"ಶ್ರುತಿ ಹರಿಹರನ್ ಹೇಳಿದ್ದೆಲ್ಲ ನಿಜನಾ? ಅರ್ಜುನ್ ಸರ್ಜಾ ಕೆಟ್ಟವರು ಅಂತನಾ?"; ಗಂಡುಗಲಿ ಕೆ.ಮಂಜು ಪ್ರಶ್ನೆ
ಮಲಯಾಳಂ ಚಿತ್ರರಂಗದಲ್ಲಿ ಹೇಮಾ ಕಮಿಟಿ ವರದಿ ದೊಡ್ಡ ಸಂಚಲ ಸೃಷ್ಟಿಸಿತ್ತು. ಇದೇ ಮಾದರಿಯಲ್ಲಿ ತಮ್ಮ ಚಿತ್ರರಂಗದಲ್ಲೂ ಕಮಿಟಿ ರಚನೆ ಆಗಬೇಕು ಅನ್ನೋ ಒತ್ತಡ ಹೆಚ್ಚಾಗುತ್ತಿದೆ. ತೆಲುಗು ಹಾಗೂ ಕನ್ನಡ ಚಿತ್ರರಂಗದಲ್ಲೂ ಈ ಸಮಿತಿ ರಚಿಸುವಂತೆ ಕೂಗು ಕೇಳಿ ಬರುತ್ತಿದೆ. ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ 'ಫೈರ್' ತಂಡ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರನ್ನೂ ಭೇಟಿ ಮಾಡಿ ಮನವಿಯನ್ನು ಸಲ್ಲಿಸಿದೆ.
ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಸಮಾನತೆ ಇರಬೇಕು. ಲೈಂಗಿಕ ದೌರ್ಜನ್ಯವನ್ನು ತಡೆಗಟ್ಟಬೇಕು. ಈ ಕಾರಣಕ್ಕೆ ಚಿತ್ರರಂಗದಲ್ಲಿರುವ ಇಂತಹ ನ್ಯೂನ್ಯತೆಗಳನ್ನು ಸರಿಪಡಿಸಿ, ಮಹಿಳೆಯರಿಗೆ ಪ್ರತಿಕೂಲ ವಾತಾವರಣವನ್ನು ನಿರ್ಮಾಣ ಮಾಡಬೇಕು ಅನ್ನೋದು 'ಫೈರ್' ಸದಸ್ಯರ ಬೇಡಿಕೆಯಾಗಿದೆ.

ನಿರ್ಮಾಪಕ ಕೆ.ಮಂಜು ಚಿತ್ರರಂಗ ಮಹಿಳೆಯರನ್ನು ಯಾವ ರೀತಿ ನಡೆಸಿಕೊಳ್ಳುತ್ತಿದೆ? ಮೀಟೂ ಪ್ರಕರಣಗಳು ನಡೆಯುತ್ತಿದೆಯಾ? ಅನ್ನೋದನ್ನು ಬಗ್ಗೆ ಟಿವಿ9 ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಮಾತಾಡಿದ್ದಾರೆ. ಅಷ್ಟೇ ಅಲ್ಲದೆ ಅರ್ಜುನ್ ಸರ್ಜಾ ಹಾಗೂ ಶ್ರುತಿ ಹರಿಹರನ್ ಅವರ ಮೀಟೂ ಪ್ರಕರಣದ ಬಗ್ಗೆನೂ ಆಕ್ರೋಶ ಹೊರ ಹಾಕಿದ್ದಾರೆ.
ಮೀಟೂ ಅಭಿಯಾನ ಆರಂಭ ಆದಾಗ, ಶ್ರುತಿ ಹರಿಹರನ್ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಬಳಿಕ ಈ ಪ್ರಕರಣದ ವಿರುದ್ಧ ಅರ್ಜುನ್ ಸರ್ಜಾ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಸಾಕ್ಷಾದಾರಗಳ ಕೊರತೆಯಿಂದ ಈ ಕೇಸ್ ಕ್ಲೋಸ್ ಆಗಿತ್ತು. ಈಗ ಮತ್ತೆ ಕನ್ನಡ ಚಿತ್ರರಂಗಕ್ಕೂ ಹೇಮಾ ಕಮಿಟಿಯಂತಹ ವರದಿ ಬೇಕು ಅನ್ನೋ ಒತ್ತಡ ಹೆಚ್ಚಾಗುತ್ತಿದ್ದಂತೆ ನಿರ್ಮಾಪಕ ಕೆ. ಮಂಜು ನಟಿ ಶ್ರುತಿ ಹರಿಹರನ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
"ಅಂತಹದ್ದೇನಾದರೂ ಆಗಿದ್ದರೆ ಫಿಲ್ಮ್ ಚೇಂಬರ್‌ನಲ್ಲಿ ಇತ್ಯರ್ಥ ಆಗುತ್ತಿತ್ತು. ಏನೋ ವೈಯಕ್ತಿಕ ದ್ವೇಷ ಇಟ್ಟುಕೊಂಡಿರಬಹುದು. ಆ ಹೆಣ್ಣು ಮಗು ಬಗ್ಗೆ ಅಲ್ಲ. ಅದು ಪಾಪ ನಮ್ಮ ಮನೆ ಹೆಣ್ಣು ಮಗು ತರ. ಸಾಮಾನ್ಯವಾಗಿ ದ್ವೇಷದಲ್ಲಿ ಹೀಗೆ ಮಾಡಿರಬಹುದು. ಮೀಟೂ ಅಂದಾಕ್ಷಣ ಆಕ್ಷನ್ ತೆಗೆದುಕೊಳ್ಳಬಹುದಾ? ಅದು ತಪ್ಪು ಅಲ್ವಾ?" ಎಂದು ನಿರ್ಮಾಪಕ ಕೆ.ಮಂಜು ಪ್ರಶ್ನೆ ಮಾಡಿದ್ದಾರೆ.

ಶ್ರುತಿ ಹರಿಹರನ್ ದಕ್ಷಿಣ ಭಾರತದ ನಟ ಅರ್ಜುನ್ ಸರ್ಜಾ ವಿರುದ್ಧ ಗಂಭೀರ ಆರೋಪ ಮಾಡುತ್ತಿದ್ದನ್ನು ಪರೋಕ್ಷವಾಗಿ ವಿರೋಧಿಸಿದ್ದಾರೆ. ಅರ್ಜುನ್ ಸರ್ಜಾ ಬೆಂಬಲಕ್ಕೆ ನಿಂತು ಕೆ.ಮಂಜು ಮಾತಾಡಿದ್ದಾರೆ. "ಶ್ರುತಿ ಹರಿಹರನ್ ಹೀಗಂದ್ರು ಆಕ್ಷನ್ ತೆಗೆದುಕೊಂಡಿಲ್ಲ ಅಂದರೆ ಏನು ಅರ್ಥ? ಅರ್ಜುನ್ ಸರ್ಜಾ ಕೆಟ್ಟವರು ಅಂತ ಅರ್ಥನಾ? ಅರ್ಜುನ್ ಸರ್ಜಾ ಎಂತಹ ಕಲಾವಿದರೊಂದಿಗೆ ಕೆಲಸ ಮಾಡಿದ್ದಾರೆ. ಎಂತಹ ಆರ್ಟಿಸ್ಟ್. ಹಾಗಂತ ಶ್ರುತಿ ಹರಿಹರನ್ ಒಳ್ಳೆಯ ಆರ್ಟಿಸ್ಟ್ ಅಲ್ಲ ಅಂತ ಹೇಳುತ್ತಿಲ್ಲ. ಏನೋ ಅನಿರೀಕ್ಷಿತವಾಗಿ ಆಗಿದೆ ಅಂತ ಅಂದುಕೊಳ್ಳಬೇಕು. ಅದು ಆಕ್ಸಿಡೆಂಟ್ ಅಷ್ಟೇ. ಬೇಕು ಅಂತ ಯಾರೂ ಮಾಡುವುದಿಲ್ಲ" ಎಂದಿದ್ದಾರೆ.
ಅರ್ಜುನ್ ಸರ್ಜಾ ಪರ ಕೋರ್ಟ್ ತೀರ್ಪುಕೊಟ್ಟಿದ್ದನ್ನು ನಿರ್ಮಾಪಕ ಕೆ.ಮಂಜು ಸ್ವಾಗತಿಸಿದ್ದಾರೆ. "ನ್ಯಾಯಾಲಯದ ಬಗ್ಗೆ ಗೌರವವಿದೆ. ಕೋರ್ಟ್ ಹೇಳಿದ್ದನ್ನು ನಂಬುತ್ತೇವೆ. ಇವರು ಹೇಳಿದ್ದನ್ನೆಲ್ಲ ನಂಬುವುದಿಲ್ಲ. ಕಾನೂನಿಗೆ ಸಾಕ್ಷಿ ಬೇಕು. ಸಾಕ್ಷಿ ಇದ್ದರೆ ಯಾರಿಗೆ ಬೇಕಾದರೂ ಶಿಕ್ಷೆ ಕೊಡುತ್ತೆ. ದೊಡ್ಡೋನು ಚಿಕ್ಕೋನು ಅನ್ನೋ ಭಾವನೆ ಏನೂ ಇಲ್ಲ ಕಾನೂನಿನ ಮೇಲೆ. ದೊಡ್ಡವನಿಗೂ ಒಂದೇ. ಚಿಕ್ಕವನಿಗೂ ಒಂದೇ." ಎಂದು ನಿರ್ಮಾಪಕ ಕೆ.ಮಂಜು ಹೇಳಿದ್ದಾರೆ.
ಇಷ್ಟೇ ಅಲ್ಲದೆ ಹೇಮಾ ಕಮಿಟಿಯಂತೆ ಕನ್ನಡ ಚಿತ್ರರಂಗದಲ್ಲಿ ಮಾಡಿದರೆ ಸರ್ಕಾರದ ಹಣ ಖರ್ಚು ಆಗುತ್ತಷ್ಟೆ. ಯಾರಿಗಾದರೂ ಹೀಗೆ ಅನ್ಯಾಯ ಆಗಿದ್ದರೆ, ವಾಣಿಜ್ಯ ಮಂಡಳಿಗೆ ಬನ್ನಿ. ನಿರ್ಮಾಪಕರ ಸಂಘ ಕೂಡ ಇದ್ದು, ಅಲ್ಲಿ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಬಹುದು ಎಂದು ನಿರ್ಮಾಪಕ ಕೆ.ಮಂಜು ಹೇಳಿದ್ದಾರೆ.
ಚೇತನ್, ಕವಿತಾ ಲಂಕೇಶ್ ಸೇರಿದಂತೆ ಕನ್ನಡ ಚಿತ್ರರಂಗದಿಂದ ಸುಮಾರು 150ಕ್ಕೂ ಅಧಿಕ ಮಂದಿಗೆ ಕಮಿಟಿ ರಚನೆಗೆ ಸಹಿ ಹಾಕಿದ್ದಾರೆ. ಸಿಎಂ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ ಮನವಿಯನ್ನೂ ಮಾಡಿದ್ದಾರೆ. ಈ ನಡೆ ಕನ್ನಡ ಚಿತ್ರರಂಗದ ಹಲವರಿಗೆ ಹಿಡಿಸಿಲ್ಲ. ಕೆ. ಮಂಜು ಕೂಡ ಪರೋಕ್ಷವಾಗಿ ಈ ಕಮಿಟಿಯನ್ನು ವಿರೋಧಿಸಿದಂತೆ ಭಾಸವಾಗುತ್ತಿದೆ.


Click it and Unblock the Notifications











