ಧ್ರುವ ಸರ್ಜಾ ಜೊತೆ ಮತ್ತೊಂದು ಸಿನಿಮಾ ಹಳೆಯ ಕಮಿಟ್ಮೆಂಟ್; 'ಮಾರ್ಟಿನ್'ಗೂ ಅದಕ್ಕೂ ಸಂಬಂಧವಿಲ್ಲ; ನಿರ್ಮಾಪಕ ಉದಯ್ ಮೆಹ್ತಾ
'ಮಾರ್ಟಿನ್' ಸಿನಿಮಾ ಬಳಿಕ ಧ್ರುವ ಸರ್ಜಾಗೆ ನಿರ್ಮಾಪಕ ಉದಯ್ ಕೆ ಮಹ್ತಾ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ. 'ಮಾರ್ಟಿನ್' ಸೋಲಿನ ಬಳಿಕ ಧ್ರುವ ಸರ್ಜಾ ನಿರ್ಮಾಪಕರಿಗೆ ಮತ್ತೊಂದು ಕಾಲ್‌ಶೀಟ್ ಕೊಟ್ಟಿದ್ದಾರೆ ಎಂದು ಚಿತ್ರರಂಗದಲ್ಲಿ ಸುದ್ದಿ ಹಬ್ಬಿತ್ತು. ಇದೇ ಸುದ್ದಿಯನ್ನು ಫಿಲ್ಮಿಬೀಟ್ ಕನ್ನಡದಲ್ಲಿ ಬಿತ್ತರಿಸಲಾಗಿತ್ತು. ಇದಕ್ಕೆ ಸಂಬಂಧ ಪಟ್ಟಂತೆ ನಿರ್ಮಾಪಕರು ಪ್ರತಿಕ್ರಿಯೆ ನೀಡಿದ್ದಾರೆ.
ಆಕ್ಷನ್ ಪ್ರಿನ್ ಧ್ರುವ ಸರ್ಜಾ ನಟಿಸಿದ ಪ್ಯಾನ್ ಇಂಡಿಯಾ ಸಿನಿಮಾ 'ಮಾರ್ಟಿನ್' ಅನ್ನು ಬಿಗ್ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗಿತ್ತು. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡಲಾಗಿತ್ತು. ಈ ಸಿನಿಮಾ ಬಳಿಕ ಇದೇ ಕಾಂಬಿನೇಷನ್ ಮತ್ತೊಂದು ಸಿನಿಮಾಗೆ ಸಜ್ಜಾಗುತ್ತಿದ್ದಾರೆ. ಹಾಗಂತ ಇದು 'ಮಾರ್ಟಿನ್' ಸಿನಿಮಾ ಸೋಲಿನ ಬಳಿಕ ಹುಟ್ಟಿಕೊಂಡ ಪ್ರಾಜೆಕ್ಟ್ ಅಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.

ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಪ್ರತಿಕ್ರಿಯೆಯಲ್ಲಿ 'ಮಾರ್ಟಿನ್'ಗೂ ಮುನ್ನವೇ ಒಂದು ಸಿನಿಮಾ ಅನೌನ್ಸ್ ಮಾಡಿದ್ದೆವು. ಆದರೆ, ಅದು ಕೋವಿಡ್‌ನಿಂದಾಗಿ ಆರಂಭ ಮಾಡಿರಲಿಲ್ಲ. ಧ್ರುವ ಸರ್ಜಾ ಹಾಗೂ ನಮ್ಮ ನಿರ್ಮಾಣ ಸಂಸ್ಥೆಯ 'ಮಾರ್ಟಿನ್'ಗೂ ಮೊದಲೇ ಒಂದು ಸಿನಿಮಾದ ಕಮಿಟ್‌ಮೆಂಟ್ ಇದೆ. ಅದನ್ನು ಮಾಡಿಕೊಂಡು ಹೋಗುತ್ತೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಅದರ ಝಲಕ್ ಇಲ್ಲಿದೆ.
"ನಾವು ದುಬಾರಿ ಮಾಡಬೇಕಿತ್ತು"
"ನನ್ನದು ಮತ್ತು ಧ್ರುವ ಅವರದ್ದು ಇನ್ನೊಂದು ಸಿನಿಮಾ ಮಾಡಬೇಕು ಅನ್ನೋದನ್ನು ಮುಂಚೆಯಿಂದನೂ ಮಾತಾಡಿಕೊಂಡಿದ್ದು ಇದೆ. ನಾವು ದುಬಾರಿ ಅಂತ ಒಂದು ಸಿನಿಮಾ ಮಾಡಬೇಕಿತ್ತು. ಅದನ್ನು ನಿಲ್ಲಿಸಿದ್ವಿ. ಕೊರೊನಾ ಟೈಮ್‌ನಲ್ಲಿ ಅದನ್ನು ನಿಲ್ಲಿಸಿದ್ದು ಎಲ್ಲರಿಗೂ ಗೊತ್ತಿರೋ ವಿಚಾರ. ಮಾರ್ಟಿನ್ ಸಿನಿಮಾವನ್ನು ನಾನು ಆನಂತರ ಮಾಡಿರೋದು. ಸದ್ಯದಲ್ಲೇ ಆ ಸಿನಿಮಾನೂ ಆಗುತ್ತೆ. ಮುಂದೆ ಯಾವಾಗ ಆಗುತ್ತೆ ಅನ್ನೋದನ್ನು ನಾವು ಮುಂದಕ್ಕೆ ಅನೌನ್ಸ್ ಮಾಡುತ್ತೇವೆ." ಎಂದು ನಿರ್ಮಾಪಕ ಉದಯ್ ಮೆಹ್ತಾ ಹೇಳಿದ್ದಾರೆ.

ಮಾರ್ಟಿನ್‌ಗೂ ದುಬಾರಿಗೂ ಸಂಬಂಧವಿಲ್ಲ
"ಮಾರ್ಟಿನ್‌ಗೂ ಈ ಸಿನಿಮಾಗೂ ಯಾವುದೇ ರೀತಿಯ ಸಂಬಂಧ ಇಲ್ಲ. ಈಗ ನೀವು ಏನು ಬರೆದಿದ್ದೀರಿ ಮಾರ್ಟಿನ್‌ಗೋಸ್ಕರ ಅಂತ ಅದೇನೂ ಇಲ್ಲ. ವಿಷಯ ಏನೆಂದರೆ, ರೆಗ್ಯೂಲರ್ ಆಗಿ ವರ್ಷಕ್ಕೆ ಒಂದು ಸಿನಿಮಾ ಮಾಡಿಕೊಂಡು ಹೋಗಬೇಕು ಅಂತಾನೇ ಇದೆ. ಯಾವಾಗ ಬೇಕಾದರೂ, ಹೇಗೆ ಅನುಕೂಲ ಆಗುತ್ತೋ ಹಾಗೇ ಮಾಡಿಕೊಂಡು ಹೋಗುತ್ತೇವೆ." ಎನ್ನುತ್ತಾರೆ.
"ಧ್ರುವ ವರ್ಷಕ್ಕೆ 2 ಸಿನಿಮಾ ಮಾಡ್ತಾರೆ"
"ನನಗೂ ಮತ್ತು ಅವರಿಗೂ ಹೊಂದಾಣಿಕೆ ಆಗಿರೋದು, ನಾವು ಮಾತಾಡಿಕೊಂಡಿರೋದು, ಅವರೊಬ್ಬರ ನಟರಾಗಿ ನಮ್ಮದೊಂದು ನಿರ್ಮಾಣ ಸಂಸ್ಥೆಯಾಗಿ ಏಳೂವರೆ ವರ್ಷ ಜೊತೆಯಲ್ಲಿ ಜರ್ನಿ ಮಾಡಿದ್ದೇವೆ. ಹೀಗಾಗಿ ರೆಗ್ಯೂಲರ್ ಸಿನಿಮಾಗಳನ್ನು ಮಾಡಿಕೊಂಡು ಹೋಗಬೇಕು ಅಂತ ಇದೆ. ಧ್ರುವ ಸರ್ಜಾ ಅವರು ಈ ಬಾರಿ ಸ್ಪೀಡ್ ಆಗಿ ಮಾಡಬೇಕು ಅಂತ ಇದ್ದಾರೆ. ಮಾರ್ಟಿನ್ ತುಂಬಾನೇ ಸಮಯ ತೆಗೆದುಕೊಂಡಿದೆ. ಹಾಗಾಗಿ ವರ್ಷಕ್ಕೆ ಎರಡೆರಡು ಸಿನಿಮಾಗಳು ರಿಲೀಸ್ ಆಗಬೇಕು ಅನ್ನೋ ಸ್ಥಿತಿಯಲ್ಲಿ ಹೀರೋ ಇದ್ದಾರೆ. ಹಾಗಾಗಿ ನಾವು ಹಿಂದೆ ದುಬಾರಿ ಅನ್ನುವ ಸಿನಿಮಾ ಮಾಡಬೇಕು ಅಂತ ಇದ್ವಿ. ಕೊರೊನಾ ಬಂದಿದ್ದರಿಂದ ಆಗಲಿಲ್ಲ."
ಯಾವ ಸಿನಿಮಾ ಆಗುತ್ತೋ ಗೊತ್ತಿಲ್ಲ
"ನಮ್ಮದು ಹಾಗೂ ಅವರದ್ದು ಒಂದು ಸಿನಿಮಾ ಮಾಡಬೇಕಾಗಿರುವುದು ಇದೆ. ಈಗಲೇ ಆಗುತ್ತೋ.. ಇನ್ನೂ ನಾಲ್ಕೈದು ತಿಂಗಳು ಬಿಟ್ಟು ಆಗುತ್ತೋ ಅನ್ನುವುದು ಗೊತ್ತಿಲ್ಲ. ಈ ವಿಷಯ ಹಳೆಯದ್ದೇ ಹೊಸದೇನೂ ಅಲ್ಲ. ಆದರೆ, ಮಾರ್ಟಿನ್‌ಗೆ ಸಂಬಂಧ ಪಟ್ಟಿದ್ದು ಯಾವುದೂ ಅಲ್ಲ." ಎಂದು ಫಿಲ್ಮಿಬೀಟ್‌ಗೆ ನಿರ್ಮಾಪಕ ಉದಯ್ ಮೆಹ್ತಾ ಸ್ಪಷ್ಟಪಡಿಸಿದ್ದಾರೆ.


Click it and Unblock the Notifications











