"ಇಲ್ಲಿ ಎಲ್ಲೂ ಬಿರಿಯಾನಿ ಕೊಡಲ್ಲ..ಅಣ್ಣಂಗೆ ಜೈ ಅನ್ನಲ್ಲ"; ಅಪ್ಪು ಬರ್ತ್‌ಡೇ ದಿನ ಪ್ರಥಮ್ ಮಾತಿನ ಅರ್ಥವೇನು?
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ 51ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಇರುವ ಅವರ ಪುಣ್ಯಭೂಮಿಗೆ ತೆರಳಿ ದರ್ಶನ ಪಡೆಯುವ ಮೂಲಕ ಬರ್ತ್‌ಡೇಯನ್ನು ಸಂಭ್ರಮಿಸಿದ್ದಾರೆ. ಕುಟುಂಬಸ್ಥರು ಅಪ್ಪು ಸಮಾಧಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದ್ದರು. ಪ್ರತಿವರ್ಷದಂತೆ ಈ ವರ್ಷ ಕೂಡ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು.
ಅಭಿಮಾನಿಗಳ ಜೊತೆ ಚಿತ್ರರಂಗದ ಮಂದಿ ಕೂಡ ಆಗಮಿಸಿ ಪುನೀತ್ ರಾಜ್‌ಕುಮಾರ್ ಪುಣ್ಯಭೂಮಿಗೆ ಪೂಜೆಯನ್ನು ಸಲ್ಲಿಸಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಕೂಡ ಆಗಮಿಸಿ ಪುಣ್ಯಭೂಮಿಗೆ ಪೂಜೆಯನ್ನು ಸಲ್ಲಿಸಿದ್ದಾರೆ. ಈ ವೇಳೆ ಅಪ್ಪು ಹುಟ್ಟುಹಬ್ಬವನ್ನು ಇನ್ಸ್‌ಪಿರೇಷನ್ ಡೇಯನ್ನಾಗಿ ಆಚರಣೆ ಮಾಡುವ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಪುನೀತ್ ರಾಜ್‌ಕುಮಾರ್ ಪುಣ್ಯಭೂಮಿಗೆ ದರ್ಶನ ಪಡೆಯುವುದಕ್ಕೆ ಬಂದಿದ್ದ ಪ್ರಥಮ್ ಫಿಲ್ಮಿಬೀಟ್ ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಅಪ್ಪು ಅಭಿಮಾನಿಗಳ ಹೃದಯ ವೈಶಾಲ್ಯತೆಯನ್ನು ಕೊಂಡಾಡಿದ್ದಾರೆ. ಅವರ ಅಭಿಮಾನಿವನ್ನು ಹಾಡಿ ಹೊಗಳಿದ್ದಾರೆ. "ಇಲ್ಲಿ ಎಲ್ಲೂ ಬಿರಿಯಾನಿ ಕೊಡಲ್ಲ..ಅಣ್ಣಂಗೆ ಜೈ ಅನ್ನಲ್ಲ. ಹೃದಯದಿಂದ ಬಂದು ಅಪ್ಪು ಸರ್ ಅನ್ನು ನೋಡಿ, ಸಂಭ್ರಮವನ್ನು ನೋಡಿಕೊಂಡು ಹೋಗುತ್ತಾರೆ" ಎಂದು ಹೇಳಿದ್ದಾರೆ.
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಬರ್ತ್‌ಡೇ ವೀಕ್‌ಡೇನಲ್ಲಿ ಬಂದಿದೆ. ಆದರೂ, ಕಾಲಿಡುವುದಕ್ಕೆ ಜಾಗವಿಲ್ಲದಷ್ಟು ಮಂದಿ ಅಭಿಮಾನಿಗಳು ಬಂದಿದ್ದಾರೆ ಎಂದು ಪ್ರಥಮ್ ಹೇಳಿದ್ದಾರೆ. "ಇವತ್ತು ನಾವು ಬಂದಿರೋದು ಅಪ್ಪು ಸರ್ ಇಲ್ಲ ಅಂತಲ್ಲ. ಅವರ ಅಭಿಮಾನಿಗಳ ಸಂಭ್ರಮ ನೋಡುವುದಕ್ಕೆ. ಇವತ್ತು ವೀಕ್ ಡೇ. ಕಾಲಿಡುವುದಕ್ಕೆ ಜಾಗವಿಲ್ಲ. ಇಲ್ಲಿ ಎಲ್ಲೂ ಬಿರಿಯಾನಿ ಕೊಡಲ್ಲ. ಅಣ್ಣಂಗೆ ಜೈ ಅಂತ ಕೂಗಲ್ಲ. ಹೃದಯದಿಂದ ಬಂದು ಅಪ್ಪು ಸರ್ ಅನ್ನು ನೋಡಿ, ಸಂಭ್ರಮವನ್ನು ನೋಡಿಕೊಂಡು ಹೋಗುತ್ತಾರೆ." ಎಂದು ಹೇಳಿದ್ದಾರೆ.
ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ದಿನದಂದು ಅಭಿಮಾನಿಗಳು ಇನ್ಸ್‌ಪಿರೇಷ್ ಡೇ ಎಂದು ಆಚರಣೆ ಮಾಡುವುದಕ್ಕೆ ನಿರ್ಧರಿಸಿದ್ದಾರೆ. ಅದಕ್ಕೆ ಕಾರಣವೇನು ಅಂತಾನೂ ವಿವರಿಸಿದ್ದಾರೆ. "ಇವತ್ತು ಇನ್ಸ್‌ಪಿರೇಷನ್ ಡೇ ಅಂತ ಶುರು ಮಾಡುತ್ತಿದ್ದಾರೆ. ಯಾಕೆ ಅಂದರೆ, ಯಾವುದೇ ಹುಟ್ಟುಹಬ್ಬ ಆಚರಣೆ ಮಾಡಬೇಕು ಅಂದರೆ, ಅರ್ಥಪೂರ್ಣವಾಗಿರಬೇಕು. ಎಲ್ಲರೂ ಹೃದಯದಿಂದ, ಪ್ರಾಮಾಣಿಕತೆಯಿಂದ ಬರೋರು. ಎಲ್ಲರ ಮನಸ್ಸಿನಲ್ಲೂ ಅಪ್ಪು ಸರ್ ಶಾಶ್ವತವಾಗಿ ಇದ್ದಾರೆ." ಎಂದು ಪ್ರಥಮ್ ಹೇಳಿದ್ದಾರೆ.
ಇದೇ ವೇಳೆ ಪುನೀತ್ ರಾಜ್‌ಕುಮಾರ್ ಅವರೊಂದಿಗಿನ ನೆನಪೊಂದನ್ನು ಹಂಚಿಕೊಂಡಿದ್ದಾರೆ. "ಒಂದು ವಿಶೇಷ ಘಟನೆಯನ್ನು ನಾನು ಹೇಳುತ್ತೇನೆ. ನನ್ನ ಸಿನಿಮಾ ಅಪ್ಪು ಸರ್ ಒಂದು ಹಾಡು ಹಾಡಿದರು. ಹೀಗೆ ಅವರೊಂದಿಗೆ ಮಾತಾಡುತ್ತಿದ್ದಾರೆ. ಬಾಸ್ ಫಾಲೋಅಪ್ ಮಾಡುವುದಕ್ಕೆ ಕಷ್ಟ ಆಗೋಗಿತ್ತು. ಹೊಸಬರ ಹಾಡು ಬಂದಾಗ ಅಪ್ಪು ಸರ್ ರಿಪ್ಲೈ ಮಾಡೋರು. ಇದ್ಯಾಕೆ ಅಂತ ಕೇಳಿದಾಗ, ನೋಡು ಪ್ರಥಮ್ ನನ್ನ ಜೊತೆ ಎಲ್ಲರಿಗೂ ಕೆಲಸ ಮಾಡಬೇಕು ಅಂತ ಆಸೆ. ನನಗೆ ಡೈರೆಕ್ಷನ್ ಮಾಡಬೇಕು ಅಂತ. ನನಗೂ ಎಲ್ಲರೊಂದಿಗೆ ಕೆಲಸ ಮಾಡಬೇಕು ಅಂತ ಆಸೆ. ನನಗೆ ಮಾಡುವುದಕ್ಕೆ ಆಗುತ್ತಾ. ಅಪ್ಪಾಜಿಯದ್ದು ಏನೋ ಲಕ್. ಇನ್ನೂರು ಸಿನಿಮಾ ಮಾಡಿದ್ದರು. ನನಗೆ ಆ ಲಕ್ ಇದೆಯೋ ಇಲ್ವೋ ಗೊತ್ತಿಲ್ಲ. ನನಗೂ ಎಲ್ಲರೊಂದಿಗೆ ಕೆಲಸ ಮಾಡಬೇಕು ಅಂತ ಆಸೆ. ಯಾರೋ ಒಬ್ಬರು ಕರೀತಾರೆ. ಅವರೊಂದಿಗೆ ಸಿನಿಮಾ ಮಾಡೋಕೆ ಆಗಿಲ್ಲ. ಅವರ ಸಿನಿಮಾಗೆ ಹಾಡು ಹಾಡಿದಾಗ, ಅಪ್ಪು ಜೊತೆ ಕೆಲಸ ಮಾಡಿದ ಅನ್ನೋ ಖುಷಿ ಅವರಿಗೆ ಇರುತ್ತೆ. ಹೊಸಬರೊಂದಿಗೆ ಕಲಿಯುವುದಕ್ಕೆ ಅವಕಾಶ ಸಿಕ್ತು ಅಂತ ನಾನು ಖುಷಿ ಪಡುತ್ತೇನೆ. ನಾನ್ಯಾಕೆ ಅವರ ಖುಷಿಯನ್ನು ಕಸಿದು ಕೊಳ್ಳಲಿ ಎಂದು ಹೇಳುತ್ತಿದ್ದರು" ಎಂದು ಅಪ್ಪುವನ್ನು ಪ್ರಥಮ್ ನೆನಪಿಸಿಕೊಂಡಿದ್ದಾರೆ.
ಹಾಗೇ ಪುನೀತ್ ರಾಜ್‌ಕುಮಾರ್ ಹಾಡುವುದಕ್ಕೆ ಹಣ ತೆಗೆದುಕೊಳ್ಳುತ್ತಿದ್ದರು. ಆದರೆ, ಅದು ಎಲ್ಲಿಗೆ ಹೋಗುತ್ತಿತ್ತು ಎಂದೂ ಹೇಳಿದ್ದಾರೆ. "ಅಪ್ಪು ಸರ್ ಹಾಡುವುದಕ್ಕೆ ಹಣ ತೆಗೆದುಕೊಳ್ಳುತ್ತಿದ್ದರು. ಮಿಸ್ ಮಾಡದೆ ಹಣ ತೆಗೆದುಕೊಳ್ಳೋರು. ಕ್ಯಾಶ್ ತೆಗೆದುಕೊಳ್ಳುತ್ತಿರಲಿಲ್ಲ. ಡಾ.ರಾಜ್‌ಕುಮಾರ್ ಫೌಂಡೇಷನ್‌ಗೆ ಚೆಕ್ ಹೋಗುತ್ತಿತ್ತು. ಇಂತಹ ಹಲವು ಕೆಲಸಗಳನ್ನು ಗೊತ್ತಿಲ್ಲದೆ ಮಾಡುತ್ತಿದ್ದರು. ಅವರು ದುಡ್ಡಿಗೋಸ್ಕರ ಹಾಡುತ್ತಲೇ ಇರಲಿಲ್ಲ. ಆ ಕಾರಣಕ್ಕೆ ಇನ್ಸ್‌ಪಿರೇಷನ್ ಡೇ ಅಂತ ಶುರುವಾಗಿದ್ದು." ಎಂದು ಪುನೀತ್ ರಾಜ್‌ಕುಮಾರ್ ಬಗ್ಗೆ ಪ್ರಥಮ್ ಹೇಳಿದ್ದಾರೆ.


Click it and Unblock the Notifications















