"ವಿಜಯಲಕ್ಷ್ಮಿ ದರ್ಶನ್ ಅಪಾರ್ಟ್‌ಮೆಂಟ್‌ನಲ್ಲಿ ದಿನಕ್ಕೊಂದು ಕರ್ಮಕಾಂಡ ಇರುತ್ತೆ"; ಪ್ರಶಾಂತ್ ಸಂಬರಗಿ
ಸ್ಯಾಂಡಲ್‌ವುಡ್‌ನ ಬಾಡ್‌ಬಾಯ್ ದರ್ಶನ್ ಅಂತ ಪದೇ ಪದೇ ಅವರೇ ಪ್ರೂವ್ ಮಾಡಿಕೊಳ್ಳುತ್ತಾ ಬಂದಿದ್ದಾರೆ. 2011ರಿಂದಲೂ ಒಂದಲ್ಲ ಒಂದು ವಿವಾದದಲ್ಲಿ ದರ್ಶನ್ ಹೆಸರು ಕೇಳಿ ಬರುತ್ತಲೇ ಇದೆ. ಅವರ ನಡವಳಿಕೆಗಳಿಂದಲೋ, ಮಾತುಗಳಿಂದಲೋ ದರ್ಶನ್ ಆಗಾಗ ಸುದ್ದಿಯಾಗುತ್ತಲೇ ಇದ್ದರು.
ಆದರೆ, ಈಗ ದರ್ಶನ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ಮತ್ತೊಂದಿಷ್ಟು ಕರ್ಮಕಾಂಡಗಳು ಹೊರಬೀಳುತ್ತಿವೆ. ದರ್ಶನ್ ವಿರುದ್ಧ ಆರೋಪ ಮಾಡುವವರ ಸಂಖ್ಯೆನೂ ಹೆಚ್ಚಾಗುತ್ತಲೇ ಇವೆ. ಈಗ ಬಿಗ್ ಬಾಸ್ ಖ್ಯಾತಿಯ ಪ್ರಶಾಂತ್ ಸಂಬರ್ಗಿ ಕೂಡ ದರ್ಶನ್ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದಾರೆ.

ದರ್ಶನ್ ಪತ್ನಿ ವಿಜಯಲಕ್ಷ್ಮಿ ವಾಸವಿರುವ ಅಪಾರ್ಟ್‌ಮೆಂಟ್‌ನಲ್ಲಿಯೇ ಪ್ರಶಾಂತ್ ಸಂಬರ್ಗಿ ಕೂಡ ವಾಸವಿದ್ದಾರೆ. ಅಲ್ಲಿಂದ ಪ್ರತಿ ದಿನ ದರ್ಶನ್ ಏನಾದರೂ ಅವಾಂತರವನ್ನು ಸೃಷ್ಟಿಸುತ್ತಿದ್ದರು ಎಂದು ಪ್ರಶಾಂತ್ ಸಂಬರ್ಗಿ ಸ್ಪೀಡ್ ಪ್ಲಸ್ ಕರ್ನಾಟಕಕ್ಕೆ ನೀಡಿದ ಸಂದರ್ಶನದ ವೇಳೆ ರಿವೀಲ್ ಮಾಡಿದ್ದಾರೆ. ಅಷ್ಟಕ್ಕೂ ವಿಜಯಲಕ್ಷ್ಮಿ ಏನು ಹೇಳಿದ್ದಾರೆ? ತಿಳಿಯುವುದಕ್ಕೆ ಮುಂದೆ ಓದಿ..
"ಅಪಾರ್ಟ್‌ಮೆಂಟ್‌ನಲ್ಲಿ ದಿನಕ್ಕೊಂದು ಕರ್ಮಕಾಂಡ"
"ದರ್ಶನ್ ಮೊದಲನೇ ಪತ್ನಿ ಇರುವಂತಹ ಅಪಾರ್ಟ್‌ಮೆಂಟ್‌ನಲ್ಲಿ ನಾನು ವಾಸವಿದ್ದೇನೆ. ಅಲ್ಲಿ ದಿನಾ ಒಂದು ಕರ್ಮಕಾಂಡವಿರುತ್ತೆ. ಅದು ಚೆನ್ನಮ್ಮನಕೆರೆ ಅಚ್ಚು ಕಟ್ಟು ಪೊಲೀಸ್ ಸ್ಟೇಷನ್ ಲಿಮಿಟ್‌ನಲ್ಲಿ ಬರುತ್ತೆ. ಕಡಿಮೆ ಅಂದರೂ ಒಂದು 10 ದೂರು ಆ ಕುಟುಂಬದ ಮೇಲಂತೂ ಇದೆ. ಅಂದರೂ ನಮಗೆ ಹೋಗಿ ಮಾತಾಡಬೇಕು ಅಂತ ಅನಿಸಲಿಲ್ಲ." ಎಂದು ಬಿಗ್‌ಬಾಸ್ ಖ್ಯಾತಿಯ ಪ್ರಶಾಂತ್ ಸಂಬರ್ಗಿ ಮಾಹಿತಿ ನೀಡಿದ್ದಾರೆ.
"ದೆವ್ವ ಓಡಾಡುವ ಸಮಯದಲ್ಲಿ ಬರುತ್ತಿದ್ದರು"
ದರ್ಶನ್ ಹಗಲು ಹೊತ್ತಿನಲ್ಲಿ ವಿಜಯಲಕ್ಷ್ಮಿ ಇರುತ್ತಿದ್ದ ಅಪಾರ್ಟ್‌ಮೆಂಟ್‌ನಲ್ಲಿ ಬರುತ್ತಿರಲಿಲ್ಲ ಎಂದು ಪ್ರಶಾಂತ್ ಸಂಬರ್ಗಿ ಹೇಳಿದ್ದಾರೆ. "ಅವರು ಬರುತ್ತಿದ್ದಿದ್ದೇ ದೆವ್ವ ಓಡಾಡುವ ಸಮಯದಲ್ಲಿ. ದೆವ್ವ ಓಡಾಡುವ ಸಮಯದ ಅಂದರೆ, ರಾತ್ರಿ 10 ಗಂಟೆಯ ನಂತರ ಬೆಳಗ್ಗೆ 2 ಗಂಟೆವರೆಗೂ. ಆ ಟೈಮ್‌ನಲ್ಲಿ ನಾವು ಗಾಢ ನಿದ್ದೆಯಲ್ಲಿ ಇರುತ್ತಿದ್ದೆವು. ಆ ಟೈಮ್‌ನಲ್ಲಿ ಹೀಗಾಗಿ ಹೋಯ್ತು, ಸೆಕ್ಯೂರಿಟಿ ಗಾರ್ಡ್ ಹೊಡೆದು ಬಿಟ್ರು. ಬರೀ ಇಂತಹದ್ದೇ ಕೇಳುತ್ತಿದ್ದೆ. ಅದು ಬಿಟ್ಟರೆ, ಮುಖಾ ಮುಖಿ ನೋಡಿಲ್ಲ." ಎಂದು ಪ್ರಶಾಂತ್ ಸಂಬರ್ಗಿ ಹೇಳಿಕೊಂಡಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ಅನ್ನೋದು ಸೆಕೆಂಡರಿ
ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಪ್ರಶಾಂತ್ ಸಂಬರ್ಗಿ ಕಿಡಿಕಾರಿದ್ದಾರೆ. ಅವರ ಪತ್ನಿ ಸಹನಾಗೆ ನೆರವಾಗಿ ಅಂತ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಕೂಡ ಮಾಡಿದ್ದರು. "ಅವನು ಹೀರೋನೊ.. ಬಾಸೋ.. ಚಾಲೆಂಜಿಂಗ್ ಸ್ಟಾರ್ ಅದು ಸೆಕೆಂಡರಿ. ಒಬ್ಬ ಮುಗ್ಧ ಜೀವಿಯ ಸಾವು ಆಗಿದೆ. ಚಿತ್ರ ಹಿಂಸೆ ಕೊಟ್ಟು ಸಾಯಿಸಿದ್ದಾರೆ. ಅದರ ಬಗ್ಗೆ ಧ್ವನಿ ಎತ್ತಬೇಕು. ನ್ಯಾಯ ಸಿಗಬೇಕು. ರೇಣುಕಾಸ್ವಾಮಿ ಪತ್ನಿ ಸಹನಾ ಅವರಿಗೆ ಸಹಾನುಭೂತಿ ಸಿಗಬೇಕು. ಎಲ್ಲೊ ಒಂದು ಕಡೆ ಅವರಿಗೆ ಬದುಕಲಿಕ್ಕೆ ಆಶಾಕಿರಣ ಸಿಗಬೇಕು. ಅವರಿಗೆ ಹಣಕಾಸಿನ ಸಹಾಯ ಸಿಗಬೇಕು ಅಂತ ಪೋಸ್ಟ್ ಹಾಕಿದ್ದೆ" ಎಂದು ರಿವೀಲ್ ಮಾಡಿದ್ದಾರೆ.
ಒಂದು ಫೋಟೊನೂ ತೆಗೆಸಿಕೊಂಡಿಲ್ಲ
"ನನ್ನ 20 ವರ್ಷದ ಕರಿಯರ್‌ನಲ್ಲಿ ನಾನು ದರ್ಶನ್ ಅವರಿಗೆ ಕೈ ಕೊಟ್ಟಿಲ್ಲ. ಅವರೊಂದಿಗೆ ಸೆಲ್ಫಿ ತೆಗೆದುಕೊಂಡಿಲ್ಲ. ದರ್ಶನ್ ಅವರೊಂದಿಗೆ ಫೋಟೊ ತೆಗೆದುಕೊಂಡಿಲ್ಲ. ಭಗವಂತ ನಮ್ಮನ್ನು ಸೇರಿಸಿಲ್ಲವೋ ಅಥವಾ ದುಷ್ಟರ ಕಂಡರೆ ದೂರವಿರು ಅಂತ ಸೇರುವುದಕ್ಕೆ ಬಿಟ್ಟಿಲ್ಲವೋ ಗೊತ್ತಿಲ್ಲ." ಎಂದು ಪ್ರಶಾಂತ್ ಸಂಬರ್ಗಿ ಹೇಳಿಕೊಂಡಿದ್ದಾರೆ.


Click it and Unblock the Notifications











