ಚಾಮರಾಜನಗರ, ಚನ್ನಪಟ್ಟಣ, ತುಮಕೂರಿನಲ್ಲಿ ಅಪ್ಪು ಫ್ಯಾನ್ಸ್‌ನಿಂದ 'ಗಂಧದ ಗುಡಿ'ಗೆ ಸ್ವಾಗತ!
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಸಿನಿಮಾ 'ಗಂಧದ ಗುಡಿ'. ಈಗಾಗಲೇ ಸಿನಿಮಾದ ಬಗ್ಗೆ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಭರ್ಜರಿಯಾಗಿ ಪ್ರಚಾರ ಆರಂಭಿಸಿದ್ದಾರೆ. ರಾಜ್ಯದ ಮೂಲೆ ಮೂಲೆಯಲ್ಲೂ ಸಿನಿಮಾವನ್ನು ಸೆಲೆಬ್ರೆಷನ್ ಮಾಡುತ್ತಿದ್ದಾರೆ.
'ಗಂಧದ ಗುಡಿ' ಪುನೀತ್ ರಾಜ್‌ಕುಮಾರ್ ಕನಸಿನ ಸಿನಿಮಾ. ಕರ್ನಾಟಕದ ವೈಭವವನ್ನು ಕನ್ನಡಿಗರಿಗೆ ತೋರಿಸಲೇಬೇಕು ಅಂತ ಆಸೆ ಪಟ್ಟಿದ್ದರು. ಆದರೆ, ಅವರ ಆಸೆ ಈಡೇರುವ ಮುನ್ನವೇ ಇಹಲೋಕವನ್ನು ಬಿಟ್ಟು ಹೊರಟು ಹೋಗಿದ್ದಾರೆ. ಹೀಗಾಗಿ ಪುನೀತ್ ರಾಜ್‌ಕುಮಾರ್ ಕನಸನ್ನು ನನಸು ಮಾಡಲು ಅಭಿಮಾನಿಗಳೇ ಮುಂದೆ ಬಂದಿದ್ದಾರೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ 'ಗಂಧದ ಗುಡಿ' ಸಿನಿಮಾವನ್ನು ಬರಮಾಡಿಕೊಳ್ಳಲಾಗುತ್ತಿದೆ.

'ಗಂಧದ ಗುಡಿ' ಸೆಲೆಬ್ರೆಷನ್ ಶುರು
ಕರ್ನಾಟಕ ರತ್ನ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಕೊನೆಯ ಸಿನಿಮಾವನ್ನು ಅದ್ಧೂರಿಯಾಗಿ ಬಿಡುಗಡೆ ಮಾಡುವುದಕ್ಕೆ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಸಿನಿಮಾ ಬಿಡುಗಡೆಗೆ ಇನ್ನೂ ಒಂದು ತಿಂಗಳು ಇರುವಾಗಲೇ ಸೆಲೆಬ್ರೆಷನ್ ಶುರು ಮಾಡಿದ್ದಾರೆ. ಹಿಂದೆಂದೂ ಅಪ್ಪು ಸಿನಿಮಾ ಬಿಡುಗಡೆಯಾಗದಷ್ಟು ಅದ್ಧೂರಿಯಾಗಿ ರಿಲೀಸ್ ಮಾಡಲು ಸಿನಿಮಾ ತಂಡ ರೆಡಿಯಾಗಿ ನಿಂತಿದೆ. ಮೊದಲ ಭಾಗವಾಗಿ ಮೂರು ಜಿಲ್ಲೆಗಳಲ್ಲಿ ಗಂಧದ ಗುಡಿಗೆ ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ ಸಿಕ್ಕಿದೆ.

ಚಾಮರಾಜನಗರದಲ್ಲಿ ಸಂಭ್ರಮ
ಅಸಲಿಗೆ ಬೆಂಗಳೂರಿನಲ್ಲಿ 'ಗಂಧದ ಗುಡಿ' ಸಂಭ್ರಮಕ್ಕೆ ಅಭಿಮಾನಿಗಳು ಚಾಲನೆ ನೀಡಿದ್ದರು. ಇಲ್ಲಿಂದ ಚಾಮರಾಜನಗರ ಜಿಲ್ಲೆಗೆ ಶಿಫ್ಟ್ ಆಗಿತ್ತು. 'ಗಂಧದ ಗುಡಿ' ಬ್ಯಾನರ್ ಕಟ್ಟಿ ಹೂವಿ ಹಾರ ಹಾಕಿ ಪೋಸ್ಟರ್ ಮುಂದೆ ತಮಟೆ ಬಾರಿಸಿ ಸಿನಿಮಾಗೆ ಅದ್ಧೂರಿ ಸ್ವಾಗತ ನೀಡಿದ್ದಾರೆ. ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇಲ್ಲಿಂದ ಬೇರೆ ಬೇರೆ ಜಿಲ್ಲೆಗಳಿಗೂ ಸಂಭ್ರಮ ಶುರುವಾಗಿದೆ.

ಜಿಲ್ಲೆ ಜಿಲ್ಲೆಯಲ್ಲಿ 'ಗಂಧದ ಗುಡಿ'ಗೆ ಸ್ವಾಗತ
ಬೆಂಗಳೂರು ಚಾಮರಾಜನಗರ ಅಷ್ಟೇ ಅಲ್ಲ. 'ಗಂಧದ ಗುಡಿ'ಯ ಸಂಭ್ರಮ ಬೇರೆ ಬೇರೆ ಜಿಲ್ಲೆ ಜಿಲೆಗಳಿಗೂ ಹಬ್ಬಿದೆ. ಈಗಾಗಲೇ ಚನ್ನಪಟ್ಟಣದಲ್ಲೂ ಗಂಧದ ಗುಡಿಯನ್ನು ಅದ್ಧೂರಿಯಾಗಿ ಸ್ವಾಗತ ಮಾಡಿಕೊಳ್ಳಲಾಗಿದೆ. ಚನ್ನಪಟ್ಟಣದ ಅಪ್ಪು ಅಭಿಮಾನಿಗಳು ಸಿನಿಮಾವನ್ನು ಅದ್ಧೂರಿಯಾಗಿ ಸ್ವಾಗತ ಮಾಡಿದ್ದಾರೆ. ಇಲ್ಲಿನ ಶಿವಾನಂದ ಥಿಯೇಟರ್ ಮುಂದೆ 'ಗಂಧದ ಗುಡಿ' ಪೋಸ್ಟರ್ ಇಟ್ಟು ಪಟಾಕಿ ಸಿಡಿಸಿ, ಪೋಸ್ಟರ್‌ಗೆ ಹೂವಿನ ಹಾರ ಹಾಕಿ ಸಂಭ್ರಮಿಸಿದ್ದಾರೆ. ಹಾಗೇ ತುಮಕೂರಿನಲ್ಲಿಯೂ 'ಗಂಧದ ಗುಡಿ' ಸಿನಿಮಾಗೆ ಭರ್ಜರಿ ಸ್ವಾಗತ ಸಿಕ್ಕಿದೆ.

ಅಕ್ಟೋಬರ್ 28ಕ್ಕೆ ಸಿನಿಮಾ ರಿಲೀಸ್
ಪುನೀತ್ ರಾಜ್‌ಕುಮಾರ್ ಕೊನೆಯ ಸಿನಿಮಾ 'ಗಂಧದ ಗುಡಿ' ಅಕ್ಟೋಬರ್ 28ಕ್ಕೆ ರಿಲೀಸ್ ಆಗುತ್ತಿದೆ. ಈಗಾಗಲೇ ಬಿಡುಗಡೆ ದಿನವನ್ನೂ ಘೋಷಣೆ ಮಾಡಲಾಗಿದೆ. ಪುನೀತ್ ರಾಜ್‌ಕುಮಾರ್ ಮೊದಲ ಪುಣ್ಯ ತಿಥಿಗೂ ಮುನ್ನ ಸಿನಿಮಾವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಅಲ್ಲದೆ ಕನ್ನಡ ರಾಜ್ಯೋತ್ಸವಕ್ಕೆ ಸಿನಿಮಾ ನೀಡಬೇಕು ಅನ್ನೋದು ಅಪ್ಪು ಕನಸಾಗಿತ್ತು. ಆ ಕನಸನ್ನು ನನಸು ಮಾಡುವುದಕ್ಕೆ ಇಡೀ ತಂಡ ಮುಂದಾಗಿದೆ.


Click it and Unblock the Notifications











