Prakash Raj Vs Media:"ಮಾರಿಕೊಂಡ ಮಾಧ್ಯಮದವರು" ಅಂತ ಆಮಂತ್ರಣ; "ಕ್ಷಮೆ ಕೇಳಲ್ಲ"- ಪ್ರಕಾಶ್ ರಾಜ್
ಕಳೆದ ಕೆಲವು ದಿನಗಳಿಂದ ಪ್ರಕಾಶ್ ರಾಜ್ ಚರ್ಚೆಯಲ್ಲಿ ಇದ್ದಾರೆ. ಧರ್ಮಸ್ಥಳದ ತಲೆ ಬುರುಡೆ ಕೇಸ್‌ನಲ್ಲಿ ಪ್ರಕಾಶ್ ರಾಜ್ ಹೆಸರು ಕೇಳಿ ಬಂದಿತ್ತು. ಚಿನ್ನಯ್ಯ ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಪ್ರಕಾಶ್ ರಾಜ್ ಹೆಸರನ್ನು ತೆಗೆದಿದ್ದರು. ಹೀಗಾಗಿ ಈ ಬಗ್ಗೆ ಸ್ಪಷ್ಟನೆ ಕೊಡುವುದಕ್ಕೆ ಮಾಧ್ಯಮದವರಿಗೆ ಆಹ್ವಾನ ಕೊಟ್ಟಿದ್ದರು. ಈ ವೇಳೆ ಅವರು ನೀಡಿದ ಆಮಂತ್ರಣದಲ್ಲಿ "ಮಾರಿಕೊಂಡ ಮಾಧ್ಯಮದವರು" ಬರೆದಿದ್ದರು. ಇದು ವಿವಾದಕ್ಕೆ ತಿರುಗಿತ್ತು.
ನಟ ಹಾಗೂ ಹೋರಾಟಗಾರ ಪ್ರಕಾಶ್ ರಾಜ್ ಅವರು ಮಾಧ್ಯಮದವರ ನಡುವೆ ಕೆಲ ಕಾಲ ಈ ವಿಷಯಕ್ಕೆ ಜಟಾಪಟಿ ನಡೆದಿತ್ತು. ಚಿನ್ನಯ್ಯ ಆರೋಪಕ್ಕೆ ಉತ್ತರ ಕೊಡುವ ಪತ್ರಿಕಾಗೋಷ್ಠಿಯಲ್ಲಿ ಪ್ರಕಾಶ್ ರಾಜ್ ಹಾಗೂ ಮಾಧ್ಯಮದವರ ನಡುವೆ ವಾಕ್ಸಮರ ನಡೆದಿತ್ತು. ಮಾಧ್ಯಮದವರ ಪ್ರಶ್ನೆಗೆ ಪ್ರಕಾಶ್ ಕೊಟ್ಟ ಉತ್ತರ ಹೀಗಿತ್ತು. ಅದರ ಝಲಕ್ ಹೀಗಿತ್ತು.

"ಮಾರಿಕೊಂಡ ಮಾಧ್ಯಮ"-ಲೇವಡಿ ಅಲ್ಲ
"ಮಾಧ್ಯಮಗಳಲ್ಲಿ ಎರಡು ತರಹದ ರಿಪೋರ್ಟ್ ಬರುತ್ತೆ. ನಾಲ್ಕು ದಶಕಗಳಿಂದ ನಾನು ಎಲ್ಲಾ ಭಾಷೆಯ ಮಾಧ್ಯಮಗಳೊಂದಿಗೆ ಇದ್ದೇನೆ. ಮಾರಿ ಕೊಂಡ ಮಾಧ್ಯಮ ಅನ್ನೋದು ಲೇವಡಿ ಮಾತ್ರ ಅಲ್ಲ, ನನ್ನ ನೋವು ಕೂಡ. ಯಾಕಂದ್ರೆ ಸಾಕಷ್ಟು ಜನ ಗೆಳೆಯರು ಇದ್ದಾರೆ. ನನಗೆ ಫೋನ್ ಮಾಡುತ್ತಾರೆ. ಪ್ರಕಾಶ್ ನನಗೆ ನಿಮ್ಮ ಬಗ್ಗೆ ಬರೋಕೆ ಆಗಲ್ಲ. ನನ್ನ ಅಸಹಾಯಕೆ ಅರ್ಥ ಮಾಡಿಕೊಳ್ಳಿ. ನಮ್ಮ ಮಾಲೀಕರು ಬರೋಕೆ ಬಿಡಲ್ಲ. ನನಗೆ ಅರ್ಥ ಆಗುತ್ತೆ. ಇದು ಈ ದೇಶದ ದುರಂತ" ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.
"ಇದು ನನ್ನ ಮಾಧ್ಯಮ ಅಲ್ಲ"
"ಈ ಕೇಸ್‌ನಲ್ಲಿ ಕೆಲವು ಕಡೆ ಒಂದು ರಿಪೋರ್ಟ್ ಬರುತ್ತೆ. ಇನ್ನೊಂದು ಕಡೆ ಇನ್ನೊಂದು ರಿಪೋರ್ಟ್ ಬರುತ್ತೆ. ಪ್ರಕಾಶ್ ಅವರೇ ಚಿನ್ನಯ್ಯ ಅವರು ಹೀಗೆ ಹೇಳಿದ್ದಾರೆ. ನಿಮಗೂ ಇದಕ್ಕೂ ಏನು ಸಂಬಂಧ? ಇದು ನನ್ನ ಮಾಧ್ಯಮ. 200 ಕೋಟಿ ಬುರುಡೆ ಗ್ಯಾಂಗ್‌ನಲ್ಲಿ ಎಷ್ಟು ತಿಂದಿರಬಹುದು? ಅನ್ನೋದು ನನ್ನ ಮಾಧ್ಯಮ ಅಲ್ಲ. ಈ ರೀತಿ ಪ್ರಶ್ನೆ ಕೇಳುವುದರಲ್ಲಿ ಬೇರೆಯದ್ದೇ ಹುನ್ನಾರವಿದೆ. ನಿಮಗೆ ನಾನು ಕಳಿಸಿರುವ ಆಮಂತ್ರಣ ಪತ್ರದಲ್ಲಿ ಈ ಮಾತು ಇಲ್ಲ. ಆದರೆ, ಜಾಲತಾಣದಲ್ಲಿ ಮಾಡಿಕೊಂಡ ಮಾಧ್ಯಮಗಳಿಗೆ. ಅಲ್ಲಿ ಹಾಕುವಾಗ ನಾನು ಅಂತಹ ಕೊಂಕು ನುಡಿಗಳನ್ನು ಹಾಕುತ್ತೇನೆ. ಆದರೆ, ನಾನು ಅಧಿಕೃತವಾಗಿ, ವೈಯಕ್ತಿಕವಾಗಿ, ಗ್ರೂಪ್‌ನಲ್ಲಿ ಗ್ರೂಪ್‌ನಲ್ಲಿ ಕಳಿಸಿದಾಗ ಆ ಮಾತು ಇಲ್ಲ." ಎಂದು ಮಾಧ್ಯಮಗಳ ಬಗ್ಗೆ ಹೇಳಿದ್ದಾರೆ.
"ಮಾರಿಕೊಂಡ ಮಾಧ್ಯಮಗಳಿಗೆ ಉತ್ತರ ಕೊಡಬೇಕು"
"ಚಿನ್ನಯ್ಯ ಹೇಳಿಕೆ ಕೊಟ್ಟಿದ್ದಾನೆ. ಅದರಲ್ಲಿ ಅವನು ನನ್ನ ಹೆಸರು ಹೇಳಿದ್ದಾನೆ. ಅದಕ್ಕೆ ನಾನು ಪ್ರೆಸ್ ಮೀಟ್ ಕರೆದಿದ್ದೇನೆ. ಯಾಕಂದ್ರೆ, ನಾನು ಚಿನ್ನಯ್ಯ ಹೇಳಿದ್ದು ಸರಿನಾ ಅಂತ ಉತ್ತರಿಸಬೇಕು. ನಾನು ಉತ್ತರ ಕೊಡುವುದಕ್ಕೂ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಮಧ್ಯಮಗಳು ಅದನ್ನು ತಿರುಚಿ ಇವನು ಹಿಂದು ವಿರೋಧಿ, ಇವನದ್ದು ದ್ವಂದ್ವ ವ್ಯಕ್ತಿತ್ವ ಅಂತ ಹೇಳುತ್ತಿವೆ. ಹಾಗಾಗಿ ಮಾಧ್ಯಮಗಳಿಗೆ ಉತ್ತರ ಕೊಟ್ಟು, ಅಂತಹ ಮಾಧ್ಯಮಗಳಿಗೂ ಉತ್ತರ ಕೊಡಬೇಕಿರುವುದರಿಂದ ನಾನು ಪ್ರೆಸ್‌ಕ್ಲಬ್‌ನಲ್ಲಿ ಕಳಿಸಿರುವ ಆಮಂತ್ರಣದಲ್ಲಿ ನೇರವಾಗಿಯೇ ಕಳಿಸಿದ್ದೇ. ಆದರೆ ಟ್ವಿಟರ್‌ನಲ್ಲಿ ಬೇರೆ ಬೇರೆ ಮಾಧ್ಯಮಗಳು ಅಟ್ಯಾಕ್ ಮಾಡುತ್ತಿರೋದ್ರಿಂದ ಅವರಿಗೆ ನೀವು ಬನ್ನಿ ಅಂತ ಅವರಿಗೂ ಕರೆದಿದ್ದೀನಿ. ಯಾರಿಗೆ ಏನು ಅನ್ನೋದು ಅವರಿಗೆ ಅರ್ಥ ಆಗುತ್ತೆ" ಎಂದು ಹೇಳಿದ್ದಾರೆ.

"ಬೇಡ ಸ್ವಾಮಿ.. ಪಾಪ ಸ್ವಾಮಿ.."
"ಕರ್ನಾಟಕದ ಪತ್ರಿಕೋದ್ಯಮವನ್ನು ಹಾಳು ಮಾಡುತ್ತಿರುವ ಮಾರಿಕೊಂಡವರ ಬಗ್ಗೆ ಮಾತಾಡುತ್ತಿದ್ದೇನೆ. ಅವರು ಯಾರು ಅಂತ ನಾನು ಹೇಳಲ್ಲ. ಎಸ್‌ಐಟಿಗೆ ಕೊಟ್ಟು ಬಿಡೋಣ. ಅದೇ ಒಳ್ಳೆಯದು. ನಾನು ಅದ್ಯಾವುದು ಅಂತ ಹೇಳುವುದಿಲ್ಲ. ನನ್ನ ಸ್ನೇಹಿತರ ಜೀವನ ಹಾಳು ಮಾಡುವುದಕ್ಕೆ ಇಷ್ಟವಿಲ್ಲ. ಅವರ ಜೀವನವೂ ನನಗೆ ಮುಖ್ಯ. ಈಗ ಮಾನ ಮರ್ಯಾದೆ ಬಿಟ್ಟವರೇ ಈ ದೇಶದಲ್ಲಿ ನಾಯಕರಾಗಿದ್ದಾರೆ. ಬೇಡ ಸ್ವಾಮಿ.. ಪಾಪ ಸ್ವಾಮಿ..ಹೇಳೋಲ್ಲ ಸ್ವಾಮಿ.." ಎಂದು ಮಾಧ್ಯಮದವರ ಆಕ್ರೋಶಕ್ಕೆ ತಿರುಗೇಟು ಕೊಟ್ಟಿದ್ದಾರೆ.
"ಸಾರಿ ಕೇಳುವುದಕ್ಕೆ ನಾನು ಸಾವರ್ಕರ್ ಅಲ್ಲ"
"ನಾನು ಸಾವರ್ಕರ್ ಅಲ್ಲ ಸಾರಿ ಕೇಳುವುದಕ್ಕೆ. ಕ್ಷಮೆ ಯಾಕ್ರಿ ಕೇಳ್ಬೇಕು. ನೋಡಿ ನನಗೆ ನನ್ನ ಹತ್ತಿರ ಇರುವ ಉತ್ತರ ಕೊಡಬಹುದು. ಆದರೆ, ನೀವು ನಿರೀಕ್ಷೆ ಮಾಡುವ ಉತ್ತರ ಕೊಡುವುದಕ್ಕೆ ಆಗುವುದಿಲ್ಲ." ಎಂದು ಪ್ರಕಾಶ್ ರಾಜ್ ಕಿಡಿಕಾರಿದ್ದಾರೆ.


Click it and Unblock the Notifications
