜೆಪಿ ಶಾಸಕರ ಹೇಳಿಕೆ ಈ ಮಟ್ಟಿಗೆ ಸದ್ದು ಮಾಡುತ್ತಿರೋದ್ಯಾಕೆ? ತಿಳಿಯಲು ಮುಂದೆ ಓದಿ.
"ಪ್ರಕಾಶ್ ರಾಜ್ ಹಂದಿ ಇದ್ದಂಗೆ"
ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹಾಗೂ ಪ್ರಕಾಶ್ ರಾಜ್ ನಡುವೆ ಆಗಾಗ ವಾಗ್ಯುದ್ಧ ನಡೆಯುತ್ತಲೇ ಇರುತ್ತೆ. ಒಬ್ಬರ ಮೇಲೊಬ್ಬರು ಪರಸ್ಪರ ಕೆಸರು ಎರಚಿಕೊಳ್ಳುತ್ತಲೇ ಇರುತ್ತಾರೆ. ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರಕಾಶ್ ರಾಜ್ ಸೈಲೆಂಟ್ ಆಗಿರುವ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದ್ದರು. ಅದಕ್ಕೆ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ. "ಪ್ರಕಾಶ್ ರೈ ಬಗ್ಗೆ ಹೇಳಿದ್ನಲ್ಲ. ಅದೊಂದು ಹಂದಿ ಇದ್ದಂಗೆ ಅದರ ಬಗ್ಗೆ ಮಾತಾಡಬೇಡಿ." ಎಂದು ಹೇಳಿಕೆ ಕೊಟ್ಟಿದ್ದಾರೆ.

"ರೊಕ್ಕ ಮಾಡಿರೋ ಜನರು ಹೋರಾಟ ಮಾಡಲಿ"
ಪ್ರಕಾಶ್ ರಾಜ್ ಅಷ್ಟೇ ಅಲ್ಲ.. ಕಾವೇರಿ ಹೋರಾಟದಲ್ಲಿ ಭಾಗಿಯಾಗದ ನಟರ ವಿರುದ್ಧವೂ ಹೇಳಿಕೆ ಕೊಟ್ಟಿದ್ದಾರೆ. "ಇವರು ಸಿನಿಮಾ ನಟರು ಈಗಾದರೂ ಹೊರಗೆ ಬರಲಿ. ಇವರ ಸಿನಿಮಾ ನೋಡಿ ನೋಡಿ ರೊಕ್ಕ ಮಾಡಿಕೊಂಡಿದ್ದಾರಲ್ಲ. ಈಗಲಾದರೂ ಹೊರಗೆ ಬಂದು ಜನರ ಸಲುವಾಗಿ ಹೋರಾಟ ಮಾಡಲಿ. ಇಲ್ಲಾ ಅಂದ್ರೆ, ಅವರ ಸಿನಿಮಾ ನೋಡುವುದನ್ನು ಬಹಿಷ್ಕಾರ ಹಾಕಬೇಕು. ಅಂದರೆ ಹೊರಗೆ ಬರ್ತಾರೆ." ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
"ದರ್ಶನ್, ಯಶ್ ಎಲ್ಲರೂ ಆ ಕಡೆಯವರೇ"
"ನಟರು ಸ್ವಯಂ ಪ್ರೇರಿತರಾಗಿ ಬರಬೇಕು. ಲೀಡರ್ ಅಂದರೆ ಏನು ಅವರ ಮನೆಗೆ ಹೋಗಿ ಆರತಿ ಎತ್ತಿ ಬನ್ನಿ ಸರ್ ಅಂತ ಹೇಳುವುದಲ್ಲ. ಕನ್ನಡ ಜನಾನೇ ಅವರ ಸಿನಿಮಾ ನೋಡುವುದು. ಎಲ್ಲವರೂ ಕಾವೇರಿ ಭಾಗದ ಕಡೆಯವರೇ ಇದ್ದಾರೆ. ದರ್ಶನ್ ಇರಲಿ.. ಯಶ್ ಇರಲಿ.. ಯಾರೆಲ್ಲ ಇದ್ದಾರೋ ಎಲ್ಲ ಆ ಕಡೆಯವರೇ.. ಉತ್ತರ ಕರ್ನಾಟಕದ ಹೀರೊಗಳು ಎಲ್ಲಿದ್ದಾರೆ. ಬರೀ ಹಾಸ್ಯ ನಟ ಅಂತಿಂಥದ್ದೇ ಕೊಡುತ್ತಾರೆ. ಆ ಕಡೆಯವರು ಎಂತಹ ಮಾರಿ (ಮುಖ) ಇದ್ದವರು ಅವರೇ ನಟರಾಗ್ತಾರೆ. ನಮ್ಮ ಕಡೆ ಚಂದದ ಹುಡುಗರು ಇದ್ದಾರೆ ಏನು ಮಾಡೋದು." ಎಂದು ವ್ಯಂಗ್ಯವಾಡಿದ್ದಾರೆ.
"ಮುಖ್ಯಮಂತ್ರಿ ಪಾತ್ರ ಮಾಡಿದ್ದೀನಿ"
ಉತ್ತರ ಕರ್ನಾಟಕದ ನಟರು ಯಾರಿದ್ದಾರೆ. ಎಲ್ಲಾ ಹಾಸ್ಯ ಪಾತ್ರಗಳನ್ನು ಕೊಡುತ್ತಾರೆ. ಆ ಕಡೆಯವರೇ ನಟರಾಗುತ್ತಾರೆ. ನಮ್ಮಲ್ಲೂ ಚಂದದ ಹುಡುಗರು ಇದ್ದಾರೆ ಎಂದು ಹೇಳುವಾಗ ಮಾಧ್ಯಮದವರು ನೀವು ಒಳ್ಳೆಯ ಪಾತ್ರ ಕೊಟ್ಟರೆ ಮಾಡುತ್ತೀರಾ? ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಬಸವನಗೌಡ ಪಾಟೀಲ್ "ನಾನು ಹಿಂದೊಮ್ಮೆ ಖಡಕ್ ಮುಖ್ಯಮಂತ್ರಿ ಪಾತ್ರ ಮಾಡಿದ್ದೀನಿ" ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.


Click it and Unblock the Notifications











