ಕ್ರೇಜಿಸ್ಟಾರ್ ಮನೆಗೆ ದೌಡಾಯಿಸಿದ ಎಂಎನ್ ಕುಮಾರ್: ಪ್ರತಿಭಟನೆ ಕೈ ಬಿಡುವಂತೆ ಮನವೊಲಿಸಲು ಸಫಲರಾದರೇ ರವಿಚಂದ್ರನ್?
ಕಳೆದ ಎರಡು ದಿನಗಳಿಂದ ಕಿಚ್ಚ ಸುದೀಪ್ ಹಾಗೂ ಎಂಎನ್ ಕುಮಾರ್ ನಡುವೆ ವಿವಾದ ನಡೆಯುತ್ತಲೇ ಇದೆ. ಇಬ್ಬರೂ ಒಬ್ಬರ ಮೇಲೆ ಮತ್ತೊಬ್ಬರು ಆರೋಪ- ಪ್ರತ್ಯಾರೋಪ ಮಾಡುತ್ತಲೇ ಇದ್ದಾರೆ. ಹೀಗಾಗಿ ಕಿಚ್ಚ ಸುದೀಪ್ ಹಾಗೂ ಕುಮಾರ್ ನಡುವಿನ ವಿವಾದಕ್ಕೆ ಅಂತ್ಯ ಸಿಗುತ್ತಿಲ್ಲ.
ಕಿಚ್ಚ ಸುದೀಪ್ ಸಂಭಾವನೆ ಪಡೆದು ಸಿನಿಮಾ ಮಾಡಿಕೊಡುತ್ತಿಲ್ಲವೆಂದು ಎಂಎನ್ ಕುಮಾರ್ ಆರೋಪ ಮಾಡಿದ್ದರು. ಈ ಆರೋಪದಿಂದ ಬೇಸರಗೊಂಡ ಸುದೀಪ್ ನ್ಯಾಯಾಲಯದ ಮೊರೆ ಹೋಗಿದ್ದರು. ಇದನ್ನು ಪ್ರಶ್ನೆ ಮಾಡಿದ್ದ ಎಂ ಎನ್ ಕುಮಾರ್ ಫಿಲ್ಮ್ ಚೇಂಬರ್ ಮುಂದೆ ಪ್ರತಿಭಟನೆಗೆ ಮುಂದಾಗಿದ್ದರು.

ಎಂಎನ್ ಕುಮಾರ್ ಫಿಲ್ಮ್ ಚೇಂಬರ್ ಮುಂದೆ ಪ್ರತಿಭಟನೆಗೆ ಕೂರುತ್ತಿದ್ದಂತೆ ಕೆಲ ನಿರ್ಮಾಪಕರು ಈ ಪ್ರತಿಭಟನೆಗೆ ಬೆಂಬಲ ನೀಡಿದ್ದರು. ಈ ಬೆಳವಣಿಗೆ ಬಳಿಕ ಕ್ರೇಜಿಸ್ಟಾರ್ ರವಿಚಂದ್ರನ್ ಎಂಟ್ರಿ ಕೊಟ್ಟಿದ್ದರು. ನಿರ್ಮಾಪಕರೆಲ್ಲರೂ ರವಿಚಂದ್ರನ್ ಭೇಟಿ ಮಾಡಿ ಬಂದಿದ್ದರು. ಆ ಬಳಿಕ ಈಗ ನಿರ್ಮಾಪಕ ಎಂಎನ್ ಕುಮಾರ್ ಕ್ರೇಜಿಸ್ಟಾರ್ ರವಿಚಂದ್ರನ್ ಮನೆಗೆ ಭೇಟಿ ಕೊಟ್ಟು ಬಂದಿದ್ದಾರೆ. ಅಲ್ಲಿ ನಡೆದ ಬೆಳವಣೆಗೆ ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಕ್ರೇಜಿಸ್ಟಾರ್-ಎಂಎನ್ ಕುಮಾರ್ ಚರ್ಚೆ
ನಿರ್ಮಾಪಕ ಎಂಎನ್ ಕುಮಾರ್ ವಿರುದ್ಧ ಕಿಚ್ಚ ಸುದೀಪ್ 10 ಕೋಟಿ ರೂ. ಮಾನಹಾನಿ ಕೇಸ್ ದಾಖಲಿಸಿದ್ದಾರೆ. ಇದು ನಿರ್ಮಾಪಕರನ್ನು ಮತ್ತಷ್ಟು ಕೆರಳಿಸುವಂತೆ ಮಾಡಿತ್ತು. ಹೀಗಾಗಿ ಈ ಪ್ರಕರಣವನ್ನು ನ್ಯಾಯಾಲಯ ಅಲ್ಲದೆ ಫಿಲ್ಮ್ ಚೇಂಬರ್ ಪರಿದಿಯೊಳಗೆ ಬಗೆ ಹರಿಸಿಕೊಳ್ಳಬೇಕು ಎಂದು ನಿರ್ಮಾಪಕರು ಒತ್ತಡ ಹಾಕಿದ್ದರು. ಅಲ್ಲದೆ ರವಿಚಂದ್ರನ್ ಹಾಗೂ ಶಿವಣ್ಣ ಮಧ್ಯಪ್ರವೇಶ ಮಾಡಬೇಕು ಎಂದು ಮಾನವಿ ಮಾಡಿಕೊಂಡಿದ್ದರು.
ಹೀಗಾಗಿ ಇಂದು (ಜುಲೈ 19) ಕ್ರೇಜಿಸ್ಟಾರ್ ರವಿಚಂದ್ರನ್ ಮನೆಗೆ ನಿರ್ಮಾಪಕ ಎಂಎನ್ ಕುಮಾರ್ ತೆರಳಿ ಚರ್ಚೆ ಮಾಡಿದ್ದರು. ಕೆಲವು ಹೊತ್ತು ರವಿಚಂದ್ರನ್ ಹಾಗೂ ಎಂಎನ್ ಕುಮಾರ್ ಇಬ್ಬರೂ ಗಂಭೀರ ಚರ್ಚೆ ಮಾಡಿದ್ದಾರೆ. ಈ ವೇಳೆ ರವಿಚಂದ್ರನ್ ಕೆಲವು ಸಲಹೆಗಳನ್ನು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ರತಿಭಟನೆ ಕೈ ಬಿಡುವಂತೆ ಸಲಹೆ?
ಕ್ರೇಜಿಸ್ಟಾರ್ ಹಾಗೂ ನಿರ್ಮಾಪಕ ಎಂಎನ್ ಕುಮಾರ್ ನಡುವೆ ನಡೆದ ಮಾತುಕತೆಯಲ್ಲಿ ರವಿಚಂದ್ರನ್ ಕೆಲವು ಸಲಹೆಗಳನ್ನು ನೀಡಿದ್ದಾರೆ ಎನ್ನಲಾಗಿದೆ. ಪ್ರತಿಭಟನೆಯನ್ನು ಹೊರಬರುವಂತೆ ಕುಮಾರ್‌ಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಫಿಲ್ಮ್ ಚೇಂಬರ್‌ನಲ್ಲಿ ಮಾಹಿತಿ ನೀಡುವ ಸಾಧ್ಯತೆಯಿದೆ.
ನಿನ್ನೆ (ಜುಲೈ 18) ಕೂಡ ನಿರ್ಮಾಪಕರು ರವಿಚಂದ್ರನ್‌ರನ್ನು ಭೇಟಿ ಮಾಡಿದ್ದಾಗ, ಕುಮಾರ್ ಪ್ರತಿಭಟನೆ ಬಿಟ್ಟು ಮೇಲೆದ್ದರೆ ಎಲ್ಲವೂ ಸರಿ ಹೋಗುತ್ತೆ ಎಂದು ಹೇಳಿದ್ದರು. ಇಂದು ಕೂಡ ಕ್ರೇಜಿಸ್ಟಾರ್ ನಿರ್ಮಾಪಕ ಕುಮಾರ್‌ಗೆ ಇದೇ ಸಲಹೆಯನ್ನು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಕುಮಾರ್ ಪ್ರತಿಭಟನೆ ಕೈ ಬಿಡುವ ಸಾಧ್ಯತೆ?
ರವಿಚಂದ್ರನ್ ಜೊತೆ ಚರ್ಚೆಯ ಬಳಿಕ ನಿರ್ಮಾಪಕ ಕುಮಾರ್ ಫಿಲ್ಮ್ ಚೇಂಬರ್‌ಗೆ ಮುಂದೆ ಪ್ರತಿಭಟನೆ ಕೈ ಬಿಡುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಬಗ್ಗೆ ನಿರ್ಮಾಪಕರೊಂದಿಗೆ ಚರ್ಚೆ ಮಾಡಿ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ.
ಈ ಪ್ರಕರಣಕ್ಕೆ ರವಿಚಂದ್ರನ್ ಎಂಟ್ರಿಯಾಗಿದ್ದು, ಶಿವಣ್ಣ ಭಾಗಿಯಾಗುವುದು ಬಾಕಿ ಉಳಿದಿದೆ. ನಿನ್ನೆ (ಜುಲೈ 18) ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ಶಿವಣ್ಣನೇ ಲೀಡರ್, ದೊಡ್ಮನೆಯೇ ಹೆಡ್ ಆಫೀಸ್ ಎಂದು ಹೇಳಿದ್ದರು. ಸದ್ಯ ಈ ಪ್ರಕರಣ ಯಾವ ಹಂತಕ್ಕೆ ತಲುಪುತ್ತೋ ಕಾದು ನೋಡಬೇಕಿದೆ.


Click it and Unblock the Notifications











