"ಕೆಜಿಎಫ್ ಕನ್ನಡ ಸಿನಿಮಾ ಅಲ್ಲವೇ ಅಲ್ಲ"; ಯಶ್ ಸಿನಿಮಾ ಬಗ್ಗೆ ವಾಟಾಳ್ ನಾಗರಾಜ್ ಕುಟುಕಿದ್ದೇಕೆ?
ಕನ್ನಡ ಚಿತ್ರರಂಗಕ್ಕೆ ರಾಷ್ಟ್ರ ಮಟ್ಟದಲ್ಲಿ ಹೆಸರು ತಂದುಕೊಟ್ಟ ಸಿನಿಮಾಗಳು 'ಕೆಜಿಎಫ್', 'ಕಾಂತಾರ' ಅನ್ನೋದರಲ್ಲಿ ಎರಡು ಮಾತಿಲ್ಲ. ಕನ್ನಡ ಸಿನಿಮಾಗಳಿಗೆ ಮಾರ್ಕೆಟ್ ಇಲ್ಲ ಅಂತಿದ್ದವರು, ಈಗ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಈ ಮಟ್ಟಕ್ಕೆ ಕನ್ನಡ ಸಿನಿಮಾ ಬೆಳೆದು ನಿಂತಿರೋದು ನಿಜ.
'ಕೆಜಿಎಫ್ 2', 'ಕಾಂತಾರ' ಸಿನಿಮಾಗಳು ಭಾರತದ ಬಾಕ್ಸಾಫೀಸ್ ಅನ್ನೇ ಕೊಳ್ಳೆ ಹೊಡೆದಿವೆ. ನಿರ್ಮಾಣ ಸಂಸ್ಥೆಗಳಿಗೆ ಇನ್ನೂ ಹಲವು ಸಿನಿಮಾಗಳನ್ನು ಮಾಡುವ ಶಕ್ತಿ ಬಂದಂತಾಗಿದೆ. ಆದರೆ, ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರಿಗೆ ಮಾತ್ರ ಯಶ್ ನಟನೆಯ 'ಕೆಜಿಎಫ್' ಸಿನಿಮಾ ಬಗ್ಗೆ ಯಾಕೋ ಅಸಮಧಾನ. ಈ ಸಿನಿಮಾ ಬಗ್ಗೆ ಯಾಕೋ ಕೋಪ.

ಕನ್ನಡ ಭಾಷೆ, ನೆಲ, ಜಲ ಅಂತ ಬಂದಾಗ ಅಲ್ಲಿ ವಾಟಾಳ್ ನಾಗರಾಜ್ ಇದ್ದೇ ಇರುತ್ತಾರೆ. ತಮ್ಮದೇ ವಿಶಿಷ್ಠ ಶೈಲಿಯಲ್ಲಿ ಪ್ರತಿಭಟನೆಗೆ ಇಳಿದು ಬಿಡುತ್ತಾರೆ. ಇವರು ಇತ್ತೀಚೆಗೆ ಸ್ಪೀಡ್ ಪ್ಲಸ್ ಕನ್ನಡ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದಾರೆ. ಇದರಲ್ಲಿ 'ಕೆಜಿಎಫ್' ಕನ್ನಡ ಸಿನಿಮಾ ಅಲ್ಲವೇ ಅಲ್ಲ ಎಂದು ಹೇಳಿದ್ದಾರೆ. ಅಷ್ಟಕ್ಕೂ ವಾಟಾಳ್ ನಾಗರಾಜ್ ಹೀಗಂದಿದ್ದು ಯಾಕೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ರಾಕಿಂಗ್ ಸ್ಟಾರ್ ಯಶ್ ನಟನೆಯ 'ಕೆಜಿಎಫ್' ಕೇವಲ ದಕ್ಷಿಣ ಭಾರತದಲ್ಲಷ್ಟೇ ಅಲ್ಲ, ಹಿಂದಿ ಬೆಲ್ಟ್‌ಗಳಲ್ಲಿಯೂ ಜನಪ್ರಿಯತೆ ಪಡೆದುಕೊಂಡಿದೆ. ಈ ಸಿನಿಮಾ ಯಶ್ ರಾಕಿಂಗ್ ಸ್ಟಾರ್‌ಯಿಂದ ನ್ಯಾಷನಲ್ ಸ್ಟಾರ್ ಆಗಿ ಹೊರಹೊಮ್ಮಿದ್ದು. ಇನ್ನೊಂದು ಕಡೆ ಕನ್ನಡ ಫಿಲ್ಮ್ ಮೇಕರ್ಸ್ ದೊಡ್ಡ ಮಟ್ಟಕ್ಕೆ ಆಲೋಚನೆ ಮಾಡುವುದಕ್ಕೆ ಧೈರ್ಯ ಮಾಡುತ್ತಿರುವುದಕ್ಕೆ ಈ ಸಿನಿಮಾನೇ ಕಾರಣ. ಹೀಗಿರುವಾಗ ವಾಟಾಳ್ ನಾಗರಾಜ್ ಅವರಿಗೆ 'ಕೆಜಿಎಫ್' ಮೇಲೆ ಯಾಕೆ ಕೋಪ.
ಸಂದರ್ಶಕರು ವಾಟಾಳ್ ನಾಗರಾಜ್ ಅವರಿಗೆ ನೀವು ಸಿನಿಮಾ ನೋಡುತ್ತೀರಾ? ಎಂದು ಪ್ರಶ್ನೆ ಮಾಡಿದ್ದರು. ಆ ವೇಳೆ ಕೆಜಿಎಫ್ ಸಿನಿಮಾ ಬಗ್ಗೆ ವಾಟಾಳ್ ನಾಗರಾಜ್ ಓಪನ್ ಆಗಿ ಮಾತಾಡಿದ್ದಾರೆ. "ನಾನು ನೋಡಿರುವುದೆಲ್ಲ ಕನ್ನಡ ಸಿನಿಮಾ.. ನೀವು ಹೇಳ್ತಿರೋದೆಲ್ಲ ತಮಿಳು, ತೆಲುಗು ಸಿನಿಮಾ. ಕೆಜಿಎಫ್, ಕಾಂತಾರನೆಲ್ಲ ಕನ್ನಡ ಸಿನಿಮಾ ಅಂತ ಹೇಗೆ ಹೇಳೋದು. ಕೆಜಿಎಫ್ ಕನ್ನಡ ಪದವೇ.. ಅಲ್ಲಿ ಕನ್ನಡ ಪದ ಎಲ್ಲಿದೆ? ಗಾಂಭೀರ್ಯ ಯಾವುದೂ ಇಲ್ಲವೇ ನಿಮ್ಮ ಸಿನಿಮಾಗೆ. ಈ ಸಿನಿಮಾಗಳಿಗೆ ಏನು ಬೇಕಾದರೂ ಇಡಬಹುದೇ?" ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಾಗೇ ಕನ್ನಡದಲ್ಲಿ ಸಾಕಷ್ಟು ಪದಗಳಿವೆ. ಸಿನಿಮಾ ಮಂದಿ ಅವುಗಳನ್ನು ಇಡಬೇಕು ಎಂದು ಪರೋಕ್ಷವಾಗಿ ಹೇಳಿದ್ದಾರೆ. "ಕನ್ನಡ ಶಬ್ದ ಕೋಶದಲ್ಲಿ ಎಂತಹ ಅದ್ಭುತ ಶಬ್ದಗಳಿವೆ. ಯಾಕೆ ಉಪಯೋಗಿಸುವುದಿಲ್ಲ ನೀವು? ಸ್ವರ್ಣಗೌರಿ ಆ ಕಾಲದಲ್ಲಿ ಅದ್ಭುತ. ಒಂದಲ್ಲ ಎರಡಲ್ಲ ಬೇಕಾದಷ್ಟು ಸಿನಿಮಾ ಹೆಸರುಗಳೇ ಅದ್ಭುತವಾಗಿತ್ತು. ಈಗ ಅವರು ಇಟ್ಟಿದ್ದೇ ಟೈಟಲ್.. ಹೇಳಿದ್ದೇನಾ? ಯಾವುದೇ ಟೈಟಲ್ ಇಟ್ಟರೂ ಸ್ವಲ್ಪನಾದರೂ ಕನ್ನಡ ಇರಬಾರದೇ?" ಎಂದು ವಾಟಾಳ್ ನಾಗರಾಜ್ ಪ್ರಶ್ನೆ ಮಾಡಿದ್ದಾರೆ.
ಹಾಗೇ ಕೆಜಿಎಫ್ ಕ್ಲೋಸ್ ಆದಾಗ ಸಾಕಷ್ಟು ಮಂದಿ ಮನೆ, ಜೀವನ ಕಳೆದುಕೊಂಡಿದ್ದಾರೆ. ಆ ಬಗ್ಗೆ ಸಿನಿಮಾ ತೋರಿಸಿಲ್ಲ. ಕೆಜಿಎಫ್ ಇತಿಹಾಸವನ್ನು ತೋರಿಸಿಲ್ಲ. ಅಂತಾನೂ ಸ್ಪೀಡ್ ಪ್ಲಸ್ ಕನ್ನಡ ಜೊತೆಗಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಕನ್ನಡ ಭಾಷೆಗೆ ಧಕ್ಕೆ ಆಗಿದೆ ಅಂತ ಗೊತ್ತಾಗ ವಾಟಾಳ್ ನಾಗರಾಜ್ ಸದಾ ಮುಂದಿರುತ್ತಾರೆ.


Click it and Unblock the Notifications











