ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ; "ಪ್ರಜ್ವಲಿಸಲು ಸಹಕರಿಸಿದವರಿಗೆ ಶಿಕ್ಷೆಯಿಲ್ಲವೇ?" ಪ್ರಕಾಶ್ ರಾಜ್ ಪ್ರಶ್ನೆ?
ಜೆಡಿಎಸ್ ಮುಖಂಡ ಹಾಗೂ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾ*ಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಈ ಪ್ರಕರಣದಲ್ಲಿ ಕುಲಾಸೆ ಆಗಬಹುದೆಂದು ನಿರೀಕ್ಷೆ ಇಟ್ಟುಕೊಂಡಿದ್ದ ಪ್ರಜ್ವಲ್ ರೇವಣ್ಣಗೆ ಕೋರ್ಟ್ ಶಾಕ್ ಕೊಟ್ಟಿತ್ತು. ಅತ್ಯಾ*ಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್‌ಗೆ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು.
ವಿಶೇಷ ನ್ಯಾಯಾಲಯ ತನ್ನ ತೀರ್ಪನ್ನು ಪ್ರಕಟಿಸುತ್ತಿದ್ದಂತೆ ಬಹುಭಾಷಾ ನಟ ಹಾಗೂ ಹೋರಾಟಗಾರ ಪ್ರಕಾಶ್ ರಾಜ್ ಪ್ರತಿಕ್ರಿಯಿಸಿದ್ದಾರೆ. ಪ್ರಜ್ವಲ್‌ಗೆ ಶಿಕ್ಷೆ ಪ್ರಕಟವಾದ ಬಳಿಕ ತನ್ನ ಎಕ್ಸ್ ಖಾತೆಯಲ್ಲಿ ಪರೋಕ್ಷವಾಗಿ ಕುಟುಕಿದ್ದಾರೆ. ಪ್ರಜ್ವಲ್ ಈ ಕೃತ್ಯವನ್ನು ಸಹಕರಿಸಿದವರಿಗೆ ಶಿಕ್ಷೆ ಇಲ್ಲವೆ ಎಂದು ಪ್ರಶ್ನೆಯನ್ನು ಮಾಡಿದ್ದಾರೆ? ಈ ಟ್ವೀಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಬಹುಭಾಷಾ ನಟ ಪ್ರಕಾಶ್ ರಾಜ್ ರಾಜಕೀಯ ಮುಖಂಡರು ತಪ್ಪು ಹಾದಿ ಹಿಡಿದಾಗ ಅವರನ್ನು ಬೆಂಬಿಡದೆ ಕಾಡುತ್ತಾರೆ. ಅಲ್ಲದೆ ರೈತರ ಪರ ಹೋರಾಟದಲ್ಲಿಯೂ ಇತ್ತೀಚೆಗೆ ಭಾಗವಹಿಸಿದ್ದರು. ಸರ್ಕಾರದ ಮೇಲೆ ಒತ್ತಡ ಹಾಕಿ ರೈತರ ಜಮೀನನ್ನು ಅವರಿಗೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಈಗ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ತೀರ್ಪು ಪ್ರಕಟವಾಗುತ್ತಿದ್ದಂತೆ, ಅವರಿಗೆ ಸಹಕರಿಸಿದವರಿಗೂ ಶಿಕ್ಷೆಯನ್ನು ನೀಡಬೇಕು ಎಂದು ಪ್ರರೋಕ್ಷವಾಗಿ ಟ್ವೀಟ್ (ಎಕ್ಸ್ ಪೋಸ್ಟ್) ಮಾಡಿದ್ದಾರೆ.
ಪ್ರಕಾಶ್ ರಾಜ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ಹೀಗೆ ಪ್ರಶ್ನೆ ಮಾಡಿದ್ದಾರೆ. "ಪ್ರಜ್ವಲಿಸಲು ಸಹಕರಿಸಿದವರಿಗೆ ಶಿಕ್ಷೆಯಿಲ್ಲವೇ?..ಯುವರ್ ಆನರ್, ಪ್ರಜ್ವಲ್ ಮಾಡಿದ ಅಮಾನುಷ ಅಪರಾಧಗಳಿಗೇನೋ ತಕ್ಕ ಶಿಕ್ಷೆ ಆಗಿದೆ. ಆದರೆ.. ಆ ಅಪರಾಧಗಳನ್ನು ಗೊತ್ತಿದ್ದೂ ಮುಚ್ಚಿಟ್ಟ.. ಸಂತ್ರಸ್ತರನ್ನು ಹೆದರಿಸಿದ.. ಸಾಕ್ಷಿ ನಾಶ ಮಾಡಲು ಸಹಕರಿಸಿದ.. ಹಾಲಿ, ಮಾಜಿಗಳಿಗೆ.. ಪ್ರಭಾವಿಗಳಿಗೆ ಶಿಕ್ಷೆಯಿಲ್ಲವೇ???" ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ. ಈ ಪೋಸ್ಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ಪೋಸ್ಟ್ ಮೂಲಕ ಪ್ರಜ್ವಲ್ ರೇವಣ್ಣಗೆ ಅಷ್ಟೇ ಅಲ್ಲ. ಇಂತಹ ಅಪರಾಧ ಎಸಗಲು ಸಹಾಯ ಮಾಡಿದವರಿಗೆ ಶಿಕ್ಷೆಯನ್ನು ನೀಡಬೇಕೆಂದು ಸೋಶಿಯಲ್ ಮೀಡಿಯಾದಲ್ಲಿ ಒತ್ತಾಯ ಮಾಡಿದ್ದಾರೆ. ಹಾಲಿ, ಮಾಜಿಗಳು, ಪ್ರಭಾವಿಗಳು ಎಂದು ಹೇಳಿದ್ದಾರೆಯೇ ವಿನ: ಸಹಕಾರ ನೀಡಿದವರು ಯಾರು? ಅನ್ನೋದನ್ನು ನೇರವಾಗಿ ಹೇಳಿಲ್ಲ. ಹೀಗಾಗಿ ಈ ಪೋಸ್ಟ್ ಹೊಸ ಚರ್ಚೆಯನ್ನು ಹುಟ್ಟಿ ಹಾಕಬಲ್ಲದೇ? ಎಂಬುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಕಳೆದ ಒಂದೂವರೆ ವರ್ಷದಿಂದ ಜೈಲಿನಲ್ಲಿ ಇದ್ದಾರೆ. ಹಲವು ಬಾರಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರೂ, ನ್ಯಾಯಾಲಯ ನಿರಾಕರಣೆ ಮಾಡುತ್ತಲೇ ಬಂದಿತ್ತು. ಈ ಕಾರಣಕ್ಕೆ ಪ್ರಜ್ವಲ್ ರೇವಣ್ಣ ಅವರ ಕೇಸ್ ಎಷ್ಟು ಗಂಭೀರ ಅನ್ನೋದು ಜಾಹೀರಾಗಿತ್ತು. ಈಗ ನ್ಯಾಯಾಲಯ ಎರಡೂ ಕಡೆಯವರ ವಾದವನ್ನು ಆಲಿಸಿ, ಸಾಕ್ಷ್ಯಗಳನ್ನು ಗಣನೆಗೆ ತೆಗೆದುಕೊಂಡು ಜೀವಾವಧಿ ಶಿಕ್ಷೆಯನ್ನು ನೀಡಿದೆ. ಭಾರತೀಯ ನ್ಯಾಯ ಸಂಹಿತೆ 376(2)(k) ಅಡಿಯಲ್ಲಿ ಅತ್ಯಾ*ಚಾರ ಅಪರಾಧಕ್ಕೆ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಲಾಗಿದೆ. ಹಾಗೆ ಮೂರೂವರೆ ಕಠಿಣ ಕಾರಾಗೃಹ ಶಿಕ್ಷೆ, 11.5 ಲಕ್ಷ ರೂಪಾಯಿ ದಂಡದ ವಿಧಿಸಿದ್ದು, ಅದನ್ನು ಸಂತ್ರಸ್ತೆಗೆ ನೀಡುವುದಕ್ಕೆ ನ್ಯಾಯಾಧೀಶರು ಆದೇಶಿಸಿದ್ದಾರೆ.


Click it and Unblock the Notifications











