Shivarajkumar: "ಅವರ ಮಗ ಆಗಿದ್ದಕ್ಕೂ ಸಾರ್ಥಕ.. ಅಪ್ಪಾಜಿಗಿಂತ ಅಪ್ಪು ಡಬಲ್ ಹೆಸರು ಸಂಪಾದನೆ ಮಾಡಿದ್ದಾನೆ" - ಶಿವಣ್ಣ
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ ಇಂದಿಗೆ (ಅಕ್ಟೋಬರ್ 29) ಎರಡು ವರ್ಷ. ಕನ್ನಡಿಗರಿಗೆ, ಅಪ್ಪು ಅಭಿಮಾನಿಗಳಿಗೆ ಈ ದಿನವನ್ನು ಎಂದಿಗೂ ಮರೆಯೋಕೆ ಸಾಧ್ಯನೇ ಇಲ್ಲ. ದಿಢೀರನೇ ಹೀಗೆಲ್ಲ ಆಗುತ್ತೆ ಅನ್ನೋ ಚಿಕ್ಕದೊಂದು ಸುಳಿವು ಸಿಗದೆ ಅಪ್ಪು ಕಣ್ಮರೆಯಾಗಿದ್ದರು.
ನೆಚ್ಚಿನ ನಟ ಇಲ್ಲ ಅನ್ನೋ ನೋವಿನಲ್ಲೂ ಅವರ ಅಭಿಮಾನಿಗಳು ಹಾಗೂ ದೊಡ್ಮನೆ ಕುಟುಂಬ ಅಪ್ಪು ಹಾಕಿ ಕೊಟ್ಟ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ. ಇತ್ತ 2ನೇ ವರ್ಷದ ಪುಣ್ಯತಿಥಿಯಂದು ದೊಡ್ಮನೆ ಕುಟುಂಬ ಪುಣ್ಯಭೂಮಿಗೆ ತೆರಳಿ ಪೂಜೆಯನ್ನು ಸಲ್ಲಿಸಿದ್ದಾರೆ.

ಶಿವಣ್ಣ ಪತ್ನಿ ಗೀತಾ ಅವರೊಂದಿಗೆ ಪುಣ್ಯಭೂಮಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಮಾಧ್ಯಮದವರೊಂದಿಗೆ ತಮ್ಮ ಪುನೀತ್ ರಾಜ್‌ಕುಮಾರ್ ಬಗ್ಗೆ ಶಿವಣ್ಣ ಮನಬಿಚ್ಚಿ ಮಾತಾಡಿದ್ದಾರೆ. ತಾವು ಯಾಕೆ ಅಪ್ಪು ಪುಣ್ಯಭೂಮಿಗೆ ಬರೋದಿಲ್ಲ ಅನ್ನೋದನ್ನು ಹೇಳಿದ್ದಾರೆ. ಹಾಗೇ ಅಪ್ಪಾಜಿಗಿಂತ ಅಪ್ಪು ಡಬಲ್ ಹೆಸರು ಮಾಡಿದ್ದಾನೆಂದು ಶಿವಣ್ಣ ಹೇಳಿದ್ದಾರೆ.
ಅಪ್ಪು ದೂರ ಮಾಡುವುದಕ್ಕೆ ಇಷ್ಟವಿಲ್ಲ
ಶಿವಣ್ಣ ಈ ಹಿಂದೆ ಕೂಡ ಅಪ್ಪು ಪುಣ್ಯಭೂಮಿ ಕಡೆಗೆ ಹೋಗುವುದಿಲ್ಲ. ಕಲ್ಲಿನಲ್ಲಿ ತಮ್ಮನನ್ನು ನೋಡುವುದಕ್ಕೆ ಆಗುವುದಿಲ್ಲ ಎಂದು ಹೇಳಿದ್ದರು. ಇಂದು (ಅಕ್ಟೋಬರ್ 29) ಮತ್ತೆ ಅದೇ ಮಾತನ್ನು ಪುನರುಚ್ಚರಿಸಿದ್ದಾರೆ. ಇಲ್ಲಿಂದ ಬಂದು ಪೂಜೆ ಮಾಡಿ ಅಪ್ಪುನಾ ದೂರ ಮಾಡುವುದಕ್ಕೆ ಇಷ್ಟವಿಲ್ಲ ಎಂದು ಶಿವಣ್ಣ ಮಾಧ್ಯಮದ ಮುಂದೆ ಹೇಳಿದ್ದಾರೆ.
ಪೂಜೆ ಮಾಡಿ ದೂರ ಕಳಿಸೋದಕ್ಕೆ ನೋವಾಗುತ್ತೆ
"ಅಪ್ಪು ಎಲ್ಲೂ ಹೋಗಿಲ್ಲ. ಜೊತೆಯಲ್ಲಿಯೇ ಇದ್ದಾರೆ ಅದಕ್ಕೆ ಹೇಳುತ್ತಲೇ ಇರೋದು. ನಾನು ಯಾಕೆ ಇಲ್ಲಿಗೆ ಹೆಚ್ಚಿಗೆ ಬರೋದಿಲ್ಲ ಅಂದರೆ, ಯಾಕಂದ್ರೆ ಬಂದು ಅವನಿಗೆ ಪೂಜೆ ಮಾಡಿ ದೂರ ಕಳಿಸುವುದಕ್ಕೆ ತುಂಬಾನೇ ನೋವು ಆಗುತ್ತೆ. ಆದರೆ, ಕಾರ್ಯ ಮಾಡಬೇಕು. ಅದಕ್ಕಾಗಿ ಇಲ್ಲಿಗೆ ಬರಬೇಕಾಯ್ತು ಅಷ್ಟೆನೇ. ಇಲ್ಲ ಅಂದರೆ ಪೂಜೆ ಮಾಡಿ ಎಲ್ಲಾ ಮಾಡೋದಿಲ್ಲ. ಯಾವತ್ತಿದ್ದರೂ ಮನಸ್ಸಿನಲ್ಲಿಯೇ ಇರುತ್ತಾನೆ." ಎಂದು ಶಿವಣ್ಣ ಹೇಳಿದ್ದಾರೆ.

"ಕಣ್ಣುಗಳು ನೋಡುತ್ತಿವೆ ಅನ್ನೋದೇ ಸಮಾಧಾನ"
"ದಿನ ಯಾವತ್ತಿದ್ದರೂ ಒಂದು ಮಾತು ಬಂದೇ ಬರುತ್ತೆ. ಹರ್ಟ್ ಆಗುತ್ತೆ. ಕಣ್ಣಿದೆ ಕಣ್ಣುಗಳು ನೋಡುತ್ತಿವೆ. ಒಂದ್ಕಡೆ ಅದು ಸಮಾಧಾನ ಅಷ್ಟೇನೆ. ಆದರೂ ಇವತ್ತು ಜನ ಬಂದಿರೋದು ನೋಡಿದರೆ, ರಾತ್ರಿಯಿಂದಲೂ ಜನರು ಇದ್ದರಂತೆ. ಅದೊಂದೆನೇ ಮನುಷ್ಯ ಕೊನೆಯಲ್ಲಿ ಸಂಪಾದನೆ ಮಾಡೋದು." ಎಂದು ಶಿವರಾಜ್‌ಕುಮಾರ್ ಹೇಳಿದ್ದಾರೆ.
"ಅಪ್ಪಾಜಿಗಿಂತ ಡಬಲ್ ಹೆಸರು"
ಇದೇ ವೇಳೆ ನೆರೆದಿದ್ದ ಜನರನ್ನು ನೋಡಿ ಶಿವಣ್ಣ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಪ್ಪಾಜಿಗೆ ಏನು ಹೆಸರಿದೆಯೋ ಅದಕ್ಕಿಂತ ಡಬಲ್ ಹೆಸರು ಅಪ್ಪು ಮಾಡಿದ್ದಾನೆ ಎಂದು ಹೇಳಿದ್ದಾರೆ. "ಹಣ ಸಂಪಾದನೆ ಮಾಡೋದಲ್ಲ. ಹೆಸರು ಸಂಪಾದನೆ ಮಾಡೋದು. ಅಪ್ಪಾಜಿ ಮಗ ಆಗಿದ್ದಕ್ಕೂ ಎಷ್ಟು ಸಾರ್ಥಕ ಅಂದರೆ, ಅಪ್ಪಾಜಿಗೆ ಏನು ಹೆಸರಿದೆಯೋ.. ಅದಕ್ಕಿಂತ ಡಬಲ್ ಹೆಸರು ಅಪ್ಪು ಮಾಡಿದ್ದಾನೆ ಅಂದರೆ ತಪ್ಪಾಗಲ್ಲ. ಅಂತಹ ಒಳ್ಳೆಯ ಪ್ರೀತಿ ವಿಶ್ವಾಸ ಗಳಿಸಿದ್ದಾರೆ. ಏನು ಉಳಿಸಿಕೊಳ್ಳಲ್ಲ ನಾವು. ಈ ಹೆಸರೊಂದನ್ನು ಉಳಿಸಿಕೊಳ್ಳುತ್ತೇವೆ ಅಷ್ಟೇನೆ." ಎಂದು ಶಿವಣ್ಣ ಹೇಳಿದ್ದಾರೆ.


Click it and Unblock the Notifications











