"ಉಗ್ರಂ ಮಾಡಿ ಮನೆ ಮಾರಿಕೊಂಡೆ, ದರ್ಶನ್ ಸರ್ ಬಂದಿದ್ದಕ್ಕೆ ಸಿನಿಮಾ ರಿಲೀಸ್ ಆಯ್ತು"; ಪ್ರಶಾಂತ್ ನೀಲ್
'ಉಗ್ರಂ' ಸಿನಿಮಾ ಕನ್ನಡ ಚಿತ್ರರಂಗದ ಬೆಸ್ಟ್ ಸಿನಿಮಾಗಳಲ್ಲೊಂದು. ಆದರೆ, ಈ ಸಿನಿಮಾ ರಿಲೀಸ್ ಆದಾಗ ಸಿಗಬೇಕಿದ್ದ ಪ್ರೋತ್ಸಾಹ ಸಿಕ್ಕಿರಲಿಲ್ಲ. ಅದಕ್ಕೆ ಈಗ ಉಗ್ರಂ ಅನ್ನು ಬಿಗ್ ಬಜೆಟ್‌ನಲ್ಲಿ ಮಾಡುವುದಕ್ಕೆ ಮುಂದಾಗಿದ್ದಾರೆ. ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡು 'ಸಲಾರ್' ಮಾಡಿದ್ದಾಗಿ ಪ್ರಶಾಂತ್ ನೀಲ್ ಅವರೇ ಒಪ್ಪಿಕೊಂಡಿದ್ದಾರೆ.
ಇದೇ ಸಂದರ್ಶನದಲ್ಲಿ ಪ್ರಶಾಂತ್ ನೀಲ್ 'ಉಗ್ರಂ' ಸಿನಿಮಾ ಮಾಡುವುದಕ್ಕೆ ಪಟ್ಟಪಾಡನ್ನೂ ನೆನಪಿಸಿಕೊಂಡಿದ್ದಾರೆ. ಮೊದಲ ಸಿನಿಮಾ 'ಉಗ್ರಂ' ಸಿನಿಮಾಗೆ ನಿರ್ದೇಶಕರೂ ಇವರೇ, ನಿರ್ಮಾಪಕರೂ ಇವರೇ. ಪ್ರಶಾಂತ್ ನೀಲ್ ಚಿತ್ರರಂಗಕ್ಕೆ ಹೊಸಬರಾಗಿದ್ದರೆ, ಶ್ರೀಮುರಳಿ ಸಿನಿಮಾ ನಿರಂತರ ಸೋಲು ಕಂಡಿದ್ದವು. ಇಂತಹ ಸಂದರ್ಭದಲ್ಲಿ ಉಗ್ರಂ ಮಾಡುವುದಕ್ಕೆ ಮುಂದಾಗಿದ್ದರು.

ಸತತ ನಾಲ್ಕು ವರ್ಷಗಳ ಕಾಲ 'ಉಗ್ರಂ' ಸಿನಿಮಾ ಮಾಡಿದ್ದರು. ತುಂಬಾ ಆಸೆ ಪಟ್ಟು ಮಾಡಿದ ಸಿನಿಮಾವನ್ನು ಕೊಂಡುಕೊಳ್ಳಲು ಯಾವುದೇ ವಿತರಕರು ಮುಂದೆ ಬಂದಿರಲಿಲ್ಲ. ಈ ಸಿನಿಮಾಗಾಗಿ ಮನೆಯನ್ನು ಮಾಡಿಕೊಂಡಿದ್ದರು. ಕೈ ತುಂಬಾ ಸಾಲ ಆಗಿತ್ತು. ಆ ವೇಳೆ ದರ್ಶನ್ ಸಹಾಯಕ್ಕೆ ಬಂದಿದ್ದನ್ನು ಪ್ರಶಾಂತ್ ನೀಲ್ ನೆನಪಿಸಿಕೊಂಡಿದ್ದಾರೆ. ಆ ಘಟನೆಗಳ ಬಗ್ಗೆ ಸಲಾರ್ ನಿರ್ದೇಶಕ ಹೇಳಿದ ಇಂಟ್ರೆಸ್ಟಿಂಗ್ ಸ್ಟೋರಿಯ ಝಲಕ್ ಇಲ್ಲಿದೆ.
ಭಂಡ ಧೈರ್ಯದಿಂದ ಆಗಿದ್ದು 'ಉಗ್ರಂ'
"ಉಗ್ರಂ ಸಿನಿಮಾ ಮಾಡೋಕೆ ಹೊರಟಾಗ ಎರಡು ಕಾರಣ ಇತ್ತು. ಮೊದಲ ಕಾರಣ ನಾನು ಮುರಳಿಗೊಂದು ಸಿನಿಮಾ ಮಾಡಬೇಕಿತ್ತು. ಆ ಸಮಯದಲ್ಲಿ ಅವರ ಸಿನಿಮಾನೂ ಚೆನ್ನಾಗಿ ಓಡುತ್ತಿರಲಿಲ್ಲ. ಒಂದು ಭಂಡ ಧೈರ್ಯ ಇರತ್ತಲ್ಲ. ನಾವು ಹಾಲಿವುಡ್ ಸಿನಿಮಾ ನೋಡ್ಬಿಟ್ಟು ಅದೇನು ದೊಡ್ಡ ವಿಷ್ಯನಾ ಅನ್ನೋ ಭಂಡ ಧೈರ್ಯ ಇರುತ್ತಲ್ಲ. ಕಿಚ್ಚು ಅನ್ನೋದು ಇರುತ್ತಲ್ಲ. ತೆಲುಗು ಸಿನಿಮಾ ಅಷ್ಟು ಚೆನ್ನಾಗಿ ಮಾಡುತ್ತಿದ್ದಾರೆ. ತಮಿಳು ಸಿನಿಮಾ ಅಷ್ಟು ಚೆನ್ನಾಗಿ ಮಾಡುತ್ತಿದ್ದಾರೆ. ದೊಡ್ಡ ದೊಡ್ಡ ಬಜೆಟ್ ಹಾಕ್ತಾರೆ. ಕ್ಯಾಲಿಟಿ ಇರುತ್ತೆ. ಇದನ್ನೆಲ್ಲ ತಲೆಯಲ್ಲಿ ಇಟ್ಟುಕೊಂಡು ಹೊರಟೆ ನಾನು." ಎಂದು ಪ್ರಶಾಂತ್ ನೀಲ್ ಹೇಳಿದ್ದಾರೆ.

"ಉಗ್ರಂ ಮಾಡಿ ಮನೆ ಮಾರಿಕೊಂಡೆ"
"ನನಗೆ ಮಾರ್ಕೆಟ್ ಬಗ್ಗೆ ಏನೂ ಗೊತ್ತಿರಲಿಲ್ಲ. ಮುರಳಿ ಮಾರ್ಕೆಟ್ ಏನು ಅನ್ನೋದು ಗೊತ್ತಿಲ್ಲ. ಹೊಸ ನಿರ್ದೇಶಕನ ಮಾರ್ಕೆಟ್ ಹೇಗಿದೆ ಅನ್ನೋದು ಗೊತ್ತಿರಲಿಲ್ಲ. ನಾನು ಈ ಸಿನಿಮಾ ಬಹಳಷ್ಟು ಹಣ ಸುರಿದಿದ್ದೆ. ಒಂದು ಮನೆ ಮಾರಾಟ ಮಾಡಿಕೊಂಡೆ. ಉಗ್ರಂ ಸಿನಿಮಾ ಮಾಡುವಾಗ ನನ್ನ ಪರಿಸ್ಥಿತಿ ತುಂಬಾನೇ ಗಂಭೀರವಾಗಿತ್ತು. ಸಿನಿಮಾ ಶುರು ಮಾಡಿದ್ದಲ್ಲಿಂದ ರಿಲೀಸ್ ವರೆಗೂ ನಾಲ್ಕು ವರ್ಷ ತೆಗೆದುಕೊಳ್ತು." ಎಂದು ಕಷ್ಟ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
"ದರ್ಶನ್ ಸರ್ ಬಂದಿದ್ದಕ್ಕೆ ಸಿನಿಮಾ ರಿಲೀಸ್ ಆಯ್ತು"
"ಸಿನಿಮಾ ಮುಗಿದ ಮೇಲೆ ಒಬ್ಬನೇ ಒಬ್ಬ ವಿತರಕನೂ ನನ್ನ ಸಿನಿಮಾವನ್ನು ತೆಗೆದುಕೊಳ್ಳಲು ಮುಂದೆ ಬಂದಿಲ್ಲ. ದರ್ಶನ್ ಸರ್, ದಿನಕರ್ ಸರ್ ಬಂದಿದ್ದಕ್ಕೆ ಸಿನಿಮಾ ರಿಲೀಸ್ ಆಯ್ತು. ಸಿನಿಮಾ ರಿಲೀಸ್ ಆದ್ಮೇಲೆ ಒಳ್ಳೆ ಪ್ರತಿಕ್ರಿಯೆ ಬಂತು. 20 ದಿನ ನನ್ನ ಸಿನಿಮಾ ಪೈರಸಿ ಆಯ್ತು. 99ರಷ್ಟು ಮಂದಿ ಉಗ್ರಂ ಅನ್ನು ಮೊಬೈಲ್‌ನಲ್ಲಿ ನೋಡಿದ್ರು. ಇಲ್ಲ ಯೂಟ್ಯೂಬ್‌ನಲ್ಲಿ ನೋಡಿದ್ರು." ಎಂದು ಉಗ್ರಂ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
"ವಿಜಯ್ ಕಿರಗಂದೂರು, ಯಶ್ ಬಗ್ಗೆ ಹೇಳಿದ್ದೇನು?"
'ಉಗ್ರಂ' ಸಿನಿಮಾದ ಬಳಿಕ ಸಂಕಷ್ಟದಲ್ಲಿದ್ದ ಪ್ರಶಾಂತ್ ನೀಲ್‌ರನ್ನು ಹೊರಗೆ ತಂದಿದ್ದು ವಿಜಯ್ ಕಿರಗಂದೂರು ಹಾಗೂ ಯಶ್ ಎಂದು ಹೇಳಿದ್ದಾರೆ. "ನಾಲ್ಕು ವರ್ಷ ನಾನು ಸಾಲದಲ್ಲಿದ್ದೆ. ವಿಜಿ ಸರ್, ಯಶ್ ಅವರು ನನ್ನನು ಹೊರಗೆ ತಂದ್ರು. ಈಗ ಹೇಳಿ ಫ್ಯಾಷನ್ ಎಲ್ಲಿದೆ ಅಂತ? ನನಗೆ ಈಗ ಸಿನಿಮಾ ಪ್ಯಾಷನ್ ಅಲ್ಲ. ಸಿನಿಮಾ ಒಂದು ಬ್ಯುಸಿನೆಸ್. ಆ ಬ್ಯುಸಿನೆಸ್‌ನಲ್ಲಿ ನನಗೇನು ಉತ್ತಮ ಮಾಡೋಕೆ ಸಾಧ್ಯವೋ ಅದನ್ನು ಮಾಡುತ್ತೇನೆ. ನಾನು ಏನೇ ಆಗಿದ್ದರೂ ಅದು ಕನ್ನಡ ಚಿತ್ರರಂಗದಿಂದ." ಎಂದಿದ್ದಾರೆ.


Click it and Unblock the Notifications











