ಸುಶಾಂತ್ ಸಿಂಗ್ ಬಗ್ಗೆ ಪ್ರಕಾಶ್ ರೈ ಭಾವುಕ ಮಾತು: 'ನಾನು ಬದುಕುಳಿದೆ, ಆದರೆ ಈ ಮಗುವಿಗೆ ಆಗಲಿಲ್ಲ'
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ದೇಶದೆಲ್ಲೆಡೆ ಸ್ವಜನಪಕ್ಷಪಾತದ ಕುರಿತು ತೀವ್ರ ಚರ್ಚೆ ಹುಟ್ಟುಹಾಕಿದೆ. ಬಾಲಿವುಡ್ ಮಾತ್ರವಲ್ಲದೆ, ಇತರೆ ಭಾಷೆಗಳ ಚಿತ್ರರಂಗದಲ್ಲಿಯೂ ಇದರ ಬಗ್ಗೆ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಬಾಲಿವುಡ್‌ನಲ್ಲಿನ 'ನೆಪೋಟಿಸಂ' ಬಗ್ಗೆ ಸುಶಾಂತ್ ಸಿಂಗ್ ಸ್ವತಃ ಹೇಳಿಕೊಂಡಿದ್ದರು. ಬಾಲಿವುಡ್‌ನಲ್ಲಿ ಪ್ರಭಾವ ಹೊಂದಿರುವ ಕೆಲವು ಕುಟುಂಬಗಳಿಂದ ಸುಶಾಂತ್ ಅನೇಕ ಬಾರಿ ಅವಮಾನ ಅನುಭವಿಸಿದ್ದರು. ಇಲ್ಲಿ ನೈಜ ಮತ್ತು ಹೊಸ ಪ್ರತಿಭೆಗಳಿಗೆ ಬೆಳೆಯಲು ಅವಕಾಶ ನೀಡುವುದಿಲ್ಲ ಎಂಬ ಕಹಿ ಸತ್ಯವನ್ನು ಸುಶಾಂತ್ ಹೇಳಿದ್ದರು.
ಈ ವಿಡಿಯೋವನ್ನು ನಟ ಪ್ರಕಾಶ್ ರೈ ಶೇರ್ ಮಾಡಿದ್ದಾರೆ. ತಾವೂ ಇಂತಹ ಸ್ವಜನಪಕ್ಷಪಾತದ ಸವಾಲನ್ನು ಎದುರಿಸಿ ನಿಂತಿದ್ದಾಗಿ ಅವರು ಹೇಳಿದ್ದಾರೆ. ಮುಂದೆ ಓದಿ...

ಆಳವಾದ ಗಾಯ ಎದುರಿಸಿ ನಿಂತೆ
'ನೆಪೋಟಿಸಂ'- ನಾನು ಇದರ ಮೂಲಕವೇ ಬದುಕಿದೆ. ನಾನು ಉಳಿದುಕೊಂಡೆ. ನನ್ನ ಮಾಂಸಕ್ಕಿಂತಲೂ ನನ್ನಲ್ಲಿನ ಗಾಯಗಳು ಆಳವಾಗಿದ್ದವು...' ಎಂದು ಪ್ರಕಾಶ್ ರೈ ತಾವು ಅನುಭವಿಸಿದ್ದ ಕಹಿಯನ್ನು ಹೇಳಿಕೊಂಡಿದ್ದಾರೆ. ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿಯೂ ನಟಿಸಿರುವ ಪ್ರಕಾಶ್ ರೈ, ತಾವು ಯಾವ ಚಿತ್ರರಂಗದಲ್ಲಿ ಹೇಗೆ ಸ್ವಜನಪಕ್ಷಪಾತವನ್ನು ಎದುರಿಸಿದ್ದೆ ಎಂಬುದನ್ನು ವಿವರಿಸಿಲ್ಲ.

ಆ ಮಗುವಿಗೆ ಸಾಧ್ಯವಾಗಲಿಲ್ಲ
'ನಾನು ಈ ಸವಾಲನ್ನು ಎದುರಿಸಿ ನಿಂತೆ. ಆದರೆ ಈ ಮಗು ಸುಶಾಂತ್‌ಗೆ ಅದು ಸಾಧ್ಯವಾಗಲಿಲ್ಲ. ಇದರಿಂದ ನಾವು ಕಲಿಯುತ್ತೇವೆಯೇ? ನಿಜಕ್ಕೂ ನಾವು ಇದರ ವಿರುದ್ಧ ಎದ್ದು ನಿಲ್ಲುತ್ತೇವೆಯೇ? ಇಂತಹ ಕನಸುಗಳು ಸಾಯದಂತೆ ತಡೆಯುತ್ತೇವೆಯೇ?' ಎಂದು ಪ್ರಕಾಶ್ ರೈ ಪ್ರಶ್ನಿಸಿದ್ದಾರೆ.

ಇನ್ನೂ ದೂರ ಸಾಗುವುದಿತ್ತು
ಸುಶಾಂತ್ ಸಾವಿನ ಬಗ್ಗೆ ಪ್ರಕಾಶ್ ರೈ ತೀವ್ರ ಸಂತಾಪ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. 'ನೀವಿನ್ನೂ ಸಾಕಷ್ಟು ಮೈಲು ಸಾಗುವುದಿತ್ತು. ತೀವ್ರ ನೋವಾಗುತ್ತಿದೆ. ಮಾತುಗಳು ಬರುತ್ತಿಲ್ಲ. ಒಬ್ಬ ಅದ್ಭುತ ಪ್ರತಿಭಾವಂತ ಬೇಗನೆ ಹೊರಟುಬಿಟ್ಟರು' ಎಂದು ಅವರು ಹೇಳಿದ್ದರು.

ನೆಪೋಟಿಸಂ ಬಗ್ಗೆ ಸುಶಾಂತ್ ಮಾತು
2017ರಲ್ಲಿ ಐಐಎಫ್‌ಎ ಕಾರ್ಯಕ್ರಮದಲ್ಲಿ ಸುಶಾಂತ್ ನೆಪೋಟಿಸಂ ಬಗ್ಗೆ ಮಾತನಾಡಿದ್ದರು. 'ನೆಪೋಟಿಸಂ ಇದೆ. ಅದು ಎಲ್ಲ ಕಡೆಯೂ ಇದೆ. ಅದರ ವಿಚಾರದಲ್ಲಿ ನಾನೇನೂ ಮಾಡಲು ಸಾಧ್ಯವಿಲ್ಲ. ನೆಪೋಟಿಸಂ ಜತೆಯಲ್ಲಿಯೇ ಇರುತ್ತದೆ. ಆದರೆ ಏನು ಆಗುವುದಿಲ್ಲ. ಆದರೆ ಇದೇ ವೇಳೆ ನೀವು ಉದ್ದೇಶಪೂರ್ವಕವಾಗಿಯೇ ಸೂಕ್ತ ಪ್ರತಿಭೆಗಳಿಗೆ ಅವಕಾಶ ನೀಡದೆ ಇದ್ದರೆ ಆಗ ಸಮಸ್ಯೆ ಉಂಟಾಗುತ್ತದೆ. ಹಾಗಾದರೆ ಉದ್ಯಮದ ಇಡೀ ಸಂರಚನೆ ಒಂದು ದಿನ ಕುಸಿದು ಬೀಳುತ್ತದೆ' ಎಂದು ಹೇಳಿದ್ದರು.


Click it and Unblock the Notifications











