Exclusive: ಶೀಘ್ರದಲ್ಲೇ ಸೆಟ್ಟೇರಲಿದೆ ಪುನೀತ್ ರಾಜ್‌ಕುಮಾರ್ ಹೊಸ ಸಿನಿಮಾ: ಇದು ಹೇಗೆ ಸಾಧ್ಯ ಅಂತಿರಾ?
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ 7 ತಿಂಗಳುಗಳಾಗಿವೆ. ಅಭಿಮಾನಿಗಳು ಹಾಗೂ ಅವರ ಕುಟುಂಬ ಅಪ್ಪು ಅಗಲಿದ ನೋವಿನಿಂದ ಇನ್ನೂ ಹೊರಬಂದಿಲ್ಲ. ಅಷ್ಟು ಸುಲಭಕ್ಕೆ ಹೊರಬರಲು ಸಾಧ್ಯವೂ ಇಲ್ಲ. ಆದರೆ, ಪುನೀತ್ ಅಭಿಮಾನಿಗಳಿಗೆ ಖುಷಿ ಕೊಡುವಂತಹ ಸುದ್ದಿಯೊಂದು ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಓಡಾಡುತ್ತಿದೆ.
ಇನ್ಮುಂದೆ ತಮ್ಮ ನೆಚ್ಚಿನ ನಟನ ಸಿನಿಮಾ ನೋಡುವುದಕ್ಕೆ ಆಗೋದಿಲ್ಲ ಅಂತ ನೊಂದುಕೊಂಡವರು ಅದೆಷ್ಟೋ ಮಂದಿ. ಒಂದ್ವೇಳೆ ಪುನೀತ್ ರಾಜ್‌ಕುಮಾರ್ ಮತ್ತೆ ಬೆಳ್ಳಿ ತೆರೆಯ ಮೇಲೆ ಕಾಣಿಸಿಕೊಂಡರೆ ಹೇಗಿರುತ್ತೆ? ಎಂದಿನಂತೆ ಮತ್ತೊಂದು ಸಿನಿಮಾದಲ್ಲಿ ನಟಿಸಿದರೆ? ಇದೆಲ್ಲಾ ಹೇಗೆ ಸಾಧ್ಯ ಅಂತಿರಾ? ಇಂತಹದ್ದೊಂದು ಪ್ರಯತ್ನಕ್ಕೆ ಸ್ಯಾಂಡಲ್‌ವುಡ್ ಮಂದಿ ಕೈಹಾಕಿದ್ದಾರೆ.
ಪುನೀತ್ ರಾಜ್‌ಕುಮಾರ್ ಹೊಸ ಸಿನಿಮಾ ಸೆಟ್ಟೇರುವುದಕ್ಕೆ ಬೇಕಾಗಿರುವ ಎಲ್ಲಾ ಸಿದ್ಧತೆಗಳು ತೆರೆಮರೆಯಲ್ಲಿ ನಡೆಯುತ್ತಿದೆ. ಮತ್ತೆ ತೆರೆಯ ಮೇಲೆ ವಿಶಿಷ್ಟ ತಂತ್ರಜ್ಞಾನದ ಮೂಲಕ ಪುನೀತ್ ರಾಜ್‌ಕುಮಾರ್ ಅವರನ್ನು ತೆರೆಮೇಲೆ ತರುವುದಕ್ಕೆ ಸಕಲ ಪ್ರಯತ್ನವೂ ತೆರೆಮರೆಯಲ್ಲಿಯೇ ನಡೆಯುತ್ತಿದೆ. ಇಂತಹದ್ದು ಚರ್ಚೆ ಕನ್ನಡ ಚಿತ್ರರಂಗದಲ್ಲಾಗುತ್ತಿದೆ. ಅಸಲಿಗೆ ಅಪ್ಪು ನಟಿಸಲಿರುವ ಆ ಹೊಸ ಸಿನಿಮಾ ಯಾವುದು? ಅಪ್ಪು ಇಲ್ಲದೆ ಅವರ ಸಿನಿಮಾ ಹೇಗೆ ಸೆಟ್ಟೇರುತ್ತೆ? ಈ ಎಲ್ಲಾ ಕುತೂಹಲಗಳನ್ನು ತಿಳಿದುಕೊಳ್ಳಲು ಮುಂದೆ ಓದಿ.

ಮತ್ತೆ ತೆರೆಮೇಲೆ ಪುನೀತ್ ನೋಡುವ ಆಸೆನಾ?
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಬದುಕಿದ್ದರೆ ಇನ್ನೂ ಅದ್ಭುತ ಸಿನಿಮಾಗಳನ್ನು ನೋಡಿ ಶಿಳ್ಳೆ ಹಾಕಿ ಕುಣಿಯಬಹುದಿತ್ತು. ಆದರೆ, ದುರಾದೃಷ್ಟ ಪುನೀತ್ ರಾಜ್‌ಕುಮಾರ್ ದಿಢೀರನೇ ಅಪಾರ ಅಭಿಮಾನಿಗಳನ್ನು ಬಿಟ್ಟು ಕಣ್ಮರೆಯಾಗಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಅಪ್ಪು ಫ್ಯಾನ್ಸ್ ಕಂಗಾಲಾಗಿರುವುದಂತೂ ನಿಜ. ಈ ಕಾರಣಕ್ಕೆ ವಿಶಿಷ್ಟ ತಂತ್ರಜ್ಞಾನವನ್ನು ಬಳಸಿ ಪುನೀತ್ ರಾಜ್‌ಕುಮಾರ್ ಅವರನ್ನು ತೆರೆಮೇಲೆ ತರುವುದಕ್ಕೆ ಸಕಲ ಪ್ರಯತ್ನಗಳೂ ನಡೆಯುತ್ತಿದೆ ಎನ್ನುತ್ತಿವೆ ಎಂಬ ಮಾಹಿತಿ ಫಿಲ್ಮಿಬೀಟ್‌ಗೆ ಸಿಕ್ಕಿದೆ. ಆ ತಂತ್ರಜ್ಞಾನ ಯಾವುದು? ಇದರಿಂದ ಪುನೀತ್ ಸೃಷ್ಟಿ ಹೇಗೆ ಸಾಧ್ಯ? ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ.

'ಅನ್‌ರಿಯಲ್ ಎಂಜಿನ್' ಬಳಕೆ ಸಾಧ್ಯತೆ?
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಸಿನಿಮಾ ಮಾಡಲು ಮುಂದಾಗಿರುವುದಕ್ಕೆ ಕಾರಣ 'ಅನ್‌ರಿಯಲ್ ಎಂಜಿನ್'. ಸದ್ಯ ವಿಶ್ವದ ಮೋಸ್ಟ್ ಅಡ್ವಾನ್ಸ್ ಟೆಕ್ನಾಲಜಿ ಇದು. ಈ ತಂತ್ರಜ್ಞಾನವನ್ನು ಹೆಚ್ಚಾಗಿ ಅಡ್ವಾನ್ಸ್ ಗೇಮಿಂಗ್ ಪ್ಲ್ಯಾಟ್‌ಫಾರ್ಮ್‌ನಲ್ಲಿ ಬಳಸಲಾಗುತ್ತಿದೆ. ಸದ್ಯಕ್ಕೀಗ ವಿದೇಶಗಳಲ್ಲಿ ಈ ತಂತ್ರಜ್ಞಾನವನ್ನು ಸಿನಿಮಾ ಹಾಗೂ ಕಿರುತೆರೆಯಲ್ಲಿ ಬಳಸುತ್ತಿದ್ದಾರೆ. ವರ್ಚ್ಯುವಲ್ ಸ್ಟುಡಿಯೋ, ಸೆಟ್‌ಗಳಿಂದ ಹಿಡಿದು ಕಾರೆಕ್ಟರ್‌ಗಳನ್ನು ಕ್ರಿಯೇಟ್ ಮಾಡಲು ಬಳಸಲಾಗುತ್ತಿದೆ. ಇದೇ ತಂತ್ರಜ್ಞಾನವನ್ನು ಬಳಸಿ ಪುನೀತ್ ರಾಜ್‌ಕುಮಾರ್ ಅವರನ್ನು ಮತ್ತೆ ತೆರೆಮೇಲೆ ಕರೆದುಕೊಂಡು ಬರುವ ಪ್ರಯತ್ನ ನಡೆಯುತ್ತಿದ್ಯಂತೆ.

ಅಪ್ಪು ಸಿನಿಮಾ ಮಾಡುವ ಸಂಸ್ಥೆ ಯಾವುದು?
ಈ ತಂತ್ರಜ್ಞಾನ ಬಳಸಿ ಯಾವುದೇ ಪಾತ್ರವನ್ನು ತೆರೆಮೇಲೆ ತರಲು ದೊಡ್ಡ ಬಜೆಟ್ ಬೇಕು. ಸದ್ಯ ಅತೀ ದೊಡ್ಡ ಬಜೆಟ್‌ನಲ್ಲಿ ಯಾವ ಸಂಸ್ಥೆ ಅಪ್ಪು ಸಿನಿಮಾ ನಿರ್ಮಾಣ ಮಾಡುತ್ತೆ? ಅನ್ನು ಪ್ರಶ್ನೆ ಹುಟ್ಟಿಕೊಳ್ಳುವುದು ಸಹಜ. ಫಿಲ್ಮಿಬೀಟ್‌ಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಕರ್ನಾಟಕದ ದೊಡ್ಡ ನಿರ್ಮಾಣ ಸಂಸ್ಥೆಯೊಂದು ಈ ಸಿನಿಮಾವನ್ನು ನಿರ್ಮಾಣ ಮಾಡಲಿದ್ಯಂತೆ. ಸದ್ಯ ಪ್ರಾಥಮಿಕ ಹಂತದ ಮಾತುಕತೆ ನಡೆಯುತ್ತಿದೆ. ಎಲ್ಲವೂ ಕೈಗೂಡಿ ಬಂದರೆ, ಶೀಘ್ರದಲ್ಲಿಯೇ ಆ ನಿರ್ಮಾಣ ಸಂಸ್ಥೆ ಸ್ಯಾಂಡಲ್‌ವುಡ್‌ನಲ್ಲಿ ಹಲ್‌ಚಲ್ ಎಬ್ಬಿಸಲಿದೆ ಎನ್ನುತ್ತಿವೆ ಮೂಲಗಳು.

ಹಾಲಿವುಡ್ ಸಿನಿಮಾದಿಂದ 'ಅನ್‌ರಿಯಲ್ ಎಂಜಿನ್' ಬಳಕೆ
ಈಗಾಗಲೇ ಹಾಲಿವುಡ್ ಸಿನಿಮಾಗಳು ಈ ತಂತ್ರಜ್ಞಾನವನ್ನು ಬಳಕೆ ಮಾಡುತ್ತಿವೆ. 20 ವರ್ಷಗಳ ಹಿಂದೆ ಬಂದ 'ಮೆಟ್ರಿಕ್ಸ್' ಸಿನಿಮಾಗಳೇ ಇದಕ್ಕೆ ಪ್ರೇರಣೆ ಎನ್ನಲಾಗಿದೆ. ಇನ್ನೊಂದು ಕಡೆ 'ಮ್ಯಾಟ್ರಿಕ್ ಅವೇಕನ್ಸ್' ಗೇಮ್ ಎಂಜಿನ್ ಅನ್ನು ಇದೇ ತಂತ್ರಜ್ಞಾನದಿಂದ ಡೆವೆಲಪ್ ಮಾಡಲಾಗುತ್ತಿದೆ. ಇದರೊಂದಿಗೆ ಈಗಾಗಲೇ 'ವೆಸ್ಟ್ ವರ್ಲ್ಡ್', 'ದಿ ಮ್ಯಾಂಡಲೋರಿಯನ್', 'ದಿ ಲಯನ್ ಕಿಂಗ್', ಅಂತ ಸಿನಿಮಾಗಳಲ್ಲಿ 'ಅನ್‌ರಿಯಲ್ ಎಂಜಿನ್' ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಲಾಗಿದೆ. ಈಗ ಇದೇ ಟೆಕ್ನಾಲಜಿಯನ್ನು ಬಳಸಿಕೊಂಡು ಪುನೀತ್ ರಾಜ್‌ಕುಮಾರ್ ಅವರನ್ನು ತೆರೆಮೇಲೆ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ ಎನ್ನಲಾಗಿದೆ. ಒಂದ್ವೇಳೆ ಈ ಯೋಜನೆ ಕೈ ಗೂಡಿದರೆ, ಅಪ್ಪು ಅಭಿಮಾನಿಗಳು ಮತ್ತೆ ಹಬ್ಬ ಮಾಡುವುದು ಗ್ಯಾರಂಟಿ.


Click it and Unblock the Notifications