ನಗು ಮುಖದ ಅರಸ ಪುನೀತ್ ರಾಜ್‌ಕುಮಾರ್ ಅಗಲಿ 4 ವರ್ಷ; ಪುಣ್ಯ ಸ್ಮರಣೆಯ ದಿನದ ಹೈಲೈಟ್ ಏನು?
ಕರ್ನಾಟಕ ರತ್ನ ಪವರಸ್ಟಾರ್ ಪುನೀತ್ ರಾಜ್‌ಕುಮಾರ್ ಅಪಾರ ಅಭಿಮಾನಿಗಳನ್ನು ಅಗಲಿ ನಾಲ್ಕು ವರ್ಷಗಳಾಗಿವೆ. ಇಂದಿಗೂ ಅಪ್ಪು ಜೊತೆಯಲ್ಲಿ ಇಲ್ಲ ಅನ್ನೋದನ್ನು ದೊಡ್ಮನೆ ಫ್ಯಾನ್ಸ್ ಅರಗಿಸಿಕೊಂಡಿಲ್ಲ. ಅವರ ಅಗಲಿದ ನೋವಿನಲ್ಲಿ ದಿನಗಳನ್ನು ದೂಡುತ್ತಿದ್ದಾರೆ. ನಗು ಮುಖದ ಸರದಾರನನ್ನೆ ನೆನಪಿನಲ್ಲಿ ಇಟ್ಟುಕೊಂಡು ಅವರಂತೆಯೇ ಸಮಾಜಮುಖಿ ಕೆಲಸಗಳಲ್ಲಿ ಭಾಗಿಯಾಗಿದ್ದಾರೆ.
ಅಕ್ಟೋಬರ್ 29 ದೊಡ್ಮನೆಗೆ, ಅವರ ಅಭಿಮಾನಿಗಳಿಗೆ ಕರಾಳ ದಿನ. ಈ ದಿನ ಬಂತು ಅಂದರೆ, ಅವರು ಭಾವುಕರಾಗುತ್ತಾರೆ. ಪುನೀತ್ ರಾಜ್‌ಕುಮಾರ್ ನಗುವನ್ನು, ಸಿನಿಮಾಗಳನ್ನು ಹಾಗೂ ಒಳ್ಳೆಯತನವನ್ನು ಕನ್ನಡಿಗರು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಇಂದು (ಅಕ್ಟೋಬರ್ 29) ಅಪ್ಪುವಿನ ನಾಲ್ಕನೇ ಪುಣ್ಯ ಸ್ಮರಣೆ. ಅವರ ಸ್ಮಾರಕ ಮುಂದೆ ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದಾರೆ. ಇಡೀ ದಿನ ಅಭಿಮಾನಿಗಳು ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ.

ದೊಡ್ಮನೆ ಕುಟುಂಬದ ಸುಮಾರು 11 ಗಂಟೆಗೆ ಪುನೀತ್ ಸಮಾಧಿಗೆ ಬಂದು ಪೂಜೆ ಸಲ್ಲಿಸಲಿದೆ. ಹೀಗಾಗಿ ಅಪ್ಪು ಸಮಾಧಿಗೆ ಬಿಳಿ ಬಣ್ಣದ ಹೂವುಗಳಿಂದ ಅಲಂಕಾರಗಳನ್ನು ಮಾಡಲಾಗಿದೆ. ಪೂಜೆಗೆ ಬೇಕಿರುವ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈಗಾಗಲೇ ದೂರದ ಊರುಗಳಿಂದ ಅಭಿಮಾನಿಗಳು ಸಮಾಧಿ ಬಳಿ ಸೇರಿಕೊಂಡಿದ್ದಾರೆ. ಅಪ್ಪು ಆಶೀರ್ವಾದ ಪಡೆಯುವುದಕ್ಕೆ ಸಾಲು ಗಟ್ಟಿ ನಿಂತಿದ್ದಾರೆ.
ಪುನೀತ್ ರಾಜ್ ಕುಮಾರ್ ಅಗಲಿದ ದಿನದಿಂದ ಪ್ರತಿ ದಿನ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬಂದು ನಮನ ಸಲ್ಲಿಸಿ ಹೋಗಿದ್ದಾರೆ. ಇಂದು ನಾಲ್ಕನೇ ವರ್ಷದ ಪುಣ್ಯ ಸ್ಮರಣೆ ಆಗಿರುವುದರಿಂದ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬೇರೆ ಬೇರೆ ಊರುಗಳಿಂದ ಆಗಮಿಸುವ ಸಾಧ್ಯತೆಯಿದೆ. ಹೀಗಾಗಿ ಅದಕ್ಕೆ ಬೇಕಿರುವ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಹಾಗೇ ದೊಡ್ಮೆನೆಯಿಂದ ಅಶ್ವಿನಿ ಪುನೀತ್ ರಾಜ್‌ಕುಮಾರ್, ಮಕ್ಕಳು, ಶಿವಣ್ಣ, ರಾಘಣ್ಣ, ವಿನಯ್ ರಾಜ್‌ಕುಮಾರ್, ಯುವ ರಾಜ್‌ಕುಮಾರ್ ಸೇರಿದಂತೆ ಇಡೀ ಕುಟುಂಬ ಸಮಾಧಿಗೆ ಪೂಜೆ ಸಲ್ಲಿಸಲಿದೆ.
ಪುನೀತ್ ರಾಜ್‌ಕುಮಾರ್ ಸಮಾಧಿ ಮುಂದೆ ಅವರ ಇಷ್ಟ ಪಡುತ್ತಿದ್ದ ತಿಂಡಿ- ತಿನಿಸುಗಳನ್ನು ಇಟ್ಟು ಪೂಜೆಯನ್ನು ಸಲ್ಲಿಸಲಾಗಿದೆ. ಅಶ್ವಿನಿ ಪುನೀತ್ ರಾಜ್‌ಕುಮಾರ್, ಪತಿಯ ಸಮಾಧಿ ಪೂಜೆಯನ್ನು ಸಲ್ಲಿಸಿ, ಆಶೀರ್ವಾದ ಪಡೆದಿದ್ದಾರೆ. ಹಾಗೇ ತಮ್ಮನ ಸಮಾಧಿಗೆ ಮಗ ಯುವರಾಜ್‌ಕುಮಾರ್ ಜೊತೆ ಬಂದು ರಾಘವೇಂದರ ರಾಜ್‌ಕುಮಾರ್ ಪೂಜೆಯನ್ನು ಸಲ್ಲಿಸಿದ್ದಾರೆ. ಪುನೀತ್ ರಾಜಕುಮಾರ್ ಸಹೋದರಿಯರು ಕೂಡ ಈ ವೇಳೆ ಪೂಜೆ ಸಲ್ಲಿಸಿದ್ದಾರೆ.

ಸಹಸ್ರಾರು ಸಂಖ್ಯೆಯಲ್ಲಿ ಅಪ್ಪು ಕುಟುಂಬಸ್ಥರು ಹಾಗೂ ಆತ್ಮೀಯರು ಕೂಡ ಅವರಿಗೆ ಇಷ್ಟವಿದ್ದ ಅಡುಗೆಗಳನ್ನು ಮಾಡಿ ತೆಗೆದುಕೊಂಡು ಬಂದಿದ್ದರು. ಸಮಾಧಿ ಮುಂದ ಬಡಿಸಿ ಪುಣ್ಯ ಸ್ಮರಣೆಯಲ್ಲಿ ಭಾಗಿಯಾಗಿದ್ದಾರೆ. ಇದೇ ವೇಳೆ ದೊಡ್ಮನೆ ಕುಟುಂಬದ ಸದಸ್ಯರು ಡಾ.ರಾಜ್‌ಕುಮಾರ್ ಹಾಗೂ ಪಾರ್ವತಮ್ಮ ರಾಜ್‌ಕುಮಾರ್ ಅವರ ಸಮಾಧಿಗೂ ನಮನ ಸಲ್ಲಿಸಿದ್ದಾರೆ.
ರಾಘವೇಂದ್ರ ರಾಜ್‌ಕುಮಾರ್, ವಿನಯ್ ರಾಜ್‌ಕುಮಾರ್, ಯುವ ರಾಜ್‌ಕುಮಾರ್ ಒಟ್ಟಿಗೆ ಸೇರಿ ಅಭಿಮಾನಿಗಳಿಗೆ ಕೈಯ್ಯಾರೆ ಉಪಹಾರವನ್ನು ಬಡಿಸಿದ್ದಾರೆ. ಅಭಿಮಾನಿಗಳು ಪುನೀತ್ ರಾಜ್‌ಕುಮಾರ್ ಜೈಕಾರ ಹಾಕುತ್ತಿದ್ದ ದೃಶ್ಯಗಳು ಕೂಡ ಕೇಳಿ ಬಂದಿತ್ತು.


Click it and Unblock the Notifications











