ಪುನೀತ್ ಅಗಲಿ 7 ತಿಂಗಳು: ಪುಣ್ಯಭೂಮಿಗೆ ಪೂಜೆ ಸಲ್ಲಿಸಿದ ಪತ್ನಿ ಅಶ್ವಿನಿ, ರಾಘಣ್ಣ!
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ ಇಂದಿಗೆ 7 ತಿಂಗಳು ಕಳೆದಿವೆ. ಕಳೆದ ವರ್ಷ ಅಕ್ಟೋಬರ್ 29ರಂದು ಅಪ್ಪು ಅಪಾರ ಅಭಿಮಾನಿಗಳು ಕುಟುಂಬಸ್ಥರನ್ನು ಬಿಟ್ಟು ಅಗಲಿದ್ದರು. ಇದು ಕನ್ನಡ ಚಿತ್ರರಂಗದ ಪಾಲಿಗೆ ಕರಾಳ ದಿನ. ಇದೇ ನೋವಿನಲ್ಲಿ ಇನ್ನೂ ಪವರ್‌ಸ್ಟಾರ್ ಅಭಿಮಾನಿಗಳಿದ್ದಾರೆ.
ಇಂದಿಗೆ ( ಮೇ 29) ಪುನೀತ್ ರಾಜ್‌ಕುಮಾರ್ ಅಗಲಿ ಏಳು ತಿಂಗಳಾಗಿದ್ದರಿಂದ ಪುನೀತ್ ಕುಟುಂಬಸ್ಥರು ಹಾಗೂ ಆಪ್ತರು ಪುಣ್ಯಭೂಮಿಗೆ ಪೂಜೆ ಸಲ್ಲಿಸಿದರು. ಬೆಳಗ್ಗೆನೇ ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಗೂ ಅವರ ಇಬ್ಬರು ಪುತ್ರಿಯರು. ರಾಘವೇಂದ್ರ ರಾಜ್‌ಕುಮಾರ್, ವಿನಯ್ ರಾಜ್‌ಕುಮಾರ್, ಯುವರಾಜ್‌ಕುಮಾರ್ ಸೇರಿದಂತೆ ಕುಟುಂಬಸ್ಥರು ಬಂದು ವಿಶೇಷ ಪೂಜೆಯನ್ನು ಸಲ್ಲಿಸಿದರು.
ಅಪ್ಪು ಸಮಾಧಿ ವಿಶೇಷ ಪೂಜೆ
ಪ್ರತಿ ತಿಂಗಳು ಅಪ್ಪು ಅಗಲಿದ ದಿನದಂದು ಕುಟುಂಬಸ್ಥರು ಹಾಗೂ ಆಪ್ತರು ಸಮಾಧಿಗೆ ಭೇಟಿ ಕೊಡುತ್ತಾರೆ. ವಿಶೇಷ ಪೂಜೆಯನ್ನುಸಲ್ಲಿಸುತ್ತಾರೆ. ಅದರಂತೆ, ಈ ತಿಂಗಳು ಕೂಡ ಪೂಜೆಯನ್ನು ಸಲ್ಲಿಸಲಾಗಿದೆ. ಪೂಜೆ ಸಲ್ಲಿಸಿದ ಬಳಿಕ ಅಪ್ಪು ಅಭಿಮಾನಿಗಳಿಗೂ ಪುಣ್ಯಭೂಮಿಗೆ ಭೇಟಿ ನೀಡಲು ಅವಕಾಶ ನೀಡಲಾಗುತ್ತಿದೆ.

ಪುನೀತ್ ರಾಜ್‌ಕುಮಾರ್ ಸಮಾಧಿ ಬಳಿಕ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಗೂ ಅವರ ಪುತ್ರಿಯರು, ವಿನಯ್ ರಾಜ್‌ಕುಮಾರ್, ಯುವ ರಾಜ್‌ಕುಮಾರ್ ಸೇರಿದಂತೆ ಕುಟುಂಬಸ್ಥರೆಲ್ಲರೂ ಪಾರ್ವತಮ್ಮ ರಾಜ್‌ಕುಮಾರ್ ಹಾಗೂ ರಾಜ್‌ಕುಮಾರ್ ಸಮಾಧಿಗೂ ಭೇಟಿ ನೀಡಿ ಪೂಜೆಯನ್ನು ಸಲ್ಲಿಸಿದರು.
ಅಪ್ಪು ನೆನೆದ ರಾಘವೇಂದ್ರ ರಾಜ್‌ಕುಮಾರ್
ಪುನೀತ್ ರಾಜ್‌ಕುಮಾರ್ ನಿಧನದ ಸುದ್ದಿಯನ್ನು ಕೇಳಿದ ಅಭಿಮಾನಿಗಳು ಹಾಗೂ ಕನ್ನಡಿಗರು ಕಣ್ಣೀರು ಹಾಕಿದ್ದರು. ಸದ್ದಿಲ್ಲದೆ ಪುನೀತ್ ಮಾಡಿದ ಸಾಮಾಜಿಕ ಕೆಲಸವನ್ನು ಕಂಡು ಬೆರಗಾಗಿದ್ದರು. ಇತ್ತ ಅಭಿಮಾನಿಗಳು ಕೂಡ ಹೃದಯ ಶ್ರೀಮಂತಿಕೆಯ ನಟನನ್ನು ಕಳೆದುಕೊಂಡ ದು:ಖದಲ್ಲಿತ್ತು. ಇತ್ತ ರಾಘವೇಂದ್ರ ರಾಜ್‌ಕುಮಾರ್ ಕೂಡ ತಮ್ಮ ಅಗಲಿಕೆಯ ನೋವಿನಲ್ಲಿದ್ದಾರೆ.
ಈ ಕಾರಣಕ್ಕೆ ಇಂದು ( ಮೇ 29) ಅಪರೂಪ ಫೋಟೊಗಳ ಮೂಲಕ ಪುನೀತ್ ರಾಜ್‌ಕುಮಾರ್ ಅವರನ್ನು ನೆನೆದಿದ್ದಾರೆ. ಅಪ್ಪು ಬಾಲ್ಯದ ಅಪರೂಪಗಳಿಂದ ಹಿಡಿದು ಸಿನಿಮಾರಂಗಕ್ಕೆ ಕಾಲಿಡುವವರೆಗಿನ ಸುಂದರ ಫೋಟೊಗಳನ್ನು ವಿಡಿಯೋ ಮೂಲಕ ಶೇರ್ ಮಾಡಿದ್ದಾರೆ.

ಪುನೀತ್ ರಾಜ್‌ಕುಮಾರ್ ಅಗಲಿಕೆ ಇನ್ನೂ ಅಪ್ಪು ಅಭಿಮಾನಿಗಳು ನಂಬುತ್ತಿಲ್ಲ. ಅಪ್ಪು ನಟಿಸಿದ ಕೊನೆಯ ಸಿನಿಮಾ ' ಜೇಮ್ಸ್ ' ಬಿಡುಗಡೆಯಾಗಿ ಯಶಸ್ಸು ಕಂಡಿದೆ. ಇನ್ನು ಅವರ ಕನಸು 'ಗಂಧದ ಗುಡಿ' ಯಾವಾಗ ಬಿಡುಗಡೆಯಾಗುತ್ತೆ ಎಂದು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.


Click it and Unblock the Notifications











