ಬಲವಂತಕ್ಕೆ 'ಕೆಜಿಎಫ್ 3' ಮಾಡುತ್ತಿದ್ದಾರೆ ಪ್ರಶಾಂತ್ ನೀಲ್: ಒತ್ತಡಕ್ಕೆ ಕಾರಣವೇನು?
ಇಡೀ ವಿಶ್ವವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ್ದು 'ಕೆಜಿಎಫ್ 2'. ವರ್ಲ್ಡ್ ವೈಡ್ ಬಾಕ್ಸಾಫೀಸ್‌ನಲ್ಲಿ 'ಕೆಜಿಎಫ್ 2' ಸಿನಿಮಾ ಗಳಿಕೆ ಎಲ್ಲರನ್ನೂ ಬೆಚ್ಚಿಬೀಳಿಸಿತ್ತು. ಸಾವಿರ ಕೋಟಿಗೂ ಅಧಿಕ ಗಳಿಕೆ ಕಂಡು ಹೊಸ ಇತಿಹಾಸವನ್ನೇ ಬರೆದಿತ್ತು. ಹೀಗಾಗಿ 'ಕೆಜಿಎಫ್ 3' ಬಗ್ಗೆ 'ಕೆಜಿಎಫ್' ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ.
'ಕೆಜಿಎಫ್ 2' ಸಿನಿಮಾ 'ಕೆಜಿಎಫ್ 3' ಸಿನಿಮಾ ಆಗುತ್ತೆ ಅನ್ನುವುದು ಈಗಾಗಲೇ ರಿವೀಲ್ ಆಗಿದೆ. ನಿರ್ಮಾಪಕ ವಿಜಯ್ ಕಿರಗಂದೂರು ಈಗಾಗಲೇ ಸ್ಪಷ್ಟ ಪಡಿಸಿದ್ದಾರೆ. ಆದರೆ, ಈ ಬಗ್ಗೆ ಸಿನಿಮಾ ನಿರ್ದೇಶಕ ಮಾತ್ರ ಎಲ್ಲೂ ಬಹಿರಂಗಪಡಿಸಿರಲಿಲ್ಲ. ಇದೀಗ ಪ್ರಶಾಂತ್ ನೀಲ್ ಕೂಡ 'ಕೆಜಿಎಫ್ 3' ಬಗ್ಗೆ ಇಂಟ್ರೆಸ್ಟಿಂಗ್ ವಿಷಯಗಳನ್ನು ರಿವೀಲ್ ಮಾಡಿದ್ದಾರೆ.
ಕೆಜಿಎಫ್ ಸಿರೀಸ್‌ನ ಮೂರನೇ ಪಾರ್ಟ್ ಬರುವುದು ಬಹುತೇಕ ಖಚಿತ ಆದಂತಾಗಿದೆ. ಆದರೆ, ಈ ಸಿನಿಮಾ ಯಾವಾಗ ಶುರುವಾಗುತ್ತೆ? ಪ್ರಶಾಂತ್ ನೀಲ್ ಈ ಸಿನಿಮಾವನ್ನು ಕೈಗೆತ್ತಿಗೊಳ್ಳುವುದು ಯಾವಾಗ? ಇಂತಹದ್ದೇ ಒಂದಿಷ್ಟು ವಿಷಯಗಳು ಈಗ ರಿವೀಲ್ ಆಗಿವೆ.

'ಕೆಜಿಎಫ್ 3'ಗೆ ಜೈ ಎಂದ ನೀಲ್
'ಕೆಜಿಎಫ್ 2' ಮೆಗಾ ಹಿಟ್ ಆದ ಬಳಿಕ 'ಕೆಜಿಎಫ್ 3' ನಿರ್ಮಾಣಕ್ಕೆ ಹೊಂಬಾಳೆ ಫಿಲ್ಮ್ಸ್ ರೆಡಿಯಾಗಿತ್ತು. ವಿಜಯ್ ಕಿರಗಂದೂರು ಈಗಾಗಲೇ ಈ ವಿಷಯವನ್ನು ಸ್ಪಷ್ಟಪಡಿಸಿದ್ದೂ ಆಗಿದೆ. ಆದ್ರೀಗ, ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಕೂಡ 'ಕೆಜಿಎಫ್ 3' ಸಿನಿಮಾ ಮಾಡುತ್ತಿರುವುದಾಗಿ, ಯೂಟ್ಯೂಬ್ ಚಾನೆಲ್‌ವೊಂದಕ್ಕೆ ತಿಳಿಸಿದ್ದಾರೆ. ಸಂದರ್ಶನದ ವೇಳೆ ಪ್ರಶಾಂತ್ ನೀಲ್ ನೀಡಿದ ಹೇಳಿಕೆ ಕಳೆದೆರಡು ದಿನಗಳಿಂದ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಬಲವಂತಕ್ಕೆ 'ಕೆಜಿಎಫ್ 3' ಸಿನಿಮಾ!
ಯೂಟ್ಯೂಬ್ ಚಾನೆಲ್‌ವೊಂದಕ್ಕೆ ಪ್ರಶಾಂತ್ ನೀಲ್ ನೀಡಿದ ಹೇಳಿಕೆ ಸಂಚಲನ ಸೃಷ್ಟಿಸುತ್ತಿದೆ. " ಖಂಡಿತವಾಗಿಯೂ ಚಾಪ್ಟರ್ 3 ಬರುವ ಎಲ್ಲಾ ಸಾಧ್ಯತೆಗಳೂ ಇವೆ. ಕೆಜಿಎಫ್ 2 ಯಶಸ್ಸಿನ ಬಲವಂತಕ್ಕೆ ಈ ಸಿನಿಮಾ ಆಗುತ್ತಿದೆ. ಈ ಪ್ರಪಂಚವನ್ನು ಜನರು ಒಪ್ಪಿದ್ದಾರೆ. ಅವರು ಈ ಸಿನಿಮಾದ ಪಾತ್ರಗಳನ್ನು ಪ್ರೀತಿ ಮಾಡಿದ್ದಾರೆ. ಹೀಗಾಗಿ ಕಥೆ ಮುಂದುವರೆಸಲು ನಾವು ಬಯಸಿದ್ದೇವೆ. ಆದರೆ ಯಾವಾಗ? ಅನ್ನುವುದು ನಮಗೆ ಗೊತ್ತಿಲ್ಲ." ಎಂದು ಪ್ರಶಾಂತ್ ನೀಲ್ ಹೇಳಿದ್ದಾರೆ.

'ಕೆಜಿಎಫ್' ಫ್ಯಾನ್ಸ್ ಗೊಂದಲ
'ಕೆಜಿಎಫ್' ಎರಡೂ ಚಾಪ್ಟರ್‌ಗಳೂ ಪ್ರೇಕ್ಷಕರಿಗೆ ತುಂಬಾನೇ ಹಿಡಿಸಿವೆ. ಇನ್ನೊಂದ್ಕಡೆ 'ಕೆಜಿಎಫ್ 2' ಎಂಡ್‌ನಲ್ಲಿಯೇ 'ಕೆಜಿಎಫ್ ಚಾಪ್ಟರ್ 3' ಬಗ್ಗೆ ಹಿಂಟ್ ಕೊಟ್ಟ ಬಳಿಕವಂತೂ ಸಿನಿಮಾ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಾಗಿದೆ. ಸದ್ಯಕ್ಕೆ 'ಕೆಜಿಎಫ್ 3' ಬರೋದು ಕನ್ಫರ್ಮ್. ಆದರೆ, ಸಿನಿಮಾ ಯಾವಾಗ ಸೆಟ್ಟೇರುತ್ತೆ ಅನ್ನೋದು ಗೊತ್ತಿಲ್ಲ. ಹೀಗಾಗಿ ಕ್ರೇಜ್ ಇರುವಾಗಲೇ ಸಿನಿಮಾ ಆರಂಭ ಆಗಬೇಕಿತ್ತು ಅನ್ನೋದು ಫ್ಯಾನ್ಸ್ ಆಸೆ. ಆದರೆ, ಅದು ಸದ್ಯಕ್ಕಂತೂ ಸಾಧ್ಯವಿಲ್ಲ.

ಇಬ್ಬರೂ ಫುಲ್ ಬ್ಯುಸಿ
'ಕೆಜಿಎಫ್ 2' ಬಳಿಕ ಯಶ್ ಹಾಗೂ ಪ್ರಶಾಂತ್ ನೀಲ್ ಇಬ್ಬರೂ ಬ್ಯುಸಿ. ಒಂದ್ಕಡೆ ಯಶ್ ಹೊಸ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ನರ್ತನ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಇನ್ನೊಂದ್ಕಡೆ ಪ್ರಶಾಂತ್ ನೀಲ್ ಎರಡೆರಡು ಸಿನಿಮಾ ಕೈಗೆತ್ತಿಕೊಂಡಿದ್ದಾರೆ. 'ಸಲಾರ್' ಸಿನಿಮಾ ಕಂಪ್ಲೀಟ್ ಆಗಬೇಕಿದೆ. ಈ ಸಿನಿಮಾ ಮುಗಿಯುತ್ತಿದ್ದಂತೆ ಜೂ.ಎನ್‌ಟಿಆರ್ ಸಿನಿಮಾವನ್ನೂ ನಿರ್ದೇಶನ ಮಾಡಬೇಕಿದೆ. ಆದಾದ ಮೇಲೆ 'ಕೆಜಿಎಫ್ 3' ಅನ್ನೋದು ಪಕ್ಕಾ. ಅಲ್ಲಿಗೆ 2023ಗೂ ಸಿನಿಮಾ ಸೆಟ್ಟೇರುವುದು ಅನುಮಾನ. ಇನ್ನೇನಾದರೂ, ಒಟ್ಟಿಗೆ ಎರಡೆರಡು ಸಿನಿಮಾ ಕೈಗೆತ್ತಿಕೊಂಡರೆ, 'ಕೆಜಿಎಫ್ 3' ಬೇಗ ಸೆಟ್ಟೇರಲು ಸಾಧ್ಯ.


Click it and Unblock the Notifications











