"ಸಲಾರ್ ನೋಡೋಕೆ ಉಗ್ರಂ ತರ ಇದೆ ಅಂದ್ರೆ ಐ ಡೋಂಟ್ ಕೇರ್": ನಿರ್ದೇಶಕ ಪ್ರಶಾಂತ್ ನೀಲ್
'ಕೆಜಿಎಫ್' ಸಿನಿಮಾ ಬಳಿಕ ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿರುವ ಮೆಗಾ ಬಜೆಟ್ ಸಿನಿಮಾ ಸಲಾರ್. ಇದು ನಾಳೆ (ಡಿಸೆಂಬರ್ 22) ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಸಿನಿಮಾ ರಿಲೀಸ್‌ಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ ಅನ್ನುವಾಗ ಇಡೀ ತಂಡ ಸಿನಿಮಾ ಪ್ರಚಾರಕ್ಕೆ ಇಳಿದಿದೆ.
ಕೆಲವು ದಿನಗಳ ಹಿಂದಷ್ಟೇ ರಾಜಮೌಳಿ ಜೊತೆ ಪ್ರಶಾಂತ್ ನೀಲ್, ಪ್ರಭಾಸ್, ಪೃಥ್ವಿರಾಜ್ ಸುಕುಮಾರ್ ಈ ಸಿನಿಮಾದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಆ ವೇಳೆ ಕೂಡ ಪ್ರಶಾಂತ್ ನೀಲ್ 'ಸಲಾರ್' ಸಿನಿಮಾದ ಕೆಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದರು. ಈಗ ಹೊಂಬಾಳೆಗೆ ನೀಡಿದ ಸಂದರ್ಶನದಲ್ಲಿ 'ಸಲಾರ್' ಸಿನಿಮಾ ಎದುರಿಸುತ್ತಿರುವ ಟೀಕೆಗಳ ಬಗ್ಗೆ ಮಾತಾಡಿದ್ದಾರೆ.

'ಸಲಾರ್' ಟ್ರೈಲರ್ ರಿಲೀಸ್ ಆದಾಗ, ಬಹಳಷ್ಟು ಮಂದಿ 'ಉಗ್ರಂ' ರಿಮೇಕ್ ಎಂದು ಹೇಳಿದ್ದರು. ಅದಕ್ಕೆ ಪ್ರಶಾಂತ್ ನೀಲ್ ಪರೋಕ್ಷವಾಗಿ ಉತ್ತರ ಕೊಟ್ಟಿದ್ದಾರೆ. ನಿರೂಪಕರು ನಿಮ್ಮಲ್ಲಿರುವ ಅತೀ ದೊಡ್ಡ ಭಯವೇನು ಅಂತ ಕೇಳಿದಾಗ, ಪ್ರಶಾಂತ್ ನೀಲ್ ಸಲಾರ್ ಹಾಗೂ ಉಗ್ರಂ ಹೋಲಿಕೆ ಬಗ್ಗೆ ಉತ್ತರ ಕೊಟ್ಟಿದ್ದಾರೆ. "ಸಲಾರ್ ನೋಡೋಕೆ ಉಗ್ರಂ ತರ ಇದೆ ಅಂದ್ರೆ ಐ ಡೋಂಟ್ ಕೇರ್" ಅನ್ನೋ ಅರ್ಥದಲ್ಲಿ ಹೇಳಿದ್ದಾರೆ. ಅಷ್ಟಕ್ಕೂ ಪ್ರಶಾಂತ್ ನೀಲ್ ಏನು ಹೇಳಿಕೆ ಕೊಟ್ಟಿದ್ದಾರೆ? ಅನ್ನೋದನ್ನು ತಿಳಿಯಲು ಮುಂದೆ ಓದಿ..
'ಸಲಾರ್' ಸಿನಿಮಾ 'ಉಗ್ರಂ' ರಿಮೇಕ್ ಅಂತ ನೆಟ್ಟಿಗರ ಮನಸ್ಸಿನೊಳಗೆ ಹೊಕ್ಕಿದೆ. 'ಸಲಾರ್' ಪೋಸ್ಟರ್, ಟೀಸರ್, ಟ್ರೈಲರ್ ಬಿಟ್ಟಾಗಲೆಲ್ಲ ಇದೇ ಚರ್ಚೆ ಮುನ್ನೆಲೆಗೆ ಬಂದಿತ್ತು. ಅದಕ್ಕೀಗ ಪ್ರಶಾಂತ್ ನೀಲ್ ಉತ್ತರ ಕೊಟ್ಟಿದ್ದಾರೆ. "ನನಗೆ ಯಾವಾಗಲೂ ಭಯ ಅನ್ನೋದು ನಿರ್ಮಾಪಕರು ಹಾಕುವ ಹಣದ ಮೇಲಿದೆ. ನನ್ನ ಮರ್ಯಾದೆ ಬಗ್ಗೆ ಭಯ, ಪದೇ ಪದೆ ರಿಪೀಟ್ ಮಾಡುವ ಭಯ, ಉಗ್ರಂನಲ್ಲಿ ಮಾಡಿದ್ದು ಕೆಜಿಎಫ್‌ನಲ್ಲಿ ಮಾಡಿದ್ದಾನೆ. ಕೆಜಿಎಫ್‌ನಲ್ಲಿ ಮಾಡಿದ್ದು ಸಲಾರ್‌ನಲ್ಲಿ ಮಾಡಿದ್ದಾನೆ. ಅದ್ಯಾವುದಕ್ಕೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ಇಲ್ಲಿ ಇರೋದು ಜನರನ್ನು ರಂಜಿಸುವುದಕ್ಕೆ." ಎಂದು ಪ್ರಶಾಂತ್ ನೀಲ್ ಸಂದರ್ಶನದಲ್ಲಿ ಹೇಳಿದ್ದಾರೆ.

ಇಷ್ಟೇ ಅಲ್ಲದೆ ತಾನು ಮಾಡೋ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಆಗುತ್ತೆ ಅನ್ನೋದಾರೆ, ನನ್ನ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ಳಬೇಕು ಅಂತಾನೂ ಹೇಳಿದ್ದಾರೆ. "ನನ್ನ ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್ ಒಳ್ಳೆಯ ರಿಸಲ್ಟ್ ಕೊಟ್ಟರೆ, ನಾನ್ಯಾಕೆ ನನ್ನ ಬಗ್ಗೆ ಚಿಂತೆ ಮಾಡಲಿ. ನನಗೆ ಸಿಗೋ ಮೊದಲ ಅವಾರ್ಡ್ ಅದೇ. ನಾನು ಹೇಗೆ ಬೆಳೆದೆ? ನಾನು ಎಷ್ಟು ವಿಭಿನ್ನ ಸಿನಿಮಾ ಮಾಡಿದೆ ಅಂತ ನೋಡೋಕೆ ಬರೋಲ್ಲ. ನನ್ನ ಜಡ್ಜ್ ಮಾಡುವುದಕ್ಕೆ ಜನರು ಬರೋದಿಲ್ಲ. ಜಡ್ಜ್ ಮಾಡೋಕೆ ಬರುತ್ತಾರೆ ಅಂದ್ರೆ, ಅವ್ರಿಗೆ ಅಷ್ಟೊಂದು ಸಮಯ ಇದೆಯಾ?" ಎಂದು ಪ್ರಶ್ನೆ ಮಾಡಿದ್ದಾರೆ.
ಪ್ರಶಾಂತ್ ನೀಲ್ ಈ ಹಿಂದೆ ನಿರ್ದೇಶಿಸಿದ ಸಿನಿಮಾಗಳೊಂದಿಗೆ 'ಸಲಾರ್' ಹೋಲಿಕೆ ಮಾಡುತ್ತಿದ್ದಾರೆ. ಕೆಲವು ಉಗ್ರಂ ರಿಮೇಕ್ ಅಂದ್ರೆ, ಮತ್ತೆ ಕೆಲವರು 'ಕೆಜಿಎಫ್' ನೋಡಿದಂತೆ ಆಗುತ್ತೆ ಅನ್ನೋರೂ ಇದ್ದಾರೆ. ಈ ಎಲ್ಲಾ ಟೀಕೆಗಳ ಬಗ್ಗೆನೂ ಪ್ರಶಾಂತ್ ನೀಲ್ ಖಡಕ್ ಆಗಿಯೇ ಉತ್ತರ ಕೊಟ್ಟಿದ್ದಾರೆ.
"ಎಲ್ಲರೂ ಸಲಾರ್ ಅನ್ನು ಕೆಜಿಎಫ್ ತರ ಇದೆ ಅಂತಿದ್ದಾರೆ ಅದೆನ್ನೆಲ್ಲ ಕ್ಷಣ ಕಾಲ ಅಷ್ಟೇ ಕ್ಯಾರಿ ಮಾಡಿದ್ದೆ. ಆದರೆ, ನಾನು ಸಿನಿಮಾಗೆ ಏನು ಬೇಕೋ ಅದನ್ನೇ ಮಾಡಿದ್ದೇನೆ. ಇಡೀ ಸಿನಿಮಾವನ್ನು ನೀವು ನೋಡಿ ಬಂದು ನಾನು ನಿಮ್ಮನ್ನು ರಂಜಿಸಲಿಲ್ಲ ಅಂತ ಹೇಳಿದ್ರೆ, ಅಥವಾ ನೀವು ಬಂದು ಸೂಪರ್ ಆಗಿ ಇತ್ತು ಸಿನಿಮಾ ಆದರೆ ಸ್ವಲ್ಪ ಕೆಜಿಎಫ್ ತರ ಇತ್ತು ಅಂದ್ರೆ ನನಗೇನು ಸಮಸ್ಯೆಯಿಲ್ಲ. ನಾನೇ ಅಲ್ವಾ ಕೆಜಿಎಫ್ ಮಾಡಿದ್ದು, ನಾನೇ ಸೃಷ್ಟಿ ಮಾಡಿದ್ದಕ್ಕೆ ನಾನ್ಯಾಕೆ ಬೇಸರ ಮಾಡಿಕೊಳ್ಳಲಿ." ಎಂದು ಪ್ರಶಾಂತ್ ಟೀಕೆ ಮಾಡುವವರಿಗೆ ಉತ್ತರ ಕೊಟ್ಟಿದ್ದಾರೆ.


Click it and Unblock the Notifications











