"ನನಗೆ ಮೋಸ ಮಾಡಿದವ್ರು ಇದ್ದಾರಾ ಇವತ್ತು? ದೇವರು ಕರೆದುಕೊಂಡ"; ಅಪ್ಪು ಬಗ್ಗೆ ನಾಲಿಗೆ ಹರಿಬಿಟ್ಟ ಕನಕಪುರ ಶ್ರೀನಿವಾಸ್
ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಕನಕಪುರ ಶ್ರೀನಿವಾಸ್ ಇತ್ತೀಚೆಗೆ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಇಲ್ಲ ಸಲ್ಲದ, ಬೇಡದ ಹೇಳಿಕೆಗಳನ್ನು ಕೊಡುತ್ತಾ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗುತ್ತಿದ್ದಾರೆ. ಇಂದು (ಫೆಬ್ರವರಿ 5) ಕನಕಪುರ ಶ್ರೀನಿವಾಸ್ ತಾವೇ ನಿರ್ಮಾಣ ಮಾಡಿದ 'ಕಾಟನ್‌ಪೇಟೆ' ಸಿನಿಮಾದ ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಂಡಿದ್ದರು. ಈ ವೇಳೆ ಪುನೀತ್ ರಾಜ್‌ಕುಮಾರ್ ಬಗ್ಗೆ ಗಂಭೀರ ಆರೋಫಗಳನ್ನು ಮಾಡಿದ್ದಾರೆ.
ಹಾಗಂತ ಕೇವಲ ಪುನೀತ್ ರಾಜ್‌ಕುಮಾರ್ ಅಷ್ಟೇ ಅಲ್ಲ. ಧ್ರುವ ಸರ್ಜಾ, ದರ್ಶನ್‌ರನ್ನೂ ಎಳೆದು ತಂದಿದ್ದಾರೆ. ಕನಕಪುರ ಶ್ರೀನಿವಾಸ್ ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಾಗಿ, ವಿತರಕರಾಗಿ ಜನಪ್ರಿಯರಾಗಿದ್ದಾರೆ. ಹಲವು ಸಿನಿಮಾಗಳನ್ನು ನಿರ್ಮಾಣದ ಜೊತೆ ವಿತರಣೆಯನ್ನೂ ಮಾಡಿದ್ದಾರೆ. ಹಿರಿಯ ನಿರ್ಮಾಪಕ ಈಗ ನಷ್ಟದಲ್ಲಿ ಇದ್ದಾರೆ. ಇತ್ತೀಚೆಗೆ ನಿರ್ಮಿಸಿದ ಕೆಲವು ಸಿನಿಮಾಗಳು ನಷ್ಟವನ್ನುಂಟು ಮಾಡಿದ್ದವು.

ಈಗ ಪುನೀತ್ ರಾಜ್‌ಕುಮಾರ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಸಿನಿಮಾಗಾಗಿ ಮೂಟೆ ಲೆಕ್ಕದಲ್ಲಿ ಹಣವನ್ನು ಕೇಳಿದಾಗ ಕೊಟ್ಟೆ, ಆದರೆ ನನಗೆ ಮೋಸ ಮಾಡಿದರು. ಅದಕ್ಕೆ ಅವರನ್ನು ಬೇಗ ಕರೆದುಕೊಂಡರು ಎಂದು ಕನಕಪುರ ಶ್ರೀನಿವಾಸ್ ಹೇಳಿದ್ದಾರೆ. ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗುತ್ತಿದೆ. ಪುನೀತ್ ಅಭಿಮಾನಿಗಳು ಆಕ್ರೋಶ ಹೊರ ಹಾಕುತ್ತಿದ್ದಾರೆ. ಅಷ್ಟಕ್ಕೂ ಕನಕಪುರ ಶ್ರೀನಿವಾಸ್ ಮಾಡಿದ ಆರೋಪವೇನು? ಅಭಿಮಾನಿಗಳ ಆಕ್ರೋಶಕ್ಕೆ ಕಾರಣವೇನು? ತಿಳಿಯುವುದಕ್ಕೆ ಮುಂದೆ ಓದಿ.
ಮೋಸ ಮಾಡಿದವ್ರು ಸತ್ತಿದ್ದಾರೆ.. ಜೈಲ್‌ಗೆ ಹೋಗಿದ್ದಾರೆ
"ನಾನು ಯಾರಿಗೂ ಮೋಸ ಮಾಡಿಲ್ಲ. ನನಗೆ ಇಂಡಸ್ಟ್ರಿಯಲ್ಲಿ ಎಷ್ಟೋ ಜನ ಮೋಸ ಮಾಡಿದ್ದಾರೆ. ಎಷ್ಟೋ ಜನ ಜೈಲ್‌ಗೆ ಹೋಗಿದ್ದಾರೆ. ಎಷ್ಟೋ ಜನ ಸತ್ತೋಗಿದ್ದಾರೆ. ಯಾರೂ ಉಳಿಯಲಿಲ್ಲ. ಇದೇ ಪುರಿ ಜಗನ್ನಾಥ್ ಕರೆದುಕೊಂಡು ಬಂದು ಯುವರಾಜ ಅಂತ ಲಂಡನ್‌ನಲ್ಲಿ ಮುಹೂರ್ತ ಮಾಡಿದೆ. ಸೌತ್ ಇಂಡಿಯಾದಲ್ಲಿ ಯಾರೂ ಮಾಡಿಲ್ಲ. ಆ ಪುರಿ ಜಗನ್ನಾಥ್‌ನಿಂದ ಪುನೀತ್ ರಾಜ್‌ಕುಮಾರ್ ಸಿನಿಮಾ ಆಯ್ತು. ಕನ್ನಡಕ್ಕೆ ಒಬ್ಬ ಹೀರೋ ಬಂದ. ಅದು ಕನಕಪುರ ಶ್ರೀನಿವಾಸ್‌ನಿಂದ ಅಂತ ಎದೆ ತಟ್ಟಿಕೊಂಡು ಹೇಳುತ್ತೇನೆ. ರಾಜ್‌ಕುಮಾರ್‌ಯಿಂದ ಅಲ್ಲ ಕನಕಪುರ ಶ್ರೀನಿವಾಸ್‌ನಿಂದ ಒಬ್ಬ ಹೀರೋ ಬಂದ." ಎಂದು ಆಕ್ರೋಶದಿಂದ ಮಾತಾಡಿದ್ದಾರೆ.
ಮೋಸ ಮಾಡಿದ್ರು.. ದೇವರು ಕರೆದುಕೊಂಡ
ಇದೇ ವೇಳೆ ಪುನೀತ್ ರಾಜ್‌ಕುಮಾರ್ ತನಗೆ ಮೋಸ ಮಾಡಿದರು. ಆ ಕಾರಣಕ್ಕೆ ಅವರನ್ನು ದೇವರು ಕರೆದುಕೊಂಡ ಎಂದು ಹೇಳಿಕೆ ಕೊಟ್ಟು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. "ಅವರು ನನಗೆ ಮೋಸ ಮಾಡಿದರು. ಇದ್ದಾರಾ ಇವತ್ತು? ದೇವರು ಕರೆದುಕೊಂಡ. ನೀನು ಮೋಸಗಾರ ಬಾ ಮೇಲೆ ನಿನ್ನಿಂದ ಅನುಕೂಲ ಆಗಲ್ಲ. ಬಾ ಮೇಲೆ ಎಂದು ದೇವರು ಕರೆದುಕೊಂಡ. ಇರಲಿ ಅಲ್ಲಾದರೂ ಒಳ್ಳೆಯದು ಮಾಡಲಿ." ಎಂದು ಕನಕಪುರ ಶ್ರೀನಿವಾಸ್ ಹೇಳಿದ್ದಾರೆ.
"ಪಿಕ್ಚರ್ ಮಾಡೋಕೆ ದುಡ್ಡುಕೊಟ್ಟವರು ಸತ್ತೋಗಿದ್ದಾರೆ"
"ನನ್ನ ಹೊಟ್ಟೆ ಉರಿಸಿದ್ದಾರೆ. ಆಗ ದುಡ್ಡು ಅಂದರೆ, ಮೂಟೆ ಲೆಕ್ಕದಲ್ಲಿ ತೆಗೆದುಕೊಂಡು ಹೋಗಿ ಕೊಟ್ಟಿದ್ದೇನೆ. ಇವತ್ತು ದುಡ್ಡು ಕೊಡಿ ಸ್ವಾಮಿ. ನಾನು ಪಿಕ್ಚರ್ ಮಾಡೋಕೆ ದುಡ್ಡು ಕೊಟ್ಟವರು ಸತ್ತೋಗಿದ್ದಾರೆ. ಅವರ ಆಸ್ತಿಯಿದೆ. ಮನೆಯಿದೆ. ಬಾಡಿಗೆ ಬರುತ್ತೆ. ನಾನು ಕೆಟ್ಟೊಗಿದ್ದೀನಿ, ದುಡ್ಡು ಕೊಡಿ ಅಂದರೆ, ಯಾವುದು ರೀ ಮಯೂರ? ಅಂತಾರೆ. ಇನ್ನೂ ವಜ್ರೇಶ್ವರಿ ಸ್ವಾಮಿ ಬದುಕಿದ್ದಾನೆ. ಕುಮಾರ್ ಬದುಕಿದ್ದಾನೆ ಸತ್ತಿಲ್ಲ. ಅವತ್ತು ಕನಕಪುರ ಶ್ರೀನಿವಾಸ್ ಮೂಟೆ ಮೂಟೆ ದುಡ್ಡು ಕೊಟ್ಟಿದ್ದಾನೆ ಅಂತ ಒಬ್ಬ ಬಂದು ಹೇಳಲಿಲ್ಲ. ಅವರೆಲ್ಲರೂ ಎಕ್ಕುಟ್ಟು ಹೋಗಿದ್ದಾರೆ." ಎಂದು ಕನಕಪುರ ಶ್ರೀನಿವಾಸ್ ಆಕ್ರೋಶ ಹೊರ ಹಾಕಿದ್ದಾರೆ.
ಅನ್ನ ಹಾಕಿದವನಿಗೆ ನಾಶ ಆಗಿ ಹೋದ ಅಂತಾರೆ
"ಅಣ್ಣಾವ್ರು ಹೇಳ್ತಿದ್ರು.. ಲಾಸ್ ಆಯ್ತೇನ್ರಿ ಮೂರು ತಿಂಗಳು ಟೈಮ್ ಕೊಡುತ್ತೇನೆ ಮಾಡಿ. ನಿಮಗೆಲ್ಲ ಗೊತ್ತಿರೋ ವಿಚಾರನೇ. ಈಗ ಯಾರು ಆತರ ಇದ್ದಾರೆ ಸ್ವಾಮಿ. ಲಾಸ್ ಆಗಿ ಹೋಯ್ತಾ.. ಹೋದ ಬಿಡು ಅವನು. ಅನ್ನ ಹಾಕಿದವನಿಗೆ ನಾಶ ಆಗಿ ಹೋದ ಅಂತಾರೆ ಉಳಿತಾರಾ? ಯಾರೂ ಉಳಿಯಲಲ್ಲ. ಎಲ್ಲ ಮಣ್ಣಿಗೆ ಹೋಗಬೇಕು. ಒಬ್ಬ ಮನುಷ್ಯನಿಗೆ ಕೊಟ್ಟಿರೋದು ಮೂರಡಿ ಆರಡಿನೇ." ಎಂದು ನಿರ್ಮಾಪಕ ಕನಕಪುರ ಶ್ರೀನಿವಾಸ್ ಹೇಳಿಕೆ ಕೊಟ್ಟು ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.


Click it and Unblock the Notifications











