Puneeth Rajkumar Birthday: ಅಪ್ಪು ಹುಟ್ಟುಹಬ್ಬಕ್ಕೆ 'ಯುವರತ್ನ' ಫ್ರಿ ಶೋ.. ಹೇಗಿರುತ್ತೆ ಸಂಭ್ರಮ?
ಮಾರ್ಚ್ 17 ಕನ್ನಡ ಚಿತ್ರರಂಗಕ್ಕೆ ಎರಡೆರಡು ಸಂಭ್ರಮ. ಒಂದ್ಕಡೆ ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ' ರಿಲೀಸ್ ಆಗುತ್ತಿದ್ದರೆ, ಇನ್ನೊಂದು ಕಡೆ ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ 49ನೇ ಹುಟ್ಟುಹಬ್ಬದ ಸಂಭ್ರಮ. ಈ ಎರಡೂ ಸಂಭ್ರಮಕ್ಕೆ ಅಪ್ಪು ಅಭಿಮಾನಿಗಳು ರೆಡಿಯಾಗಿದ್ದಾರೆ.
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಪಾರ ಅಭಿಮಾನಿಗಳನ್ನು ಅಗಲಿ ಎರಡು ವರ್ಷಗಳು ಕಳೆದಿವೆ. ಆದರೂ, ನೆಚ್ಚಿನ ನಟನನ್ನು ಕಳೆದುಕೊಂಡ ನೆನಪು ಮಾತ್ರ ಇನ್ನೂ ಮಾಸಿಲ್ಲ. ವರ್ಷದಿಂದ ವರ್ಷಕ್ಕೆ ಅಪ್ಪು ಅಭಿಮಾನಿಗಳ ಸಂಭ್ರಮ ಹೆಚ್ಚಾಗುತ್ತಲೇ ಇದೆ.

ಕಳೆದ ವರ್ಷದಂತೆ ಈ ಬಾರಿ ಕೂಡ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು ತೀರ್ಮಾನಿಸಿದ್ದಾರೆ. ಅದಕ್ಕಾಗಿ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಮಾರ್ಚ್ 17ರಂದು ಏನೆಲ್ಲಾ ವಿಶೇಷತೆಗಳು ಇರುತ್ತೆ ಅನ್ನೋದನ್ನು ನೋಡಲು ಮುಂದೆ ಓದಿ.
'ಯುವರತ್ನ' ಉಚಿತ ಶೋ
ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ಬೆಂಗಳೂರಿನ ಜೆಪಿ ನಗರದ ಸಿದ್ಧಲಿಂಗೇಶ್ವರ ಚಿತ್ರಮಂದಿರ ವಿಶೇಷವಾಗಿ ರೆಡಿಯಾಗಿದೆ. ನಾಳೆ (ಮಾರ್ಚ್ 16) ಅಪ್ಪು
ಅಭಿನಯದ 'ಯುವರತ್ನ' ಸಿನಿಮಾವನ್ನು ವಿಶೇಷವಾಗಿ ಉಚಿತ ಪ್ರದರ್ಶನ ಮಾಡಲಾಗುತ್ತಿದೆ.
'ಯುವರತ್ನ' ಸಿನಿಮಾ ರಾತ್ರಿ 9.30ಕ್ಕೆ ವಿಶೇಷ ಪ್ರದರ್ಶನ ಮಾಡಲಾಗುತ್ತೆ. ಆ ಬಳಿಕ ರಾತ್ರಿ 12 ಗಂಟೆಗೆ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಲಾಗುತ್ತದೆ. ಮಾರ್ಚ್ 17ರ ಬೆಳಗ್ಗೆ 9 ಗಂಟೆಗೆ ರಕ್ತದಾನ ಶಿಬಿರವನ್ನು ಅಭಿಮಾನಿಗಳು ಹಮ್ಮಿಕೊಂಡಿದ್ದಾರೆ. ಜೆಪಿ ನಗರದ ದೊಡ್ಮನೆ ಅಭಿಮಾನಿಗಳ ಸಂಘ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದಾರೆ. ಉಳಿದಂತೆ ಹಲವೆಡೆ ಅಪ್ಪು ಹುಟ್ಟುಹಬ್ಬವನ್ನು ಆಚರಣೆ ಮಾಡಲಾಗುತ್ತೆ.

ಅಪ್ಪು 'ಗಂಧದ ಗುಡಿ' ಓಟಿಟಿ ರಿಲೀಸ್
ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಡಾಕ್ಯೂ ಸಿನಿಮಾ 'ಗಂಧದ ಗುಡಿ' ಓಟಿಟಿಗೆ ಲಗ್ಗೆ ಇಡುತ್ತಿದೆ. ಅಪ್ಪು ಹುಟ್ಟುಹಬ್ಬಕ್ಕೆ ವಿಶೇಷವಾಗಿ ಬಿಡುಗಡೆ ಮಾಡುತ್ತಿರುವುದು ವಿಶೇಷ. ಅಮೆಜಾನ್ ಪ್ರೈಂನಲ್ಲಿ 'ಗಂಧದ ಗುಡಿ'ಯನ್ನು ನೋಡಬಹುದಾಗಿದೆ.
'ಗಂಧದ ಗುಡಿ' ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಡ್ರೀಮ್ ಪ್ರಾಜೆಕ್ಟ್ ಆಗಿತ್ತು. ಈ ಸಿನಿಮಾವನ್ನು ಸಿನಿಪ್ರಿಯರಿಗೆ ವಿಶೇಷವಾಗಿ ತೋರಿಸಬೇಕು ಎಂದು ಅಭಿಪ್ರಾಯ ಪಟ್ಟಿದ್ದರು. ಅಷ್ಟರೊಳಗೆ ಪುನೀತ್ ಅಪಾರ ಅಭಿಮಾನಿಗಳಿಂದಲೇ ದೂರವಾಗಿದ್ದರು.
'ಕಬ್ಬ' ಸಿನಿಮಾ ಅಪ್ಪುಗೆ ಅರ್ಪಣೆ
ಇನ್ನೊಂದು ಕಡೆ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ' ಮಾರ್ಚ್ 17ಕ್ಕೆ ರಿಲೀಸ್ ಆಗುತ್ತಿದೆ. ಈಗಾಗಲೇ ಇಡೀ ಚಿತ್ರತಂಡ ಈ ಸಿನಿಮಾವನ್ನು ಪುನೀತ್ ರಾಜ್‌ಕುಮಾರ್ ಅವರಿಗೆ ಅರ್ಪಣೆ ಮಾಡುವುದಾಗಿ ಅನೌನ್ಸ್ ಮಾಡಿದೆ. ಹಾಗಾಗಿ ಅದೇ ದಿನ ಸಿನಿಮಾ ಕೂಡ ಬಿಡುಗಡೆಯಾಗುತ್ತಿದೆ.
ರಿಯಲ್‌ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ ಹಾಗೂ ಶಿವರಾಜ್‌ಕುಮಾರ್ ಅಭಿನಯದ 'ಕಬ್ಜ' ಈಗಾಗಲೇ ಕ್ರೇಜ್ ಹುಟ್ಟಾಕಿದೆ. ಒಂದ್ಕಡೆ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದರೆ, ಇನ್ನೊಂದು ಕಡೆ ಅಪ್ಪುಗೆ ಗೌರವ ಸೂಚಿಸಲು 'ಕಬ್ಜ' ಬಿಡುಗಡೆಯಾಗುತ್ತಿರುವ ಖುಷಿಯಿದೆ.


Click it and Unblock the Notifications











