"ಥಿಯೇಟರ್ ಮುಚ್ಚುತ್ತಿವೆ.. ಯಾವ ಹೀರೊಗೂ ಕೆಲಸ ಇರಲ್ಲ": ಭವಿಷ್ಯ ನುಡಿದ ಜಾಕ್ ಮಂಜು
ಭಾರತೀಯ ಚಿತ್ರರಂಗದಲ್ಲಿ ಡಬ್ಬಿಂಗ್ ಸಿನಿಮಾಗಳಿಗೆ ಒಂದು ಮಾರುಕಟ್ಟೆ ಇದೆ. ಭಾಷೆ ಯಾವುದೇ ಇರಲಿ. ಆ ಸಿನಿಮಾವನ್ನು ಡಬ್ ಮಾಡಿದರೆ, ನಿರ್ಮಾಪಕನಿಗೆ ಒಳ್ಳೆ ಹಣ ಸಿಕ್ಕೇ ಸಿಗುತ್ತೆ. ಇಲ್ಲಿವರೆಗೂ ಡಬ್ ಆದ ಸಿನಿಮಾಗಳು ಕೇವಲ ಟಿವಿಯಲ್ಲಷ್ಟೇ ನೋಡುವುದಕ್ಕೆ ಸಿಗುತ್ತಿತ್ತು. ಆದ್ರೀಗ ಥಿಯೇಟರ್‌ಗೂ ಲಗ್ಗೆ ಇಡುತ್ತಿದೆ.
'ಬಾಹುಬಲಿ', 'ಕೆಜಿಎಫ್ 2' ಬಳಿಕ ಡಬ್ಬಿಂಗ್ ಸಿನಿಮಾಗಳಿಗೆ ಬೇಡಿಕೆ ಹೆಚ್ಚಾಗಿರೋದು ನಿಜ. ದಕ್ಷಿಣ ಭಾರತದ ಸಿನಿಮಾಗಳು ಬೇರೆ ಭಾಷೆಯಲ್ಲಿ ಡಬ್ ಆಗಿ ರಿಲೀಸ್ ಆಗುತ್ತಿವೆ. ಅಲ್ಲದೆ ಬಾಕ್ಸಾಫೀಸ್‌ನಲ್ಲೂ ದೊಡ್ಡ ಮೊತ್ತವನ್ನು ಕಲೆ ಹಾಕುತ್ತಿದೆ.

ಆದರೆ, ಕನ್ನಡ ಸಿನಿಮಾಗಳು ಬೇರೆ ಭಾಷೆಗೆ ಡಬ್ ಆಗಿ ಸಕ್ಸಸ್ ಕಾಣುತ್ತಿವೆ. ಆದರೆ, ಬೇರೆ ಭಾಷೆಯ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ರಿಲೀಸ್ ಆಗಿದ್ದು ಗೆದ್ದಿಲ್ಲ. ಹೀಗಾಗಿ ನಿರ್ಮಾಪಕ ಜಾಕ್ ಮಂಜು ಕನ್ನಡ ಚಿತ್ರರಂಗದ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಮುಂದೆ ಯಾವ ಹೀರೊಗೂ ಕೆಲಸ ಇರೋದಿಲ್ಲ ಅಂತ ನೇರವಾಗಿ ಹೇಳಿದ್ದಾರೆ. ಅದ್ಯಾಕೆ ಹೀಗಂದ್ರು ಅನ್ನೋದನ್ನು ತಿಳಿಯಲು ಮುಂದೆ ಓದಿ..
ದೊಡ್ಡ ಸಿನಿಮಾಗಳೇ ಇಲ್ಲ'
ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆದ ಕನ್ನಡ ಸಿನಿಮಾಗಳು ಯಶಸ್ಸು ಕಾಣುತ್ತಿವೆ. ಯಶ್, ಸುದೀಪ್, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿಗೆ ರಾಷ್ಟ್ರ ಮಟ್ಟದಲ್ಲಿ ಜನಪ್ರಿಯತೆ ಸಿಕ್ಕಿದೆ. ಇಲ್ಲಿಂದಲೇ ಕನ್ನಡ ಚಿತ್ರರಂಗಕ್ಕೆ ದೊಡ್ಡ ಸಮಸ್ಯೆ ಕಾಡುವುದಕ್ಕೆ ಶುರುವಾಗಿದೆ.

ಯಶ್, ಸುದೀಪ್, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿಗೆ ದೊಡ್ಡ ಗೆಲುವು ಸಿಗುತ್ತಿದ್ದಂತೆ ಇವರ ಮುಂದಿನ ಪ್ರಾಜೆಕ್ಟ್ ತಡವಾಗುತ್ತಿದೆ. ಕಾದು ಕಾದೂ ಒಳ್ಳೊಳ್ಳೆ ಪ್ರಾಜೆಕ್ಟ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇತ್ತ ಪ್ಯಾನ್ ಇಂಡಿಯಾ ರೇಂಜಿ ಸಿನಿಮಾಗಳನ್ನೇ ಎಕ್ಸ್‌ಪೆಕ್ಟ್ ಮಾಡುತ್ತಿರುವ ಜನರಿಗೆ ಚಿಕ್ಕ ಪುಟ್ಟ ಸಿನಿಮಾಗಳನ್ನು ನೋಡುವ ಮನಸ್ಸಾಗುತ್ತಿಲ್ಲ. ಅಲ್ಲದೆ ಡಬ್ಬಿಂಗ್ ಸಿನಿಮಾಗಳಿಗೂ ದೊಡ್ಡ ಮಾರುಕಟ್ಟೆ ಇನ್ನೂ ಬಂದಿಲ್ಲ.
"ಯಾವ ಹೀರೊಗೂ ಕೆಲಸ ಇರಲ್ಲ"
2023ರಲ್ಲಿ ಕನ್ನಡ ಚಿತ್ರರಂಗ ಹೇಳಿಕೊಳ್ಳುವಂತಹ ಬಿಗ್ ಸಿನಿಮಾ ಕೊಟ್ಟಿಲ್ಲ. ಅರ್ಧ ವರ್ಷ ಕಳೆದರೂ ಸೂಪರ್ ಹಿಟ್, ಮೆಗಾ ಹಿಟ್ ಅನ್ನುವಂತಹ ಸಿನಿಮಾಗಳು ಬಂದೇ ಇಲ್ಲ. ಹೀಗಾಗಿ ಕನ್ನಡ ಫಿಲ್ಮ್ ಮೇಕರ್‌ಗಳಿಗೆ ಆತಂಕ ಶುರುವಾಗಿದೆ. ಇತ್ತ ಕನ್ನಡಕ್ಕೆ ಡಬ್ ಆದ ಸಿನಿಮಾಗಳು ಕೂಡ ಓಡುತ್ತಿಲ್ಲ. ಈ ಕಾರಣಕ್ಕೆ ನಿರ್ಮಾಪಕ ಕನ್ನಡ ಚಿತ್ರರಂಗದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
"ನಿಮ್ಮೆಲ್ಲರಿಗೂ ಗೊತ್ತಿದೆ. ಇವತ್ತು ಥಿಯೇಟರ್‌ಗಳು ಮುಚ್ಚುವ ಪರಿಸ್ಥಿತಿಗೆ ಬರುತ್ತಿದೆ. ಮುಚ್ಚಿದ ಬಳಿಕ ಯಾವ ಸಿನಿಮಾ ನೋಡುವುದಕ್ಕೂ ಥಿಯೇಟರ್ ಇರೋದಿಲ್ಲ. ಯಾವ ಹೀರೊಗಳಿಗೂ ಕೆಲಸ ಇರೋದಿಲ್ಲ ಅಂತ ನೇರವಾಗಿ ಹೇಳುವುದಕ್ಕೆ ಇಷ್ಟ ಪಡುತ್ತೇನೆ." ಎಂದು ಕನ್ನಡ ಹೀರೊಗಳ ಬಗ್ಗೆ ಭವಿಷ್ಯ ನುಡಿದಿದ್ದಾರೆ.
"ಡಬ್ಬಿಂಗ್ ಸಿನಿಮಾ ಗೆಲ್ಲಬೇಕು"
ಕನ್ನಡದಲ್ಲಿ ಅದೆಷ್ಟೇ ದೊಡ್ಡ ಬಜೆಟ್ ಸಿನಿಮಾಗಳು ಡಬ್ ಆದರೂ ಬಾಕ್ಸಾಫೀಸ್‌ನಲ್ಲಿ ಸೋತಿದೆ. ಇತ್ತೀಚೆಗೆ ನರೇಶ್ ಹಾಗೂ ಪವಿತ್ರಾ ಲೋಕೇಶ್ ಸಿನಿಮಾ 'ಮತ್ತೆ ಮದುವೆ' ರಿಲೀಸ್ ಆಗಿದೆ. ಈಗ ಗುಜರಾತಿ ಸಿನಿಮಾ 'ರಾಯರು ಬಂದರು ಮಾವನ ಮನೆಗೆ' ಅನ್ನೋ ಟೈಟಲ್ ಇಟ್ಟುಕೊಂಡು ರಿಲೀಸ್ ಆಗುತ್ತಿದೆ. ಈ ಸಂದರ್ಭದಲ್ಲಿ ಕನ್ನಡಿಗರು ಡಬ್ಬಿಂಗ್ ಸಿನಿಮಾಗಳನ್ನು ಸಪೋರ್ಟ್ ಮಾಡಬೇಕು ಎಂದು ಜಾಕ್ ಮಂಜು ಹೇಳಿದ್ದಾರೆ.
"ನಾವು ಕನ್ನಡ ಸಿನಿಮಾ ಮಾಡಿ, ಬೇರೆ ಭಾಷೆಗೆ ಡಬ್ ಮಾಡಿ, ಬಹಳಷ್ಟು ಸಿನಿಮಾಗಳು ಗೆದ್ದಿವೆ. ನಾಲ್ಕೈದು ವರ್ಷದಿಂದ ರಾಷ್ಟ್ರದ ಮೂಲೆ ಮೂಲೆಯಲ್ಲೂ ಗೌರವ ತಂದುಕೊಟ್ಟಿದೆ. ಅದೇ ರೀತಿ ಗುಜರಾತಿ ಸಿನಿಮಾವನ್ನು ಕನ್ನಡಕ್ಕೆ ಡಬ್ ಮಾಡಿ, ಇಲ್ಲಿ ರಿಲೀಸ್ ಮಾಡುವುದಕ್ಕೆ ಬಂದಿದ್ದಾರೆ. ಅವರಿಗೂ ಕನ್ನಡಿಗರು ಬೆಂಬಲ ನೀಡಬೇಕು" ಎಂದು ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡಿದ್ದಾರೆ.


Click it and Unblock the Notifications











