ಜನವರಿಗೂ ರಿಲೀಸ್ ಇಲ್ಲ ಧ್ರುವ ಸರ್ಜಾ ಸಿನಿಮಾ 'ಕೆಡಿ'; ಪ್ರೇಮ್ ಸಿನಿಮಾ ರಿಲೀಸ್ ಯಾವಾಗ?
'ಮಾರ್ಟಿನ್' ಸೋಲು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪ್ಯಾನ್ ಇಂಡಿಯಾ ಎಂಟ್ರಿಗೆ ಹಿನ್ನೆಡೆಯಾಗಿತ್ತು. ಇದೇ ಬೆನ್ನಲ್ಲೇ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ರೆಡಿಯಾಗಿದೆ. ಅದುವೇ ಜೋಗಿ ಪ್ರೇಮ್ ಆಕ್ಷನ್ ಕಟ್ ಹೇಳಿರುವ 'ಕೆಡಿ: ದಿ ಡೆವಿಲ್'. ಈ ಸಿನಿಮಾಗಾಗಿ ಅವರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಆದರೆ, ಇನ್ನೇನು ರಿಲೀಸ್‌ಗೆ ಮುಹೂರ್ತ ಫಿಕ್ಸ್ ಆಗಿದೆ ಎಂದುಕೊಳ್ಳುವಾಗಲೇ ಮತ್ತೆ ಪೋಸ್ಟ್‌ಪೋನ್ ಎನ್ನುವ ಸುದ್ದಿ ಹರಿದಾಡುತ್ತೆ.
ಎರಡೂವರೆ ಮೂರು ವರ್ಷಗಳಿಂದ ನಿರ್ಮಾಣ ಆಗುತ್ತಿರುವ 'ಕೆಡಿ' ಬಿಗ್ ಬಜೆಟ್ ಸಿನಿಮಾ. ಬಾಲಿವುಡ್‌ನ ದಿಗ್ಗಜರಾದ ಸಂಜಯ್ ದತ್, ಶಿಲ್ಪಾ ಶೆಟ್ಟಿ, ವಿ.ರವಿಚಂದ್ರನ್ ಸೇರಿದಂತೆ ದೊಡ್ಡ ಬಳಗವೇ ಈ ಸಿನಿಮಾದಲ್ಲಿದೆ. ಹೀಗಿರುವಾಗ 'ಕೆಡಿ' ಸಹಜವಾಗಿಯೇ ನಿರೀಕ್ಷೆಯನ್ನು ಹುಟ್ಟಾಕಿದೆ. ಆದರೆ, ಪ್ರತಿ ಬಾರಿ ಪೋಸ್ಟ್‌ಪೋನ್ ಆಗುತ್ತಿರೋದು ಧ್ರುವ ಫ್ಯಾನ್ಸ್‌ಗೆ ಕಿರಿಕಿರಿ ಆದಂತೆ ಕಾಣುತ್ತಿದೆ.

ಕೆವಿಎನ್ ಸಂಸ್ಥೆ ನಿರ್ಮಾಣ ಮಾಡುತ್ತಿರುವ 'ಕೆಡಿ'ಗೆ ಯಾಕೆ ಇನ್ನೂ ಮುಹೂರ್ತ ಕೂಡಿ ಬಂದಿಲ್ಲ? ಜೋಗಿ ಪ್ರೇಮ್ ಸಿನಿಮಾ ಶೂಟಿಂಗ್ ಮುಗಿಸಿಲ್ಲವೇ? ತಡವಾಗುತ್ತಿರುವ ಹಿನ್ನೆಲೆಯೇನು? ಜನವರಿ 2026ಗೆ ರಿಲೀಸ್ ಆಗದೇ ಹೋದರೆ, ಮತ್ಯಾವಾಗ? ಗಣರಾಜ್ಯೋತ್ಸವಕ್ಕೆ ಕೆವಿಎನ್ ಇನ್ನೊಂದು ಸಿನಿಮಾ ರಿಲೀಸ್ ಮಾಡ್ತಿರೋದ್ಯಾಕೆ? ಸ್ಯಾಂಡಲ್‌ವುಡ್‌ನ ಈ ಬಿಸಿ ಬಿಸಿ ಚರ್ಚೆಯ ಅಸಲಿ ಮ್ಯಾಟರ್ ಏನು? ತಿಳಿಯುವುದಕ್ಕೆ ಮುಂದೆ ಓದಿ.
'ಕೆಡಿ' ರಿಲೀಸ್‌ಗೆ ಮೀನಾಮೇಷ ಯಾಕೆ?
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡುವುದಕ್ಕೆ 'ಕೆಡಿ' ತುಂಬಾನೇ ಮುಖ್ಯ. ಜೋಗಿ ಪ್ರೇಮ್ ಸಿನಿಮಾ ಏನಿಲ್ಲ ಅಂದರೂ ರಿಲೀಸ್ ಮುನ್ನ ಭರ್ಜರಿ ಹೈಪ್ ಕ್ರಿಯೇಟ್ ಮಾಡುತ್ತೆ. ಪ್ರೇಕ್ಷಕರನ್ನು ಆರಾಮಾಗಿ ಥಿಯೇಟರ್‌ಗೆ ಕರೆದುಕೊಂಡು ಬರುತ್ತೆ. ಬಿಡುಗಡೆಗೂ ಮುನ್ನವೇ ಜನರು ಥಿಯೇಟರ್ ಮುಂದೆ ಕ್ಯೂ ನಿಲ್ಲುವಂತೆ ಮಾಡುವ ತಾಕತ್ತು ಇವರಿಗಿದೆ. ಹೀಗಿದ್ದರೂ, ರಿಲೀಸ್ ಮಾಡುವುದಕ್ಕೆ ಮೀನಾಮೇಷ ಎಣಿಸುತ್ತಿರೋದ್ಯಾಕೆ? ಈ ಪ್ರಶ್ನೆ ಸಿನಿಮಾ ಮಂದಿಯನ್ನೇ ಕಾಡುತ್ತಿದೆ.
ಜನವರಿಯಲ್ಲಿ ರಿಲೀಸ ಆಗಲ್ಲ?
ಗಾಂಧಿನಗರದಲ್ಲಿ 'ಕೆಡಿ'ರಿಲೀಸ್ ಬಗ್ಗೆ ಸುದ್ದಿಯೊಂದು ಓಡಾಡುತ್ತಿದೆ. ಕೆವಿಎನ್ ಸಂಸ್ಥೆ ಅಧಿಕೃತವಾಗಿ ರಿಲೀಸ್ ಡೇಟ್ ಅನೌನ್ಸ್ ಮಾಡದೇ ಹೋದರೂ, ಜನವರಿ 23ಕ್ಕೆ ರಿಲೀಸ್ ಆಗುತ್ತೆ ಎಂದು ಹೇಳಲಾಗಿತ್ತು. ಆದ್ರೀಗ ಗಣರಾಜ್ಯೋತ್ಸವಕ್ಕೂ ಸಿನಿಮಾ ರಿಲೀಸ್ ಆಗಲ್ಲ. ಯುಗಾದಿ ಹಬ್ಬಕ್ಕೆ ಪ್ಯಾನ್ ಮಾಡಿದೆ ಚಿತ್ರತಂಡ ಎಂದು ಹೇಳಲಾಗುತ್ತಿದೆ. ಆದರೆ, ಅದೇ ಹಬ್ಬಕ್ಕೆ ಅವರದ್ದೇ ಸಿನಿಮಾ ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ರಿಲೀಸ್ ಆಗಲಿದೆ. ಹೀಗಾಗಿ ಅಂದೂ ಕೂಡ ರಿಲೀಸ್ ಆಗೋದು ಅನುಮಾನ.

'ಕೆಡಿ' ರಿಲೀಸ್‌ಗೆ ಡೇಟ್‌ಗಳೇ ಇಲ್ವಾ?
ಜೋಗಿ ಪ್ರೇಮ್ ಹಿಂದೊಮ್ಮೆ ಇದೇ ವರ್ಷ ಡಿಸೆಂಬರ್‌ಗೆ ರಿಲೀಸ್ ಮಾಡುತ್ತಿರೋದಾಗಿ ಹೇಳಿದ್ದರು. ಆದ್ರೀಗ ಡಿಸೆಂಬರ್‌ನಲ್ಲಿ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗುತ್ತಿವೆ. ಹೀಗಾಗಿ ಜನವರಿಗೆ ಪೋಸ್ಟ್‌ಪೋನ್ ಮಾಡಿದ್ದಾರೆ ಎನ್ನಲಾಗಿತ್ತು. ಆದರೆ, ಜನವರಿಯಲ್ಲೂ ಕೆವಿಎನ್ ಅವರದ್ದೇ ಎರಡು ಸಿನಿಮಾಗಳು ರಿಲೀಸ್ ಆಗಲಿದೆ. ಅವರೇ ನಿರ್ಮಿಸುತ್ತಿರುವ ದಳಪತಿ ವಿಜಯ್ ನಟನೆಯ 'ಜನನಾಯಗನ್' ರಿಲೀಸ್ ಆಗುತ್ತಿದೆ. ಇನ್ನೊಂದು ಕಡೆ ದುನಿಯಾ ವಿಜಯ್ ನಟನೆಯ 'ಲ್ಯಾಂಡ್‌ಲಾರ್ಡ್' ಸಿನಿಮಾವನ್ನು ವಿತರಣೆ ಮಾಡುತ್ತಿದ್ದಾರೆ. ಇದು ಜನವರಿ 23ಕ್ಕೆ ಬಿಡುಗಡೆಯಾಗಲಿದೆ. ಹೀಗಾಗಿ ಜನವರಿಯಲ್ಲಿ ರಿಲೀಸ್ ಆಗೋದು ಅನುಮಾನ. ಫೆಬ್ರವರಿ ಡ್ರೈ ತಿಂಗಳು. ಮಾರ್ಚ್ 'ಟಾಕ್ಸಿಕ್' ತಿಂಗಳು. ಇದರ ಹಿಂದೇನೆ ಐಪಿಎಲ್ ಶುರುವಾಗುತ್ತೆ. ಹೀಗಾಗಿ ಜೂನ್‌ವರೆಗೂ ಬಿಡುಗಡೆಗೆ ಮುಹೂರ್ತ ಕಾಣಿಸುತ್ತಿಲ್ಲ.
ಪೋಸ್ಟ್‌ಪೋನ್ ಆಗಿದ್ದು ಎಷ್ಟು ಸಿನಿಮಾಗಳು?
'ಕೆಡಿ: ದಿ ಡೆವಿಲ್' ಸಿನಿಮಾ ಕೆಲವು ಬಾರಿ ರಿಲೀಸ್ ಆಗುವ ಬಗ್ಗೆ ವದಂತಿಗಳು ಹಬ್ಬಿದ್ದವು. ಆ ವೇಳೆ ಹಲವು ಸಿನಿಮಾಗಳು ಪೋಸ್ಟ್‌ಪೋನ್ ಆಗಿದ್ದವು. ನಾಲ್ಕೈದು ಬಾರಿ ಹೀಗೆ ಪ್ಲ್ಯಾನ್ ಆಗಿತ್ತು. ಆಗಲೂ ಕೆಲವು ಸಿನಿಮಾ ಪೋಸ್ಟ್‌ಪೋನ್ ಆಗಿದ್ದವು. ಒಟ್ನಲ್ಲಿ ಯಾವಾಗ ಸಿನಿಮಾ ರಿಲೀಸ್ ಆಗುತ್ತೆ ಅನ್ನೋದು ಯಕ್ಷ ಪ್ರಶ್ನೆಯಾಗಿ ಉಳಿದಿದೆ.


Click it and Unblock the Notifications











