'ಏಕ್ ಲವ್ ಯಾ' ಯಶಸ್ಸನ್ನು ಮುಖ್ಯವಾದ ವ್ಯಕ್ತಿಗಳಿಗೆ ಅರ್ಪಿಸಿದ ಪ್ರೇಮ್
ಪ್ರೇಮ್ ನಿರ್ದೇಶಿಸಿ ಹೊಸ ನಟ ರಾಣಾ ಹಾಗೂ ನಟಿ ರೇಷ್ಮಾ ನಟಿಸಿರುವ ಪ್ರೇಮಕಥಾ ಚಿತ್ರ 'ಏಕ್ ಲವ್ ಯಾ' ಸಿನಿಮಾ ಇಂದು (ಫೆಬ್ರವರಿ 24) ಬಿಡುಗಡೆ ಆಗಿದೆ.
'ಏಕ್ ಲವ್ ಯಾ' ಸಿನಿಮಾವನ್ನು ನಟಿ ರಕ್ಷಿತಾ ಪ್ರೇಮ್ ನಿರ್ಮಾಣ ಮಾಡಿದ್ದು, ವಿತರಣೆ ಮಾಡಿರುವುದು ಸ್ವತಃ ನಿರ್ದೇಶಕ ಪ್ರೇಮ್. ಸಿನಿಮಾದ ಮೊದಲ ಶೋ ಮುಗಿಯುತ್ತಿದ್ದಂತೆ ಪ್ರೇಮ್ ಮುಖದಲ್ಲಿ ಮಂದಹಾಸ ಮೂಡಿದ್ದು, ಸಿನಿಮಾ ದೊಡ್ಡ ಓಪನಿಂಗ್ ಪಡೆದುಕೊಂಡಿರುವುದು ಪ್ರೇಮ್ ಹಾಗೂ ಚಿತ್ರತಂಡಕ್ಕೆ ನಿರಾಳತೆ ಮೂಡಿಸಿದೆ.
Ek Love Ya Review: ಪ್ರೀತಿಯಲ್ಲಿ ಏಕಲವ್ಯನಷ್ಟೇ ಶ್ರದ್ಧೆಯುಳ್ಳ ಪ್ರೇಮಿಯ ಕಥೆ 'ಏಕ್ ಲವ್ ಯಾ'!
'ಏಕ್ ಲವ್ ಯಾ' ಸಿನಿಮಾದ ನಾಯಕ, ನಾಯಕಿ ಇಬ್ಬರೂ ಹೊಸಬರಾದಿದ್ದು, ನಿರ್ದೇಶಕ ಪ್ರೇಮ್ ತಮ್ಮ ಬಲದ ಮೇಲೆ ಪ್ರೇಕ್ಷಕರನ್ನು ಮೊದಲ ದಿನ ಚಿತ್ರಮಂದಿರಕ್ಕೆ ಕರೆತಂದಿದ್ದಾರೆ. ಸಿನಿಮಾದ ವಿತರಕರೂ ಆಗಿರುವ ಪ್ರೇಮ್, ಸಿನಿಮಾ ಯಶಸ್ವಿ ಆಗಿದೆ ಎಂದು ಈಗಾಗಲೇ ಘೋಷಿಸಿದ್ದು, ಸಿನಿಮಾದ ಯಶಸ್ಸನ್ನು ಮುಖ್ಯವಾದ ವ್ಯಕ್ತಿಗಳಿಗೆ ಅರ್ಪಣೆ ಮಾಡಿದ್ದಾರೆ.

''372 ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆ ಮಾಡಿದ್ದೇವೆ''
''ಸಿನಿಮಾವನ್ನು 372 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿದ್ದೇವೆ. 1370 ಶೋಗಳು ಆಗಿವೆ. 'ಪ್ರೇಮ್ಸ್ ಡ್ರೀಮ್ಸ್' ಹೆಸರಿನ ನನ್ನದೇ ವಿತರಣೆ ಸಂಸ್ಥೆಯಿಂದ ಸಿನಿಮಾವನ್ನು ವಿತರಣೆ ಮಾಡಿದ್ದೇನೆ. ಇಷ್ಟೋಂದು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿದ್ದಕ್ಕೆ ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ದಾವಣೆಗೆರೆಯವರು ಬೆಳಿಗ್ಗೆಯೇ ಕರೆ ಮಾಡಿ ಮೊದಲ ಶೋನೆ 46 ಸಾವಿರ ಆಗಿದೆ ಎಂದರು. ಮೈಸೂರಿನಲ್ಲಿ 57 ಸಾವಿರ ಆಗಿದೆ ಎಂದರು. ಮಲ್ಟಿಫ್ಲೆಕ್ಸ್‌ಗಳಲ್ಲಿ ಸಹ ತುಂಬಿದ ಗೃಹಗಳ ಪ್ರದರ್ಶನವನ್ನು ನಮ್ಮ ಸಿನಿಮಾ ಕಾಣುತ್ತಿದೆ'' ಎಂದು ಖುಷಿಯಿಂದ ಮಾಹಿತಿ ಹಂಚಿಕೊಂಡಿದ್ದಾರೆ ಪ್ರೇಮ್.

ಪರದೆ ಮುಂದೆ ಡ್ಯಾನ್ಸ್ ಮಾಡುತ್ತಿದ್ದಾರೆ: ಪ್ರೇಮ್
''ಗುರುವಾರ ಮೊದಲ ಶೋ, ಅದೂ ಹೊಸಬರ ಸಿನಿಮಾಕ್ಕೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನ ಬಂದಿರುವುದು ಬಹಳ ಖುಷಿಯಾಗುತ್ತಿದೆ. ಒಳ್ಳೆಯ ಸಿನಿಮಾ ಕೊಡುತ್ತಿದ್ದೇನೆ ಬಂದು ನೋಡಿ ಎಂದು ಪ್ರೇಕ್ಷಕರನ್ನು ಕರೆದಿದ್ದೆ, ಅಂತೆಯೇ ಬಂದು ನೋಡಿದ್ದಾರೆ. ಅವರಿಗೆ ನಾನು ಋಣಿಯಾಗಿದ್ದೇನೆ. ಸಿನಿಮಾದ ಪರದೆಯ ಮುಂದೆ ಹೋಗಿ ಡ್ಯಾನ್ಸ್ ಮಾಡಿದ್ದನ್ನು 'ಜೋಗಿ', 'ವಿಲನ್' ಸಿನಿಮಾಗಳ ಸಮಯದಲ್ಲಿ ನೋಡಿದ್ದೆ. ಈ ಸಿನಿಮಾಕ್ಕೂ ಹುಡುಗರು ಸ್ಕ್ರೀನ್ ಮುಂದೆ ಹೋಗಿ ಡ್ಯಾನ್ಸ್ ಮಾಡುತ್ತಿದ್ದಾರೆ'' ಎಂದಿದ್ದಾರೆ ಪ್ರೇಮ್.

ತಂತ್ರಜ್ಞರಿಗೆ ಸಿನಿಮಾ ಅರ್ಪಿಸಿದ ಪ್ರೇಮ್
''ಸಿನಿಮಾಗಳಿಗೆ ತಂತ್ರಜ್ಞರು ಬಹಳ ಮುಖ್ಯ. ಈ ಹಿಂದೆಯೂ ನಾನು ಇದನ್ನು ಹೇಳಿದ್ದೆ. ಯಾವುದೇ ಸಿನಿಮಾಕ್ಕಾದರೂ ತಂತ್ರಜ್ಞರು ಬಹಳ ಮುಖ್ಯ. ಈ ಸಿನಿಮಾಕ್ಕೂ ಅಷ್ಟೆ ಅವರು ವರ್ಷಾನುಗಟ್ಟಲೆ ಕೆಲಸ ಮಾಡಿರುತ್ತಾರೆ. ಹಾಗಾಗಿ ಪ್ರತಿಯೊಬ್ಬ ಟೆಕ್ನೀಷಿಯನ್‌ಗೆ ಈ ಸಿನಿಮಾವನ್ನು ಅರ್ಪಣೆ ಮಾಡುತ್ತೇನೆ. ಈ ಸಿನಿಮಾಕ್ಕೆ ಅವರೇ ಹೀರೋಗಳು. ಅವರಾದ ಮೇಲೆ ಸ್ಕ್ರೀನ್ ಮೇಲೆ ರಾಣಾ, ರೀಷ್ಮಾ ನಾಯಕ-ನಾಯಕಿಯರು'' ಎಂದು ಎಲ್ಲ ಸಿನಿಮಾ ತಂತ್ರಜ್ಞರಿಗೆ ಸಿನಿಮಾವನ್ನು ಅರ್ಪಣೆ ಮಾಡಿದರು ಪ್ರೇಮ್.

ಪ್ರೇಕ್ಷಕರಿಗೆ ಋಣಿಯಾಗಿರುತ್ತೇನೆ: ಪ್ರೇಮ್
''ರಾಣಾ ಹಾಗೂ ರೀಷ್ಮಾ ಇಬ್ಬರನ್ನೂ ಜನ ಒಪ್ಪಿಕೊಂಡಿದ್ದಾರೆ. ಸಿನಿಮಾ ನೋಡಿದ ಮೇಲೆ ಇವರಿಬ್ಬರನ್ನೂ ಹಾಕಿಕೊಂಡಿದ್ದು ಒಳ್ಳೆಯದಾಯಿತು ಎನಿಸುತ್ತಿದೆ. ಹೊಸ ನಟ-ನಟಿಯರು ಎಂದು ನೋಡದೆ ನಮ್ಮ ಸಿನಿಮಾಕ್ಕೆ ಬಹಳ ದೊಡ್ಡ ಪ್ರತಿಕ್ರೆಯನ್ನು ಜನ, ಅಭಿಮಾನಿಗಳು ನೀಡಿದ್ದಾರೆ. ಅವರಿಗೆ ಜೀವನ ಪರ್ಯಂತ ಋಣಿಯಾಗಿರುತ್ತೇನೆ'' ಎಂದಿದ್ದಾರೆ ಪ್ರೇಮ್. 'ಏಕ್ ಲವ್ ಯಾ' ಸಿನಿಮಾದಲ್ಲಿ ರಾಣಾ, ರೀಷ್ಮಾ ಅಲ್ಲದೆ ನಟಿ ರಚಿತಾ ರಾಮ್ ಸಹ ನಟಿಸಿದ್ದಾರೆ. ಸಿನಿಮಾಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಹಾಡುಗಳು ಸೂಪರ್ ಹಿಟ್ ಆಗಿವೆ.


Click it and Unblock the Notifications










